ಶನಿವಾರ, 25 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಳು ಜಾನಪದ ವಿದ್ವಾಂಸ ಪಾಲ್ತಾಡಿ ರಾಮಕೃಷ್ಣ ಆಚಾರ್ ಇನ್ನಿಲ್ಲ

Published 7 ಮೇ 2024, 18:05 IST
Last Updated 7 ಮೇ 2024, 18:05 IST
ಅಕ್ಷರ ಗಾತ್ರ

ಮಂಗಳೂರು: ಕನ್ನಡ, ತುಳು ಸಾಹಿತಿ, ತುಳು ಜಾನಪದ ವಿದ್ವಾಂಸ ಪಾಲ್ತಾಡಿ ರಾಮಕೃಷ್ಣ ಆಚಾರ್ (79)ಅವರು ಪುತ್ತೂರಿನ ಸ್ವಗೃಹದಲ್ಲಿ ಮಂಗಳವಾರ ನಿಧನರಾದರು.

ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಹಾಗೂ ರಿಜಿಸ್ಡ್ರಾರ್ ಆಗಿಯೂ ಅವರು ಕಾರ್ಯನಿರ್ವಹಿಸಿದ್ದರು.

ಕಾವ್ಯ, ಸಣ್ಣಕತೆ, ನಾಟಕ,, ವಿಮರ್ಶೆ ರಚನೆಯಲ್ಲಿ ತೊಡಗಿದ್ದ ಅವರು ಜಾನಪದ ಕ್ಷೇತ್ರದ ಸಂಶೋಧನೆಯ ಮೂಲಕ ತುಳುನಾಡಿನ ಪರಂಪರೆಯನ್ನು ಜನರಿಗೆ ತಿಳಿಸುವಲ್ಲಿ ಹಾಗೂ ಅವುಗಳ ರಕ್ಷಣೆಗೆ ತಮ್ಮದೇ‌ ಆದ ಕೊಡುಗೆ ನೀಡಿದ್ದರು. ಕೆದಂಬಾಡಿ ರಾಮೇಗೌಡರು ನೇತೃತ್ವದಲ್ಲಿ ಬ್ರಿಟಿಷರ ವಿರುದ್ಧ 1830ರ ದಶಕದಲ್ಲಿ ನಡೆದಿದ್ದ ತುಳುನಾಡಿನ‌ ಪ್ರಥಮ‌ ಸ್ವಾತಂತ್ರ್ಯ ಸಂಗ್ರಾಮವನ್ನು ಬೆಳಕಿಗೆ ತರುವಲ್ಲೂ ಅವರ ಪಾತ್ರ ಮಹತ್ವದ್ದಾಗಿತ್ತು.

ಬೆಟ್ಟಂಪಾಡಿ ಹಾಗೂ ಪಾಣಾಜೆ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಪ್ರಾಥಮಿಕ ಶಿಕ್ಷಣ, ಬೆಳ್ಳಾರೆ ಬೋರ್ಡ್ ಹೈಸ್ಕೂಲ್‍ನಲ್ಲಿ ಪ್ರೌಢ ಶಿಕ್ಷಣ ಪಡೆದಿದ್ದ ಅವರು ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನಲ್ಲಿ ಪಿ.ಯು.ಸಿ ಪೂರೈಸಿದರು. ನಂತರ ಉಜಿರೆಯ ಸರಕಾರಿ ಶಿಕ್ಷಣ ತರಬೇತಿ ಸಂಸ್ಥೆಯಲ್ಲಿ ಟಿ.ಸಿ.ಎಚ್ ಶಿಕ್ಷಣ ಪಡೆದಿದ್ದರು.

1963ರಲ್ಲಿ ಪುತ್ತೂರು ತಾಲ್ಲೂಕಿನ ಕುಂತೂರು ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಕನಾಗಿ ಸೇರಿದ ಅವರು ನಂತರ ಕೆಯ್ಯೂರು, ಕಾವು ಮಾಡ್ನೂರು, ಸಾಮೆತ್ತಡ್ಕ ಮೊದಲಾದ ಕಡೆ ಶಿಕ್ಷಕರಾಗಿ ಸೇವೆ ಸಲ್ಲಿಸಿದರು. ಈ ನಡುವೆ ಬಿ.ಎ ಬಿ.ಇಡಿ ಹಾಗೂ ಧಾರವಾಡ ವಿಶ್ವವಿದ್ಯಾಲಯದಿಂದ ಎಂ.ಎ ಶಿಕ್ಷಣ ಪಡೆದು ಉಪ್ಪಿನಂಗಡಿ, ಬೊಕ್ಕಪಟ್ಣ, ಬೆಟ್ಟಂಪಾಡಿ ಮತ್ತು ಕಾಣಿಯೂರಿನ ಪದವಿ ಪೂರ್ವ ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದ್ದರು. ಸವಣೂರಿನ ವಿದ್ಯಾರಶ್ಮಿ ಶಿಕ್ಷಕ ತರಬೇತಿ ಶಿಕ್ಷಣ ಸಂಸ್ಥೆಯಲ್ಲಿ ಗೌರವ ಪ್ರಾಚಾರ್ಯರಾಗಿಯೂ ಸೇವೆ ಸಲ್ಲಿಸಿದ್ದರು.

ಅವರು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿದ್ದಾಗ ತುಳುನಾಡಿನ‌ ಜಾನಪದ ಸಂಶೋಧನೆಗೆ ಹಾಗೂ ಶಾಲೆಗಳಲ್ಲಿ ತುಳು ಕಲಿಕೆಗೆ ಉತ್ತೇಜನ‌ ನೀಡಿದ್ದರು.

ಪಾಲ್ತಾಡಿಯವರು ವಿದ್ಯಾರ್ಥಿಯಾಗಿದ್ದಾಗಲೇ ಸಾಹಿತ್ಯದಲ್ಲಿ ಆಸಕ್ತಿಯನ್ನು ಹೊಂದಿದ್ದರು. 1979ರಲ್ಲಿ ಬಾಂಗ್ಲಾ ವಿಜಯ ಎಂಬ ಯಕ್ಷಗಾನ ಪ್ರಸಂಗ ರಚನೆ ಅವರ ಸಾಹಿತ್ಯದ ಬದುಕಿಗೆ ಮುನ್ನುಡಿ ಬರೆಯಿತು. ಅನೇಕ ಕತೆ ಕವಿತೆಗಳನ್ನು ರಚಿಸಿದ್ದಾರೆ.. ಕನ್ನಡ ಸಂಘ, ತುಳು ಸಂಘ, ಯಕ್ಷಗಾನ ಸಂಘ, ಸಮುದಾಯ ಸಂಘ ಇಂತಹ ಕೂಟಗಳನ್ನು ಆರಂಭಿಸಿ ತುಳು ಭಾಷೆಯ ಬೆಳವಣಿಗಾಗಿ ಶ್ರಮಿಸಿದ್ದಾರೆ. ಅವರ ಪಿಎಚ್.ಡಿ ಅಧ್ಯಯನ ಪ್ರಬಂಧ ನಲಿಕೆ ಜನಾಂಗದ ಕುಣಿತಗಳು ಕೃತಿ ತುಳುನಾಡಿನ ಕುಣಿತ ಪ್ರಕಾರಗಳನ್ನು ಹೊರ ಜಗತ್ತಿಗೆ ಪರಿಚಯಿಸಿದೆ.

ಕಿರಣ, ಮೆಲುಕಾಡಿದಾಗ, ಅಜಕೆ (ತುಳು), ದುನಿಪು (ತುಳು) ಪಚ್ಚೆಕುರಲ್ (ತುಳು) ಅವರ ಕವನ‌ಸಂಕಲನಗಳು.

ತುಳು ಸಂಸ್ಕತಿದ ಪೊಲಬು, ನಾಗ ಬೆರ್ಮೆರ್, ತುಳು ಕಲ್ಪುಗ, ಕೆದಂಬಾಡಿ ರಾಮ ಗೌಡೆರ್, ಅತ್ತಾವರ ಅನಂತಾಚಾರ್ಯೆರ್, ನಾಗ ಬೆರ್ಮೆ, ಕೆನರಾ ರೈತ ಬಂಡಾಯ, ತುಳುನಾಡಿನ ಪಾಣಾರರು, ತುಳುನಾಡಿನ ಜನಪದ ಕಥೆಗಳು

ವಿಶಿಷ್ಟ ತುಳುನಾಡು ಅವರ ಕೃತಿಗಳು.

‌ತುಳುವ ಸಿರಿ, ತುಳುವ ಮಲ್ಲಿಗೆ, ಅರ್ತಿದ ಪೂ, ಶ್ರೀ ಕ್ಷೇತ್ರ ದರ್ಶನ ಹಾಗೂ ಪ್ರಣಾಮ ಮೊದಲಾದ ಧ್ವನಿ ಸುರುಳಿಗಳಿಗೆ ಸಾಹಿತ್ಯ ರಚಿಸಿದ್ದರು.

ಅವರಿಗೆ ಪತ್ನಿ ಸುಮಾ ಆರ್. ಆಚಾರ್, ಪುತ್ರಿಯರಾದ ಕಿರಣ ಪಿ.ಆರ್, ಸುಪ್ರಿಯ ಪಿ.ಆರ್, ಮಗ ಹರ್ಷವರ್ಧನ ಪಿ.ಆರ್ ಇದ್ದಾರೆ.

ಅವರ ಅಂತ್ಯಕ್ರಿಯೆ ಬುಧವಾರ ಮಧ್ಯಾಹ್ನ 12 ಗಂಟೆಗೆ ಅವರ ಮನೆಯಾದ ಪುತ್ತೂರು ತಾಲ್ಲೂಕಿನ ಪಾಲ್ತಾಡಿ ಗ್ರಾಮದಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT