ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು | ಇಲಾಖೆಗೆ ಭಾರ; ಉದ್ಯೋಗಸ್ಥರಿಗೆ ಹಗುರ

Published 23 ನವೆಂಬರ್ 2023, 6:10 IST
Last Updated 23 ನವೆಂಬರ್ 2023, 6:10 IST
ಅಕ್ಷರ ಗಾತ್ರ

ಮಂಗಳೂರು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಡೆಸುತ್ತಿರುವ ಉದ್ಯೋಗಸ್ಥ ಮಹಿಳೆಯರ ವಸತಿ ನಿಲಯವು ಇಲಾಖೆಗೆ ಭಾರವಾಗಿ ಪರಿಣಮಿಸಿದೆ. ಈ ನಡುವೆ ಹೊಸ ವಸತಿ ನಿಲಯಕ್ಕೆ ಬೇಡಿಕೆಯೂ ಹೆಚ್ಚುತ್ತಿದೆ.

ನಗರದ ಕೊಂಚಾಡಿ ಮತ್ತು ಪಂಪ್‌ವೆಲ್‌ನಲ್ಲಿ ವರ್ಷದ ಹಿಂದೆ ಉದ್ಯೋಗಸ್ಥ ಮಹಿಳೆಯರ ವಸತಿ ನಿಲಯ ಪ್ರಾರಂಭವಾಗಿದೆ. ಆರಂಭದಲ್ಲಿ ಅಷ್ಟು ಬೇಡಿಕೆ ಬರದಿದ್ದರೂ, ಈಗ ಎರಡೂ ವಸತಿ ನಿಲಯಗಳು ಭರ್ತಿ ಇವೆ. ಪ್ರತಿ ವಸತಿ ನಿಲಯವು 40 ಜನರ ವಸತಿ ಸಾಮರ್ಥ್ಯ ಹೊಂದಿದ್ದು, ಅದರಲ್ಲಿ 10 ಸೀಟ್‌ಗಳನ್ನು ಬಿಪಿಎಲ್ ಕಾರ್ಡ್‌ದಾರರು, ಪರಿಶಿಷ್ಟರು, ಅಲ್ಪಸಂಖ್ಯಾತರಿಗೆ ಮೀಸಲಿಡಲಾಗಿದೆ.

ವಸತಿ ನಿಲಯ ಪ್ರವೇಶಕ್ಕೆ ಆದಾಯ ಮಿತಿ ₹50ಸಾವಿರ ಇದ್ದು, ಹೆಚ್ಚಾಗಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುವವರು, ಬಟ್ಟೆ ಅಂಗಡಿಯ ಕೆಲಸ ಮಾಡುವ ಯುವತಿಯರು, ಆಶಾ ಕಾರ್ಯಕರ್ತೆಯರು, ಇನ್ನಿತರ ಕಡಿಮೆ ಆದಾಯ ಇರುವ ಉದ್ಯೋಗಿಗಳಿಗೆ ಅನುಕೂಲವಾಗಿದೆ. ಬಿಪಿಎಲ್ ಕಾರ್ಡ್‌ದಾರರು, ಪರಿಶಿಷ್ಟರು, ಅಲ್ಪಸಂಖ್ಯಾತರಿಗೆ ಉಚಿತವಾಗಿದ್ದು, ಅವರ ತಿಂಗಳ ವೆಚ್ಚವನ್ನು ಸರ್ಕಾರ ಭರಿಸುತ್ತದೆ. ಉಳಿದವರಿಗೆ ತಿಂಗಳಿಗೆ ₹1,200 ಬಾಡಿಗೆ ಹಾಗೂ ₹1,500 ಆಹಾರದ ವೆಚ್ಚ ನಿಗದಿಪಡಿಸಲಾಗಿದೆ.

‘ಒಂದು ವಸತಿ ನಿಲಯದಿಂದ ತಿಂಗಳಿಗೆ ಅಂದಾಜು ₹46 ಸಾವಿರದಷ್ಟು ಆದಾಯ ಸಂಗ್ರಹವಾಗುತ್ತದೆ. ಆದರೆ, ಇಲಾಖೆಗೆ ಒಂದು ತಿಂಗಳಿಗೆ ಇದರ ದುಪ್ಪಟ್ಟು ಹಣ ಖರ್ಚಾಗುತ್ತದೆ. ಬೆಳಗಿನ ತಿಂಡಿ, ಮಧ್ಯಾಹ್ನದ ಊಟ, ಸಂಜೆಯ ಸ್ನ್ಯಾಕ್ಸ್, ರಾತ್ರಿ ಊಟ, ನಡುವೆ ಒಂದೊಂದು ದಿನ ಚಿಕನ್, ಮೀನು, ಮೊಟ್ಟೆ ನೀಡಲಾಗುತ್ತದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಊಟ, ತಿನಿಸುಗಳ ಬಗ್ಗೆ ಕೆಲವರು ಸಣ್ಣಪುಟ್ಟ ತಕರಾರು ಮಾಡುತ್ತಿದ್ದರೂ, ಇಷ್ಟು ಕಡಿಮೆ ವೆಚ್ಚದಲ್ಲಿ ನಗರದಲ್ಲಿ ಜೀವನ ನಿರ್ವಹಣೆ ಮಾಡಲು ಸಾಧ್ಯವಾಗದೆಂದು ವಸತಿ ನಿಲಯವನ್ನೇ ನೆಚ್ಚಿಕೊಂಡಿದ್ದಾರೆ. ಅಲ್ಲದೆ, ವಾರ್ಡನ್, ಸೆಕ್ಯುರಿಟಿ ವ್ಯವಸ್ಥೆ ಇರುವುದರಿಂದ ಸುರಕ್ಷತೆಯ ದೃಷ್ಟಿಯಿಂದಲೂ ಮಹಿಳೆಯರಿಗೆ ಅನುಕೂಲವಾಗಿದೆ.

‘ವಸತಿ ನಿಲಯದ ಬಾಡಿಗೆ ₹1,200 ಹಾಗೂ ಆಹಾರಕ್ಕೆ ₹2,500 ನಿಗದಿಪಡಿಸಿದ್ದರೂ, ಆರಂಭದಲ್ಲಿ ಜನರು ಬರದ ಕಾರಣ ಈ ಮೊತ್ತವನ್ನು ₹1,500ಕ್ಕೆ ಇಳಿಸಲಾಗಿತ್ತು. ಇದರಿಂದ ಇಲಾಖೆಯೇ ಹೆಚ್ಚುವರಿ ಹಣವನ್ನು ಭರಿಸಬೇಕಾಗಿದೆ’ ಎಂದು ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

‘ಹಲವು ಮಹಿಳೆಯರು ಪ್ರವೇಶ ಕೇಳಿಕೊಂಡು ಬರುತ್ತಾರೆ. ಆದರೆ, ಈಗ ಇರುವ ಎರಡೂ ಹಾಸ್ಟೆಲ್‌ಗಳು ಭರ್ತಿ ಇರುವುದರಿಂದ, ಅವರಿಗೆ ಅವಕಾಶ ಕಲ್ಪಿಸಲಾಗುತ್ತಿಲ್ಲ’ ಎಂದು ಹೇಳಿದರು.

‘ಖರ್ಚು ಹಾಗೂ ಸುರಕ್ಷತೆ ದೃಷ್ಟಿಯಿಂದ ನಗರದಲ್ಲಿರುವ ಪಿಜಿಗಳಿಗಿಂತ ಸರ್ಕಾರಿ ವಸತಿ ನಿಲಯ ಉತ್ತಮವಾಗಿದೆ. ಒಂದು ರೂಮ್‌ನಲ್ಲಿ ಮೂರು ಜನರು ಇರುತ್ತೇವೆ. ಆದರೆ, ನಗರದಿಂದ ಹೊರಗೆ ಇರುವ ಕಾರಣ ಕೆಲವರಿಗೆ ಬಸ್‌ನಲ್ಲಿ ಹೋಗಬೇಕಾಗುತ್ತದೆ’ ಎಂದು ಬಿಜೈನಲ್ಲಿ ಆಶಾ ಕಾರ್ಯಕರ್ತೆಯಾಗಿರುವ ಪ್ರಭಾಗಾಯತ್ರಿ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT