ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಳು ಅಧ್ಯಯನಕ್ಕೆ ಹೆಚ್ಚಿದ ಒಲವು

ಎಂ.ಎ ಪದವಿ ಪಡೆದ 58 ಮಂದಿ, ಪ್ರಸಕ್ತ ವರ್ಷ 24 ಜನರು ನೋಂದಣಿ
Last Updated 17 ನವೆಂಬರ್ 2022, 6:29 IST
ಅಕ್ಷರ ಗಾತ್ರ

ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯ ಮೂರು ವರ್ಷಗಳ ಹಿಂದೆ ಆರಂಭಿಸಿರುವ ತುಳು ಸ್ನಾತಕೋತ್ತರ ಪದವಿ ಅಧ್ಯಯನವು ತುಳುವರಲ್ಲಿ ಸಾಹಿತ್ಯ ಓದುವ ತುಡಿತವನ್ನು ಹೆಚ್ಚಿಸಿದೆ. ವರ್ಷದಿಂದ ವರ್ಷಕ್ಕೆ ಎಂ.ಎ.ಗೆ ಪ್ರವೇಶ ಪಡೆಯುವವರ ಸಂಖ್ಯೆ ಹೆಚ್ಚುತ್ತಿದೆ.

ಮಂಗಳೂರು ವಿಶ್ವವಿದ್ಯಾಲಯವು ಪ್ರಾದೇಶಿಕ ಭಾಷೆಯಾಗಿರುವ ತುಳು ಅಭಿವೃದ್ಧಿಗೆ ನಡೆಸುತ್ತಿರುವ ನಿರಂತರ ಚಟುವಟಿಕೆಯ ಭಾಗವಾಗಿ 2018ರಲ್ಲಿ ತುಳು ಸ್ನಾತಕೋತ್ತರ ಪದವಿ (ಎಂ.ಎ) ಆರಂಭಿಸಿತು. ಮೂರು ವರ್ಷಗಳಲ್ಲಿ 58 ಜನರು ತುಳು ಎಂ.ಎ ಪದವಿ ಪಡೆದಿದ್ದಾರೆ. ಮೊದಲ ಬ್ಯಾಚ್‌ನಲ್ಲಿ 16, ಎರಡನೇ ಬ್ಯಾಚ್‌ನಲ್ಲಿ 18 ಹಾಗೂ ಮೂರನೇ ಬ್ಯಾಚ್‌ನಲ್ಲಿ 24 ಜನರು ಪದವಿ ಪಡೆದಿದ್ದಾರೆ.

‘2010ರಲ್ಲಿ ಪ್ರಾಥಮಿಕ ಶಾಲೆಯಲ್ಲಿ ತುಳು ಭಾಷೆಯಾಗಿ ಕಲಿಯುವ ಕ್ರಮ ಆರಂಭವಾಗಿ, ನಂತರ ಪ್ರೌಢಶಾಲಾ ಮಟ್ಟಕ್ಕೆ ವಿಸ್ತರಣೆ ಆಯಿತು. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ 43 ಶಾಲೆಗಳಲ್ಲಿ ತುಳು ಬೋಧನೆ ನಡೆಯುತ್ತದೆ. ತುಳುವನ್ನು ಪದವಿ ಶಿಕ್ಷಣದಲ್ಲಿ ಕಲಿಯುವ ಅವಕಾಶ ಕೂಡ ಕೆಲವು ಕಾಲೇಜುಗಳಲ್ಲಿ ಇದೆ. ಇದರ ಮುಂದುವರಿದ ಭಾಗವಾಗಿ, ತುಳು ಸ್ನಾತಕೋತ್ತರ ಪದವಿ 2018ರಲ್ಲಿ ಆರಂಭವಾಗಿ ಮೊದಲ ಬ್ಯಾಚ್ 2020ರಲ್ಲಿ ಹೊರಬಂತು’ ಎಂದು ಸ್ನಾತಕೋತ್ತರ ತುಳು ಅಧ್ಯಯನ ವಿಭಾಗದ ಸಂಯೋಜಕ ಡಾ. ಮಾಧವ ಎಂ.ಕೆ ಪ್ರತಿಕ್ರಿಯಿಸಿದರು.

ಸ್ನಾತಕೋತ್ತರ ಪದವಿಯ ಪಠ್ಯಗಳು ತುಳು ಸಂಸ್ಕೃತಿಯ ಅಧ್ಯಯನಕ್ಕೆ ಪೂರಕವಾಗಿವೆ. ತುಳುನಾಡಿನ ಹಬ್ಬಗಳು, ಆಚರಣೆಗಳು, ಆಟಿದ ಅಮಾವಾಸ್ಯೆ, ತುಡರ್ ಪರ್ಬದ ಪಠ್ಯಗಳು, ಪ್ರಾಯೋಗಿಕ ಆಚರಣೆಗಳು, ತುಳು ಭಾಷೆಯ ವೈಜ್ಞಾನಿಕ ದೃಷ್ಟಿ, ಇತಿಹಾಸ, ಸಾಹಿತ್ಯ, ವ್ಯಾಕರಣ, ಆರಾಧನೆ, ಪರಂಪರೆ, ಕುಲಕಸುಬು, ಕಾವ್ಯ, ಮಂದಾರ ರಾಮಾಯಣ ಹೀಗೆ ವಿವಿಧ ವಿಷಯಗಳು ತಲಾ ಐದು ಪೇಪರ್‌ಗಳ ಎರಡು ವರ್ಷಗಳ ಸ್ನಾತಕೋತ್ತರ ಪದವಿಯಲ್ಲಿ ಬರುತ್ತವೆ ಎನ್ನುತ್ತಾರೆ ಅವರು.

ಪ್ರಥಮ ವರ್ಷದಲ್ಲಿ ಸಂಶೋಧನೆ ಗುಣಲಕ್ಷಣ, ಸವಾಲು, ಕ್ಷೇತ್ರ ಕಾರ್ಯದ ಬಗ್ಗೆ ಓದುವ ವಿದ್ಯಾರ್ಥಿಗಳು, 100 ಅಂಕದ ಪ್ರಾಯೋಗಿಕ ಪರೀಕ್ಷೆಯನ್ನೂ ಎದುರಿಸಬೇಕಾಗುತ್ತದೆ. ಎರಡನೇ ವರ್ಷದಲ್ಲಿ ವಿದ್ಯಾರ್ಥಿಗಳೇ ವಿಷಯವೊಂದನ್ನು ಆಯ್ದುಕೊಂಡು, ಸಂಶೋಧನೆ ಮಾಡಿ, ಸಂಪ್ರಬಂಧ ಮಂಡಿಸುತ್ತಾರೆ. ಬೇರೆ ಬೇರೆ ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರು ಈ ಪ್ರಬಂಧದ ಮೌಲ್ಯಮಾಪನ ನಡೆಸುತ್ತಾರೆ. ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದದಲ್ಲಿ ಸೇರಿಸಬೇಕು ಎಂಬ ಒತ್ತಾಸೆಗೆ ಇಂತಹ ಪ್ರಬಂಧಗಳು ಪೂರಕವಾಗುತ್ತವೆ ಎಂದು ಅಭಿಪ್ರಾಯಪಟ್ಟರು.

25ರಿಂದ 70 ವರ್ಷದವರೆಗಿನವರು..

ತುಳು ಎಂ.ಎ ತರಗತಿಗಳು ಸಂಧ್ಯಾ ಕಾಲೇಜಿನಲ್ಲಿ ನಡೆಯುವುದರಿಂದ ಹಲವರಿಗೆ ಅನುಕೂಲವಾಗಿದೆ. ವೈದ್ಯರು, ಎಂಜಿನಿಯರ್‌ಗಳು, ನಿವೃತ್ತರು, ಬ್ಯಾಂಕ್‌ ಉದ್ಯೋಗಿಗಳು, ಶಿಕ್ಷಕರು, ಗೃಹಿಣಿಯರು ಪದವಿ ಅಧ್ಯಯನ ಮಾಡಲು ಉತ್ಸಾಹ ತೋರುತ್ತಾರೆ. 25 ವರ್ಷದಿಂದ 70 ವರ್ಷದವರೆಗಿನವರೂ ಎಂ.ಎ ಪೂರೈಸಿದ್ದಾರೆ. ಈ ವರ್ಷ ಈ ವರೆಗೆ 24 ಅರ್ಜಿಗಳು ಸಲ್ಲಿಕೆಯಾಗಿವೆ. ಮಾಹಿತಿಗೆ ಮೊ. 9481270577, 9972261201, 8553216236.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT