ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕಿಸ್ತಾನ ಮೂಲದ ಮೂವರು ಜಾಗತಿಕ ಉಗ್ರರು: ಅಮೆರಿಕ

Last Updated 8 ಫೆಬ್ರುವರಿ 2018, 20:00 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಪಾಕಿಸ್ತಾನದ ಲಷ್ಕರ್‌–ಎ–ತಯ್ಯಬಾ ಮತ್ತು ತಾಲಿಬಾನ್‌ ಉಗ್ರ ಸಂಘಟನೆಗಳ ಜತೆ ಸಂಪರ್ಕವಿಟ್ಟುಕೊಂಡಿದ್ದ ಮೂವರನ್ನು ಜಾಗತಿಕ ಉಗ್ರರು ಎಂದು ಗುರುವಾರ ಅಮೆರಿಕ ಘೋಷಿಸಿದೆ.

ಅಪಾಯಕಾರಿ ವ್ಯಕ್ತಿಗಳು ಮತ್ತು ಸಂಘಟನೆಗಳಿಗೆ ನೆಲೆ ಕಲ್ಪಿಸುವುದನ್ನು ನಿಲ್ಲಿಸಬೇಕು ಎಂದೂ ಅದು ಹೇಳಿದೆ.

ರೆಹಮಾನ್ ಝೆಬ್‌ ಫಕೀರ್‌ ಮಹಮ್ಮದ್, ಹಿಜ್ಬ್‌ ಉಲ್ಲಾ ಅಸ್ತಮ್‌ ಖಾನ್ ಮತ್ತು ದಿಲಾವರ್ ಖಾನ್ ನಾದಿರ್ ಖಾನ್‌ ಎಂಬುವವರನ್ನು ಜಾಗತಿಕ ಉಗ್ರರು ಎಂದು ಘೋಷಿಸಲಾಗಿದೆ. ಅಮೆರಿಕದಲ್ಲಿ ಈ ಮೂವರಿಗೆ ಸಂಬಂಧಿಸಿದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಜತೆಗೆ, ಇವರ ಜತೆ ಅಮೆರಿಕ ಪ್ರಜೆಗಳು ಯಾವುದೇ ಸಂಪರ್ಕ ಇಟ್ಟುಕೊಳ್ಳುವುದನ್ನು ನಿಷೇಧಿಸಿದೆ.

ದಕ್ಷಿಣ ಏಷ್ಯಾದಲ್ಲಿ ಭಯೋತ್ಪಾದನೆಗೆ ಬೆಂಬಲಿಸುತ್ತಿರುವ ಜಾಲವನ್ನು ನಿಯಂತ್ರಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಮೆರಿಕ ತಿಳಿಸಿದೆ.

‘ಆಲ್‌–ಕೈದಾ, ಲಷ್ಕರ್–ಎ–ತಯ್ಯಬಾ, ತಾಲಿಬಾನ್‌ ಉಗ್ರ ಸಂಘಟನೆಗಳು ಸೇರಿದಂತೆ ಇತರ ಉಗ್ರ ಸಂಘಟನೆಗಳಿಗೆ ಸರಕು ಸಾಗಣೆ, ಸುಧಾರಿತ ಸ್ಫೋಟಕ ಸಾಮಗ್ರಿ, ತಂತ್ರಜ್ಞಾನದ ನೆರವು ನೀಡುವವರನ್ನು ಗುರಿಯಾಗಿಸಲಾಗಿದೆ’ ಎಂದು ಹಿರಿಯ ಅಧಿಕಾರಿ ಸೈಗಲ್ ಮಂಡೇಲ್ಕರ್‌ ತಿಳಿಸಿದ್ದಾರೆ.

**

ಸಿರಿಯಾದ 100 ಸೈನಿಕರ ಹತ್ಯೆ

ಬೈರೂತ್‌: ಪೂರ್ವ ಸಿರಿಯಾದಲ್ಲಿ ನಡೆದಿದ್ದ ದಾಳಿಗೆ ಪ್ರತೀಕಾರವಾಗಿ ಅಮೆರಿಕ ನೇತೃತ್ವದ ಮಿತ್ರಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ಸಿರಿಯಾ ಆಡಳಿತ ಹಾಗೂ ಅದರ ಮಿತ್ರಪಡೆಗಳ ಕನಿಷ್ಠ 100 ಸೈನಿಕರು ಹತ್ಯೆಯಾಗಿದ್ದಾರೆ.

ಸಿರಿಯಾ ರಾಸಾಯನಿಕ ಶಸ್ತ್ರಾಸ್ತ್ರಗಳನ್ನು ಹೊಂದಿದ್ದು, ಅವುಗಳ ಬಳಕೆ ಮಾಡುವ ಸಾಧ್ಯತೆ ಇದೆ ಎನ್ನುವ ಶಂಕೆಯ ಮೇಲೆ ಅಮೆರಿಕ ಈ ದಾಳಿ ನಡೆಸಿದೆ. ದಾಳಿ ಸಂದರ್ಭದಲ್ಲಿ ಅಮೆರಿಕ ಮಿತ್ರಪಡೆಗಳ ಸಲಹೆಗಾರರೂ ಉಪಸ್ಥಿತರಿದ್ದರು ಎಂದು ಸೇನೆಯ ಮೂಲಗಳು ತಿಳಿಸಿವೆ.

ದಾಳಿಯಲ್ಲಿ 20 ಸೈನಿಕರು ಮೃತಪಟ್ಟಿದ್ದಾರೆ ಎಂದು ಬ್ರಿಟನ್‌ ಮೂಲದ ಸಿರಿಯಾ ಮಾನವ ಹಕ್ಕುಗಳ ವೀಕ್ಷಣಾ ಸಮಿತಿ ಮುಖ್ಯಸ್ಥ ರಾಮಿ ಅಬ್ದುಲ್‌ ರೆಹಮಾನ್‌ ತಿಳಿಸಿದ್ದಾರೆ.

**

ಉತ್ತರ ಕೊರಿಯಾದಿಂದ ಸೇನಾ ಪರೇಡ್‌

ಸೋಲ್‌: ಉತ್ತರ ಕೊರಿಯಾ ತನ್ನ ರಾಜಧಾನಿ ಪ್ಯೊಂಗ್ಯಾಂಗ್‌ನಲ್ಲಿ ಗುರುವಾರ ಸೇನಾ ಪರೇಡ್‌ ನಡೆಸಿದೆ.

ಒಲಿಂಪಿಕ್‌ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದ ಮುನ್ನಾ ದಿನ ಈ ಪರೇಡ್‌ ನಡೆದಿದೆ. ಆದರೆ, ಉತ್ತರ ಕೊರಿಯಾ ಸ್ವಾಮ್ಯದ ವಾಹಿನಿ ಪರೇಡ್‌ನ ನೇರ ಪ್ರಸಾರ ಮಾಡಿಲ್ಲ. ಎರಡನೇ ಕಿಮ್‌ ಸಂಗ್‌ ಚೌಕದಲ್ಲಿ ಬೆಳಿಗ್ಗೆ 10.30ಕ್ಕೆ ಪರೇಡ್‌ ಆರಂಭಿಸಿತು ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT