ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಮಾಸ್ ಪರ ವಿಡಿಯೊ; ಆರೋಪಿ ಬಂಧನ

Published 14 ಅಕ್ಟೋಬರ್ 2023, 13:25 IST
Last Updated 26 ಮಾರ್ಚ್ 2024, 14:07 IST
ಅಕ್ಷರ ಗಾತ್ರ

ಮಂಗಳೂರು: ಹಮಾಸ್‌ ಸಂಘಟನೆಗಾಗಿ ಪ್ರಾರ್ಥನೆ ಸಲ್ಲಿಸಿ ಎಂದು ವಿಡಿಯೊ ಮಾಡಿ ವಾಟ್ಸ್‌ ಆ್ಯಪ್‌ನಲ್ಲಿ ಹರಿಯಬಿಟ್ಟಿದ್ದ ಜಾಕೀರ್‌ ಅಲಿಯಾಸ್‌ ಜಾಕಿ (58) ಎಂಬಾತನ ವಿರುದ್ಧ ನಗರದ ಬಂದರು ಠಾಣೆಯ ಪೊಲೀಸರು ಸ್ವಯಂ ದೂರು ದಾಖಲಿಸಿಕೊಂಡು ಬಂಧಿಸಿದ್ದಾರೆ.

'ಜಾಕೀರ್‌ ಮಾಡಿರುವ ವಿಡಿಯೊ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅನೇಕರು ಆತಂಕ ವ್ಯಕ್ತಪಡಿಸಿದ್ದರು. ಈ ಕೃತ್ಯವು ಸಮಾಜದಲ್ಲಿ ಕೋಮುಸೌಹಾರ್ದಕ್ಕೆ ಧಕ್ಕೆಯನ್ನು ಉಂಟುಮಾಡುವ ಸಾಧ್ಯತೆ ಇರುವುದರಿಂದ ನಗರದ ಉತ್ತರ ಠಾಣೆಯ ಪಿಎಸ್‌ಐ ವಿನಾಯಕ ತೋರಗಲ್‌ ಅವರು ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡು ಜಾಕೀರ್‌ನನ್ನು ಬಂಧಿಸಿ, ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ. ಜೋಕಟ್ಟೆ ಗ್ರಾಮದ ತೋಕೂರಿನ ನಿವಾಸಿಯಾಗಿದ್ದ ಆರೋಪಿಯು ಈಚೆಗೆ ನಗರದ ಬಂದರು ಪ್ರದೇಶದಲ್ಲಿ ವಾಸವಾಗಿದ್ದ’ ಎಂದು ಪೊಲೀಸ್‌ ಇಲಾಖೆಯ ಪ್ರಕಟಣೆ ತಿಳಿಸಿದೆ.

ಆತ ಈ ಹಿಂದೆಯೂ ಅಕ್ರಮ ಕೂಟ ಕಟ್ಟಿಕೊಂಡು ದಾಂದಲೆ ನಡೆಸಿದ್ದು, ಸರ್ಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ, ಅಕ್ರಮ ಪ್ರವೇಶ, ಮಾರಕಾಯುಧದಿಂದ ಹಲ್ಲೆ, ಸ್ವತ್ತುಗಳಿಗೆ ಹಾನಿ, ಕಳವು, ಅಪಹರಣ, ಬೆದರಿಕೆ ಸೇರಿದಂತೆ ಬಂದರು ಠಾಣೆಯಲ್ಲಿ ದಾಖಲಾಗಿದ್ದ ಎಂಟು ಪ್ರಕರಣಗಳಲ್ಲಿ ಆರೋಪಿಯಾಗಿದ್ದ.

‘ಹಮಾಸ್‌ ಉಗ್ರರ ಪರ ವಿಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಯಬಿಟ್ಟು ಕೋಮು ಪ್ರಚೋದನೆ ನೀಡಿರುವ ಜಾಕೀರ್‌ನನ್ನು ಬಂಧೀಸಬೇಕು’ ಎಂದು ಒತ್ತಾಯಿಸಿ ವಿಶ್ವ ಹಿಂದೂ ಪರಿಷತ್‌ನ ವಿಭಾಗ ಪ್ರಚಾರ ಪ್ರಮುಖ್‌ ಪ್ರದೀಪ್‌ ಕುಮಾರ್‌ ಸರಿಪಲ್ಲ ಅವರೂ ನಗರ ಉತ್ತರ ಠಾಣೆಗೆ ದೂರು ನೀಡಿದ್ದರು.

‘ಹಮಾಸ್‌ ಉಗ್ರರಿಗೆ ಬೆಂಬಲ ಸೂಚಿಸಿದ್ದರಿಂದ ರಾಷ್ಟ್ರೀಯ ಭದ್ರತೆಗೂ ಧಕ್ಕೆ ಉಂಟಾಗುತ್ತದೆ. ತಮ್ಮ ಸಮುದಾಯದವರೂ ಒಗ್ಗಟ್ಟಾಗಬೇಕು ಎಂದು ಹೇಳಿರುವ ಆತ ವಿಡಿಯೊದಲ್ಲಿ ಕೋಮು ಪ್ರಚೋದನೆಯನ್ನೂ ನೀಡಿದ್ದಾನೆ. ವಿಡಿಯೊದಲ್ಲಿರುವ ಮಾತುಗಳನ್ನು ಕೇಳುವಾಗ, ಆ ವ್ಯಕ್ತಿಯು ಉಗ್ರರ ಜೊತೆ ನಂಟು ಹೊಂದಿರುವ ಶಂಕೆ ಇದೆ’ ಎಂದು ಅವರು ದೂರಿನಲ್ಲಿ ಆರೋಪಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT