ಮಂಗಳೂರು: ನಗರದಲ್ಲಿ ಶಾಲಾ ಕಾಲೇಜುಗಳ ಪಕ್ಕದ ರಸ್ತೆ ಮತ್ತು ಒಳರಸ್ತೆಗಳಲ್ಲಿ ಅಡ್ಡಾದಿಡ್ಡಿ ವಾಹನಗಳನ್ನು ನಿಲ್ಲಿಸಲಾಗುತ್ತಿದೆ. ಇದರಿಂದ ಇತರ ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಕೆಲವು ಶಾಲೆಗಳ ಬಳಿ ಇದು ಸಂಚಾರ ದಟ್ಟಣೆಗೂ ಕಾರಣವಾಗುತ್ತಿದೆ. ಪಾದಚಾರಿಗಳೂ ಇದರಿಂದ ಸಮಸ್ಯೆ ಎದುರಿಸುತ್ತಿದ್ದಾರೆ...
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಅಹವಾಲು ಆಲಿಸಲು ನಗರದ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಭಾನುವಾರ ಏರ್ಪಡಿಸಿದ್ದ ಸಭೆಯಲ್ಲಿ ಅನೇಕರು ಹೇಳಿಕೊಂಡ ದೂರುಗಳಿವು.
ದಲಿತ ಮುಖಂಡ ಎಸ್.ಪಿ ಆನಂದ್, ‘ಮುಖ್ಯ ರಸ್ತೆಯ ಪಕ್ಕದಲ್ಲೇ ಇರುವ ಕೆಲವು ಶಾಲೆಗಳಲ್ಲಿ ವಿಶಾಲವಾದ ಆಟದ ಮೈದಾನಗಳಿವೆ. ಆದರೆ ಮಕ್ಕಳನ್ನು ಕರೆದೊಯ್ಯಲು ಬರುವ ಪೋಷಕರ ವಾಹನಗಳನ್ನು ಅವರು ಶಾಲಾ ಅವಧಿ ಮುಗಿದ ಬಳಿಕವೂ ಒಳಗೆ ಬಿಟ್ಟುಕೊಳ್ಳುವುದಿಲ್ಲ. ಇದರಿಂದ ಮುಖ್ಯ ರಸ್ತೆಗಳಲ್ಲಿ ಇತರ ಸಾರ್ವಜನಿಕರಿಗೆ ಸಮಸ್ಯೆ ಉಂಟಾಗುತ್ತಿದೆ. ಇಂತಹ ಕಡೆ ನಿತ್ಯ ಸಂಚಾರ ದಟ್ಟಣೆಯೂ ಉಂಟಾಗುತ್ತಿದೆ. ಪೊಲೀಸ್ ಇಲಾಖೆ ಮಧ್ಯಪ್ರವೇಶ ಮಾಡಿ ಈ ಸಮಸ್ಯೆ ನೀಗಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು. ಇತರ ಮುಖಂಡರೂ ಇದಕ್ಕೆ ದನಿಗೂಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ದಿನೇಶ್ ಕುಮಾರ್ ಬಿ.ಪಿ., ‘ಈ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿವೆ. ಈ ಸಮಸ್ಯೆ ಕುರಿತು ಶಾಲಾ ಕಾಲೇಜುಗಳ ಆಡಳಿತ ಮಂಡಳಿಗಳಿಗೆ ಈಗಾಗಲೇ ಹಲವು ಬಾರಿ ಸೂಚನೆ ನೀಡಲಾಗಿದೆ. ಇದಕ್ಕೆ ಕಡಿವಾಣ ಹಾಕದಿದ್ದರೆ ಅಂತಹ ಪ್ರದೇಶಗಳಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿ ದಂಡ ವಿಧಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.
ಹೆದ್ದಾರಿ ಪಕ್ಕ ಭಾರಿ ವಾಹನ ನಿಲುಗಡೆ: ‘ರಾಷ್ಟ್ರೀಯ ಹೆದ್ದಾರಿ 66ರ ಪಕ್ಕದಲ್ಲಿ ಪಣಂಬೂರು, ಕುಳಾಯಿ, ಸುರತ್ಕಲ್ ವರೆಗೆ,ಹಾಗೂ ಹೊನ್ನಕಟ್ಟೆ, ಕಾನ-ಬಾಳ ರಸ್ತೆಯ ಪಕ್ಕದಲ್ಲಿ ಭಾರಿ ಗಾತ್ರದ ಲಾರಿ ಹಾಗೂ ಇತರ ಟ್ರಕ್‌ಗಳನ್ನು ನಿಲ್ಲಿಸುತ್ತಾರೆ. ಇದರಿಂದ ಬೇರೆ ವಾಹನಗಳ ಸಂಚಾರಕ್ಕೆ ಅಡ್ಡಿ ಉಂಟಾಗುತ್ತಿದೆ. ಕೆಲವೊಮ್ಮೆ ಇದು ರಸ್ತೆ ಅಪಘಾತಗಳಿಗೂ ಕಾರಣವಾಗುತ್ತಿದೆ. ಭಾರಿ ವಾಃನಗಳನ್ನು ರಸ್ತೆ ಬದಿಯಲ್ಲಿ ಬೇಕಾ ಬಿಟ್ಟಿ ನಿಲ್ಲಿಸುವುದನ್ನು ತಡೆಯಲು ಪೊಲೀಸರು ಕ್ರಮ ಕೈಗೊಳ್ಳಬೇಕು’ ಎಂದು ಜಯ ಆಗ್ರಹಿಸಿದರು.
’ಈ ಬಗ್ಗೆ ಪರಿಶೀಲಿಸಿ, ತಪ್ಪೆಸಗುವ ವಾಹನ ಚಾಲಕರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಸಂಚಾರ ವಿಭಾಗದ ಎಸಿಪಿ ನಜ್ಮಾ ಫಾರೂಕಿ ಅವರಿಗೆ ಡಿಸಿಪಿ ನಿರ್ದೇಶನ ನೀಡಿದರು.
‘ಕೊಟ್ಟಾರಚೌಕಿಯಲ್ಲಿ ಕೂಳೂರು ಕಡೆಯಿಂದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಾಗಿಬರುವ ವಾಹನಗಳಿಗೆ ಕೊಟ್ಟಾರಚೌಕಿ ಮೇಲ್ಸೇತುವೆ ಕೆಳಗಡೆ ಹೆದ್ದಾರಿಯನ್ನು ಅಡ್ಡಹಾದು ಮಾಲಾಡಿ ರಸ್ತೆ ಕಡೆಗೆ ಸಾಗುವ ವಾಹನಗಳು ಅಡ್ಡ ಬರುತ್ತವೆ. ಸುರತ್ಕಲ್ ಬಸ್ ನಿಲ್ದಾಣದ ಬಳಿಯಲ್ಲೂ ಹೆದ್ದಾರಿಯಲ್ಲಿ ಏಕಮುಖ ಸಂಚಾರಕ್ಕೆ ಮಾತ್ರ ಅವಕಾಶವಿರುವ ಕಡೆ ವಾಹನಗಳು ವಿರುದ್ಧ ದಿಕ್ಕಿನಲ್ಲಿ ಸಾಗಿಬರುತ್ತವೆ. ಇವೆರಡೂ ತಾಣಗಳಲ್ಲಿ ಸುರಕ್ಷಿತ ಸಂಚಾರಕ್ಕೆ ಕ್ರಮ ವಹಿಸಬೇಕು’ ಎಂದು ಪ್ರಮುಖರು ಒತ್ತಾಯಿಸಿದರು.
‘ಈ ಬಗ್ಗೆ ಸ್ಥಳ ಪರಿಶೀಲನೆ ನಡೆಸಿ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಕ್ರಮವಹಿಸಲಿದ್ದೇವೆ. ಸ್ಥಳೀಯರು ಅಗತ್ಯ ಸಲಹೆ ನೀಡಬಹುದು’ ಎಂದು ಡಿಸಿಪಿ ತಿಳಿಸಿದರು.
ಎಕ್ಕೂರಿನ ಮೀನುಗಾರಿಕಾ ಕಾಲೇಜಿನ ಮೈದಾನ ಅಕ್ರಮ ಚಟುವಟಿಕೆ ತಾಣವಾಗುತ್ತಿದ್ದು, ಇದನ್ನು ತಡೆಯಲು ಕ್ರಮವಹಿಸಬೇಕು. ಮಾರ್ನಮಿಕಟ್ಟೆ ವೃತ್ತದ ಬಳಿಕ ಫುಟ್‌ಪಾತ್‌ನಲ್ಲೇ ವಾಹನ ರಿಪೇರಿ ನಡೆಯುತ್ತಿದ್ದು, ಕ್ರಮ ಕೈಗೊಳ್ಳಬೇಕು ಎಂದು ಪರಿಶಿಷ್ಟ ಜಾತಿಯ ಮುಖಂಡರೊಬ್ಬರು ಗಮನ ಸೆಳೆದರು.
ಕಿನ್ನಿಗೋಳಿಯಲ್ಲಿ ಖಾಸಗಿ ಬಸ್‌ಗಳು ಪೈಪೋಟಿಗೆ ಬಿದ್ದು ವೇಗವಾಗಿ ಸಾಗುತ್ತಿವೆ. ಬಸ್‌ನ ಸಾಮರ್ಥ್ಯಕ್ಕಿಂತ ಹೆಚ್ಚು ಪ್ರಯಾಣಿಕರನ್ನು ತುಂಬಿಸಿಕೊಂಡು ಹೋಗುತ್ತಾರೆ ಎಂದು ಸ್ಥಳೀಯರಿಬ್ಬರು ಗಮನಕ್ಕೆ ತಂದರು.
ಸಹಾಯಕ ಪೊಲೀಸ್ ಕಮಿಷನರ್‌ಗಳಾದ ಧನ್ಯಾ ಎಸ್.ನಾಯಕ್, ನಜ್ಮಾ ಫಾರೂಕಿ, ಪ್ರತಾಪ್ ಸಿಂಗ್ ಥೋರಟ್, ಠಾಣಾಧಿಕಾರಿಗಳು ಭಾಗವಹಿಸಿದ್ದರು.
‘ಗಂಭೀರ ಪ್ರಕರಣ: ರಾಜಿಗೆ ಅವಕಾಶ ಇಲ್ಲ’
ಕೆಲವೊಂದು ಗಂಭೀರ ಅಪರಾಧ ಕೃತ್ಯಗಳಲ್ಲಿ ಪೊಲೀಸರೇ ಮುಂದೆ ನಿಂತು ರಾಜಿ ಮಾಡಿಸುತ್ತಿದ್ದಾರೆ ಎಂದು ಪರಿಶಿಷ್ಟ ಜಾತಿಯ ಕೆಲವು ಮುಖಂಡರು ಆರೋಪಿಸಿದರು. ‘ಗಂಭೀರ ಪ್ರಕರಣಗಳು ನಡೆದಾಗ ಪೊಲೀಸರು ಯಾವ ಮುಲಾಜಿಗೂ ಬೀಳದೇ ಎಫ್‌ಐಆರ್ ದಾಖಲಿಸಬೇಕು. ಸಂತ್ರಸ್ತರು ದೂರು ನೀಡಲು ಹಿಂದೇಟು ಹಾಕಿದರೆ ಸ್ವಯಂಪ್ರೇರಿತವಾಗಿ ಪೊಲೀಸರೇ ಪ್ರಕರಣ ದಾಖಲಿಸುವುದಕ್ಕೂ ಅವಕಾಶವಿದೆ.ಇಂತಹ ಪ್ರಕರಣಗಳಲ್ಲಿ ರಾಜಿ ಸಂಧಾನ ಮಾಡಿಸುವುದು ಸರಿಯಾದ ಕ್ರಮವಲ್ಲ’ ಎಂದು ಪೊಲೀಸ್ ಅಧಿಕಾರಿಗಳಿಗೆ ಡಿಸಿಪಿ ದಿನೇಶ್ ಕುಮಾರ್ ಸೂಚಿಸಿದರು.
‘ಜಾತಿ ನಿಂದನೆಗೆ ಅವಕಾಶ ನೀಡದಿರಿ’
ಶ್ರೀಕೃಷ್ಣ ಜನ್ಮಾಷ್ಟಮಿ ವಿಟ್ಲಪಿಂಡಿ ಚೌತಿ ಮೊದಲಾದ ಹಬ್ಬಗಳನ್ನು ಸಾರ್ವಜನಿಕವಾಗಿ ಆಚರಿಸುವಾಗ ಜಾತಿ ಧರ್ಮ ನಿಂದನೆ ಆಗುವುದನ್ನು ತಡೆಯಲು ಕ್ರಮ ವಹಿಸಬೇಕು. ಈ ಬಗ್ಗೆ ಇಂತಹ ಕಾರ್ಯಕ್ರಮಗಳ ಆಯೋಜಕರಿಗೆ ತಿಳಿವಳಿಕೆ ನೀಡಬೇಕು ಎಂದು ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ಸಿದ್ಧಾರ್ಥ ಗೋಯಲ್ ಅವರು ಠಾಣಾಧಿಕಾರಿಗಳಿಗೆ ಸೂಚಿಸಿದರು. ‘ದೊಡ್ಡ ಮಟ್ಟದ ಕಾರ್ಯಕ್ರಮಗಳನ್ನು ಸಂಘಟಿಸುವವರ ಜೊತೆ ಸಭೆ ನಡೆಸಿ ಕಾನೂನು ಸುವ್ಯವಸ್ಥೆ ಕಾಪಾಡಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಬೇಕು’ ಎಂದು ಸಲಹೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.