ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಡಾಳ್‌ಗೆ ನಿರೀಕ್ಷಣಾ ಜಾಮೀನು: ಚನ್ನೇಶಪುರ ಗ್ರಾಮದಲ್ಲಿ ಮೆರವಣಿಗೆ

Last Updated 7 ಮಾರ್ಚ್ 2023, 18:20 IST
ಅಕ್ಷರ ಗಾತ್ರ

ಚನ್ನಗಿರಿ (ದಾವಣಗೆರೆ ಜಿಲ್ಲೆ): ನಿರೀಕ್ಷಣಾ ಜಾಮೀನು ಪಡೆದಿರುವ ಲಂಚ ಪ್ರಕರಣದ ಆರೋಪಿ, ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ಅವರಿಗೆ ಮಂಗಳವಾರ ಮಧ್ಯಾಹ್ನ ಕ್ಷೇತ್ರದಲ್ಲಿ ಅಭಿಮಾನಿಗಳಿಂದ ಅದ್ಧೂರಿ ಸ್ವಾಗತ ದೊರೆಯಿತು.

ಕೆಎಸ್‌ಡಿಎಲ್‌ ಗುತ್ತಿಗೆ ಸಂಬಂಧದ ಲಂಚ ಪಡೆಯುವಾಗ ಪುತ್ರ ಪ್ರಶಾಂತ್‌, ಮಾರ್ಚ್‌ 2ರಂದು ಸಿಕ್ಕಬಿದ್ದ ಪ್ರಕರಣದ ಮೊದಲ ಆರೋಪಿಯಾಗಿರುವ ವಿರೂಪಾಕ್ಷಪ್ಪ, ಹೈಕೋರ್ಟ್‌ನಿಂದ ನಿರೀಕ್ಷಣಾ ಜಾಮೀನು ದೊರೆತ ಹಿನ್ನೆಲೆಯಲ್ಲಿ ಚನ್ನಗಿರಿ ತಾಲ್ಲೂಕಿನ ಚನ್ನೇಶಪುರ ಗ್ರಾಮದಲ್ಲಿ ಕಾಣಿಸಿಕೊಂಡರು. ಅವರ ಕಾರ್‌ನಲ್ಲಿ ಮೆರವಣಿಗೆ ಮೂಲಕ ಮನೆವರೆಗೆ ಕರೆದೊಯ್ದ ಅಭಿಮಾನಿಗಳು, ಜೈಕಾರ ಕೂಗಿ, ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

ಕುಟುಂಬದ ವಿರುದ್ಧ ಷಡ್ಯಂತ್ರ: ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮಾಡಾಳ್‌ ವಿರೂಪಾಕ್ಷಪ್ಪ, ‘ನಮ್ಮ ಕುಟುಂಬದ ವಿರುದ್ಧ ಷಡ್ಯಂತ್ರ ರೂಪಿಸಿ ಇಲ್ಲಸಲ್ಲದ ಆರೋಪ ಹೊರಿಸಲಾಗಿದೆ. ನಮ್ಮ ಭಾಗದಲ್ಲಿ ಅಡಿಕೆ ತೋಟ ಹೊಂದಿರುವವರ ಮನೆಗಳಲ್ಲಿ ಕೋಟಿಗಟ್ಟಲೆ ಹಣ ಇರುವುದು ಸಾಮಾನ್ಯ. ನಮ್ಮ ಅಡಿಕೆ ತೋಟದಿಂದ ಬಂದ ಹಣವನ್ನು ಮನೆಯಲ್ಲಿಟ್ಟಿದ್ದೆವು. ಅದನ್ನೇ ಲೋಕಾಯುಕ್ತ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ. ಸೂಕ್ತ ದಾಖಲೆ ನೀಡಿ ಆ ಹಣವನ್ನು ವಾಪಸ್‌ ಪಡೆಯುತ್ತೇವೆ’ ಎಂದರು.

‘ನಾನು ಯಾವುದೇ ತಪ್ಪು ಮಾಡಿಲ್ಲ’ ಎಂದು ಸುದ್ದಿಗಾರರೆದುರೇ ಕಣ್ಣೀರು ಸುರಿಸಿದ ವಿರೂಪಾಕ್ಷಪ್ಪ, ‘ಲೋಕಾಯುಕ್ತರು ದಾಳಿ ಮಾಡುವುದಕ್ಕಿಂತ ಅರ್ಧ ಗಂಟೆ ಮೊದಲು ಅಪರಿಚಿತನೊಬ್ಬ ನಮ್ಮ ಕಚೇರಿಯಲ್ಲಿ ಹಣ ಇರಿಸಿ ಹೋಗಿದ್ದ. ಪುತ್ರ ಅದನ್ನು ನೋಡಿರಲೂ ಇಲ್ಲ, ಮುಟ್ಟಿರಲೂ ಇಲ್ಲ. ನಂತರ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು, ಬಲವಂತವಾಗಿ ಆ ಹಣವನ್ನು ಮಗನ ಕೈಗೆ ಕೊಟ್ಟು ಪ್ರಕರಣ ದಾಖಲಿಸಿದ್ದಾರೆ’ ಎಂದರು.

‘ಪ್ರಕರಣ ನಡೆದ ನಂತರ ನಾನು ತಲೆಮರೆಸಿಕೊಂಡಿಲ್ಲ. ಚನ್ನೇಶಪುರದ ಮನೆಯಲ್ಲೇ ಇದ್ದೆ. ಬೇಸರದಿಂದ ಮೊಬೈಲ್ ಸ್ವಿಚ್‌ ಆಫ್‌ ಮಾಡಿದ್ದೆ’ ಎಂದು ತಿಳಿಸಿದರು.

‘ಪಕ್ಷ ನನ್ನ ವಿರುದ್ಧ ಯಾವುದೇ ಕ್ರಮ ಕೈಗೊಂಡರೂ ಸ್ವಾಗತಿಸುತ್ತೇನೆ. ಸೂಕ್ತ ಕಾನೂನು ಹೋರಾಟ ಮಾಡಿ ಆರೋಪಗಳಿಂದ ಮುಕ್ತನಾಗುತ್ತೇನೆ. ನನ್ನ ವಿರುದ್ಧ ಷಡ್ಯಂತ್ರದಿಂದ ಆರೋಪ ಹೊರಿಸಲಾಗಿದೆ. ನಾನೇನೂ ಅಪರಾಧಿಯಲ್ಲ. ದೂರು ನೀಡಿರುವ ಕಷ್ಯಪ್‌ ಯಾರು ಎಂಬುದೇ ನನಗೆ ಗೊತ್ತಿಲ್ಲ’ ಎಂದು ಸಮರ್ಥಿಸಿಕೊಂಡರು.

‘ನಾನು ತಪ್ಪು ಮಾಡಿಲ್ಲ. ಬಿಜೆಪಿ ಬಿಡುವ ಪ್ರಶ್ನೆಯೇ ಇಲ್ಲ. ಬಿಜೆಪಿ ನನಗೆ ತಾಯಿ ಇದ್ದಂತೆ’ ಎಂದ ಅವರು, ‘2020ರಲ್ಲಿ ನಾನು ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಳ್ಳುವ ಮೊದಲು ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮ (ಕೆಎಸ್‌ಡಿಎಲ್) ₹ 750 ಕೋಟಿ ವಹಿವಾಟು ನಡೆಸಿ, ಕೇವಲ ₹ 40 ಕೋಟಿ ಲಾಭದಲ್ಲಿತ್ತು. ನಾನು ಅಧ್ಯಕ್ಷನಾದ ಬಳಿಕ ಎರಡೂವರೆ ವರ್ಷಗಳ ಅವಧಿಯಲ್ಲಿ ₹ 1,350 ಕೋಟಿ ವಹಿವಾಟು ನಡೆಸಿ, ₹ 240 ಕೋಟಿ ಲಾಭ ಬರುವಂತೆ ಮಾಡಿದ್ದೇನೆ. ಸಂಸ್ಥೆ ಪಾರದರ್ಶಕ ಆಡಳಿತಕ್ಕೆ ಸಾಕ್ಷಿಯಾಗಿದೆ. ಅವ್ಯವಹಾರ ಮಾಡಿದ್ದರೆ ₹ 240 ಕೋಟಿ ಲಾಭ ಗಳಿಸಲು ಸಾಧ್ಯವಾಗುತ್ತಿತ್ತೇ’ ಎಂದು ಪ್ರಶ್ನಿಸಿದರು.

‘ಮೆರವಣಿಗೆ ನಡೆಸಿ ಸಂಭ್ರಮಿಸದಂತೆ ಬಿಜೆಪಿ ರಾಜ್ಯ ಮುಖಂಡರು ಸೂಚಿಸಿದ್ದರು. ನಾನು ಮೆರವಣಿಗೆ ಮಾಡುವಂತೆ ಯಾರನ್ನೂ ಕೋರಿಲ್ಲ. ನನ್ನ ಅಭಿಮಾನಿಗಳೇ ಮೆರವಣಿಗೆ ಆಯೋಜಿಸಿ ಸ್ವಾಗತಿಸಿದ್ದಾರೆ’ ಎಂದು ಅವರು ಹೇಳಿದರು.

‘ಮಿಸ್ಸಿಂಗ್‌’ ಪೋಸ್ಟರ್‌ ಅಂಟಿಸಿದ ಯುವ ಕಾಂಗ್ರೆಸ್‌

ದಾವಣಗೆರೆ: ಲಂಚ ಪ್ರಕರಣದಲ್ಲಿ ಮೊದಲ ಆರೋಪಿ ಆಗಿರುವ ಮಾಡಾಳ್‌ ವಿರೂಪಾಕ್ಷಪ್ಪ ನಾಪತ್ತೆಯಾಗಿದ್ದಾರೆ ಎಂದು ಸೋಮವಾರ ರಾತ್ರಿ ಜಿಲ್ಲಾ ಯುವಕಾಂಗ್ರೆಸ್‌ ಪದಾಧಿಕಾರಿಗಳು ನಗರದಲ್ಲಿ ಅಲ್ಲಲ್ಲಿ ಪೋಸ್ಟರ್‌ ಅಂಟಿಸಿದರು. ಇದು ಗೊತ್ತಾಗುತ್ತಿದ್ದಂತೆ ಪದಾಧಿಕಾರಿಗಳನ್ನು ಪೊಲಿಸರು ವಶಕ್ಕೆ ತೆಗೆದುಕೊಂಡರು.

‘ನಾಪತ್ತೆ, ಮಾಡಾಳ್‌ ವಿರೂಪಾಕ್ಷಪ್ಪ, ಎ–1 ಆರೋಪಿ, ಮೈಸೂರು ಸ್ಯಾಂಡಲ್‌ ಸೋಪ್‌ ಹಗರಣ, ಮುಖ್ಯಮಂತ್ರಿ ಕಚೇರಿಯಲ್ಲಿ ಕಂಡು ಬಂದಿದ್ದೇ ಕೊನೆ. ಮಾರ್ಚ್‌ 4ರಿಂದ ಕಾಣುತ್ತಿಲ್ಲ. ದಯವಿಟ್ಟು ಇವರನ್ನು ಪತ್ತೆ ಹಚ್ಚಲು ಸಹಕರಿಸಿ. 100ಕ್ಕೆ ಕರೆ ಮಾಡಿ’ ಎಂದು ಬರಹಗಳಿದ್ದ ಪೋಸ್ಟರ್‌ಗಳನ್ನು ದುರ್ಗಾಂಬಿಕಾ ದೇವಸ್ಥಾನದ ಸುತ್ತಮುತ್ತ, ಮಿಲ್ಲತ್‌ ಕಾಲೊನಿ, ಆಜಾದ್‌ನಗರ, ಬಸ್‌ ನಿಲ್ದಾಣ, ಎವಿಕೆ ರೋಡ್‌, ರಾಂ ಆ್ಯಂಡ್‌ ಕೊ ಸರ್ಕಲ್‌ ಮತ್ತಿತರ ಕಡೆಗಳಲ್ಲಿ ಯುವ ಕಾಂಗ್ರೆಸ್‌ ಜಿಲ್ಲಾ ಅಧ್ಯಕ್ಷ ನಿಖಿಲ್‌ ಕೊಂಡಜ್ಜಿ, ಉಪಾಧ್ಯಕ್ಷ ಎಲ್‌.ಎಚ್‌. ಸಾಗರ್‌, ಖಾಲಿದ್‌ ಅಹಮದ್‌, ಹಾಲೇಶ್‌, ಅವಿನಾಶ್‌, ಬಾಷಾ, ಚಿರಂಜೀವಿ, ಶಿವರಾಜ್‌ ಮತ್ತಿತರರು ಅಂಟಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT