ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶೋಚನೀಯ ಸ್ಥಿತಿಗೆ ಶಿಕ್ಷಣ ವ್ಯವಸ್ಥೆ: ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಬೇಸರ

ಪ್ರತಿಭಟನಾ ಸಮಾವೇಶದಲ್ಲಿ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಬೇಸರ
Published : 24 ಸೆಪ್ಟೆಂಬರ್ 2024, 20:50 IST
Last Updated : 24 ಸೆಪ್ಟೆಂಬರ್ 2024, 20:50 IST
ಫಾಲೋ ಮಾಡಿ
Comments

ದಾವಣಗೆರೆ: ‘ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ ಮೂಲ ಸೌಲಭ್ಯ ಕಲ್ಪಿಸಿ ಶಿಕ್ಷಣ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ಬದಲು, ಸೀಟು ಮಾರಾಟದ ಮೂಲಕ ಸರ್ಕಾರವೇ ವಿದ್ಯಾರ್ಥಿಗಳನ್ನು ಶೋಚನೀಯ ಸ್ಥಿತಿಗೆ ತಳ್ಳುತ್ತಿದೆ. ಈ ರೀತಿ ಜನರಿಗೆ ಮೋಸ ಮಾಡುತ್ತಿದೆ’ ಎಂದು ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಬೇಸರ ವ್ಯಕ್ತಪಡಿಸಿದರು.

ಅಖಿಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಸಂಘಟನೆ (ಎಐಡಿಎಸ್‌ಒ) ಮಂಗಳವಾರ ಹಮ್ಮಿಕೊಂಡಿದ್ದ ‘ಯುಬಿಡಿಟಿ ಕಾಲೇಜು ಉಳಿಸಿ’ ಪ್ರತಿಭಟನಾ ಸಮಾವೇಶದಲ್ಲಿ ಅವರು ಮಾತನಾಡಿದರು.

‘ಶಾಲೆ–ಕಾಲೇಜುಗಳು ಸಮರ್ಪಕ ಸೌಲಭ್ಯಗಳಿಲ್ಲದೇ ಸೊರಗುತ್ತಿವೆ. ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳದೇ ಶಿಕ್ಷಣ ವ್ಯವಸ್ಥೆಯನ್ನು ಹಾಳು ಮಾಡಲಾಗುತ್ತಿದೆ. ನೂತನ ಶಿಕ್ಷಣ ನೀತಿಯ ವಿರುದ್ಧ ನಡೆದ ಚಳವಳಿಯ ಮಾದರಿಯಲ್ಲಿ ಯುಬಿಡಿಟಿ ಕಾಲೇಜು ರಕ್ಷಣೆಗೆ ಹೋರಾಟ ಮಾಡಬೇಕು’ ಎಂದು ಸಲಹೆ ನೀಡಿದರು.

‘ಸರ್ಕಾರಿ ಕಾಲೇಜುಗಳಲ್ಲಿ ಪೇಮೆಂಟ್‌ ಕೋಟಾ ಎಂಬ ಕೆಟ್ಟ ಸಂಪ್ರದಾಯ ಆರಂಭಿಸಲಾಗುತ್ತಿದೆ. ಒಂದೇ ತರಗತಿಯಲ್ಲಿ ಓದುವ ವಿದ್ಯಾರ್ಥಿಗಳನ್ನು ಒಡೆದು ಆಳುವ ನೀತಿ ಇದಾಗಿದೆ’ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ  ಪ್ರೊ.ಎ.ಮುರಿಗೆಪ್ಪ ತಿಳಿಸಿದರು.

‘ರಾಜ್ಯದ ಬಡ ಜನರಿಗಾಗಿ ಸರ್ಕಾರ ಐದು ಗ್ಯಾರಂಟಿಗಳನ್ನು ಅನುಷ್ಠಾನಕ್ಕೆ ತಂದಿದೆ. ಉಚಿತ ಶಿಕ್ಷಣವನ್ನು 6ನೇ ಗ್ಯಾರಂಟಿಯಾಗಿ ರೂಪಿಸಿದರೆ ಅನುಕೂಲ’ ಎಂದರು.

‘ಯುಬಿಡಿಟಿ ಕಾಲೇಜಿನ ದುಃಸ್ಥಿತಿ ಬೇಸರ ಮೂಡಿಸಿದೆ. ರಾಜ್ಯದ ಏಕೈಕ ತಾಂತ್ರಿಕ ವಿಶ್ವವಿದ್ಯಾಲಯ ಕಾಲೇಜು ಪ್ರವೇಶಾತಿಗೆ ಹೆಚ್ಚಿನ ಪ್ರಮಾಣದ ಶುಲ್ಕ ನಿಗದಿ ಮಾಡಿದ್ದು ಸರಿಯಲ್ಲ’ ಎಂದು ಡಿಆರ್‌ಎಂ ವಿಜ್ಞಾನ ಪದವಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ.ಕೆ.ಎಸ್.ಈಶ್ವರಪ್ಪ ಬೇಸರ ವ್ಯಕ್ತಪಡಿಸಿದರು.

‘ಅಹಿಂದ ಪರ ಎಂದು ಹೇಳಿಕೊಳ್ಳುವ ಮುಖ್ಯಮಂತ್ರಿ, ವಿದ್ಯಾರ್ಥಿಗಳ ಕೂಗು ಆಲಿಸಬೇಕು. ಶಾಸಕ ಶಾಮನೂರು ಶಿವಶಂಕರಪ್ಪ ಇತ್ತ ಗಮನ ಹರಿಸಬೇಕು’ ಎಂದರು.

ಯುಬಿಡಿಟಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಸುರೇಶ್ ಚಂದ್ರ ಮೋಹನ್, ಎಐಡಿಎಸ್ಒ ರಾಜ್ಯ ಘಟಕದ ಖಜಾಂಚಿ ಸುಭಾಷ್ ಬೆಟ್ಟದಕೊಪ್ಪ, ಕಾರ್ಯದರ್ಶಿ ಮಹಾಂತೇಶ್, ಜಿಲ್ಲಾ ಘಟಕದ ಅಧ್ಯಕ್ಷೆ ಪೂಜಾ ನಂದಿಹಳ್ಳಿ, ಕಾರ್ಯದರ್ಶಿ ಟಿ.ಎಸ್‌.ಸುಮನ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT