ಸೋಮವಾರ, 2 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Teachers Day: ಕೆಂಗಾಪುರದ ಶಾಲೆಗೆ ಮರು ಜೀವ ನೀಡಿದ ಶಿಕ್ಷಕ

Published 5 ಸೆಪ್ಟೆಂಬರ್ 2023, 7:16 IST
Last Updated 5 ಸೆಪ್ಟೆಂಬರ್ 2023, 7:16 IST
ಅಕ್ಷರ ಗಾತ್ರ

ಬಸವಾಪಟ್ಟಣ: ಸರಿಯಾದ ನಿರ್ವಹಣೆ ಇಲ್ಲದೇ ಮುಚ್ಚುವ ಹಂತಕ್ಕೆ ಬಂದಿದ್ದ ಸಮೀಪದ ಕೆಂಗಾಪುರದ ಸರ್ಕಾರಿ ಕಿರಿಯ ಶಾಲೆಯು ತಿಂಗಳ ಹಿಂದೆ ವರ್ಗವಾಗಿ ಬಂದಿರುವ ಶಿಕ್ಷಕ ಎಸ್‌.ಲಕ್ಷ್ಮೀನಾರಾಯಣ ಅವರ ಪ್ರಯತ್ನದಿಂದ ಮರುಜೀವ ಪಡೆದುಕೊಂಡಿದೆ.

1938ರಲ್ಲಿ ಆರಂಭವಾದ ಈ ಶಾಲೆ ನೂರಾರು ಪ್ರತಿಭಾವಂತರನ್ನು ನೀಡಿದೆ. ಆದರೆ, ವರ್ಷಗಳು ಕಳೆದಂತೆ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಆಗಿತ್ತು. ಅಲ್ಲದೆ, ಸರಿಯಾದ ನಿರ್ವಹಣೆ ಇಲ್ಲದ ಕಾರಣ ಪೋಷಕರು ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಕಳುಹಿಸತೊಡಗಿದ್ದರು.

ಶಾಲೆಗೆ ಮರುಜೀವ ನೀಡುವ ಉದ್ದೇಶದಿಂದ ಗ್ರಾಮಸ್ಥರೆಲ್ಲ ಸೇರಿ ಈ ಹಿಂದೆ ಈ ಶಾಲೆಯಲ್ಲಿ 17 ವರ್ಷ ಸೇವೆ ಸಲ್ಲಿಸಿದ್ದ ಎಸ್‌.ಲಕ್ಷ್ಮೀನಾರಾಯಣ ಅವರನ್ನು ಶಾಲೆಗೆ ವರ್ಗ ಮಾಡಿಸಿಕೊಂಡು ಬಂದರು.

ಶಾಲೆಯ ಸ್ಥಿತಿ ನೋಡಿದ ಲಕ್ಷ್ಮೀನಾರಾಯಣ ಅವರು ಹಳೇ ವಿದ್ಯಾರ್ಥಿಗಳನ್ನು ಸಂಪರ್ಕಿಸಿ, 85 ವರ್ಷಗಳ ಹಿಂದೆ ಆರಂಭವಾದ ಶಾಲೆ ಅಭಿವೃದ್ಧಿಗೆ ಸಹಕರಿಸಲು ಮನವಿ ಮಾಡಿದರು.

ಹಳೇ ವಿದ್ಯಾರ್ಥಿಗಳ ಒಂದು ಗುಂಪು ರಚಿಸಿ ಶಾಲೆಗೆ ಅಗತ್ಯವಾದ ಪರಿಕರಗಳು, ಸುಣ್ಣ, ಬಣ್ಣ ಮುಂತಾದ ಕಾರ್ಯಗಳ ಬಗ್ಗೆ ವಿವರಿಸಿದರು. 15 ಹಿರಿಯ ವಿದ್ಯಾರ್ಥಿಗಳು ನೀಡಿದ ಧನ ಸಹಾಯದಿಂದ ಶಾಲೆಗೆ ಸುಣ್ಣ ಬಣ್ಣ, ಗೋಡೆ ಬರಹ, ಕಂಪ್ಯೂಟರ್‌ ಪ್ರಿಂಟರ್‌, ಯು.ಪಿ.ಎಸ್‌, ವಿದ್ಯಾರ್ಥಿಗಳಿಗೆ ಸಮವಸ್ತ್ರ, ಶಾಲಾ ಬ್ಯಾಗ್‌ಗಳನ್ನು ಒದಗಿಸಲಾಗಿದೆ.

ಶಾಲೆಯಲ್ಲಿ ಮೂರು ಕೊಠಡಿಗಳಿದ್ದು, ಲಕ್ಷ್ಮೀನಾರಾಯಣ ಸೇರಿದಂತೆ ಇಬ್ಬರು ಶಿಕ್ಷಕರಿದ್ದಾರೆ. 

‘ಇದರಿಂದ ಮಕ್ಕಳ ದಾಖಲಾತಿ ಹೆಚ್ಚುವುದರೊಂದಿಗೆ ಶಾಲೆ ಬಿಡಿಸಿ ಬೇರೆಡೆಗೆ ಕಳಿಸಲು ಸಿದ್ಧರಾಗಿದ್ದ ಪೋಷಕರು ತಮ್ಮ ಮಕ್ಕಳನ್ನು ಇದೇ ಶಾಲೆಯಲ್ಲಿ ಉಳಿಸಲು ನಿರ್ಧರಿಸಿದ್ದಾರೆ. ಒಂದು ತಿಂಗಳಲ್ಲಿ ಶಾಲೆಗೆ ಅದ್ಭುತ ರೂಪ ನೀಡಿರುವ ಶಿಕ್ಷಕ ಲಕ್ಷ್ಮೀನಾರಾಯಣ ಅವರ ಶ್ರಮವೇ ಅಪಾರ’ ಎನ್ನುತ್ತಾರೆ ಗ್ರಾಮದ ನಿವಾಸಿ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎನ್‌.ಗಣೇಶನಾಯ್ಕ.

‘ಶಾಲೆ ಈಗ ನವೀನ ರೂಪ ಪಡೆದಿದೆ. ನಿಮ್ಮ ಮಕ್ಕಳನ್ನು ಬೇರೆಡೆಗೆ ಕಳಿಸದೇ ಈ ಶಾಲೆಗೇ ಸೇರಿಸಿ ಎಂದು ಶಿಕ್ಷಕ ಲಕ್ಷ್ಮೀನಾರಾಯಣ ಮನೆ ಮನೆಗೆ ತೆರಳಿ ಪೋಷಕರ ಮನ ಒಲಿಸುತ್ತಿದ್ದಾರೆ. ಅವರ ಬಂದಿದ್ದರಿಂದ ಕಿರಿಯ ಪ್ರಾಥಮಿಕ ಶಾಲೆ ಅಭಿವೃದ್ಧಿ ಹೊಂದಿದೆ’ ಎನ್ನುತ್ತಾರೆ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ರಘುನಾಯ್ಕ.

ಶಿಕ್ಷಕ ಎಸ್. ಲಕ್ಷ್ಮೀನಾರಾಯಣ
ಶಿಕ್ಷಕ ಎಸ್. ಲಕ್ಷ್ಮೀನಾರಾಯಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT