ಬುಧವಾರ, ಫೆಬ್ರವರಿ 1, 2023
16 °C
ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿರುವ ಸೋಂಕು

ಜಿಲ್ಲೆಯಲ್ಲಿ 221 ಮಂದಿಗೆ ಎಚ್‌ಐವಿ ದೃಢ

ಬಾಲಕೃಷ್ಣ ಪಿ.ಎಚ್‌. Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಎಚ್‌ಐವಿ/ ಏಡ್ಸ್‌ ಮುಕ್ತ ಸಮಾಜ ನಿರ್ಮಿಸಲು ವಿಶ್ವದಾದ್ಯಂತ ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿವೆ. ಇದರ ಮಧ್ಯೆ ಎಚ್‌ಐವಿ ಪ್ರಕರಣಗಳು ಪತ್ತೆಯಾಗುತ್ತಲೇ ಇವೆ. ಜಿಲ್ಲೆಯಲ್ಲಿ ಈ ವರ್ಷದ ಅಕ್ಟೋಬರ್‌ ಅಂತ್ಯದವರೆಗೆ 221 ಪ್ರಕರಣಗಳು ಪತ್ತೆಯಾಗಿವೆ.

‘ಏಡ್ಸ್‌ ಕೊನೆಗಾಣಿಸಲು ವಿಶ್ವವು ಒಂದಾಗಬೇಕಿದೆ’ ಎನ್ನುವುದು ಈ ವರ್ಷದ ಏಡ್ಸ್‌ ನಿಯಂತ್ರಣ ದಿನದ ಘೋಷವಾಕ್ಯ. ಡಿ.1 ಏಡ್ಸ್‌ ನಿಯಂತ್ರಣ ದಿನವಾಗಿದ್ದು, ವರ್ಷದಿಂದ ವರ್ಷಕ್ಕೆ ಪ್ರಕರಣಗಳ ಸಂಖ್ಯೆ ಇಳಿಯುತ್ತಿರುವುದು ಸಕಾರಾತ್ಮಕ ವಿಷಯ.

ಜಿಲ್ಲೆಯಲ್ಲಿ 2008ರಲ್ಲಿ ಜಿಲ್ಲಾ ಏಡ್ಸ್‌ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕ ಪ್ರಾರಂಭವಾಯಿತು. ಆ ವರ್ಷ 1,619 ಎಚ್‌ಐವಿ ಪ್ರಕರಣಗಳು ಪತ್ತೆಯಾಗಿದ್ದವು. 2013ರವರೆಗೂ ಪ್ರತಿ ವರ್ಷ ಸಾವಿರದ ಮೇಲೆಯೇ ಪ್ರಕರಣ ಪತ್ತೆಯಾಗುತ್ತಿದ್ದವು. ಎಚ್‌ಐವಿ/ ಏಡ್ಸ್‌ ಬಗ್ಗೆ ಮಾಹಿತಿ ಮತ್ತು ಸುರಕ್ಷಿತ ಲೈಂಗಿಕತೆಯ ಬಗ್ಗೆ ನಿರಂತರ ಜಾಗೃತಿ ಮೂಡಿಸಿದ ಕಾರಣ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದೆ. 2014ರಲ್ಲಿ 789 ಪ್ರಕರಣಗಳಷ್ಟೇ ಕಂಡುಬಂದಿದ್ದವು ಎಂದು ಜಿಲ್ಲಾ ಏಡ್ಸ್‌ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕದ ಅಧಿಕಾರಿ ಡಾ. ಕೆ.ಎಚ್‌. ಗಂಗಾಧರ್‌ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

2015ರಲ್ಲಿ 663, 2016ರಲ್ಲಿ 603, 2017ರಲ್ಲಿ 526, 2018ರಲ್ಲಿ 446, 2019ರಲ್ಲಿ 385 ಪ್ರಕರಣಗಳು ಪತ್ತೆಯಾಗಿದ್ದವು. 2020ರಲ್ಲಿ ಕೊರೊನಾ ಕಾರಣಕ್ಕೆ ಪರೀಕ್ಷೆ ಪ್ರಮಾಣ ಕಡಿಮೆಯಾಗಿದ್ದರಿಂದ ಕೇವಲ 164 ಪ್ರಕರಣಗಳು ಕಂಡುಬಂದಿದ್ದವು. 2021ರಲ್ಲಿ 230 ಪ್ರಕರಣಗಳು ದಾಖಲಾಗಿದ್ದವು.

ಈ ವರ್ಷ ಅಕ್ಬೋಬರ್‌ವರೆಗೆ ಕಂಡು ಬಂಿರುವ 221 ಪ್ರಕರಣಗಳಲ್ಲಿ 173 ಪ್ರಕರಣಗಳಷ್ಟೇ ಈ ಜಿಲ್ಲೆಯದ್ದಾಗಿದ್ದು, ಉಳಿದವರು ಬೇರೆ ಜಿಲ್ಲೆಯಿಂದ ಬಂದು ಇಲ್ಲಿ ಪರೀಕ್ಷೆಗೆ ಒಳಗಾದವರಾಗಿದ್ದಾರೆ. 221ರಲ್ಲಿ 8 ಮಂದಿ ಗರ್ಭಿಣಿಯರು ಎಂದು ಡಾ. ಗಂಗಾಧರ್‌ ವಿವರಿಸಿದರು.

ಎಚ್‌ಐವಿಗೆ ಸಂಬಂಧಿತ ಆರೈಕೆ, ಬೆಂಬಲ ಮತ್ತು ಚಿಕಿತ್ಸೆಗಾಗಿ ಎಆರ್‌ಟಿ ಕೇಂದ್ರಗಳಿವೆ. ಜಿಲ್ಲಾ ಚಿಗಟೇರಿ ಆಸ್ಪತ್ರೆಯಲ್ಲಿ ಎಆರ್‌ಟಿ ಪ್ಲಸ್‌ ಕೇಂದ್ರ, ಚನ್ನಗಿರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಎಆರ್‌ಟಿ ಕೇಂದ್ರಗಳಿವೆ. ಹರಿಹರ, ಹೊನ್ನಾಳಿ, ಜಗಳೂರು ಸಾರ್ವಜನಿಕ ಆಸ್ಪತ್ರೆಗಳು, ಮಲೇಬೆನ್ನೂರು, ಸಂತೇಬೆನ್ನೂರು, ಕೆರೆಬಿಳಚಿ, ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ, ಜೆಜೆಎಂ ಮೆಡಿಕಲ್‌ ಕಾಲೇಜು ಮತ್ತು ಸಂಜೀವನಿ ನೆಟ್‌ವರ್ಕ್‌ ಸೇರಿ ಒಟ್ಟು 10 ಎಆರ್‌ಟಿ ಉಪಕೇಂದ್ರಗಳಿವೆ.

ಇದರ ಜತೆಗೆ ಜಿಲ್ಲೆಯಲ್ಲಿ 12 ಆಪ್ತ ಸಮಾಲೋಚನೆ ಮತ್ತು ಪರೀಕ್ಷಾ ಕೇಂದ್ರಗಳಿವೆ. ಜೆಜೆಎಂ ಮೈಕ್ರೋಬಯಾಲಜಿ ವಿಭಾಗದಲ್ಲಿ ಸ್ಟೇಟ್‌ ರೆಫೆರೆನ್ಸ್‌ ಲ್ಯಾಬೋರಟರಿ (ಎಸ್‌ಆರ್‌ಎಲ್‌) ಇದೆ. ಜಿಲ್ಲೆಯಲ್ಲಿ 9 ರಕ್ತನಿಧಿ ಕೇಂದ್ರಗಳಿದ್ದು, ರಕ್ತ ಸಂಗ್ರಹಿಸುವಾಗ ಪರೀಕ್ಷೆ ನಡೆಯುತ್ತದೆ. ಹಲವು ಸರ್ಕಾರೇತರ ಸಂಘಟನೆಗಳು ಎಚ್‌ಐವಿ ನಿಯಂತ್ರಣಕ್ಕಾಗಿ ಕೆಲಸ ಮಾಡುತ್ತಿವೆ. ವರ್ಷದಿಂದ ವರ್ಷಕ್ಕೆ ಪ್ರಕರಣಗಳ ಸಂಖ್ಯೆ ಕಡಿತಗೊಳಿಸಲು ಸಾಧ್ಯವಾಗಿದೆ ಎಂದು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.