ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಸ್ಕಾಂ ದರ ಏರಿಕೆ ಪ್ರಸ್ತಾವ ಕೈಬಿಡಿ: ಕೆಸಿಸಿಐ ಒತ್ತಾಯ

Last Updated 6 ಜನವರಿ 2021, 5:42 IST
ಅಕ್ಷರ ಗಾತ್ರ

ಮಂಗಳೂರು: ಮೆಸ್ಕಾಂನಿಂದ ವಿದ್ಯುತ್ ದರವನ್ನು ₹1 ರಷ್ಟು ಹೆಚ್ಚಿಸಲು ಪ್ರಸ್ತಾವ ಸಲ್ಲಿಸಿದ್ದು, ಇದರಿಂದ ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳ ಗ್ರಾಹಕರಿಗೆ ಭಾರಿ ಹೊರೆಯಾಗಲಿದೆ. ಕೂಡಲೇ ಈ ಪ್ರಸ್ತಾವವನ್ನು ಕೈಬಿಡುವಂತೆ ಕೆನರಾ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆ (ಕೆಸಿಸಿಐ) ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಮನವಿ ಮಾಡಿದೆ.

ಬೆಸ್ಕಾಂ ಈಗಾಗಲೇ ಎಚ್‌ಟಿ ಕೈಗಾರಿಕಾ ಗ್ರಾಹಕರಿಗೆ ವಿದ್ಯುತ್‌ ದರವನ್ನು ಕಡಿಮೆ ಮಾಡಿದ್ದಲ್ಲದೇ, ಉಳಿದ ಗ್ರಾಹಕರಿಗೂ ಯಾವುದೇ ಏರಿಕೆ ಮಾಡುವ ಪ್ರಸ್ತಾವ ಸಲ್ಲಿಸಿಲ್ಲ ಎಂದು ತಿಳಿಸಿದೆ.

ಕೋವಿಡ್–19 ಹಾಗೂ ಲಾಕ್‌ಡೌನ್‌ನಿಂದ ಲಘು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಈಗಾಗಲೇ ಸಂಕಷ್ಟಕ್ಕೆ ಸಿಲುಕಿವೆ. ಇದೀಗ ಲಾಕ್‌ಡೌನ್‌ ಸಡಿಲಿಕೆಯ ನಂತರ ಹಲವಾರು ಸವಾಲುಗಳ ಮಧ್ಯೆ ನಿಧಾನವಾಗಿ ಚೇತರಿಕೆಯ ಹಾದಿಯಲ್ಲಿವೆ. ಈ ಸಂದರ್ಭದಲ್ಲಿ ದರ ಏರಿಕೆ ಮಾಡುವುದು ಮತ್ತಷ್ಟು ಹೊರೆಯಾಗಲಿದೆ ಎಂದು ಹೇಳಿದೆ.

ವಿದ್ಯುತ್ ವಿತರಣಾ ಕಂಪನಿಗಳು ₹3 ರ ದರದಲ್ಲಿ ಸೌರ ವಿದ್ಯುತ್ ಖರೀದಿಸುತ್ತಿದ್ದು, ₹7 ರ ದರದಲ್ಲಿ ಮಾರಾಟ ಮಾಡುತ್ತಿವೆ. ಇದರಿಂದಾಗಿ ಕೈಗಾರಿಕೆಗಳು ಹೆಚ್ಚಾಗಿ ಸೌರ ವಿದ್ಯುತ್‌ ಘಟಕಗಳನ್ನು ಅಳವಡಿಸಿಕೊಳ್ಳುವ ಅನಿವಾರ್ಯತೆ ಎದುರಾಗುತ್ತಿದೆ. ವಿದ್ಯುತ್ ದರ ಏರಿಕೆ ಕುರಿತು ನಿರ್ಧಾರ ಕೈಗೊಳ್ಳುವ ಕೆಇಆರ್‌ಸಿಯ ಅಧ್ಯಕ್ಷರು ಹಾಗೂ ಸದಸ್ಯರು ಬಹುತೇಕ ವಿದ್ಯುತ್‌ ವಿತರಣಾ ಕಂಪನಿಯ ನಿವೃತ್ತ ಅಧಿಕಾರಿಗಳಾಗಿದ್ದಾರೆ. ಹೀಗಾಗಿ ಕೆಇಆರ್‌ಸಿಯಲ್ಲಿ ಕೈಗಾರಿಕೆಗಳಿಗೂ ಪ್ರಾತಿನಿಧ್ಯ ನೀಡಬೇಕು ಎಂದು ಆಗ್ರಹಿಸಿದೆ.

ವಿದ್ಯುತ್‌ ವಿತರಣಾ ಕಂಪನಿಗಳು ತಮ್ಮ ಅಸಾಮರ್ಥ್ಯವನ್ನು ಮುಚ್ಚಿಕೊಳ್ಳುವುದಕ್ಕಾಗಿ ದರ ಏರಿಕೆ ಮಾಡುತ್ತಿವೆ. ಸೋರಿಕೆಯನ್ನು ತಡೆಗಟ್ಟುವ ಮೂಲಕ ವಿದ್ಯುತ್‌ ವಿತರಣೆಗೆ ಮುಂದಾದಲ್ಲಿ ನಷ್ಟ ಅನುಭವಿಸುವ ಪರಿಸ್ಥಿತಿ ಉದ್ಭವ ಆಗುವುದಿಲ್ಲ ಎಂದು ತಿಳಿಸಿದೆ.

ವಿದ್ಯುತ್ ದರ ಏರಿಕೆ ಮಾಡಿದಲ್ಲಿ ಲಘು, ಸಣ್ಣ ಮತ್ತು ಮಧ್ಯಮ ಕೈಗಾರಿಕಾ ವಲಯ ಸಂಪೂರ್ಣ ಕುಸಿಯಲಿದೆ. ಕೂಡಲೇ ವಿದ್ಯುತ್‌ ದರ ಏರಿಕೆ ಪ್ರಸ್ತಾವ ಹಿಂಪಡೆಯುವಂತೆ ಮೆಸ್ಕಾಂಗೆ ನಿರ್ದೇಶನ ನೀಡಬೇಕು ಎಂದು ಕೆಸಿಸಿಐ ಅಧ್ಯಕ್ಷ ಐಸಾಕ್‌ ವಾಸ್‌ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT