ಶನಿವಾರ, ಮೇ 28, 2022
30 °C
ತಪ್ಪಿತಸ್ಥರ ಮೇಲೆ ಕ್ರಮಕ್ಕೆ ಒತ್ತಾಯ

ರಾಜಕೀಯ ದುರುದ್ದೇಶದಿಂದ ವಿನೋಬನಗರದಲ್ಲಿ 2,172 ಮತದಾರ ಹೆಸರು ಕಡಿತ: ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ‘ವಿನೋಬನಗರ ವಾರ್ಡ್‌ ನಂ. 16ರಲ್ಲಿ ಮತದಾರರ ಪಟ್ಟಿಯಿಂದ 2,172 ಮತದಾರರ ಹೆಸರನ್ನು ರಾಜಕೀಯ ದುರುದ್ದೇಶದಿಂದ ತೆಗೆದುಹಾಕಲಾಗಿದೆ. ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳದಿದ್ದರೆ ಹೋರಾಟ ನಡೆಸಲಾಗುವುದು’ ಎಂದು ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕ ಎ.ನಾಗರಾಜ್‌ ಎಚ್ಚರಿಕೆ ನೀಡಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ‘ಜನವರಿ 13ರಂದು ಬಿಡುಗಡೆ ಮಾಡಿದ ಮತದಾರರ ಪಟ್ಟಿಯಲ್ಲಿ ನನ್ನ ವಾರ್ಡ್‌ನಲ್ಲಿ 30ರಿಂದ 40 ವರ್ಷಗಳ ಕಾಲ ಒಂದೇ ಕಡೆ ವಾಸವಾಗಿರುವ ಹಲವರ ಹೆಸರುಗಳನ್ನೂ ತೆಗೆದುಹಾಕಲಾಗಿದೆ. ಆಧಾರ್‌ ಕಾರ್ಡ್‌, ಪಡಿತರ ಚೀಟಿಯಲ್ಲೂ ಅದೇ ವಿಳಾಸ ಇದ್ದರೂ ಹೆಸರನ್ನು ಕೈಬಿಡಲಾಗಿದೆ. ಯಾವುದೇ ಮುನ್ಸೂಚನೆಯನ್ನೂ ನೀಡದೇ ಪಟ್ಟಿಯಿಂದ ಹೆಸರನ್ನು ತೆಗೆದುಹಾಕುವ ಮೂಲಕ ಮತದಾನದ ಹಕ್ಕನ್ನು ಕಸಿದುಕೊಳ್ಳಲಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ವಿನೋಬನಗರದಲ್ಲಿ ಕೂಲಿ ಕಾರ್ಮಿಕರು ಹಾಗೂ ಮಧ್ಯಮ ವರ್ಗದವರೇ ಹೆಚ್ಚಿದ್ದು, ಹಲವರು ಬಾಡಿಗೆ ಮನೆಯಲ್ಲಿ ಉಳಿದುಕೊಂಡಿದ್ದಾರೆ. ಕೆಲವರು ಒಂದು ವರ್ಷದ ಬಳಿಕ ಮತಗಟ್ಟೆಯ ವ್ಯಾಪ್ತಿಯಲ್ಲೇ ಮತ್ತೊಂದು ಮನೆಗೆ ಬಾಡಿಗೆ ಹೋಗುತ್ತಾರೆ. ಅವರ‍್ಯಾರೂ ಮತ್ತೆ ಮತದಾರರ ಪಟ್ಟಿಯಲ್ಲಿ ವಿಳಾಸ ಬದಲಾಯಿಸಿಕೊಂಡಿರುವುದಿಲ್ಲ. ಇಂಥವರ ಹೆಸರನ್ನೂ ಕೈಬಿಡಲಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಕೆಲವೆಡೆ ಮನೆಯಲ್ಲಿ ಗಂಡ–ಹೆಂಡತಿಯ ಹೆಸರನ್ನು ಬಿಡಲಾಗಿದ್ದು, ಸಹೋದದರ ಹೆಸರನ್ನು ಇಡಲಾಗಿದೆ. ಚುನಾವಣೆ ದಿನ ಮತದಾನಕ್ಕೆ ಬಂದಾಗ ತಮ್ಮ ಹೆಸರಿಲ್ಲ ಎಂದು ಜನ ಪ್ರತಿಭಟಿಸುತ್ತಾರೆ. ಈ ಬಗ್ಗೆ ಜಿಲ್ಲಾಧಿಕಾರಿಗೆ ದೂರು ನೀಡಿದ್ದೇವೆ. ತನಿಖೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಅವರು ಭರವಸೆ ನೀಡಿದ್ದಾರೆ. ಚುನಾವಣಾ ಆಯುಕ್ತರಿಗೂ ಈ ಬಗ್ಗೆ ದೂರು ನೀಡಲಾಗುವುದು’ ಎಂದು ನಾಗರಾಜ್‌ ತಿಳಿಸಿದರು.

‘ಈ ಮೊದಲು ನಮ್ಮ ವಾರ್ಡ್‌ ವ್ಯಾಪ್ತಿಯ 10 ಮತಗಟ್ಟೆಗಲ್ಲಿ ಒಟ್ಟು 8,450 ಮತದಾರರು ಇದ್ದರು. ಈಗ ಪ್ರಕಟಿಸಿದ ಪಟ್ಟಿಯಲ್ಲಿ 2,172 ಮತದಾರರನ್ನು ಕೈಬಿಡಲಾಗಿದೆ. ವಾರ್ಡ್‌ನಲ್ಲಿ ಸುಮಾರು 14 ಸಾವಿರ ಜನಸಂಖ್ಯೆ ಇದೆ. ಮತದಾರರ ಪಟ್ಟಿ ಪರಿಷ್ಕರಣೆ ಮಾಡುವಾಗ ಜನಜಾಗೃತಿ ಮೂಡಿಸಬೇಕಿತ್ತು. ಏಕಪಕ್ಷೀಯವಾಗಿ ಹೆಸರನ್ನು ಕೈಬಿಡುವ ಮೂಲಕ ಮತದಾರರಿಗೆ ಅನ್ಯಾಯ ಮಾಡಲಾಗಿದೆ’ ಎಂದು ದೂರಿದರು.

ವಿನೋಬನಗರದ ನಿವಾಸಿಗಳಾದ ಎಚ್‌.ಎಂ. ರುದ್ರೇಶ್‌ ಹಾಗೂ ಸತೀಶ್‌ ಅವರು ಹಲವು ವರ್ಷಗಳಿಂದ ಸ್ವಂತ ಮನೆಯಲ್ಲೇ ವಾಸಿಸುತ್ತಿದ್ದರೂ ತಮ್ಮ ಹಾಗೂ ಪತ್ನಿಯ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸ್ತಬ್ಧಚಿತ್ರಕ್ಕೆ ಅವಕಾಶ ಕಲ್ಪಿಸಲಿ: ‘ಕೇರಳ ಸರ್ಕಾರ ಕಳುಹಿಸಿಕೊಟ್ಟಿದ್ದ ಮಹರ್ಷಿ ನಾರಾಯಣ ಗುರುಗಳ ಹಾಗೂ ಪಶ್ಚಿಮ ಬಂಗಾಳ ಸರ್ಕಾರ ಕಳುಹಿಸಿಕೊಟ್ಟಿದ್ದ ನೇತಾಜಿ ಸುಭಾಶ್ಚಂದ್ರ ಭೋಸ್‌ ಅವರ ಸ್ತಬ್ಧಚಿತ್ರಗಳಿಗೆ ಗಣರಾಜ್ಯೋತ್ಸವ ಸಮಿತಿಯು ಅವಕಾಶ ಮಾಡಿಕೊಡದಿರುವುದು ಸರಿಯಲ್ಲ. ಕೂಡಲೇ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಿ ಈ ಎರಡೂ ಸ್ತಬ್ಧಚಿತ್ರಗಳಿಗೆ ಗಣರಾಜ್ಯೋತ್ಸವ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಬೇಕು’ ಎಂದು ಪಾಲಿಕೆ ಸದಸ್ಯ ಕೆ. ಚಮನ್‌ಸಾಬ್‌ ಒತ್ತಾಯಿಸಿದರು.

ಪಾಲಿಕೆ ಸದಸ್ಯ ಗಡಿಗುಡಾಳ್‌ ಮಂಜುನಾಥ್‌, ಕಾಂಗ್ರೆಸ್‌ ಮುಖಂಡ ಯುವರಾಜ್‌, ರವಿ, ಪ್ರವೀಣ್‌ ಅವರೂ ಇದ್ದರು.

ಬಿಜೆಪಿ ಕೈವಾಡ: ಆರೋಪ

‘ಕಳೆದ ಚುನಾವಣೆಯಲ್ಲಿ ನನ್ನ ವಿರುದ್ಧ 1,788 ಮತಗಳ ಅಂತರದಿಂದ ಸೋತಿದ್ದ ಬಿಜೆಪಿ ಅಭ್ಯರ್ಥಿ ದಿವಾಕರ್‌ ಅವರು ಕಾರ್ಯಕರ್ತರ ಮೂಲಕ ಸಮೀಕ್ಷೆ ನಡೆಸಿ ಪಟ್ಟಿಯನ್ನು ತಯಾರಿಸಿ ಹಲವರ ಹೆಸರನ್ನು ತೆಗೆದುಹಾಕುವಂತೆ ಮಾಡಿದ್ದಾರೆ’ ಎಂದು ನಾಗರಾಜ್‌ ಆರೋಪಿಸಿದರು.

‘ಬಿಎಲ್‌ಒಗಳ ಮೂಲಕ ನಡೆಸಿದ ಸಮೀಕ್ಷೆಯನ್ನು ಪರಿಗಣಿಸದೇ ಬಿಜೆಪಿ ಕಾರ್ಯಕರ್ತರು ನಡೆಸಿದ ಸಮೀಕ್ಷೆ ಆಧಾರದಲ್ಲಿ ಪಟ್ಟಿಯನ್ನು ತಯಾರಿಸಿ ಪಾಲಿಕೆಯ ಚುನಾವಣಾ ಶಾಖೆಯ ಅಧಿಕಾರಿಗಳಾದ ಅಜಯಕುಮಾರ್‌ ಹಾಗೂ ಅನುಪ್ರಸಾದ್‌ ಅವರು ಒತ್ತಾಯಪೂರ್ವಕವಾಗಿ ಮತಗಟ್ಟೆ ಅಧಿಕಾರಿಗಳಿಂದ ಸಹಿ ಪಡೆದು ಹೆಸರನ್ನು ತೆಗೆದುಹಾಕಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ ಇಬ್ಬರು ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

‘ಮತಗಟ್ಟೆ ಸಂಖ್ಯೆ 80ರಲ್ಲಿ ಕೇವಲ 27 ಹೆಸರನ್ನು ಕೈಬಿಡುವಂತೆ ಮತಗಟ್ಟೆ ಅಧಿಕಾರಿ ಪಟ್ಟಿ ತಯಾರಿಸಿಕೊಟ್ಟಿದ್ದರು. ಆದರೆ, ಬಿಜೆಪಿ ಕಾರ್ಯಕರ್ತರು ತಯಾರಿಸಿದ ಪಟ್ಟಿಯಂತೆ ಅಂತಿಮವಾಗಿ 272 ಹೆಸರನ್ನು ತೆಗೆದುಹಾಕಲಾಗಿದೆ. ಬೇರೆ ವಾರ್ಡ್‌ಗಳಲ್ಲೂ ಇದೇ ರೀತಿ ನಡೆದಿರುವ ಸಾಧ್ಯತೆ ಇದ್ದು, ಪರಿಶೀಲಿಸುತ್ತೇವೆ’ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು