ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹರಿಹರ: ಹದಿಹರೆಯದವರಲ್ಲಿ ಏಡ್ಸ್ ಪತ್ತೆ, ಇರಲಿ ಎಚ್ಚರ

Published 27 ಜೂನ್ 2024, 16:18 IST
Last Updated 27 ಜೂನ್ 2024, 16:18 IST
ಅಕ್ಷರ ಗಾತ್ರ

ಹರಿಹರ: ‘ಇತ್ತೀಚಿನ ವರ್ಷಗಳಲ್ಲಿ ಹದಿಹರೆಯದ ಯುವಕರಲ್ಲಿ ಏಡ್ಸ್ ಕಂಡು ಬರುತ್ತಿದ್ದು, ಆತಂಕ ಸೃಷ್ಟಿಯಾಗಿದೆ’ ಎಂದು ನಗರದ ಸಾರ್ವಜನಿಕ ಆಸ್ಪತ್ರೆ ಐಸಿಟಿಸಿ ವಿಭಾಗದ ಆಪ್ತ ಸಮಾಲೋಚಕಿ ಶೈಲಜಾ ಪಾಟೀಲ್ ಹೇಳಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಯುವ ರೆಡ್‌ಕ್ರಾಸ್ ಸಮಿತಿ ಮತ್ತು ಸರ್ಕಾರಿ ಆಸ್ಪತ್ರೆಯ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ‘ಎಚ್‌ಐವಿ ಮತ್ತು ಏಡ್ಸ್ ಜಾಗೃತಿ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಕುಟುಂಬದ ಆರ್ಥಿಕ ತೊಂದರೆಯ ಕಾರಣ ಓದನ್ನು ಅರ್ಧಕ್ಕೆ ಸ್ಥಗಿತಗೊಳಿಸಿ ಅಥವಾ ಪೂರ್ಣಗೊಳಿಸಿ ಗ್ರಾಮೀಣ ಭಾಗದಿಂದ ನಗರ, ಮಹಾನಗರಗಳಿಗೆ ಉದ್ಯೋಗಕ್ಕಾಗಿ ವಲಸೆ ಹೋಗುವ ಹದಿಹರೆಯದ ಯುವಕರಲ್ಲಿ ಗಣನೀಯ ಸಂಖ್ಯೆಯವರಲ್ಲಿ ಏಡ್ಸ್ ಪತ್ತೆಯಾಗಿದೆ. ಈ ಹಿಂದೆ ಯುವಕರು ಸೇರಿ ಮಧ್ಯಮ ವಯಸ್ಸಿನ ಪುರುಷರು, ಮಹಿಳೆಯರಲ್ಲಿ ಏಡ್ಸ್ ಕಂಡು ಬರುತ್ತಿತ್ತು. ಆರೋಗ್ಯ ಇಲಾಖೆ ಹಾಗೂ ಸರ್ಕಾರೇತರ ಸಂಘ, ಸಂಸ್ಥೆಗಳ ನಿರಂತರ ಜಾಗೃತಿಯಿಂದ ಆ ವಯಸ್ಸಿನವರಲ್ಲಿ ಏಡ್ಸ್ ಹತೋಟಿಗೆ ಬಂದಿದೆ. ಈಗ ಹದಿಹರೆಯದ ಪುರುಷರಲ್ಲಿ ಏಡ್ಸ್ ಕಂಡು ಬರುತ್ತಿರುವುದು ಆಘಾತಕಾರಿ ವಿಷಯ’ ಎಂದು ಆತಂಕ ವ್ಯಕ್ತಪಡಿಸಿದರು.

‘ಪರಸ್ಥಳಗಳಲ್ಲಿರುವ ಹದಿಹರೆದವರು ಹಾಗೂ ಅವರ ಪೋಷಕರು ಈ ಕುರಿತು ಎಚ್ಚರಿಕೆ ವಹಿಸುವ ಅಗತ್ಯವಿದೆ. ಹದಿಹರೆಯದ ಪುರುಷರನ್ನು ಹಣ ಅಥವಾ ನೌಕರಿಯ ಆಮಿಷ ತೋರಿಸಿ ಸಹಜ ಅಥವಾ ಅಸಹಜ ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಳ್ಳುವ ಪ್ರಕರಣಗಳು ಕಂಡು ಬರುತ್ತಿವೆ. ಇದೇ ಕಾರಣದಿಂದ ಹದಿಹರೆಯದವರು ಏಡ್ಸ್‌ಗೆ ತುತ್ತಾಗುತ್ತಿರುವ ಅನುಮಾನವಿದೆ’ ಎಂದು ಹೇಳಿದರು.

‘ಏಡ್ಸ್ ಸೋಂಕಿತರ ರಕ್ತ ಪಡೆಯುವುದರಿಂದ, ಅಸುರಕ್ಷಿತ ಇಂಜಕ್ಷನ್ ಬಳಕೆ, ಸೋಂಕಿತ ತಾಯಿಯ ಹಾಲನ್ನು ಮಗುವು ಸೇವಿಸುವುದರಿಂದ ಹಾಗೂ ಅಸುರಕ್ಷಿತ ಲೈಂಗಿಕ ಸಂಬಂಧಗಳಿಂದ ಈ ರೋಗಾಣು ಹರಡುತ್ತದೆ. ಸೋಂಕಿತರನ್ನು ಮಾತನಾಡಿಸುವುದರಿಂದ, ಕೈಕುಲುಕುವುದರಿಂದ, ಜೊತೆಯಲ್ಲಿರುವುದರಿಂದ ಈ ರೋಗ ಹರಡುವ ಸಾಧ್ಯತೆ ಇಲ್ಲ. ಏಡ್ಸ್ ಸಂಪೂರ್ಣವಾಗಿ ವಾಸಿ ಮಾಡಲಾಗದು’ ಎಂದು ಹೇಳಿದರು.

‘ಸರ್ಕಾರಿ ಆಸ್ಪತ್ರೆಗಳಲ್ಲಿನ ಎಆರ್‌ಟಿ ಕೇಂದ್ರದಲ್ಲಿ ಉಚಿತ ಔಷಧ ನೀಡಲಾಗುವುದು. ಯಾವುದೋ ಕಾರಣಕ್ಕೆ ಅಥವಾ ಸ್ವಯಂ ತಪ್ಪಿನಿಂದ ಬರುವ ಸೋಂಕಿತರಿಗೆ ಸರ್ಕಾರವು ಪ್ರತಿ ತಿಂಗಳು ಅರ್ಥಿಕ ಸಹಾಯ, ಆಶ್ರಯ ಮನೆಯೊಂದಿಗೆ ಇನ್ನು ಹಲವು ಸೌಲಭ್ಯಗಳನ್ನು ನೀಡುತ್ತಿದೆ’ ಎಂದು ವಿವರಿಸಿದರು.

ವಿದ್ಯಾರ್ಥಿಗಳಿಗೆ ರಕ್ತ ಪರೀಕ್ಷೆ ನಡೆಸಲಾಯಿತು. ಏಡ್ಸ್ ಕುರಿತು ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಗೌರವಧನ ಮತ್ತು ಪ್ರಶಸ್ತಿ ವಿತರಿಸಲಾಯಿತು. ಪ್ರಾಚಾರ್ಯ ಪ್ರೊ.ಎಚ್.ವಿರೂಪಾಕ್ಷಪ್ಪ ಅಧ್ಯಕ್ಷತೆ ವಹಿಸಿದ್ದರು. ಪತ್ರಿಕೋದ್ಯಮ ವಿಭಾಗದ ಅಧ್ಯಾಪಕ ಯತೀಶ್ ಎಲ್.ಕೊಡಾವತ್, ಕನ್ನಡ ವಿಭಾಗದ ಮುಖ್ಯಸ್ಥೆ ಗೌರಮ್ಮ ಎಸ್.ಎಂ, ಅಧ್ಯಾಪಕ ಎಸ್.ಆರ್.ಮಾಲತೇಶ್, ಸರ್ಕಾರಿ ಆಸ್ಪತ್ರೆಯ ತಾಂತ್ರಿಕ ತಜ್ಞ ಟಿಪ್ಪುಸುಲ್ತಾನ್ ಮಾತನಾಡಿದರು.

ವಿದ್ಯಾರ್ಥಿನಿ ಅರ್ಪಿತಾ ಪ್ರಾರ್ಥಿಸಿದರು, ರೆಡ್‌ಕ್ರಾಸ್ ಸಮಿತಿ ಸಂಯೋಜಕ ಅನಂತನಾಗ್ ಎಚ್.ಪಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT