ಭಾನುವಾರ, 25 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಕ್ಷದ್ವೀಪಕ್ಕೆ ಪ್ರತ್ಯೇಕ ಜೆಟ್ಟಿ–ಕಾಯಬೇಕು ಇನ್ನೂ 3 ವರ್ಷ?

Published 19 ಜನವರಿ 2024, 7:16 IST
Last Updated 19 ಜನವರಿ 2024, 7:16 IST
ಅಕ್ಷರ ಗಾತ್ರ

ಮಂಗಳೂರು: ಲಕ್ಷದ್ವೀಪಕ್ಕೆ ನಗರದ ಹಳೆಬಂದರಿನಿಂದ ಪ್ರಯಾಣ ಬೆಳೆಸುವ ಹಡಗುಗಳಿಗಾಗಿ ಪ್ರತ್ಯೇಕ ಜೆಟ್ಟಿ ನಿರ್ಮಾಣಕ್ಕೆ ಕೇಂದ್ರ ಸರ್ಕಾರದಿಂದ ₹ 65 ಕೋಟಿ ಮಂಜೂರಾಗಿದ್ದು, ಕಾಮಗಾರಿಯ ಟೆಂಡರ್‌ ಪ್ರಕ್ರಿಯೆ ಪ್ರಗತಿಯಲ್ಲಿದೆ. ಈ ಕಾಮಗಾರಿ ಪೂರ್ಣಗೊಂಡು ಪ್ರಯಾಣಿಕರು ಇಲ್ಲಿನ ಹಳೆಬಂದರಿನಿಂದ ಲಕ್ಷದ್ವೀಪಕ್ಕೆ ನೇರ ಪ್ರವಾಸ ಕೈಗೊಳ್ಳಲು ಇನ್ನೂ ಕನಿಷ್ಠ 3 ವರ್ಷಗಳಾದರೂ ಕಾಯಬೇಕಾಗುತ್ತದೆ.

‘ಲಕ್ಷದ್ವೀಪಕ್ಕೆ ಪ್ರಯಾಣ ಬೆಳೆಸುವ ಹಡಗುಗಳ ನಿಲುಗಡೆಗಾಗಿ ಹಳೆಬಂದರಿನ ಉತ್ತರ ದಕ್ಕೆಯಲ್ಲಿ ಪ್ರತ್ಯೇಕ ಜೆಟ್ಟಿ ನಿರ್ಮಾಣ ಕಾಮಗಾರಿಗೆ ಟೆಂಡರ್‌ ಆಹ್ವಾನಿಸಲಾಗಿದೆ. ಈ ಯೋಜನೆಗೆ ಪರಿಸರ ಇಲಾಖೆಯಿಂದ ಅನುಮತಿ ಪಡೆಯುವ ಪ್ರಕ್ರಿಯೆ ಪ್ರಗತಿಯಲ್ಲಿದೆ.  ಇದರ ಕಾಮಗಾರಿಗೆ ಕರಾವಳಿ ನಿಯಂತ್ರಣ ವಲಯದ ಅನುಮೋದನೆಯೂ ಅಗತ್ಯ. ಇವೆಲ್ಲವನ್ನು ಪಡೆಯುವುದಕ್ಕೇ ಇನ್ನೂ ಐದಾರು ತಿಂಗಳು ಬೇಕಾಗಬಹುದು. ಅಗತ್ಯವಿರುವ ಎಲ್ಲ ಅನುಮತಿಗಳನ್ನು ಪಡೆದ ಬಳಿಕ ಕಾಮಗಾರಿ ಆರಂಭವಾಗಲಿದೆ. ಆ ಬಳಿಕ ಕಾಮಗಾರಿ ಪೂರ್ಣಗೊಳಿಸಲು 30 ತಿಂಗಳ ಕಾಲಾವಕಾಶ ಇದೆ. ಹಾಗಾಗಿ ಈ ಯೋಜನೆ ಪೂರ್ಣಗೊಳ್ಳಲು ಇನ್ನೂ ಮೂರು ವರ್ಷ ಕಾಯಬೇಕಾಗಬಹುದು’ ಎಂದು ಬಂದರು ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಲಕ್ಷದ್ವೀಪ ನಿವಾಸಿಗಳು ದೈನಂದಿನ ಅವಶ್ಯಕತೆಗಳ ಪೂರೈಕೆಗೆ ಈ ಹಿಂದೆ ಮಂಗಳೂರಿಗೂ ಭೇಟಿ ನೀಡುತ್ತಿದ್ದರು. ಇಲ್ಲಿಂದಲೂ ಲಕ್ಷದ್ವೀಪಕ್ಕೆ ಪ್ರವಾಸಿಗರು ಹೋಗಿಬರುತ್ತಿದ್ದರು. ವರ್ಷದಲ್ಲಿ ಸುಮಾರು 1500 ಪ್ರಯಾಣಿಕ ಹಡಗುಗಳು ಇಲ್ಲಿನ ಹಳೆಬಂದರಿನಿಂದ ಲಕ್ಷದ್ವೀಪಕ್ಕೆ ಸಂಚರಿಸುತ್ತಿದ್ದವು. ಇಂತಹ ಹಡಗುಗಳಲ್ಲಿ ಶೇ 50ಕ್ಕೂ ಹೆಚ್ಚಿನವುಗಳು 100 ಟನ್‌ಗೂ ಹೆಚ್ಚಿನ ಸಾಮರ್ಥ್ಯದಾಗಿದ್ದವು. ಹಳೆ ಬಂದರಿನ ದಕ್ಕೆಯ ಬಳಿ ನೀರಿನ ಆಳ –4 ಮೀಟರ್‌ಗಳಷ್ಟು ಮಾತ್ರ ಇದೆ. ದೊಡ್ಡ ಗಾತ್ರದ (100 ಟನ್‌ಗಿಂತ ಹೆಚ್ಚು ಸಾಮರ್ಥ್ಯದವು)  ಹಡಗುಗಳ ನಿಲುಗಡೆಗೆ ಇಷ್ಟು ಆಳವು ಸಾಕಾಗುತ್ತಿರಲಿಲ್ಲ. ಇಲ್ಲಿನ ಧಕ್ಕೆಯಲ್ಲಿ ಸರಕುಗಳನ್ನು ಹಡಗಿಗೆ ತುಂಬಲು ಹಾಗೂ ಹಡಗಿನಿಂದ ಸರಕು ಇಳಿಸಲು ಸಮಸ್ಯೆ ಆಗುತ್ತಿತ್ತು. ಧಕ್ಕೆಯ ಪ್ರವೇಶಕ್ಕೆ ತಮ್ಮ ಸರದಿಗಾಗಿ ಕಾಯಬೇಕಾದ ಸ್ಥಿತಿ ಇತ್ತು.

ಈ ಕಿರಿಕಿರಿ ತಪ್ಪಿಸಲು ಲಕ್ಷದ್ವೀಪಕ್ಕೆ ಸಂಚರಿಸುವ ಹಡಗುಗಳಿಗಾಗಿ ಹಳೆ ಬಂದರಿನಲ್ಲಿ ಪ್ರತ್ಯೇಕ ಧಕ್ಕೆಯನ್ನು ನಿರ್ಮಿಸುವಂತೆ ಅಲ್ಲಿನ ಸರ್ಕಾರವು ರಾಜ್ಯ ಸರ್ಕಾರವನ್ನು ಕೋರಿತ್ತು. ಆ ಬಳಿಕ ಲಕ್ಷದ್ವೀಪಕ್ಕೆ ಪ್ರಯಾಣ ಬೆಳೆಸುವ ಹಡಗುಗಳಿಗಾಗಿ ಪ್ರತ್ಯೇಕ ದಕ್ಕೆ ನಿರ್ಮಿಸಲು ಯೋಜನೆ ರೂಪಿಸಲಾಗಿತ್ತು. ಇದಕ್ಕೆ ಕೇಂದ್ರ ಜಲಸಾರಿಗೆ ಸಚಿವಾಲಯವು ಹಸಿರು ನಿಶಾನೆ ತೋರಿತ್ತು. ಪ್ರತ್ಯೇಕ ಜೆಟ್ಟಿ ನಿರ್ಮಿಸುವ ಯೋಜನೆಗೆ ಕೇಂದ್ರವು ಸಾಗರ ಮಾಲಾ ಯೋಜನೆ ಅಡಿ 2022ರ ಜು.22ರಂದು ತಾತ್ವಿಕ ಒಪ್ಪಿಗೆ ನೀಡಿತ್ತು.

‘ಈ ಯೋಜನೆ ಅಡಿ ಸರಕು ನಿರ್ವಹಣೆಗಾಗಿ 303.60 ಮೀ ಉದ್ದದ ದಕ್ಕೆ ಹಾಗೂ 76 ಮೀ ಉದ್ದದ ಪ್ರಯಾಣಿಕರ ನಿರ್ವಹಣೆ ದಕ್ಕೆ ನಿರ್ಮಾಣವಾಗಲಿದೆ. 9800 ಚ. ಮೀ ಪ್ರದೇಶವನ್ನು ಸರಕು ನಿರ್ವಹಣೆಗೆ ಹಾಗೂ 6000 ಚ.ಮೀ ಪ್ರದೇಶವನ್ನು ಪ್ರಯಾಣಿಕರ ಧಕ್ಕೆ ನಿರ್ಮಾಣಕ್ಕೆ ಬಳಸಲಾಗುತ್ತಿದೆ.’

‘ಸರಕು ನಿರ್ವಹಣೆ ಸಾಮರ್ಥ್ಯವನ್ನು ವಾರ್ಷಕ 1.50 ಲಕ್ಷ ಟನ್‌ನಿಂದ 5 ಲಕ್ಷ ಟನ್‌ಗೆ ಹೆಚ್ಚಿಸುವುದೂ ಈ ಯೋಜನೆಯ ಹೆಚ್ಚಿಸುವ ಉದ್ದೇಶದಿಂದ ಇಲ್ಲಿ 7 ಮೀ ಆಳದವರೆಗೆ ಹೂಳೆತ್ತುವುದಕ್ಕೆ 34 ಕೋಟಿ ವೆಚ್ಚದ ಯೋಜನೆ ರೂಪಿಸಲಾಗಿದೆ’ ಎಂದು ಬಂದರು ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. 

ಪ್ರಧಾನಿ ನರೇಂದ್ರ ಮೋದಿ ಅವರು ವಾಸ್ತವ್ಯ ಹೂಡಿ, ಅಲ್ಲಿನ ರಮಣೀಯ ದೃಶ್ಯಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡ ಬಳಿಕ ‘ಲಕ್ಷದ್ವೀಪ’ ಪ್ರವಾಸ ಕೈಗೊಳ್ಳಲು ಬಯಸುವವರ ಸಂಖ್ಯೆ ದಿಡೀರ್‌ ಹೆಚ್ಚಳವಾಗಿದೆ. ಲಕ್ಷದ್ವೀಪವನ್ನು ತಲುಪುವ ಮಾರ್ಗವನ್ನು ಪ್ರವಾಸಿಗರು ಹುಡುಕುತ್ತಿದ್ದಾರೆ. 

ಲಕ್ಷದ್ವೀಪಕ್ಕೆ ಪ್ರವಾಸ 2021ರಿಂದ ಸ್ಥಗಿತ
ಲಕ್ಷದ್ವೀಪಕ್ಕೆ ಪ್ರವಾಸ 2021ರಿಂದ ಸ್ಥಗಿತ ಆದರೆ 2020-21ರ ಬಳಿಕ ಈ ರೀತಿಯ ನೇರ ಪ್ರಯಾಣ ಸಂಪೂರ್ಣ ಸ್ಥಗಿತವಾಗಿದೆ. ಆದರೆ ಲಕ್ಷದ್ವೀಪಕ್ಕೆ ಸರಕು ಮಂಗಳೂರಿನ ಹಳೆಬಂದರಿನ ಮೂಲಕ ಈಗಲೂ ರವಾನೆಯಾಗುತ್ತಿದೆ. ನಗರಕ್ಕೆ ಬರುವ ಸರಕು ಸಾಗಣೆ ಹಡಗಿನ ಸಿಬ್ಬಂದಿ ಇಲ್ಲಿ 24 ಗಂಟೆಗಳವರೆಗೆ ಮಾತ್ರ ಉಳಿಯಲು ಅವಕಾಶವಿದೆ. ಅಲ್ಲಿಂದ ಹಡಗಿನ ಮೂಲಕ ಬರುವ ಅಷ್ಟೂ ಸಿಬ್ಬಂದಿ ಅದೇ ಹಡಗಿನಲ್ಲಿ ಮರಳಬೇಕು. ಸದ್ಯಕ್ಕೆ ಅಲ್ಲಿನ ನಿವಾಸಿಗಳು ಇಲ್ಲಿಗೆ ಪ್ರಯಾಣ ಬೆಳೆಸುತ್ತಿಲ್ಲ. ಇಲ್ಲಿಂದ ಪ್ರವಾಸಿಗರೂ ಲಕ್ಷದ್ವೀಪಕ್ಕೆ ತೆರಳುತ್ತಿಲ್ಲ ಎಂದು  ಬಂದರು ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.  ‘ಲಕ್ಷದ್ವಿಪ ಸಮೂಹದ ಕೆಲವು ದ್ವೀಪ ನಿವಾಸಿಗಳಿಗೆ ಮಂಗಳೂರೇ ಹತ್ತಿರವಾದರೂ ಅವರು ಕೊಚ್ಚಿಯನ್ನೇ ದೈನಂದಿನ ಅವಶ್ಯಕತೆಗಳಿಗಾಗಿ ಅವಲಂಬಿಸಿದ್ದಾರೆ. ಪ್ರತ್ಯೇಕ ಜೆಟ್ಟಿ ನಿರ್ಮಾಣವಾದ ಬಳಿಕ ಪ್ರವಾಸಿಗರು ಇಲ್ಲಿಂದ ಲಕ್ಷದ್ವೀಪಕ್ಕೆ ನೇರ ಪ್ರಯಾಣ ಬೆಳೆಸಲು ಅವಕಾಶ ಸಿಗಬಹುದು’  ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT