ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಳ್ಳಾಲದಲ್ಲಿ ಶೀಘ್ರ ಸಹಾಯವಾಣಿ ಆರಂಭ

ರ‍್ಯಾಂಡಮ್‌ ತಪಾಸಣೆಯಿಂದ ಸೋಂಕು ನಿಯಂತ್ರಣ: ಶಾಸಕ ಯು.ಟಿ. ಖಾದರ್‌
Last Updated 11 ಜುಲೈ 2020, 8:01 IST
ಅಕ್ಷರ ಗಾತ್ರ

ಮಂಗಳೂರು: ರ‍್ಯಾಂಡಮ್‌ ತಪಾಸಣೆಯ ಮೂಲಕ ಮಾತ್ರ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ಒದಗಿಸಿ, ಸೋಂಕು ಹರಡುವುದನ್ನು ಅಥವಾ ಸಾವಿನ ಅಪಾಯವನ್ನು ತಪ್ಪಿಸಬಹುದಾಗಿದೆ ಎಂದು ಶಾಸಕ ಯು.ಟಿ. ಖಾದರ್‌ ಅಭಿಪ್ರಾಯಪಟ್ಟರು.

ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸೋಂಕು ಇರುವವರು ಗಾಬರಿಯಾಗುವ ಅಗತ್ಯವಿಲ್ಲ. ಸೂಕ್ತ ರೀತಿಯಲ್ಲಿ ಚಿಕಿತ್ಸೆ ಪಡೆದಲ್ಲಿ ಕೋವಿಡ್‌ ಸೋಂಕು ನಿಯಂತ್ರಿಸಲು ಸಾಧ್ಯವಾಗಲಿದೆ. ಈ ಬಗ್ಗೆ ಜಿಲ್ಲಾಡಳಿತ ಹೆಚ್ಚಿನ ಗಮನ ಹರಿಸಬೇಕು ಎಂದರು.

ಉಳ್ಳಾಲದಲ್ಲಿ ಕೋವಿಡ್‌ನಿಂದ ಇಬ್ಬರು ಮೃತಪಟ್ಟ ನಂತರ, ಅವರ ಮನೆಯವರನ್ನು ತಪಾಸಣೆಗೆ ಒಳಪಡಿಸಲಾಯಿತು. ಈ ಸಂದರ್ಭದಲ್ಲಿ ಹಲವರಿಗೆ ಸೋಂಕು ತಗಲಿರುವುದು ದೃಢಪಟ್ಟಿದ್ದರಿಂದ ಸಾಮೂಹಿಕ ತಪಾಸಣೆ ನಡೆಸಲಾಯಿತು. ಇದೀಗ ಜಿಲ್ಲಾಧಿಕಾರಿ ಕಚೇರಿಯಲ್ಲಿ ಉನ್ನತ ಮಟ್ಟದ ಅಧಿಕಾರಿಗಳ ಸಭೆಯನ್ನೂ ನಡೆಸಲಾಗಿದೆ ಎಂದು ಹೇಳಿದರು.

ಶೀಘ್ರ ಸಹಾಯವಾಣಿ: ಉಳ್ಳಾಲದಲ್ಲಿ ಕೋವಿಡ್–19 ನಿಯಂತ್ರಿಸಲು ಎನ್‌ಜಿಒಗಳ ಸಹಭಾಗಿತ್ವದಲ್ಲಿ ಶೀಘ್ರದಲ್ಲಿ ಸಹಾಯವಾಣಿ ಆರಂಭಿಸಲಾಗುವುದು. ಈಗಾಗಲೇ ಉಳ್ಳಾಲ ನಗರಸಭೆಯ ಪ್ರತಿ ವಾರ್ಡ್‌ನಲ್ಲಿರುವ ಅನಧಿಕೃತ ವಾರ್ಡ್ ಸಮಿತಿಯನ್ನು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಅಧಿಕೃತವಾಗಿ ರಚಿಸಲಾಗುವುದು ಎಂದು ತಿಳಿಸಿದರು.

ಪ್ರತಿ ವಾರ್ಡ್‌ನಲ್ಲಿ ಆಸಕ್ತರ ತಂಡದೊಂದಿಗೆ ಕಾರ್ಯಪಡೆ ರಚಿಸಿ, ಸದಸ್ಯರಿಗೆ ಅಗತ್ಯ ತರಬೇತಿ ಹಾಗೂ ಗುರುತಿನ ಚೀಟಿ ನೀಡಲಾಗುವುದು. ವಾರ್ಡ್‌ನ ಪ್ರತಿ ಮನೆಗಳ ಸರ್ವೆ ಕಾರ್ಯ ನಡೆಸಲಾಗುವುದು ಎಂದರು.

50 ವರ್ಷ ಮೇಲಿನ ಹಾಗೂ 10 ವರ್ಷದ ಕೆಳಗಿನ ಮಕ್ಕಳು ಹಾಗೂ ವಿವಿಧ ರೀತಿಯ ಇತರ ಕಾಯಿಲೆ ಇರುವವರ ಪಟ್ಟಿ ತಯಾರಿಸಲಾಗುವುದು. ಅವರನ್ನು ರ‍್ಯಾಪಿಡ್‌ ಕಿಟ್ ಮೂಲಕ ತಪಾಸಣೆಗೆ ಒಳಪಡಿಸಿ, ಸೋಂಕು ಅಥವಾ ಶಂಕೆ ಇದ್ದಲ್ಲಿ ಅಗತ್ಯ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಖಾಸಗಿ ಆಸ್ಪತ್ರೆಯಲ್ಲಿ ಅವರದ್ದೇ ಖರ್ಚಿನಲ್ಲಿ ಅಥವಾ ಹಾಸಿಗೆ ಇದ್ದಲ್ಲಿ ವೆನ್ಲಾಕ್‌ನಲ್ಲಿ ಅಥವಾ ವೆನ್ಲಾಕ್‌ನಲ್ಲಿ ಹಾಸಿಗೆ ಲಭ್ಯವಿಲ್ಲದಿದ್ದಾಗ ಜಿಲ್ಲಾಡಳಿತದಿಂದ ಸೂಚಿಸುವ ಖಾಸಗಿ ಆಸ್ಪತ್ರೆಯಲ್ಲಿ ಉಚಿತವಾಗಿ ಚಿಕಿತ್ಸೆ ನೀಡಲಾಗುವುದು. ಸೋಂಕು ಹರಡದ ರೀತಿಯಲ್ಲಿ ಆಯಾ ಮನೆಯವರೇ ಕ್ರಮ ಕೈಗೊಳ್ಳಲು ಮುಂದಾದಲ್ಲಿ ಹೋಂ ಐಸೋಲೇಶನ್‌ಗೆ ಸೂಚಿಸಲಾಗುವುದು. ಅವರ ಮೇಲೆ ಆಶಾ ಕಾರ್ಯಕರ್ತೆಯರು ನಿಗಾ ಇರಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಮಂಗಳೂರು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಮುಹಮ್ಮದ್ ಮೋನು, ಸಂತೋಷ್ ಕುಮಾರ್ ಶೆಟ್ಟಿ ಇದ್ದರು.

‘ಲಿಖಿತ ದೂರು ನೀಡಿ’

ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್‌ ಚಿಕಿತ್ಸೆ ಹೆಸರಿನಲ್ಲಿ ಸುಲಿಗೆ ಮಾಡಲಾಗುತ್ತಿದೆ ಎಂಬ ಆರೋಪದ ಕುರಿತಂತೆ ಸಂಬಂಧಪಟ್ಟವರು ಜಿಲ್ಲಾಧಿಕಾರಿಗೆ ಲಿಖಿತ ದೂರು ನೀಡಬೇಕು ಎಂದು ಶಾಸಕ ಯು.ಟಿ. ಖಾದರ್ ಹೇಳಿದರು.

ಸೋಂಕಿನ ಭಯದಿಂದ ಸದ್ಯ ಸರ್ಕಾರಿ ಆಸ್ಪತ್ರೆಗಳಲ್ಲಿಯೂ ವೈದ್ಯರು, ನರ್ಸ್‌ಗಳು ಕೆಲಸಕ್ಕೆ ಹಾಜರಾಗಲು ಭಯ ಪಡುತ್ತಿದ್ದಾರೆ. ಸದ್ಯ ಶೇ 60ರಷ್ಟು ಜನರು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಇರುವ ವ್ಯವಸ್ಥೆಯಲ್ಲಿ ಚಿಕಿತ್ಸೆ ಒದಗಿಸುವುದು ಅಗತ್ಯವಾಗಿದೆ. ಹಿಂದಿನ ರೀತಿಯಲ್ಲಿ ಚಿಕಿತ್ಸೆ ನಿರೀಕ್ಷಿಸುವುದು ಅಸಾಧ್ಯ. ಈ ಬಗ್ಗೆ ಜನರೂ ಮನವರಿಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT