ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮಕ್ಕಿಂತ ಒಬಿಸಿ ಪಟ್ಟಿಯಲ್ಲಿ ಸ್ಥಾನ ಸೂಕ್ತ

ಶ್ರೀಶೈಲ ಜಗದ್ಗುರು ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಆಗ್ರಹ
Published 27 ಸೆಪ್ಟೆಂಬರ್ 2023, 5:25 IST
Last Updated 27 ಸೆಪ್ಟೆಂಬರ್ 2023, 5:25 IST
ಅಕ್ಷರ ಗಾತ್ರ

ದಾವಣಗೆರೆ: ‘ವೀರಶೈವ –ಲಿಂಗಾಯತ ಧರ್ಮದ ಎಲ್ಲಾ ಒಳಪಂಗಡಗಳನ್ನು ಕೇಂದ್ರದ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿಸಬೇಕು ಎಂದು ಆಗ್ರಹಿಸಿ ಎಲ್ಲಾ ಮಠಾಧೀಶರು ಹೋರಾಟ ಮಾಡುತ್ತೇವೆ’ ಎಂದು ಶ್ರೀಶೈಲ ಜಗದ್ಗುರು ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಶ್ರೀಶೈಲ ಮಠದ ಲಿಂಗೈಕ್ಯ ವಾಗೀಶ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯ 37ನೇ ವಾರ್ಷಿಕ ಪುಣ್ಯರಾಧನೆ, ಲಿಂಗೈಕ್ಯ ಉಮಾಪತಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯ 12ನೇ ವರ್ಷದ ಸ್ಮರಣೋತ್ಸವ ಹಾಗೂ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರ ದ್ವಾದಶ ಪೀಠಾರೋಹಣ ವರ್ಧಂತಿ ಮಹೋತ್ಸವದ ಜನಜಾಗೃತಿ ಧರ್ಮ ಸಮ್ಮೇಳನದ 2ನೇ ದಿನದ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ಪ್ರತ್ಯೇಕ ಧರ್ಮದವರಿಗೆ ಶೇ 4.5ರಷ್ಟು ಮೀಸಲಾತಿ ಇದ್ದರೆ, ಒಬಿಸಿಯವರಿಗೆ ಶೇ 22.5ರಷ್ಟು ಮೀಸಲಾತಿ ಇದೆ. ಆದ್ದರಿಂದ ಪ್ರತ್ಯೇಕ ಧರ್ಮದ ಮಾನ್ಯತೆಯನ್ನು ಪಡೆದುಕೊಳ್ಳುವುದಕ್ಕಿಂತ ಕೇಂದ್ರದ ಒಬಿಸಿ ಪಟ್ಟಿಯಲ್ಲಿ ಸ್ಥಾನ ಪಡೆದುಕೊಳ್ಳುವುದು ಸಮಾಜಕ್ಕೆ ಹೆಚ್ಚು ಲಾಭಕರ. ಇದನ್ನು ಕೊಡಬೇಕು ಎಂಬ ಒತ್ತಾಯ ಸಮಾಜದ ಎಲ್ಲ ಪಂಗಡದವರಿಗೂ ಇರುವುದರಿಂದ ಆ ಮೂಲಕ ಸಮಾಜದಲ್ಲಿ ಸಂಘಟನೆ ಬರುತ್ತದೆ. ಇದಕ್ಕೆ ಎಲ್ಲ ಸಮುದಾಯದವರು ಕೈಜೋಡಿಸಬೇಕು’ ಎಂದು ಸಲಹೆ ನೀಡಿದರು.

‘ಸನಾತನ ವೀರಶೈವ ಲಿಂಗಾಯತ ಧರ್ಮಕ್ಕೆ ವಿಶಿಷ್ಟವಾದ ಆದಿ ಗುರುಪರಂಪರೆ ಇದೆ. ‘ಗುರು’ ಮತ್ತು ‘ವಿರಕ್ತ’ ಎಂಬುದಾಗಿ ಮೇಲ್ನೋಟಕ್ಕೆ ಈ ಪರಂಪರೆ ಎರಡು ವಿಧವಾಗಿ ಗೋಚರಿಸುತ್ತವೆ. ಕೆಲವು ಸಣ್ಣಪುಟ್ಟ ವ್ಯತ್ಯಾಸಗಳನ್ನು ಹೊರತುಪಡಿಸಿದರೆ ಈ ಎರಡೂ ಪರಂಪರೆಗಳ ತತ್ವ, ಸಿದ್ಧಾಂತ, ಆಚರಣೆ ಮತ್ತು ಉದ್ದೇಶಗಳು ಒಂದೇ ಆಗಿರುವುದರಿಂದ ‘ಗುರು’ ಮತ್ತು ‘ವಿರಕ್ತ’ ಪರಂಪರೆಗಳು ಈ ಧರ್ಮದ ಎರಡು ಕಣ್ಣುಗಳಿದ್ದಂತೆ. ಸಮಾಜವು ಎರಡನ್ನೂ ವಿಭಜಿಸಿ ನೋಡುವ ಪ್ರಯತ್ನ ಮಾಡಬಾರದು’ ಎಂದು ಹೇಳಿದರು.

‘ನನಗೆ ಸಚಿವ ಸ್ಥಾನ ಸಿಗಲೂ ಸ್ವಾಮೀಜಿಗಳ ಆಶೀರ್ವಾದ, ಮಾರ್ಗದರ್ಶನ ಕಾರಣ. ಸ್ವಾಮೀಜಿಗಳ ಮಾರ್ಗದರ್ಶನದಲ್ಲಿ ಉತ್ತಮ ಕೆಲಸ ಮಾಡುವ ಮೂಲಕ ಭ್ರಷ್ಟಾಚಾರಮುಕ್ತ ಜಿಲ್ಲೆ ಮಾಡೋಣ. ಉತ್ತಮ ಮಳೆಯಾಗಲೀ ಎಂದು ಶ್ರೀಗಳು ಆಶೀರ್ವಾದ ಮಾಡಬೇಕು.  ಎಂದು ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್.ಮಲ್ಲಿಕಾರ್ಜುನ್ ಮನವಿ ಮಾಡಿದರು.

‘ಸರ್ಕಾರದ ಉಚಿತ ಯೋಜನೆಗಳಿಂದ ಸರ್ಕಾರ ಕೆಡುವುದಿಲ್ಲ. ಬದಲಾಗಿ ಪರಿಸ್ಥಿತಿ ಉತ್ತಮವಾಗುತ್ತದೆ. ಎಲ್ಲಾ ಯೋಜನೆಗಳಿಂದ ತಿಂಗಳಿಗೆ ₹ 6,000ದಿಂದ ₹8,000 ಬರುತ್ತದೆ. ಇದು ತೆರಿಗೆ ರೂಪದಲ್ಲಿ ಸರ್ಕಾರಕ್ಕೆ ವರಮಾನ ಬರುತ್ತದೆ. ಪದವೀಧರರಿಗೆ ಕೆಲಸ ನೀಡುವ ಉದ್ದೇಶದಿಂದ 3 ತಿಂಗಳಿಗೊಮ್ಮೆ ಉದ್ಯೋಗ ಮೇಳ ಮಾಡಲು ಸೂಚಿಸಿದ್ದೇನೆ’ ಎಂದು ಹೇಳಿದರು.

ಉಜ್ಜಯಿನಿ ಪೀಠದ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ಮಾತನಾಡಿದರು. ಜ್ಯೋತಿ ರಾಧೇಶ್ ಜಂಬಿಗಿ ‘ವೀರಶೈವ ಸಮಾಜ’ ಕುರಿತು ಉಪನ್ಯಾಸ ನೀಡಿದರು. ಪತ್ರಕರ್ತ ಪ್ರಶಾಂತ ರಿಪ್ಪನ್‌ಪೇಟೆ ಉಪನ್ಯಾಸ ನೀಡಿದರು.

ಆವರಗೊಳ್ಳ ಪುರವರ್ಗ ಮಠದ ಓಂಕಾರ ಶಿವಾಚಾರ್ಯ ಸ್ವಾಮೀಜಿ,  ರೇವಣಸಿದ್ಧ ಶಿವಾಚಾರ್ಯ ಸ್ವಾಮೀಜಿ, ರಾಚೋಟಿ ಶಿವಾಚಾರ್ಯ ಸ್ವಾಮೀಜಿ, ಈಶ್ವರ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ಪಾಲಿಕೆ ಸದಸ್ಯ ಗಡಿಗುಡಾಳ್ ಮಂಜುನಾಥ್, ಬಿಜೆಪಿ ಮುಖಂಡ ಎ.ಎಂ. ಸುರೇಶ್ ವೇದಿಕೆಯಲ್ಲಿ ಇದ್ದರು. ಎನ್.ಎ. ಮುರುಗೇಶ್ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT