ನಗರಕ್ಕೆ ನೀರು ಪೂರೈಕೆ ಸ್ಥಗಿತ

ಶನಿವಾರ, ಜೂಲೈ 20, 2019
28 °C
ಕಣ್ಣೂರು ಮಸೀದಿ ಬಳಿ ಕೊಳವೆಯಲ್ಲಿ ಬಿರುಕು

ನಗರಕ್ಕೆ ನೀರು ಪೂರೈಕೆ ಸ್ಥಗಿತ

Published:
Updated:
Prajavani

ಮಂಗಳೂರು: ತುಂಬೆ ಅಣೆಕಟ್ಟೆಯಿಂದ ಮಂಗಳೂರು ನಗರಕ್ಕೆ ನೀರು ಪೂರೈಸುವ ಒಂದು ಮುಖ್ಯ ಕೊಳವೆಯಲ್ಲಿ ಕಣ್ಣೂರು ಮಸೀದಿ ಬಳಿ ಬಿರುಕು ಕಾಣಿಸಿಕೊಂಡಿದೆ. ಇದರಿಂದಾಗಿ ನಗರಕ್ಕೆ ನೀರು ಪೂರೈಕೆ ಸಂಪೂರ್ಣವಾಗಿ ಸ್ಥಗಿತಗೊಂಡಿದೆ.

ಎರಡು ಮುಖ್ಯ ಕೊಳವೆಗಳ ಮೂಲಕ ನಗರಕ್ಕೆ ನೀರು ಪೂರೈಸಲಾಗುತ್ತದೆ. ಒಂದು ಕೊಳವೆ 1,100 ಮಿಲಿ ಮೀಟರ್‌ ವ್ಯಾಸ ಹಾಗೂ 1,000 ಮಿಲಿ ಮೀಟರ್‌ ವ್ಯಾಸದ ಇನ್ನೊಂದು ಕೊಳವೆ ಇದೆ. 1,100 ಮಿ.ಮೀ. ವ್ಯಾಸದ ಕೊಳವೆಯಲ್ಲಿ ಬಿರುಕು ಕಾಣಿಸಿಕೊಂಡಿದೆ. ದುರಸ್ತಿ ಕಾಮಗಾರಿಗಾಗಿ ಸೋಮವಾರ ಬೆಳಿಗ್ಗೆ 10 ಗಂಟೆಯಿಂದ ಪಂಪಿಂಗ್‌ ಸ್ಥಗಿತಗೊಳಿಸಲಾಗಿದೆ. ಇದರಿಂದಾಗಿ ನೀರು ಪೂರೈಕೆ ಸಂಪೂರ್ಣ ಸ್ಥಗಿತಗೊಂಡಿದೆ.

‘ಮುಖ್ಯ ಕೊಳವೆಯ ಜೋಡಣೆ ಭಾಗದಲ್ಲಿ ಬಿರುಕು ಕಾಣಿಸಿಕೊಂಡಿದೆ. ಇದರಿಂದಾಗಿ ನೀರು ಪೂರೈಕೆಗೆ ತೊಂದರೆ ಆಗಿದೆ. ದುರಸ್ತಿ ಕಾಮಗಾರಿ ವೇಳೆ ಎರಡನೇ ಕೊಳವೆಯ ನೀರು ಹಾನಿಯಾದ ಕೊಳವೆಗೂ ನುಗ್ಗಿ ಬರುತ್ತಿದೆ. ಈ ಕಾರಣದಿಂದ ಎರಡೂ ಕೊಳವೆಗಳಲ್ಲಿ ನೀರು ಪೂರೈಕೆ ಬಂದ್‌ ಮಾಡಲಾಗಿದೆ’ ಎಂದು ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಮೊಹಮ್ಮದ್ ನಜೀರ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಸೋಮವಾರ ಬೆಳಿಗ್ಗೆಯಿಂದಲೇ ದುರಸ್ತಿ ಕಾಮಗಾರಿ ಆರಂಭವಾಗಿದೆ. ಇಡೀ ರಾತ್ರಿ ಕಾಮಗಾರಿ ನಡೆದಿದೆ. ಮಂಗಳವಾರ ಮಧ್ಯಾಹ್ನದ ವೇಳೆಗೆ ಕೊಳವೆ ಮಾರ್ಗ ಯಥಾಸ್ಥಿತಿಗೆ ಬರುವ ಸಾಧ್ಯತೆ ಇದೆ. ಆ ಬಳಿಕವೇ ಪಂಪಿಂಗ್‌ ಪುನರಾರಂಭ ಮಾಡಲು ಪಾಲಿಕೆ ಅಧಿಕಾರಿಗಳು ನಿರ್ಧರಿಸಿದ್ದಾರೆ.

‘ತುರ್ತು ಕಾಮಗಾರಿಗೆ ಅಗತ್ಯವಿರುವ ಎಲ್ಲ ಕ್ರಮಗಳನ್ನೂ ಕೈಗೊಳ್ಳಲಾಗಿದೆ. ನಾನು ಖುದ್ದಾಗಿ ಎರಡು ಬಾರಿ ಕಾಮಗಾರಿ ಸ್ಥಳಕ್ಕೆ ಭೇಟಿನೀಡಿ ಪರಿಶೀಲನೆ ನಡೆಸಿದ್ದೇನೆ. ಮಂಗಳವಾರ ಬೆಳಿಗ್ಗೆ ವೇಳೆಗೆ ಕಾಮಗಾರಿ ಮುಗಿಯಲಿದೆ. ನಂತರ ನೀರು ಪೂರೈಕೆ ಪುನರಾರಂಭವಾಗಲಿದೆ. ಕೊಳವೆ ಮಾರ್ಗದಲ್ಲಿನ ಬಿರುಕಿನ ಕಾರಣದಿಂದ ಸೋಮವಾರ ನಗರದ ಬಹುಭಾಗಗಳಿಗೆ ನೀರು ಪೂರೈಕೆ ಆಗಿಲ್ಲ. ಮಂಗಳವಾರ ಕೆಲವು ಪ್ರದೇಶಗಳಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯ ಆಗಬಹುದು’ ಎಂದು ಆಯುಕ್ತರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !