ಭಾನುವಾರ, ಏಪ್ರಿಲ್ 2, 2023
23 °C
ಗುರುವಾರ ಮೂರು ಹಸು, ಎರಡು ಎತ್ತುಗಳು ಬಲಿ

ಚರ್ಮಗಂಟು ರೋಗ: ಜಿಲ್ಲೆಯಲ್ಲಿ 22 ಜಾನುವಾರು ಸಾವು

ಬಾಲಕೃಷ್ಣ ಪಿ.ಎಚ್‌. Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಜಿಲ್ಲೆಯಾದ್ಯಂತ ಜಾನುವಾರುಗಳಲ್ಲಿ ಉಲ್ಬಣಗೊಳ್ಳುತ್ತಿರುವ ಚರ್ಮಗಂಟು ರೋಗ ಗುರುವಾರ ಮೂರು ಹಸು ಮತ್ತು ಎರಡು ಎತ್ತುಗಳನ್ನು ಬಲಿಪಡೆದಿದೆ. ಕಕಳೆದ ತಿಂಗಳಿಂದ ಜಿಲ್ಲೆಯಲ್ಲಿ ವ್ಯಾಪಿಸುತ್ತಿರುವ ಈ ರೋಗದಿಂದ ಮೃತಪಟ್ಟಿರುವ ಜಾನುವಾರುಗಳ ಸಂಖ್ಯೆ 22ಕ್ಕೇರಿದೆ.

ಇದರಲ್ಲಿ ಅರ್ಧದಷ್ಟು ಜಾನುವಾರುಗಳು ಜಗಳೂರು ತಾಲ್ಲೂಕಿನ ರೈತರದ್ದಾಗಿದೆ.

ಚರ್ಮಗಂಟು ರೋಗ (ಲಂಪಿ ಸ್ಕಿನ್‌ ಡಿಸೀಸ್‌) ಒಂದು ರೀತಿಯ ಅಂಟುರೋಗವಾಗಿದ್ದು, ಜಿಲ್ಲೆಯಲ್ಲಿ ಈ ರೋಗ ಲಕ್ಷಣಗಳು ಕಾಣಿಸಿಕೊಂಡ ಜಾನುವಾರುಗಳ ಸಂಖ್ಯೆ 1,500 ದಾಟಿದೆ. ಶೇ 98ಕ್ಕೂ ಅಧಿಕ ಜಾನುವಾರುಗಳು ಚೇತರಿಸಿಕೊಳ್ಳುತ್ತಿವೆ ಎಂಬ ಮಾಹಿತಿಯಿಂದ ನೆಮ್ಮದಿಯ ನಿಟ್ಟಿಸಿರು ಬಿಟ್ಟಿದ್ದ ರೈತ ಸಮೂಹವು, ಒಂದೇ ದಿನ ಐದು ಜಾನುವಾರುಗಳು ಬಲಿಯಾಗಿರುವ ಆತಂಕಕಾರಿ ಸಂಗತಿಯಿಂದ ಬೆಚ್ಚಿ ಬೀಳುವಂತೆ ಮಾಡಿದೆ.

ಜಗಳೂರು ತಾಲ್ಲೂಕಿನಲ್ಲಿ 6 ಎತ್ತು, 5 ಆಕಳು, ಹರಿಹರ ತಾಲ್ಲೂಕಿನಲ್ಲಿ 6 ಆಕಳು ಮತ್ತು 1 ಎತ್ತು, ದಾವಣಗೆರೆ ತಾಲ್ಲೂಕಿನಲ್ಲಿ 2 ಆಕಳು 1 ಎತ್ತು ಹಾಗೂ ನ್ಯಾಮತಿ ತಾಲ್ಲೂಕಿನಲ್ಲಿ 1 ಎತ್ತು ಸೇರಿದಂತೆ ಒಟ್ಟು 22 ಜಾನುವಾರುಗಳು ಮೃತಪಟ್ಟಿವೆ.

‘ಹಾವೇರಿ, ಗದಗ, ಬೆಳಗಾವಿ ಮತ್ತಿತರ ಜಿಲ್ಲೆಗಳಿಗೆ ಹೋಲಿಸಿದರೆ ನಮಲ್ಲಿ ರೋಗ ಹರಡುವ ವೇಗ ಮತ್ತು ಜಾನುವಾರುಗಳ ಸಾವಿನ ಸಂಖ್ಯೆ ಬಹಳಷ್ಟು ಕಡಿಮೆ ಇದೆ. ರೈತರಿಗೆ ಈ ರೋಗದ ಕುರಿತು ಅಗತ್ಯ ಮಾಹಿತಿ ನೀಡಿ, ಮುನ್ನೆಚ್ಚರಿಕೆ ಕೈಗೊಳ್ಳುವಂತೆ ತಿಳಿಸಲಾಗುತ್ತಿದೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಫಾಗಿಂಗ್‌ ಮೂಲಕ ಸೊಳ್ಳೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕರು ಪಂಚಾಯಿತಿಗಳಿಗೆ ಸೂಚನೆ ನೀಡಿದ್ದಾರೆ’ ಎಂದು ಹರಿಹರದ ಪಶುವೈದ್ಯಕೀಯ ನಿರೀಕ್ಷಕ ಡಾ.ರವಿ ಮಾಹಿತಿ ನೀಡಿದರು.

‘ಜಾನುವಾರುಗಳಿಗೆ ಜ್ವರಬಂದು ಚರ್ಮಗಂಟು ಕಟ್ಟುವ ರೋಗವು ಎಲ್ಲ ಕಡೆ ಹರಡುತ್ತಿದೆ ಎಂದು ಅಲ್ಲಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ. ನಮ್ಮ ಮನೆಯಲ್ಲಿ ಒಂದು ಎಮ್ಮೆ, ಐದು ಹಸುಗಳಿವೆ. ನಮ್ಮ ಗ್ರಾಮದಲ್ಲಿ 500ಕ್ಕೂ ಅಧಿಕ ಜಾನುವಾರುಗಳಿವೆ. ಈವರೆಗೆ ಈ ರೋಗದ ಬಗ್ಗೆ ಯಾವ ಅಧಿಕಾರಿಗಳೂ ಮಾಹಿತಿ ನೀಡಿಲ್ಲ. ಮುನ್ನೆಚ್ಚರಿಕೆ ಕ್ರಮಗಳ ವಿವರ ನೀಡಿಲ್ಲ. ಲಸಿಕೆ ನೀಡುವವರೂ ಬಂದಿಲ್ಲ’ ಎಂದು ಹರಿಹರ ತಾಲ್ಲೂಕಿನ ಮಲ್ಲನಾಯಕನಹಳ್ಳಿಯ ರೈತ ಕುಮಾರ್‌ ದೂರಿದರು.

ಚರ್ಮಗಂಟು ರೋಗದಿಂದ ಮೃತಪಡುವ ಎತ್ತಿನ ಮಾಲೀಕರಿಗೆ ₹ 30,000, ಆಕಳುಗಳ ಮಾಲೀಕರಿಗೆ ₹ 20,000 ಪರಿಹಾರ ದೊರೆಯಲಿದೆ ಎಂದು ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಉಪ ನಿರ್ದೇಶಕ ಡಾ. ಚಂದ್ರಶೇಖರ್‌ ಸುಂಕದ ತಿಳಿಸಿದ್ದಾರೆ.

ಆದರೆ, ಈ ಮೊತ್ತ ಲಕ್ಷಾಂತರ ಮೊತ್ತದ ಎತ್ತು, ಆಕಳು ಕೊಂಡುಕೊಳ್ಳುವ ರೈತರಿಗೆ ಅತ್ಯಲ್ಪ ಪರಿಹಾರ ಮೊತ್ತವು ಯಾವುದೇ ನೆರವಿಗೆ ಬರುವುದಿಲ್ಲ ಎಂದು ರೈತರು ದೂರಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು