ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಣಬೆ ಬೆಳೆದು ಅನ್ನ ಕಂಡುಕೊಂಡ ರೈತ

ವೆಚ್ಚದ ಮೂರು ಪಟ್ಟು ಆದಾಯ ಪಡೆಯಬಹುದಾದ ಅಣಬೆ ಕೃಷಿ ಮಾಡಿದ ಜಿ.ಡಿ. ರಮೇಶ್‌
Last Updated 9 ಮೇ 2021, 19:30 IST
ಅಕ್ಷರ ಗಾತ್ರ

ದಾವಣಗೆರೆ: ಅಣಬೆ ಸುಲಭವಾಗಿ ಕೃಷಿ ಮಾಡಿ ಹೆಚ್ಚು ಆದಾಯಗಳಿಸಬಹುದಾದ ಬೆಳೆ. ಒಮ್ಮೆ ಆರಂಭಿಸಿದರೆ ವರ್ಷ ಪೂರ್ತಿ ಆದಾಯ ಗಳಿಸಬಹುದು. ಆರೋಗ್ಯಕರ ಆಹಾರ ಆಗಿರುವುದರಿಂದ ಇದಕ್ಕೆ ಬೇಡಿಕೆಯೂ ಹೆಚ್ಚು. ಆದರೆ ಅಣಬೆ ಕೃಷಿಯಲ್ಲಿ ಮಧ್ಯಕರ್ನಾಟಕದಲ್ಲಿ ಅಷ್ಟಾಗಿ ತೊಡಗಿಸಿಕೊಂಡಿಲ್ಲ. ಇದಕ್ಕೆ ಅಪವಾದ ಎಂಬಂತೆ ವಿದ್ಯಾನಗರದ ಜಿ.ಡಿ. ರಮೇಶ್‌ ಒಂದು ವರ್ಷದಿಂದ ಅಣಬೆ ಕೃಷಿಯಲ್ಲಿ ಆದಾಯ ಕಂಡುಕೊಂಡಿದ್ದಾರೆ.

ಇಲ್ಲಿನ ಎಪಿಎಂಸಿ ಯಾರ್ಡ್‌ನಲ್ಲಿ 20X40 ವಿಸ್ತೀರ್ಣದ ಎರಡು ಕೊಠಡಿಗಳನ್ನು ಬಾಡಿಗೆ ಪಡೆದುಕೊಂಡಿದ್ದಾರೆ. ಅದರಲ್ಲಿ ಒಂದು ಕೊಠಡಿಯಲ್ಲಿ ಡಾರ್ಕ್‌ ರೂಂ (ಕತ್ತಲೆ ಕೋಣೆ), ಕ್ರಾಪಿಂಗ್‌ ರೂಂ (ಬೆಳವಣಿಗೆ ಕೋಣೆ) ಎಂದು ವಿಭಾಗ ಮಾಡಿಕೊಂಡು ಅಣಬೆ ಬೆಳೆಯುತ್ತಿದ್ದಾರೆ. ಇನ್ನೊಂದು ಕೊಠಡಿಯನ್ನು ಕಚೇರಿಯಾಗಿ, ಕಚ್ಚಾವಸ್ತು ಸಂಗ್ರಹಿಸಿಡುವ ಸ್ಥಳವಾಗಿ ಬಳಸುತ್ತಿದ್ದಾರೆ. ನಂದಿ ಕ್ರಾಫ್‌ ಸೈನ್ಸ್‌ ಎಂದು ಹೆಸರಿಟ್ಟುಕೊಂಡಿದ್ದಾರೆ.

ಅಣಬೆ ಬೆಳೆ ಹೇಗೆ?: ಭತ್ತದ ಹುಲ್ಲನ್ನು ಮೊದಲು ನೀರಲ್ಲಿ ತೊಳೆಯಲಾಗುತ್ತದೆ. ಬಳಿಕ ಬಿಸಿನೀರಿಗೆ ಹಾಕಿ ಅದರಲ್ಲಿ ಇರುವ ಫಂಗಸ್‌, ರೋಗಾಣು ಇಲ್ಲದಂತೆ ಮಾಡಲಾಗುತ್ತದೆ. ತಣ್ಣಗಾದ ಮೇಲೆ ಅಧಿಕ ನೀರು ಇಲ್ಲದ ಆದರೆ ಒದ್ದೆ ಇರುವ ಹುಲ್ಲಿಗೆ ಅಣಬೆ ಬೀಜ ಹಾಕಿ ಗಟ್ಟಿ ಪ್ಯಾಕ್‌ ಮಾಡಲಾಗುತ್ತದೆ. ಅಲ್ಲಲ್ಲಿ ತೂತು ಕೊರೆದು ಡಾರ್ಕ್‌ ರೂಂನಲ್ಲಿ ಇಡಲಾಗುತ್ತದೆ. 21 ದಿನಗಳ ಬಳಿಕ ಹೊರಗೆ ಕ್ರಾಪಿಂಗ್‌ ರೂಂಗೆ ಸ್ಥಳಾಂತರಿಸಲಾಗುತ್ತದೆ. ಆಯಿಸ್ಟರ್‌ ಅಣಬೆ ಅಲ್ಲಿಂದ ಏಳೆಂಟು ದಿನಗಳಿಗೆ ಬೆಳೆಯುತ್ತದೆ. ಮಿಲ್ಕಿ ಅಣಬೆಯಾದರೆ ಮತ್ತೆ ಮಣ್ಣಿನ ಕೇಸಿಂಗ್‌ ಮಾಡಬೇಕಿರುವುದರಿಂದ ಮತ್ತೆ 15 ದಿನ ಬೇಕಾಗುತ್ತದೆ ಎಂದು ಅಣಬೆ ಬೆಳೆಯುವ ವಿಧಾನವನ್ನು ಜಿ.ಡಿ. ರಮೇಶ್‌ ವಿವರಿಸಿದರು.

‘ಇಲ್ಲಿನ ಜನರಿಗೆ ಉದ್ದನೇ ಬೆಳೆಯುವ ಮಿಲ್ಕಿ ಮಶ್ರೂಮ್‌, ಆಯಿಸ್ಟರ್‌ ಮಶ್ರೂಮ್‌ ಬಗ್ಗೆ ಅಷ್ಟು ಗೊತ್ತಿಲ್ಲ. ಸಣ್ಣದಾಗಿ ಮೊಗ್ಗು ತರಹ ಇರುವ ಬಟನ್‌ ಮಶ್ರೂಮ್‌ ಮಾತ್ರ ಗೊತ್ತು. ಅದನ್ನು ತಿಳಿಸಿಕೊಡುವ ಕೆಲಸವಾದರೆ ಮಾರುಕಟ್ಟೆ ವಿಸ್ತರಣೆಯಾಗುತ್ತದೆ. ಸದ್ಯ ಪ್ರತಿ ದಿನ ಸರಾಸರಿ 15 ಕೆ.ಜಿ.ಯಷ್ಟು ಅಣಬೆ ಬೆಳೆಯುತ್ತಿದ್ದೇನೆ. ಅದರಲ್ಲಿ 10 ಕೆ.ಜಿ.ಗೆ ಮಾರುಕಟ್ಟೆ ದೊರೆಯುತ್ತಿದೆ. ಸರಿಯಾಗಿ ಮಾರುಕಟ್ಟೆ ಮಾಡಿದರೆ ದಿನಕ್ಕೆ 100 ಕೆ.ಜಿ.ಯಷ್ಟು ಬೇಡಿಕೆ ದಾವಣಗೆರೆ ನಗರದಲ್ಲಿಯೇ ಇದೆ. ಇನ್ನೂ ಒಂದಷ್ಟು ಮಂದಿ ಅಣಬೆ ಕೃಷಿ ಮಾಡಿದರೆ ಅಗತ್ಯ ಇರುವಷ್ಟು ಪೂರೈಸಬಹುದು’ ಎಂದು ಮಾಹಿತಿ ನೀಡಿದರು.

ಆಯಿಸ್ಟರ್ ಅಣಬೆಗೆ ಕೆ.ಜಿ.ಗೆ ₹ 250 ಇದೆ. ಮಿಲ್ಕಿ ಅಣಬೆಗೆ ಕೆ.ಜಿ.ಗೆ ₹ 300 ಇದೆ. ಹಾಗಾಗಿ ಸುಲಭವಾಗಿ ಮಾಡಬಹುದಾದ ಈ ಕೃಷಿಯನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು. ಮಾಹಿತಿ ಬೇಕಿದ್ದರೆ 9902422999 ಸಂಪರ್ಕಿಸಬಹುದು ಎಂದು ಅವರು ತಿಳಿಸಿದರು.

ಪೌಷ್ಟಿಕ ಆಹಾರ ಅಣಬೆ

ಅಣಬೆಯಲ್ಲಿ ಪೋಷಕಾಂಶ ಜಾಸ್ತಿ. ಝೀರೊ ಫ್ಯಾಟ್‌ ಇರುವ ಆಹಾರ ಇದು. ಗರ್ಭಿಣಿಯರಿಗೆ, ವೃದ್ಧರಿಗೆ, ಸಕ್ಕರೆ ಕಾಯಿಲೆ ಇರುವವರಿಗೆ ಹೀಗೆ ಎಲ್ಲರಿಗೂ ಉತ್ತಮ ಆಹಾರ. ಅಲ್ಲದೇ ಸಸ್ಯಾಹಾರಿಗಳಿಗೆ ವಿಟಮಿನ್‌ ಡಿ ಯಥೇಚ್ಚವಾಗಿ ಅಣಬೆ ಬಿಟ್ಟು ಬೇರೆ ಯಾವುದರಲ್ಲಿಯೂ ಸಿಗುವುದಿಲ್ಲ ಎಂಬುದು ಅಣಬೆ ಕೃಷಿಕ ಜಿ.ಡಿ. ರಮೇಶ್‌ ಅವರ ಅಭಿಪ್ರಾಯ.

ಒಣ ಅಣಬೆಗೂ ಅವಕಾಶ

ಅಣಬೆ ಒಂದೆರಡು ದಿನಗಳಲ್ಲಿ ಮಾರಾಟ ಮಾಡಬೇಕು. ಇಲ್ಲದೇ ಇದ್ದರೆ ಹಾಳಾಗುತ್ತದೆ ಎಂಬ ಆತಂಕ ಜನರಲ್ಲಿ ಇದೆ. ಅದಕ್ಕಾಗಿ ಅಣಬೆ ಕೃಷಿಗೆ ಮುಂದಾಗುತ್ತಿಲ್ಲ. ಆದರೆ ಅಣಬೆಯನ್ನು ಒಣಗಿಸಿದರೆ ಒಂದು ವರ್ಷದವರೆಗೆ ಬಳಕೆ ಮಾಡಬಹುದು ಎಂದು ರಮೇಶ್‌ ತಿಳಿಸಿದರು.

10 ಕೆ.ಜಿ. ಅಣಬೆಯನ್ನು ಒಣಗಿಸಿದರೆ ಒಂದು ಕೆ.ಜಿ. ಆಗುತ್ತದೆ. ದರವೂ ಹಾಗೆ ಹಸಿ ಅಣಬೆಗೆ ಕೆ.ಜಿ.ಗೆ ₹ 250 ಇದ್ದರೆ, ಒಣ ಅಣಬೆಗೆ ₹ 2,500 ಇದೆ. ಒಣ ಅಣಬೆಯನ್ನು ಬಿಸಿನೀರಿನಲ್ಲಿ ಹಾಕಿದರೆ ಮತ್ತೆ ಹಸಿ ಅಣಬೆಯಂತೆ ಆಗುತ್ತದೆ. 10 ಕೆ.ಜಿ.ಯಷ್ಟು ಆಗುವುದರ ಜತೆಗೆ ಪೋಷಕಾಂಶಗಳು ಹಾಗೇ ಇರುತ್ತವೆ ಎಂದು ವಿವರಿಸಿದರು.

ಶೇ 50 ಸಹಾಯಧನ

ಅಣಬೆ ಕೃಷಿ ಮಾಡುವವರಿಗೆ ತೋಟಗಾರಿಕೆ ಇಲಾಖೆಯಿಂದ ಎರಡು ರೀತಿಯಲ್ಲಿ ಶೇ 50 ಸಹಾಯಧನ ನೀಡುತ್ತದೆ ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಲಕ್ಷ್ಮೀಕಾಂತ್‌ ಬೋಮನ್ನರ್‌ ತಿಳಿಸಿದ್ದಾರೆ.

₹ 3 ಲಕ್ಷ ಘಟಕ ವೆಚ್ಚದಲ್ಲಿ ಅಣಬೆ ಕೃಷಿ ಮಾಡುವವರಿಗೆ ₹ 1.5 ಲಕ್ಷ ಸಹಾಯಧನ ಹಾಗೂ ₹ 10 ಲಕ್ಷ ಘಟಕ ವೆಚ್ಚದಲ್ಲಿ ಅಣಬೆ ಕೃಷಿ ಮಾಡುವವರಿಗೆ ₹ 5 ಲಕ್ಷ ಸಹಾಯಧನ ನೀಡಲಾಗುತ್ತದೆ. ಮನೆಯಲ್ಲಿಯೇ ಒಂದು ಕೊಠಡಿಯನ್ನು ಇದಕ್ಕೆ ಮೀಸಲಿಟ್ಟು ಅಣಬೆ ಕೃಷಿ ಮಾಡಬಹುದು. ಅಣಬೆ ಕೃಷಿ ಬಗ್ಗೆ ಇಲಾಖೆಯಿಂದ ತರಬೇತಿ ಕೂಡ ನೀಡಲಾಗುವುದು ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT