ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಕ್ತಿಯಿಂದ ಸವಾಲನ್ನು ಎದುರಿಸಿದ ‘ಸ್ತ್ರೀಶಕ್ತಿ’

ಕುಟುಂಬದ ಆರ್ಥಿಕ ಸಂಕಷ್ಟಕ್ಕೆ ಬೆನ್ನೆಲುಬಾದ ಮಹಿಳೆಯರು
Last Updated 20 ಸೆಪ್ಟೆಂಬರ್ 2020, 3:18 IST
ಅಕ್ಷರ ಗಾತ್ರ

ಮಂಗಳೂರು: ಕೊರೊನಾ ಸಂಕಷ್ಟದಲ್ಲಿ ಉದ್ಯೋಗ ಕಳೆದುಕೊಂಡು ಆರ್ಥಿಕ ಮುಗಟ್ಟಿಗೆ ಸಿಲುಕಿದವರುಹಲವರು. ಇಂತಹ ದುರಿತ ಸಂದರ್ಭದಲ್ಲಿ ಸಂಸಾರದ ನೊಗ ಹೊತ್ತ ಗೃಹಿಣಿಯರು, ಮನೆಮಂದಿಗೆ ಆಸರೆಯಾದರು. ಕೆಲಸವಿಲ್ಲದೇ ಹತಾಶರಾಗಿದ್ದ ದುಡಿಯುವ ಜೀವಗಳಿಗೆ ಕೈತುತ್ತನಿಟ್ಟು ಭರವಸೆ ಮೂಡಿಸಿದರು.

ಕೋವಿಡ್–19 ಸಾಂಕ್ರಾಮಿಕ ಕಾಯಿಲೆ ಸಾಮಾಜಿಕ ಚಿತ್ರಣವನ್ನೇ ಬದಲಿಸಿದೆ. ಲಾಕ್‌ ಆಗಿದ್ದ ಎಲ್ಲ ಚಟುವಟಿಕೆಗಳು ಅನ್‌ಲಾಕ್‌ ಆಗಿದ್ದರೂ, ಅನೇಕರಿಗೆ ಉದ್ಯೋಗ ಇಲ್ಲದಾಗಿದೆ. ಕುಟುಂಬದ ಆರ್ಥಿಕ ಶಕ್ತಿ ಕುಸಿದು ಬಿದ್ದಾಗ, ‘ಸ್ತ್ರೀಶಕ್ತಿ’ ಆ ಕುಟುಂಬವನ್ನು ಮುನ್ನಡೆಸಿಕೊಂಡು ಸಾಗುತ್ತಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ರಚಿತಗೊಂಡಿರುವ ಸ್ತ್ರೀಶಕ್ತಿ ಗುಂಪುಗಳ ಮಹಿಳೆಯರ ಚಟುವಟಿಕೆಗಳು ಲಾಕ್‌ಡೌನ್‌ ವೇಳೆ ಸಹ ಅನ್‌ಲಾಕ್ ಆಗಿಯೇ ಇದ್ದವು. ಅಂತಹ ಕಠಿಣ ಪರಿಸ್ಥಿತಿಯಲ್ಲಿ ಸವಾಲುಗಳನ್ನು ಮೆಟ್ಟಿನಿಂತು, ಸ್ವ ಗಳಿಕೆಯ ಜತೆಗೆ, ಅಸಹಾಯಕರಿಗೆ ಉದ್ಯೋಗ ನೀಡಿದ ಮಹಿಳೆಯರು ತಮ್ಮ ಅನುಭವವನ್ನು ‘ಪ್ರಜಾವಾಣಿ’ ಬಳಿ ಹಂಚಿಕೊಂಡಿದ್ದಾರೆ.

‘ಸದ್ಯವಷ್ಟೇ ಕಟ್ಟಿರುವ ಮನೆಯ ಸಾಲದ ಭಾರ, ದುಡಿಯುತ್ತಿದ್ದ ಮಗ ಕೆಲಸ ಕಳೆದುಕೊಂಡ. ಜೀವನ ನಡೆಯಬೇಕಲ್ಲ, ಹಿತ್ತಲಿನಲ್ಲಿ ಬೆಳೆಸಿದ ತರಕಾರಿಯನ್ನು ತಲೆಮೇಲೆ ಹೊತ್ತು 2–3 ಕಿ.ಮೀ ಕಾಲ್ನಡಿಗೆಯಲ್ಲಿ ಸಾಗಿ, ಕಲ್ಲಡ್ಕ ಸುತ್ತಮುತ್ತ ಮಾರಾಟ ಮಾಡಿ ಬರುತ್ತಿದ್ದೆ. ಲಾಕ್‌ಡೌನ್ ವೇಳೆ ಜನರಲ್ಲಿ ವಿಚಿತ್ರ ಆತಂಕವಿತ್ತು. ಮನೆ ಬಾಗಿಲಿಗೆ ಬಂದವರನ್ನು ಜನರು ಸ್ವೀಕರಿಸುತ್ತಿರಲಿಲ್ಲ. ಹೀಗಾಗಿ, ಸಾಧ್ಯವಾದಷ್ಟು ಪರಿಚಯಸ್ಥರ ಮನೆಗೇ ಹೋಗುತ್ತಿದ್ದೆ. ಈ ಹಿಂದಿನಿಂದ ತಯಾರಿಸುತ್ತಿದ್ದ ಮಜ್ಜಿಗೆ ಮೆಣಸು, ಉಪ್ಪಿನಕಾಯಿ, ಫಿನಾಯಿಲ್‌ಗೆ ವ್ಯಾಪಾರ ಅಷ್ಟು ಸುಲಭವಾಗಲಿಲ್ಲ. ಜನರಿಗೆ ಪೇಟೆಗೆ ಹೋಗಲು ಆಗುತ್ತಿರಲಿಲ್ಲ. ಅವರ ಅಗತ್ಯ ಅರಿತು ತರಕಾರಿಯನ್ನೇ ಹೆಚ್ಚು ಬೆಳೆದು ಮಾರಾಟ ಮಾಡಿದೆ’ ಎಂದು ಬಾಯಿಲದ ರೇವತಿ ಅನುಭವ ಬಿಚ್ಚಿಟ್ಟರು.

ಲಾಕ್‌ಡೌನ್‌ ಕೊಟ್ಟ ಹೊಸ ಹೊಳಹು:

‘ಫಿಶ್ ಫ್ರೈ, ಚಿಕನ್ ಮಸಾಲಾ, ಸಾಂಬಾರು ಹುಡಿ ಮೊದಲಾದ ಉತ್ಪನ್ನಗಳನ್ನು ಮನೆಯಲ್ಲಿ ತಯಾರಿಸಿ, ವ್ಯಾಪಾರ ಮಾಡುತ್ತಿದ್ದೆ. ಲಾಕ್‌ಡೌನ್ ಸಂದರ್ಭ ನನಗೆ ಬಿರ್ಯಾನಿ ಮಸಾಲಾ ಸಿದ್ಧಪಡಿಸುವ ಹೊಸ ಹೊಳಹು ಕೊಟ್ಟಿತು. ತುಂಬ ಜನರು ಈ ಬಿರ್ಯಾನಿ ಮಸಾಲೆಯನ್ನು ಮೆಚ್ಚಿದರು. ಕೊಂಡವರು ಖುಷಿಯಾಗಿ, ಮತ್ತೆ ಖರೀದಿಸುತ್ತಿದ್ದಾರೆ. ಸಿದ್ಧಪಡಿಸಿದ ಎರಡು ದಿನಗಳಲ್ಲೇ ಪ್ಯಾಕೆಟ್‌ಗಳು ಖಾಲಿಯಾಗುತ್ತಿವೆ. ಕಷ್ಟಪಟ್ಟಿದ್ದಕ್ಕೆ ಫಲ ಸಿಕ್ಕಿದೆ. ಪತಿಯೂ ಕೆಲಸ ಕಳೆದುಕೊಂಡಿದ್ದಾರೆ. ಈಗಲೂ ನನ್ನ ಗಳಿಕೆಯೇ ಕುಟುಂಬಕ್ಕೆ ಆಧಾರ. ನನ್ನ ಕೆಲಸದಿಂದ ಪ್ರೇರಿತರಾದ ಇನ್ನಿಬ್ಬರು ಮಹಿಳೆಯರು, ಸಣ್ಣ ಮಟ್ಟದಲ್ಲಿ ಉದ್ಯಮ ಆರಂಭಿಸಿದರು’ ಎನ್ನುವಾಗ ಹರೇಕಳ ಗ್ರಾಮದ ಪ್ರಭಾವತಿ ಅವರಲ್ಲಿ ಧನ್ಯತಾಭಾವವಿತ್ತು.

‘ಜೀವನಾಧಾರವಾಗಿದ್ದ ತೆಂಗಿನಕಾಯಿ ವ್ಯಾಪಾರ ಸಂಪೂರ್ಣ ಬಂದಾಗಿತ್ತು. ಕಾಯಿ ಖರೀದಿ–ಮಾರಾಟ ಎಲ್ಲವೂ ಸ್ಥಗಿತವಾಗಿತ್ತು. ಆದರೆ, ಸುಮ್ಮನೆ ಕುಳಿತಿಲ್ಲ. ಸ್ತ್ರೀಶಕ್ತಿ ಸಂಘ ಮತ್ತು ಮಹಿಳಾ ಮಂಡಳಗಳು ಸೇರಿ, ಕಡುಕಷ್ಟದಲ್ಲಿದ್ದ ಸಂಘದ ಸದಸ್ಯೆಯರಿಗೆ ನೆರವಾದೆವು’ ಎಂದು ಸ್ತ್ರೀಶಕ್ತಿ ಗುಂಪಿನ ಸವಿತಾ ಹೇಳಿದರು.

ಹಲವರಿಗೆ ಉದ್ಯೋಗ:

‘ಸಾಮಾನ್ಯ ದಿನಗಳಲ್ಲಿ ವಾರಕ್ಕೆ ಒಂದು ಕ್ವಿಂಟಲ್ ಉತ್ಪನ್ನಗಳು ಮಾರಾಟವಾಗುತ್ತಿದ್ದರೆ, ಲಾಕ್‌ಡೌನ್ ವೇಳೆ ಈ ಪ್ರಮಾಣ ದ್ವಿಗುಣವಾಯಿತು. ಹೊರಗಿನ ಪ್ಯಾಕೆಟ್ ತಿನಿಸುಗಳು ಬರುವುದು ಕಡಿಮೆಯಾಗಿದ್ದಕ್ಕೆ, ಸ್ಥಳೀಯ ತಿನಿಸುಗಳಿಗೆ ಹೆಚ್ಚು ಬೇಡಿಕೆ ಬಂತು. ಗೆಣಸಿನ ಸೋಂತೆ, ಬಿಸ್ಕತ್‌ ಚಟ್ಟಂಬಡೆ, ಮಸಾಲಾ ಕಡ್ಲೆ, ಉಪ್ಪಿನಕಾಯಿ ಸೇರಿ ಸುಮಾರು 32 ಗೃಹ ಉತ್ಪನ್ನಗಳನ್ನು ತಯಾರಿಸಲು ಪ್ರಾರಂಭಿಸಿ, ದಶಕ ಕಳೆದಿದೆ. ಲಾಕ್‌ಡೌನ್ ವೇಳೆ ಗೆಣಸಿನ ಸೋಂತೆ ಗರಿಷ್ಠ ಮಾರಾಟವಾಯಿತು. ಉತ್ಪನ್ನ ಪೂರೈಕೆ ಮಾಡಲು ಎರಡು ಹೊಸ ಒಲೆ ಖರೀದಿಸಿದೆ. ಗುಂಪಿನ ನಾಲ್ಕಾರು ಸದಸ್ಯೆಯರಿಗೂ ಕೆಲಸ ನೀಡಿದೆ’ ಎಂದು, ಬಿಡುವಿಲ್ಲದ ಕೆಲಸಗಳ ನಡುವೆ ಮಾತಿಗೆ ಸಿಕ್ಕ ಬಾಲ್ತಿಲ ಪೂರ್ಲಿಪ್ಪಾಡಿಯ ನಾಗರತ್ನಾ ಸಂಜೀವ ಹೇಳಿದರು.

‘ಜೀವನ ನಿರ್ವಹಣೆಗಾಗಿ ಐದಾರು ಮಹಿಳೆಯರು ಸಲಹೆ ಕೇಳಿದರು. ಅವರಿಗೆ ಅಕ್ಕಿ ಹಪ್ಪಳ, ಉಪ್ಪಿನಕಾಯಿ ಮಾಡುವ ವಿಧಾನ ಕಲಿಸಿದೆ. ಸ್ಥಳೀಯ ಅಂಗನವಾಡಿ ಕಾರ್ಯಕರ್ತೆಯರು, ಇಲಾಖೆಯವರು ನಿರಂತರ ಮಾರ್ಗದರ್ಶನ ಮಾಡಿದರು’ ಎಂದು ಅವರು ಸಹಾಯವನ್ನು ಸ್ಮರಿಸಿಕೊಂಡರು.

‘ಗುಂಪುಗಳ ಸಮರ್ಥ ಕಾರ್ಯನಿರ್ವಹಣೆ’

‘ಜಿಲ್ಲೆಯಲ್ಲಿ ಎಲ್ಲ ಸ್ತ್ರೀಶಕ್ತಿ ಗುಂಪುಗಳು ಕ್ರಿಯಾಶೀಲವಾಗಿವೆ. ವೈಯಕ್ತಿಕ ಚಟುವಟಿಕೆಗಳು ಹೆಚ್ಚಿದ್ದರೂ, ಮಾರುಕಟ್ಟೆ ವ್ಯವಸ್ಥೆಯಲ್ಲಿ ಗುಂಪಿನಲ್ಲಿ ಒಂದೇ ವೇದಿಕೆಯಲ್ಲಿ ಸೇರುತ್ತಾರೆ. ಲಾಕ್‌ಡೌನ್‌ ವೇಳೆಯೂ ಸಂಘಗಳು ಸಮರ್ಥವಾಗಿ ಕೆಲಸ ನಿರ್ವಹಿಸಿವೆ. ಮಲ್ಲಿಗೆ ಕೃಷಿ, ತರಕಾರಿ ಬೆಳೆ, ಗೃಹ ಉತ್ಪನ್ನ, ಇಡ್ಲಿ ತಯಾರಿಕೆ ಮೊದಲಾದ ಚಟುವಟಿಕೆಗಳು ಅವರ ಆದಾಯದ ಮೂಲವಾಗಿವೆ. ವಿವಿಧೋದ್ದೇಶ ಸಹಕಾರ ಸಂಘಗಳು ಸಹ ಕಾರ್ಯನಿರ್ವಹಿಸುತ್ತಿವೆ. ಇವರಿಗೆ ಆಗಾಗ ತರಬೇತಿ ನಡೆಯುತ್ತಿತ್ತು. ಕೋವಿಡ್–19ನಿಂದ ಈ ಕಾರ್ಯಕ್ಕೆ ತುಸು ಹಿನ್ನಡೆಯಾಗಿದೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಭಾರಿ ಜಿಲ್ಲಾ ಉಪನಿರ್ದೇಶಕಿ ಶ್ಯಾಮಲಾ ಸಿ.ಕೆ ಪ್ರತಿಕ್ರಿಯಿಸಿದರು.

ಜಿಲ್ಲೆಯಲ್ಲಿರುವ ಒಟ್ಟು ಸ್ತ್ರೀಶಕ್ತಿ ಗುಂಪು 4022
ಗುಂಪುಗಳಲ್ಲಿರುವ ಒಟ್ಟು ಸದಸ್ಯರು 48,322

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT