ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ತುಂಗಾಳ ಓಟ, ಅಪರಾಧಿಗಳಿಗೆ ನಡುಕ

ದಾವಣಗೆರೆ ಪೊಲೀಸ್‌ ಶ್ವಾನದಳದಲ್ಲಿದೆ ಖ್ಯಾತ ಡಾಬರ್‌ಮನ್‌
Last Updated 9 ಅಕ್ಟೋಬರ್ 2020, 12:43 IST
ಅಕ್ಷರ ಗಾತ್ರ
ADVERTISEMENT
""
""
""
""
""
""
""

ದಾವಣಗೆರೆ ಜಿಲ್ಲೆಯ ಹೂವಿನಮಡು ಗ್ರಾಮದಲ್ಲಿ ಈಚೆಗೆ ಹೊಲವೊಂದರಲ್ಲಿ ರಾತ್ರಿ ಮಹಿಳೆಯೊಬ್ಬರ ಕೊಲೆ. ಮರುದಿನ ಶ್ವಾನದಳ ಸ್ಥಳಕ್ಕೆ ಬಂತು. ಕೊಲೆಗಾರನ ಜಾಡು ಹಿಡಿದ ‘ತುಂಗಾ’ ಸೀದಾ ಮೃತಳ ಮನೆಯ ಹಿಂಬದಿಯಲ್ಲಿದ್ದ ಅವರ ದಾಯವಾದಿಗಳ ಮನೆ ಹೊಕ್ಕಿತು. ಕೊಲೆಗಾರ ಸಿಕ್ಕಿಬಿದ್ದ. ಆಸ್ತಿಗಾಗಿ ನಡೆದ ಜಗಳದಲ್ಲಿ ಮಹಿಳೆ ಕೊಲೆಯಾಗಿರುವ ವಿಷಯ ಬೆಳಕಿಗೆ ಬಂತು.

ನ್ಯಾಮತಿಯಲ್ಲಿ ಮಹಿಳೆಯೊಬ್ಬರ ಕೊಲೆಯಾಗಿತ್ತು. ಅಲ್ಲಿಯೇ ಬಿದ್ದಿದ್ದ ಮಚ್ಚಿನ ವಾಸನೆಯನ್ನು ‘ತುಂಗಾ’ಳಿಗೆ ತೋರಿಸಲಾಯಿತು. ತನಿಖೆ ನೋಡಲು 1,000–1,500 ಮಂದಿ ಸೇರಿದ್ದರು. ಅವರಲ್ಲಿ ಯುವಕನೊಬ್ಬನ ಮುಂದೆ ಹೋಗಿ ಕುಳಿತ ತುಂಗಾ ಬೊಗಳತೊಡಗಿತು. ಆತ ಅದೇ ಮಹಿಳೆಯ ಮಲಮಗ. ಅಷ್ಟು ಜನರ ಮಧ್ಯದಲ್ಲೂ ತುಂಗಾ ಕೊಲೆಗಾರನನ್ನು ಗುರುತಿಸಿತ್ತು.

ಮಲೇಬೆನ್ನೂರು ಬಳಿಯ ಹಳ್ಳಿಯೊಂದರಲ್ಲಿ ಕುರಿಗಾಹಿಯೊಬ್ಬನನ್ನು ಕೊಡಲಿಯಿಂದ ಕಡಿದು ಹಾಕಿದ್ದರು. ಆರೋಪಿ ಸ್ವಲ್ಪ ದೂರದಲ್ಲೇ ಟೀಶರ್ಟ್‌ ಒಗೆದು ಹೋಗಿದ್ದ. ಅದರ ವಾಸನೆ ಗ್ರಹಿಸಿದ ತುಂಗಾ 5–6 ಕಿ.ಮೀ.ನಷ್ಟು ದೂರ ಓಡಿ ಅಪರಾಧಿಯನ್ನು ಹುಡುಕಿತು. ಆತನಿಗೆ ಈಚೆಗೆ ಜೀವಾವಧಿ ಶಿಕ್ಷೆಯೂ ಆಗಿದೆ.

ಸುಳಿವು ಹುಡುಕುತ್ತ ಹೊರಟ ‘ತುಂಗಾ’ಳೊಂದಿಗೆ ಹೊರಟ ಪೊಲೀಸರು.

ಹರಪನಹಳ್ಳಿ ತಾಲ್ಲೂಕಿನ ಹಳ್ಳಿಯೊಂದರಲ್ಲಿ ಅನೈತಿಕ ಸಂಬಂಧದ ಕಾರಣ ಮಹಿಳೆಯೊಬ್ಬರ ಹತ್ಯೆಯಾಗಿತ್ತು. ತಲೆಯ ಮೇಲೆ ಕಲ್ಲನ್ನು ಎತ್ತಿಹಾಕಿ ಕೊಲೆ ಮಾಡಲಾಗಿತ್ತು. ಅಲ್ಲಿಗೆ ತುಂಗಾಳನ್ನು ಕರೆದೊಯ್ಯಲಾಯಿತು. ಕಲ್ಲಿನ ವಾಸನೆ ನೀಡಲಾಯಿತು. ಅದರ ಜಾಡು ಹಿಡಿದ ತುಂಗಾ ಅಲ್ಲಿಂದ ಸೀದಾ 10 ಕಿ.ಮೀನಷ್ಟು ದೂರ ಓಡಿತು. ಅಗ್ರಹಾರ ತಾಂಡಾ ತಲುಪಿತು. ಅಲ್ಲೇ ಇದ್ದ ಕೊಲೆಗಾರರಿಬ್ಬರನ್ನು ಗುರುತಿಸಿತು. ಹೀಗೆ ಸಾಗುತ್ತದೆ ‘ತುಂಗಾ’ಳ ಚತುರಮತಿ ಹಾಗೂ ಓಟದ ಗಾಥೆ. ತುಂಗಾ ಶ್ವಾನದ ಹ್ಯಾಂಡ್ಲರ್‌ ಕಾನ್‌ಸ್ಟೆಬಲ್‌ ಶಫಿ ಉಲ್ಲಾ ಎಂ.ಡಿ. ನೆನಪಿಸಿಕೊಂಡ ತುಂಗಾಳ ಸಾಹಸದ ಕಥೆಗಳಿವು.

ಜುಲೈನಲ್ಲಿ ಚನ್ನಗಿರಿ ತಾಲ್ಲೂಕಿನ ಸೂಳೆಕೆರೆ ಗುಡ್ಡದಲ್ಲಿ ನಡೆದ ಕೊಲೆ ಪ್ರಕರಣದ ತನಿಖೆಯ ಘಟನೆ ತುಂಗಾ ಖ್ಯಾತಿ ರಾಜ್ಯವನ್ನೂ ದಾಟಿ ರಾಷ್ಟ್ರ ಮಟ್ಟಕ್ಕೆ ಹರಡಿದೆ. ‘ಕೊಲೆಗಾರನ ಜಾಡು ಸಿಗುತ್ತಲೇ ತುಂಗಾ ಓಟ ಕಿತ್ತಿತು. ಒಂದಲ್ಲ, ಎರಡಲ್ಲ.... 11 ಕಿ.ಮೀ. ಆದರೂ ಅದು ದಣಿಯಲಿಲ್ಲ. ಮಧ್ಯರಾತ್ರಿ ಕಾಶಿಪುರ ತಾಂಡಾದವರೆಗೆ ಓಡಿ ಕೊಲೆಗಾರ ತಂಗಿದ ಮನೆ ಸಿಗುತ್ತಲೇ, ಅಲ್ಲಿ ಕುಳಿತು ಬೊಗಳತೊಡಗಿತು’ ಎಂದು ಬೆಲ್ಟ್‌ ಹಿಡಿದು ಅದರೊಂದಿಗೆ ಓಡಿದ ಹೆಡ್‌ ಕಾನ್‌ಸ್ಟೆಬಲ್‌ ಕೆ.ಎಂ. ಪ್ರಕಾಶ್‌ ನೆನಪಿಸಿಕೊಂಡರು. ಕಾನ್‌ಸ್ಟೆಬಲ್‌ ವೆಂಕಟೇಶ್‌ ಕೆ. ಹಾಗೂ ಲೋಹಿತ್‌ ಸಹ ಅಂದು ಅವರೊಂದಿಗೆ ಓಡಿದ್ದರು.

‘ಕೆಲ ವರ್ಷಗಳ ಹಿಂದೆ ಹರಪನಹಳ್ಳಿ ತಾಲ್ಲೂಕಿನ ಅರಸೀಕೆರೆಯಲ್ಲಿ ನಡೆದ ಡಕಾಯತಿ ಪ್ರಕರಣವೊಂದರ ತನಿಖೆಯ ವೇಳೆಯೂ ತುಂಗಾ 8 ಕಿ.ಮೀ. ಓಡಿ ಡಕಾಯಿತನೊಬ್ಬನ ಸುಳಿವು ನೀಡಿತ್ತು. ಆಗಲೂ ನಾನು ಅದನ್ನು ಹ್ಯಾಂಡಲ್‌ ಮಾಡಿದ್ದೆ. ತುಂಗಾ ದಾವಣಗೆರೆಯ ಶ್ವಾನದಳಕ್ಕೆ ಬಂದ ನಂತರ 60 ಕೊಲೆ ಪ್ರಕರಣ, 25 ಕಳವು ಪ್ರಕರಣ ಪತ್ತೆ ಹಚ್ಚಲು ನೆರವಾಗಿದೆ’ ಎಂದು ಪ್ರಕಾಶ್‌ ತಿಳಿಸಿದರು.

ತುಂಗಾಳೊಂದಿಗೆ ಶ್ವಾನ ದಳ ಸಿಬ್ಬಂದಿಯ ಓಟ

ಎಸ್‌ಪಿ ಪ್ರಶಂಸೆ

ತುಂಗಾ ಸಾಧನೆಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ, ‘ಡಾಬರ್‌ಮನ್‌ ತಳಿಯ ತುಂಗಾ ದಾವಣಗೆರೆಯ ಪೊಲೀಸ್‌ ಇಲಾಖೆಯ ಹೆಮ್ಮೆ. 2010ರ ಏಪ್ರಿಲ್‌ 16ರಂದು ಜನಿಸಿದ ಇದಕ್ಕೆ ಬೆಂಗಳೂರಿನಲ್ಲಿ ತರಬೇತಿ ಕೊಡಿಸಿ ದಾವಣಗೆರೆ ಶ್ವಾನದಳಕ್ಕೆ ಸೇರ್ಪಡೆ ಮಾಡಲಾಗಿದೆ. ಸೂಳೆಕೆರೆ ಗುಡ್ಡದಿಂದ 11 ಕಿ.ಮೀ ಓಡಿ ಕೊಲೆಗಾರನ ಸುಳಿವು ನೀಡಿದ ಪ್ರಕರಣ ಅದರ ತನಿಖಾ ಕೌಶಲದ ಅತ್ಯುತ್ತಮ ಉದಾಹರಣೆ. ಈ ಸುಳಿವಿನಿಂದಲೇ ಧಾರವಾಡದ ವಿದ್ಯಾಗಿರಿಯಲ್ಲಿ ನಡೆದ ಪಿಸ್ತೋಲ್‌ ಕಳವು ಪ್ರಕರಣದ ಆರೋಪಿಯನ್ನು ಹಿಡಿಯಲೂ ಕಾರಣವಾಯಿತು. ಧಾರವಾಡಕ್ಕೆ ಸಂಬಂಧಿಸಿದ ಇನ್ನೂ 3 ಪ್ರಕರಣಗಳ ತನಿಖೆಗೆ ತುಂಗಾಳ ಈ ಓಟ ಸಹಾಯ ಮಾಡಿದೆ’ ಎಂದು ವಿವರಿಸಿದರು.

‘ಅಪರಾಧಿಗಳಿಗೆ ನಡುಕ ಹುಟ್ಟಿಸುವಂತೆ ಕೆಲಸ ಮಾಡುತ್ತಿದೆ ತುಂಗಾ. ಕಳವು, ದರೋಡೆ ಹಾಗೂ ಕೊಲೆ ಪ್ರಕರಣಗಳ ತನಿಖೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿರುವ ತುಂಗಾಳಿಗೆ ಎಡಿಜಿಪಿ ಅಮರ್‌ ಕುಮಾರ್‌ ಪಾಂಡೆ ಅವರು ಗೌರವ ಸಲ್ಲಿಸಿದ್ದಾರೆ. ಸ್ವಾತಂತ್ರ್ಯೋತ್ಸವದಂದು ಜಿಲ್ಲಾ ಉಸ್ತುವಾರಿ ಸಚಿವರೂ ಗೌರವ ಸಮರ್ಪಿಸಿದ್ದಾರೆ’ ಎಂದು ಡಿವೈಎಸ್‌ಪಿ ಪ್ರಕಾಶ್‌ ತಿಳಿಸಿದರು.

ಸುಳಿವಿನ ಪತ್ತೆಗೆ ಗಿಡಗಂಟಿಗಳ ನಡುವೆಯೂ ತುಂಗಾ ಶ್ವಾನದ ಹುಡುಕಾಟ

ಅಭ್ಯಾಸ ಹೇಗೆ?

‘ಕಳ್ಳ ಅಥವಾ ಕೊಲೆಗಾರನ ಜಾಡು ಹಿಡಿಯುವ ನಾಯಿಗಳನ್ನು ಹಿಂಬಾಲಿಸುವುದು ಸುಲಭವೇನಲ್ಲ. ಅದು ಹೋದಲ್ಲೇ ಬೆಲ್ಟ್‌ ಹಿಡಿದುಕೊಂಡು ಓಡುತ್ತಲೇ ಇರಬೇಕಾಗುತ್ತದೆ. ಹೀಗಾಗಿ ನಿತ್ಯವೂ ವ್ಯಾಯಾಮ ಅಗತ್ಯ. ಒಂದೊಂದು ದಿನ ದಾವಣಗೆರೆ ನಗರ ಹಾಗೂ ಸುತ್ತಲಿನ ಒಂದೊಂದು ವಿಶಾಲ ಜಾಗದಲ್ಲಿ ವಾಕಿಂಗ್‌, ಜಾಗಿಂಗ್‌ ಹಾಗೂ ವ್ಯಾಯಾಮ ನಡೆಯುತ್ತದೆ. ಬಾತಿ ಗುಡ್ಡ, ಕೊಂಡಜ್ಜಿ, ಡಿ.ಆರ್‌. ಕವಾಯತು ಮೈದಾನ, ದಾವಣಗೆರೆ ವಿಶ್ವವಿದ್ಯಾಲಯದ ಮೈದಾನ, ಆನಗೋಡು ಪಾರ್ಕ್‌ಗಳಿಗೆ ಹೆಚ್ಚಾಗಿ ಶ್ವಾನಗಳನ್ನು ಕರೆದೊಯ್ಯಲಾಗುತ್ತದೆ. ಬೆಳಿಗ್ಗೆ 6ರಿಂದ 8ರವರೆಗೆ ಶ್ವಾನ ಹಾಗೂ ಪೊಲೀಸರಿಬ್ಬರಿಗೂ ಕವಾಯತು ನಡೆಯುತ್ತದೆ’ ಎಂದು ಶ್ವಾನದಳದ ಹೆಡ್‌ ಕಾನ್‌ಸ್ಟೆಬಲ್‌ ರೇವಣಸಿದ್ದಪ್ಪ ವಿ.ಆರ್‌. ತಿಳಿಸಿದರು.

ಕಳ್ಳನ ಜಾಡು ಹಿಡಿಯುವ ಶ್ವಾನಗಳ ಹಿಂದೆ 2 ಅಥವಾ 3 ಪೊಲೀಸ್‌ ಸಿಬ್ಬಂದಿ ಓಡುತ್ತಾರೆ. ಏಕೆಂದರೆ ಅವು ಎಷ್ಟು ಕಿ.ಮೀ ದೂರದವರೆಗೆ ಓಡಬಹುದು ಎಂಬ ಅಂದಾಜು ಇರುವುದಿಲ್ಲ. ನಾಯಿಗಳ ವೇಗ ಹಾಗೂ ದೂರವನ್ನು ಸರಿಗಟ್ಟಲು ಒಬ್ಬರಾದ ನಂತರ ಮತ್ತೊಬ್ಬರು ಓಡಲು ಸಹಾಯವಾಗುತ್ತದೆ ಎಂದು ಅವರು ವಿವರಿಸಿದರು.

ತುಂಗಾ ಶ್ವಾನಕ್ಕೆ ವಸ್ತುವೊಂದರ ವಾಸನೆ ನೀಡುತ್ತಿರುವ ಶ್ವಾನದಳ ಸಿಬ್ಬಂದಿ

3 ತಿಂಗಳ ನಾಯಿಮರಿಯನ್ನು ಬೆಂಗಳೂರಿನ ಆಡುಗೋಡಿಯಲ್ಲಿರುವ ಶ್ವಾನ ತರಬೇತಿ ಕೇಂದ್ರಕ್ಕೆ ಕರೆದೊಯ್ಯಲಾಗುತ್ತದೆ. ಅಲ್ಲಿ 9 ತಿಂಗಳ ತರಬೇತಿಯ ನಂತರ ಅದನ್ನು ಮರಳಿ ಇಲ್ಲಿಗೇ ಕರೆತರಲಾಗುತ್ತದೆ. ದಾವಣಗೆರೆ ಶ್ವಾನದಳದಲ್ಲಿ 4 ಹೆಣ್ಣುನಾಯಿಗಳಿವೆ. 8 ಸಿಬ್ಬಂದಿ ಇದ್ದಾರೆ. ಹ್ಯಾಂಡ್ಲರ್‌ಗಳ ಮಾತನ್ನು ಚಾಚೂ ತಪ್ಪದೇ ಪಾಲಿಸುತ್ತವೆ. ತುಂಗಾ (ಡಾಬರ್‌ಮನ್‌–10 ವರ್ಷ), ಪೂಜಾ (ಜರ್ಮನ್‌ ಶೆಫರ್ಡ್‌–7 ವರ್ಷ) ಇವೆರಡೂ ಬಹಳ ದೂರದವರೆಗೆ ಓಡಬಲ್ಲವಾಗಿರುವುದರಿಂದ ಇವರಡನ್ನೂ ಕೊಲೆ ಹಾಗೂ ಕಳವು ಪತ್ತೆ ಪ್ರಕರಣಗಳಲ್ಲಿ ಬಳಸಿಕೊಳ್ಳಲಾಗುತ್ತದೆ. ಸಿಂಧು (ಲ್ಯಾಬ್ರಡಾರ್‌–4 ವರ್ಷ), ಸೌಮ್ಯಾ (ಲ್ಯಾಬ್ರಡಾರ್‌–1.5 ವರ್ಷ) ರನ್ನು ಬಾಂಬ್‌ ಪತ್ತೆ ಮಾಡಲು, ಮಾದಕ ವಸ್ತುಗಳನ್ನು ಪತ್ತೆಹಚ್ಚಲು ಬಳಸಲಾಗುತ್ತದೆ. ಗಣ್ಯರು ಬಂದಾಗ ಸುರಕ್ಷತಾ ವ್ಯವಸ್ಥೆ ಪರಿಶೀಲಿಸಲೂ ಇವುಗಳನ್ನೇ ಬಳಸಿಕೊಳ್ಳಲಾಗುತ್ತದೆ’ ಎಂದು ಅವರು ವಿವರಿಸಿದರು. ಡಾಬರ್‌ಮನ್‌ ಹಾಗೂ ಜರ್ಮನ್‌ ಶೆಫರ್ಡ್‌ ನಾಯಿಗಳು ವೇಗವಾಗಿ ಓಡಲು ಹೆಸರುವಾಸಿ. ಡಾಬರ್‌ಮನ್‌ 15ರಿಂದ 20 ಕಿ.ಮೀವರೆಗೂ ಓಡಿದರೂ ದಣಿಯುವುದಿಲ್ಲ. ಹೀಗಾಗಿ ಇದನ್ನೇ ಹೆಚ್ಚಾಗಿ ಕೊಲೆ–ಕಳವು ಪ್ರಕರಣಗಳ ತನಿಖೆಗೆ ಬಳಸಲಾಗುತ್ತದೆ. ಲ್ಯಾಬ್ರಡಾರ್‌ಗಳು ಹೆಚ್ಚು ದೂರ ಓಡಲಾರವು.

ಸಂದಿ–ಗೊಂದಿಗಳಲ್ಲಿ ನುಸುಳುತ್ತ ‘ತುಂಗಾ’ ಹೊರಟರೆ ಶ್ವಾನದಳ ಸಿಬ್ಬಂದಿಯೂ ಧಾವಿಸಬೇಕು

2000ನೇ ಇಸ್ವಿಯಲ್ಲಿ ಆರಂಭಗೊಂಡಿರುವ ದಾವಣಗೆರೆಯ ಶ್ವಾನದಳ ಕಚೇರಿಯಲ್ಲಿ ನಾಯಿಗಳಿಗಾಗಿ ಎರಡು ಕೋಣೆಗಳಿವೆ. ಕೋಣೆಗಳೊಳಗೆ ಸೊಳ್ಳೆಗಳು ಬಾರದಂತೆ ತಡೆಯಲು ಈಚೆಗೆ ವ್ಯವಸ್ಥೆ ಮಾಡಲಾಗಿದೆ. ಶ್ವಾನಗಳನ್ನು ಅಪರಾಧ ನಡೆದ ಸ್ಥಳಕ್ಕೆ ಕೊಂಡೊಯ್ಯಲು ವಿಶೇಷ ವಾಹನವೂ ಇದೆ.

ಏನೇನು ತಿನ್ನುತ್ತವೆ

ಬೆಳಿಗ್ಗೆ 9.30ರೊಳಗೆ ಮೊಟ್ಟೆ, ಹಾಲು, ರವೆಗಂಜಿ. ಸಂಜೆ 5ಕ್ಕೆ ಬೀನ್ಸ್‌, ಕ್ಯಾರೆಟ್‌ ಹಾಗೂ ಬೀಟ್‌ರೂಟ್‌ಗಳನ್ನು ಕತ್ತರಿಸಿ ಕೊಡಲಾಗುತ್ತದೆ. ಮಾಂಸ, ಅನ್ನ ಅಥವಾ ರಾಗಿ ಗಂಜಿ ಊಟ. ಇವುಗಳಿಗೆ ನೀಡುವ ಆಹಾರಕ್ಕೆ ಉಪ್ಪು, ಖಾರ, ಸಿಹಿ ಬಳಸುವುದಿಲ್ಲ.

ಶ್ವಾನಗಳ ಕಿವಿ, ಕಣ್ಣು, ಮೂಗು ಹಾಗೂ ಆರೋಗ್ಯವನ್ನು ತಪಾಸಣೆ ಮಾಡುವ ವೈದ್ಯರ ಸಲಹೆಯ ಮೇರೆಗೆ ಅವುಗಳನ್ನು ಶ್ವಾನದಳದಲ್ಲಿ ಉಳಿಸಿಕೊಳ್ಳಲಾಗುತ್ತದೆ. 12–14 ವರ್ಷ ಗರಿಷ್ಠ ವಯಸ್ಸು ಎನ್ನಬಹುದು. 10 ವರ್ಷ ತುಂಬಿರುವ ತುಂಗಾ ಈಗ ಶ್ವಾನದಳದ ಹಿರಿಯ ಸದಸ್ಯೆ.

ಇನ್ನಷ್ಟು ಬಲಿಷ್ಠಗೊಳ್ಳಲಿದೆ ಶ್ವಾನದಳ

‘ದಾವಣಗೆರೆಯ ಶ್ವಾನದಳದಲ್ಲಿ ಶ್ವಾನಗಳನ್ನು ಇಡಲು ಈಗಾಗಲೇ 2 ಕೋಣೆಗಳಿವೆ. ಇನ್ನೆರಡು ಕೋಣೆಗಳನ್ನು ನಿರ್ಮಿಸಲಾಗುತ್ತದೆ. ಇನ್ನೂ ಎರಡು ನಾಯಿಗಳನ್ನು ಸೇರ್ಪಡೆಗೊಳಿಸಿ ಅವುಗಳಿಗೆ ಅಗತ್ಯವಿರುವ ಎಲ್ಲ ಸೌಲಭ್ಯ ನೀಡಲು ಯೋಜನೆ ಮಾಡಲಾಗಿದೆ’ ಎಂದು ಎಸ್‌ಪಿ ಹನುಮಂತರಾಯ ತಿಳಿಸಿದ್ದಾರೆ.

ದಾವಣಗೆರೆಯ ಎಸ್‌ಪಿ ಕಚೇರಿಯಲ್ಲಿ ರಾಜ್ಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಡಾ. ಅಮರ್‌ಕುಮಾರ್‌ ಪಾಂಡೆ ಅವರು ಶ್ವಾನದಳದ ‘ತುಂಗಾ’ಗೆ ಹಾರ ಹಾಕಿ ಮೆಚ್ಚುಗೆ ವ್ಯಕ್ತಪಡಿಸಿದರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ, ಹೆಡ್‌ಕಾನ್‌ಸ್ಟೆಬಲ್‌ ಕೆ.ಎಂ. ಪ್ರಕಾಶ್‌ ಇದ್ದಾರೆ.

‘ಸೂಳೆಕೆರೆ ಗುಡ್ಡದಿಂದ 11 ಕಿ.ಮೀ ಓಡಿ ಕೊಲೆಗಾರನ ಸುಳಿವು ನೀಡಿದ ಪ್ರಕರಣ ತುಂಗಾ ಶ್ವಾನದ ತನಿಖಾ ಕೌಶಲದ ಅತ್ಯುತ್ತಮ ಉದಾಹರಣೆ. ಈ ಸುಳಿವಿನಿಂದಲೇ ಧಾರವಾಡದ ವಿದ್ಯಾಗಿರಿಯಲ್ಲಿ ನಡೆದ ಪಿಸ್ತೋಲ್‌ ಕಳವು ಪ್ರಕರಣದ ಆರೋಪಿಯನ್ನು ಹಿಡಿಯಲೂ ಕಾರಣವಾಯಿತು. ಧಾರವಾಡಕ್ಕೆ ಸಂಬಂಧಿಸಿದ ಇನ್ನೂ 3 ಪ್ರಕರಣಗಳ ತನಿಖೆಗೆ ತುಂಗಾಳ ಈ ಓಟ ಸಹಾಯ ಮಾಡಿದೆ’
-ಹನುಮಂತರಾಯ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT