ಶುಕ್ರವಾರ, ಏಪ್ರಿಲ್ 23, 2021
22 °C
‘ಅಭಯ ಸ್ಪಂದನ’ ಸಮುದಾಯದ ಸಾಧಕಿಯರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟನೆ

180 ಕಲೆಗಳ ಕಲಿಸಲು ಅಕಾಡೆಮಿ ಸಿದ್ಧ; ಜಾನಪದ ಅಕಾಡೆಮಿ ಅಧ್ಯಕ್ಷೆ ಬಿ.ಮಂಜಮ್ಮ ಜೋಗತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ‘ಕಂಸಾಳೆ, ಡೊಳ್ಳುಕುಣಿತ, ವೀರಗಾಸೆ ಸಹಿತ 180 ಜನಪದ ಕಲೆಗಳನ್ನು ಕಲಿಸುವ ಅವಕಾಶವನ್ನು ಜಾನಪದ ಅಕಾಡೆಮಿ ಕಲ್ಪಿಸಲಿದೆ. ನಿಮ್ಮ ಆಸಕ್ತಿಯ ಯಾವುದಾದರೂ ಕಲೆಯನ್ನು ಆಯ್ಕೆ ಮಾಡಿಕೊಂಡು ಮುಂದೆ ಬಂದರೆ ಶಿಷ್ಯವೇತನ ನೀಡಿ ಅದನ್ನು ಕಲಿಸಿಕೊಡಲಾಗುವುದು. ಆ ಕಲೆಗಳನ್ನು ರೂಢಿಸಿಕೊಂಡು ಬೆಳೆದು ಪದ್ಮಶ್ರೀಯಂಥ ಪ್ರಶಸ್ತಿಗೆ ನೀವೂ ಭಾಜನರಾಗಬೇಕು’ ಎಂದು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ ಬಿ. ಮಂಜಮ್ಮ ಜೋಗತಿ ಹೇಳಿದರು.

ನಗರದ ಕುವೆಂಪು ಕನ್ನಡ ಭವನದಲ್ಲಿ ಶುಕ್ರವಾರ ಅಭಯ ಸ್ಪಂದನ ಸಂಘಟನೆಯಿಂದ (ಲಿಂಗತ್ವ ಅಲ್ಪಸಂಖ್ಯಾತರ ಸಂಘಟನೆ) ನಡೆದ ಸಮುದಾಯದ ಸಾಧಕಿಯರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಒಂದು ಜಿಲ್ಲೆಯ ಕಲೆಯನ್ನು ಇನ್ನೊಂದು ಜಿಲ್ಲೆಯವರು ಕಲಿಯಬೇಕು. ಕೊಡುಕೊಳ್ಳುವಿಕೆ ಆಗಬೇಕು. ಅದಕ್ಕೆ ಬೇಕಾದ ಎಲ್ಲ ಪ್ರೋತ್ಸಾಹಗಳನ್ನು ಅಕಾಡೆಮಿಯಿಂದ ನೀಡಲಾಗುವುದು’ ಎಂದರು.

‘ಹಣದ ಹಿಂದೆ ಹೋಗಬೇಡಿ. ಹಣ ಮಾಡುವುದು ದೊಡ್ಡ ಸಂಗತಿ ಅಲ್ಲ. ಕಳ್ಳತನ ಮಾಡಿಯೂ ಹಣ ಗಳಿಸುತ್ತಾರೆ. ಆದರೆ ಒಳ್ಳೆಯ ಹೆಸರು ಗಳಿಸುವುದು ಸುಲಭವಲ್ಲ. ಕೋಟಿ ಕೊಟ್ಟರೂ ಹೆಸರು ಬರಲ್ಲ. ಹಾಗಾಗಿ ಒಳ್ಳೆಯ ಹೆಸರು ಗಳಿಸಲು ಪ್ರಯತ್ನಿಸಿ’ ಎಂದು ತಿಳಿಸಿದರು.

ಮುಖಕ್ಕೆ ಮೇಕಪ್‌, ಉಡಲು ಬಟ್ಟೆ, ಹೊಟ್ಟೆಗೆ ಅನ್ನ ಬಿಟ್ಟು ಮತ್ತೇನು ನಮಗೆ ಬೇಕು? ತುಂಬಾ ಆಸೆಗಳನ್ನು ಇಟ್ಟುಕೊಂಡು ದುಡ್ಡಿಗಾಗಿ ಕಾಡುವ ಬದಲು ಅಗತ್ಯ ಇರುವಷ್ಟೇ ಸಂಪಾದನೆ ಮಾಡಬೇಕು ಎಂದು ಸಲಹೆ ನೀಡಿದರು.

ಆನೇಕಲ್‌ ತಾಲ್ಲೂಕು ದೊಂಸಂದು ಗ್ರಾಮ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾಗಿರುವ ಆರತಿ ಜವರೇಗೌಡ, ‘ಭಿಕ್ಷಾಟನೆಯನ್ನು ಯಾರೂ ಇಷ್ಟಪಟ್ಟು ಮಾಡುವುದಿಲ್ಲ. ನಾವು ಅದರಿಂದ ಹೊರಗೆ ಬರಲು ಪ್ರಯತ್ನಿಸಬೇಕು. ನಾನು ಮುಂಬೈಯಲ್ಲಿ ಸಂಘಟನೆ ಕಟ್ಟಿ ಎಚ್‌ಐವಿ ಸಹಿತ ವಿವಿಧ ರೋಗಗಳ ಬಗ್ಗೆ ಜಾಗೃತಿ ಮೂಡಿಸುವವರೆಗೆ ಲಿಂಗತ್ವ ಅಲ್ಪಸಂಖ್ಯಾತರು ತಾವು ದೇವರು, ಯಾವುದೇ ರೋಗಗಳು ಬರುವುದಿಲ್ಲ ಎಂದು ತಿಳಿದಿದ್ದರು’ ಎಂದು ಹೇಳಿದರು.

‘ನಮಗೆ ಹೀನಾಮಾನವಾಗಿ ಬೈದು, ನೀರು, ಊಟ, ಬಾಡಿಗೆ ಮನೆ ನೀಡಬಾರದು ಎಂದು ಹೇಳಿದ್ದ ಊರಿನಲ್ಲಿಯೇ ಗ್ರಾಮ ಪಂಚಾಯಿತಿ ಚುನಾವಣೆಗೆ ನಿಂತು ಅಧಿಕ ಮತಗಳನ್ನು ಪಡೆದು ಗೆದ್ದಿದ್ದೇನೆ. ನಾನು ಜನರ ಕಷ್ಟಕ್ಕೆ ಸ್ಪಂದಿಸಿದ ಕಾರಣದಿಂದ ಇದು ಸಾಧ್ಯವಾಗಿದೆ. ನೀವು ಕೂಡ ವ್ಯವಹಾರ ಕ್ಷೇತ್ರಕ್ಕೆ, ರಾಜಕೀಯ ಕ್ಷೇತ್ರಕ್ಕೆ ಬರಬೇಕು’ ಎಂದು ಸ್ಫೂರ್ತಿ ತುಂಬಿದರು.

ಅಭಯ ಸ್ಪಂದನ ಅಧ್ಯಕ್ಷೆ ಉಮಾ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಏಡ್ಸ್‌ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕದ ಜಿಲ್ಲಾ ಕಾರ್ಯಕ್ರಮ ಅಧಿಕಾರಿ ಡಾ. ಕೆ.ಎಚ್‌. ಗಂಗಾಧರ್‌, ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಮಂಜುನಾಥ ಕುಂದವಾಡ, ಪಾಲಿಕೆಯ ನಾಮನಿರ್ದೇಶಿತ ಸದಸ್ಯೆ ಜಯಮ್ಮ ಎಚ್‌.ಸಿ., ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಡಾ.ಎಚ್‌.ಎಸ್‌. ಮಂಜುನಾಥ ಕುರ್ಕಿ, ಮಹಿಳಾ ಮುನ್ನಡೆಯ ಪವಿತ್ರಾ, ನೆರಳು ಬೀಡಿ ಕಾರ್ಮಿಕರ ಯೂನಿಯನ್‌ನ ಜಬೀನಾಖಾನಂ, ದುರ್ಗಾಶಕ್ತಿ ಏಡ್ಸ್‌ ತಡೆಗಟ್ಟುವ ಮಹಿಳಾ ಸಂಘದ ಅಧ್ಯಕ್ಷೆ ಮಂಜುಳಾ ಎಸ್‌.ಟಿ., ಅಂಗವಿಕಲರ ಆರ್‌ಪಿಒ ಟಾಸ್ಕ್‌ ರಾಜ್ಯ ಉಪಾಧ್ಯಕ್ಷೆ ಎಂ. ವಿಜಯಲಕ್ಷ್ಮೀ ಇದ್ದರು.

ಅಭಯ ಸ್ಪಂದನ ಕಾರ್ಯದರ್ಶಿ ಚೈತ್ರಾ ಎಸ್‌. ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಜುನಾಥ ಕೆ.ಜಿ. ಸ್ವಾಗತಿಸಿದರು. ಗೀತಾ ವಿ.ಎಚ್‌. ವಂದಿಸಿದರು. ಹುಚ್ಚಂಗಿ ಸಿ. ಪ್ರಸಾದ್‌ ಕಾರ್ಯಕ್ರಮ ನಿರೂಪಿಸಿದರು.

ಕಣ್ಣೀರಿಟ್ಟ ಜೋಗತಿ

ತಮ್ಮ ಬಾಲ್ಯ ಮತ್ತು ಕಷ್ಟಗಳನ್ನು ನೆನೆದು ಕಣ್ಣೀರಿಟ್ಟ ಮಂಜಮ್ಮ ಜೋಗತಿ, ಹಾಡುಗಳನ್ನು ಹಾಡಿ ರಂಜಿಸಿದರು.

‘ಕುಕ್ಕುವಾಡ ಸಕ್ಕರೆ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು. ನನ್ನ ತಾಯಿ ಮೂರು ಬಾರಿ ಅವಳಿ ಜವಳಿ ಮಕ್ಕಳನ್ನು, ಒಂದು ಬಾರಿ ಮೂರು ಮಕ್ಕಳನ್ನು ಹೆತ್ತಿದ್ದಳು. ಒಟ್ಟು 21 ಮಕ್ಕಳು ನಾವು. ಅದರಲ್ಲಿ 16 ಮಂದಿ ಸತ್ತು 5 ಮಂದಿ ಬದುಕಿದ್ದೆವು. ಏಳನೇ ತರಗತಿಯಲ್ಲಿ ಓದುತ್ತಿರುವ ಸಮಯದಲ್ಲಿ ದಾವಣಗೆರೆಯಲ್ಲಿ ಕುರುಕ್ಷೇತ್ರ ನಾಟಕವನ್ನು ತಂದೆಯವರು ಆಡಿಸಿದ್ದರು. ಅದರಲ್ಲಿ ಚಿತ್ರನಟ ಉದಯಕುಮಾರ್‌ ಕೌರವ ಪಾತ್ರ ಮಾಡಿದ್ದರು. ಸೇವಕಿ ಬೇಕಿತ್ತು. ಆಗ ಹೆಣ್ಣುಮಕ್ಕಳು ನಾಟಕ ರಂಗಕ್ಕೆ ಬರುತ್ತಿರಲಿಲ್ಲ. ನಾನು ಮೊದಲ ಬಾರಿ ಸ್ತ್ರೀಪಾತ್ರ ಹಾಕುವ ಮೂಲಕ ಬಣ್ಣದ ಲೋಕಕ್ಕೆ ಬಂದೆ’ ಎಂದು ನೆನಪಿಸಿಕೊಂಡರು.

ಎಸ್ಸೆಸ್ಸೆಲ್ಸಿವರೆಗೆ ಇಲ್ಲಿಯೇ ಓದಿದ್ದು, ಮನಸ್ಸು ಹೆಣ್ಣಾಗಿ ಪರಿವರ್ತನೆಗೊಂಡಿದ್ದು, ಮುತ್ತು ಕಟ್ಟಿಸಿಕೊಂಡಿದ್ದು, ತಂದೆತಾಯಿಗೇ ಬೇಡವಾಗಿ ವಿಷ ಕುಡಿದಿದ್ದು, ಸೀರೆ ಉಟ್ಟು ಹೋಗುತ್ತಿದ್ದಾಗ ಹೈಸ್ಕೂಲ್‌ ಮೈದಾನದಲ್ಲಿ ಯುವಕರು ಮೃಗಗಳಂತೆ ಎರಗಿ ಬಟ್ಟೆ ಹರಿದು ಹಾಕಿ ಮಾನಭಂಗಕ್ಕೆ ಯತ್ನಿಸಿದ್ದು ಮುಂತಾದ ಘಟನೆಗಳನ್ನು ನೆನೆದು ಕಣ್ಣೀರಿಟ್ಟರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು