ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಂಟ್ವಾಳ: ಗ್ರಾಮೀಣ ವಿದ್ಯಾರ್ಥಿಗಳ ವಿದ್ಯಾ ದೇಗುಲಕ್ಕೆ ಬೀಗ

ನೈನಾಡು: 13 ವರ್ಷಗಳಲ್ಲೇ ಮುಚ್ಚಿದ ಸರ್ಕಾರಿ ಪದವಿಪೂರ್ವ ಕಾಲೇಜು
Published 20 ಜೂನ್ 2024, 7:47 IST
Last Updated 20 ಜೂನ್ 2024, 7:47 IST
ಅಕ್ಷರ ಗಾತ್ರ

ಬಂಟ್ವಾಳ: ಬಂಟ್ವಾಳ ಮತ್ತು ಬೆಳ್ತಂಗಡಿ ತಾಲ್ಲೂಕಿನ ಗಡಿ ಭಾಗದಲ್ಲಿ 13  ವರ್ಷಗಳ ಹಿಂದಷ್ಟೇ ಆರಂಭಗೊಂಡ ಸರ್ಕಾರಿ ಪದವಿಪೂರ್ವ ಕಾಲೇಜು ಮೂಲಸೌಕರ್ಯ ಮತ್ತು ವಿದ್ಯಾರ್ಥಿಗಳ  ಕೊರತೆಯಿಂದ ಬಾಗಿಲು ಮುಚ್ಚಿದೆ.

ಇಲ್ಲಿನ ಪಿಲಾತಬೆಟ್ಟು ಗ್ರಾಮದ ನೈನಾಡು ಎಂಬಲ್ಲಿ ಒಟ್ಟು 4.10 ಎಕರೆ ಜಮೀನಿನಲ್ಲಿ ಸರ್ಕಾರಿ ಪ್ರೌಢಶಾಲೆ ಇದೆ. 2009ರಲ್ಲಿ ಶಾಲೆಯ ಆಟದ ಮೈದಾನದ ಕೆಳಭಾಗದ ಜಮೀನು ಸಮತಟ್ಟುಗೊಳಿಸಿ ಪ್ರತ್ಯೇಕ ಕಟ್ಟಡದಲ್ಲಿ ಕಾಲೇಜು ಆರಂಭಿಸಲಾಗಿತ್ತು. ಬಜಿರೆ, ಹೊಸಪಟ್ನ, ಕುಳಾಲ್, ಎಡ್ತೂರು, ನೇರಳಕಟ್ಟೆ, ಮೂರ್ಜೆ, ನಿನ್ಯಾರು, ದೆಂಚಿನಡ್ಕ ಸುತ್ತಲಿನ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಈ ಕಾಲೇಜು ಅನುಕೂಲವಾಗಿತ್ತು. ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗರಾಜ ಶೆಟ್ಟಿ ಮತ್ತು ಸ್ಥಳೀಯ ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ತುಂಗಪ್ಪ ಬಂಗೇರ ಅವರ ಉತ್ಸಾಹದಿಂದ ಆರಂಭಗೊಂಡ ಕಾಲೇಜಿನಲ್ಲಿ ಉಪನ್ಯಾಸಕರ ಕೊರತೆ ನೀಗಿಸಲು ಪ್ರಾಂಶುಪಾಲರನ್ನು ಹೊರತುಪಡಿಸಿ ಉಳಿದಂತೆ ಅತಿಥಿ ಉಪನ್ಯಾಸಕರನ್ನು ನಿಯೋಜಿಸಲಾಗಿತ್ತು.

‘ಈ  ಕಾಲೇಜಿನ ಉಳಿವಿಗಾಗಿ ನಾವೆಲ್ಲರೂ ಎಷ್ಟೇ ಪ್ರಯತ್ನ ಪಟ್ಟರೂ ಸರ್ಕಾರ ಕಾಯಂ ಉಪನ್ಯಾಸಕರ ನೇಮಕಗೊಳಿಸುವಲ್ಲಿ ನಿರ್ಲಕ್ಷ್ಯ ವಹಿಸಿತು. ಇದರಿಂದ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸಿತು ಎನ್ನುತ್ತಾರೆ ಸ್ಥಳೀಯ ಉದ್ಯಮಿ ನೆವ್ಲುಸ್ಟರ್ ಪಿಂಟೊ.

ಗ್ರಾಮೀಣ ವಿದ್ಯಾರ್ಥಿಗಳಿಗೆ ಅನ್ಯಾಯವಾಗದಂತೆ ಅತಿಥಿ ಉಪನ್ಯಾಸಕರ ವೇತನ ಮತ್ತಿತರ ಖರ್ಚು ಭರಿಸುತ್ತಾ ಕಾಲೇಜು ಉಳಿಸಲು ನಾವು ಅವಿರತ ಶ್ರಮ ವಹಿಸಿದರೂ ಸರ್ಕಾರದಿಂದ ಸ್ಪಂದನೆ ಸಿಗಲಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಧ್ಯಕ್ಷ ಟಿ.ಹರೀಂದ್ರ ಪೈ.

ಈಗಾಗಲೇ ಕಾಲೇಜಿಗೆ ಬಾಗಿಲು ಹಾಕಿ ಎರಡು ವರ್ಷಗಳಾಗುತ್ತಾ ಬಂದಿದೆ. ಕಟ್ಟಡದ ಸುತ್ತಲೂ ಪೊದೆ ಬೆಳೆದಿದೆ. ಸರ್ಕಾರಿ ಕಟ್ಟಡ ಅನಾಥವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT