ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾ ಕ್ರೀಡಾಂಗಣಕ್ಕೆ ಬೇಕು ವೃತ್ತಿಪರತೆ ಸ್ಪರ್ಶ: ಅಥ್ಲೀಟ್‌ಗಳಿಗೆ ತೊಂದರೆ

ಸಿಂಥೆಟಿಕ್‌ ಟ್ರ್ಯಾಕ್‌ ಇಲ್ಲದೇ ಅಥ್ಲೀಟ್‌ಗಳ ಅಭ್ಯಾಸಕ್ಕೆ ತೊಂದರೆ
Last Updated 27 ಮೇ 2022, 4:52 IST
ಅಕ್ಷರ ಗಾತ್ರ

ದಾವಣಗೆರೆ: ನಗರದ ಹೃದಯ ಭಾಗದಲ್ಲಿರುವ ಜಿಲ್ಲಾ ಕ್ರೀಡಾಂಗಣದಲ್ಲಿ ಮೂಲಸೌಲಭ್ಯಗಳ ಜೊತೆಗೆ ‘ವೃತ್ತಿಪರತೆ’ಯ ಕೊರತೆಯಿಂದಾಗಿ ರಾಜ್ಯ–ರಾಷ್ಟ್ರಮಟ್ಟದಲ್ಲಿ ಸಾಧನೆ ತೋರುವಲ್ಲಿ ಸ್ಥಳೀಯ ಕ್ರೀಡಾಪಟುಗಳು ಹಿಂದೆ ಬೀಳುವಂತಾಗಿದೆ. ದಿನಾಲೂ ಬೆಳಿಗ್ಗೆ ಹಾಗೂ ಸಂಜೆ ಇಲ್ಲಿ ವಿವಿಧ ಕ್ರೀಡಾ ಚಟುವಟಿಕೆ ನಡೆಯುತ್ತಿವೆಯಾದರೂ ಮೈದಾನದಲ್ಲಿ ವೃತ್ತಿಪರತೆ ಕಾಯ್ದುಕೊಳ್ಳದಿರುವುದರಿಂದ ಕ್ರೀಡಾಪಟುಗಳಿಗೆ ಸಾಧನೆಯ ಮೆಟ್ಟಿಲೇರುವುದು ಕಷ್ಟಕರವಾಗುತ್ತಿದೆ.

ಒಂದು ಕಡೆ ಯುವಕರು ಟೆನಿಸ್‌ ಬಾಲ್‌ನಲ್ಲಿ ಮನಬಂದಂತೆ ಕ್ರಿಕೆಟ್‌ ಆಡುತ್ತಿರುತ್ತಾರೆ. ಇನ್ನೊಂದೆಡೆ ಫುಟ್ಬಾಲ್‌ ಆಡುವವರ ದಂಡು; ಮಾರ್ಕಿಂಗ್‌ ಇಲ್ಲದ ಕಚ್ಚಾ ಮೈದಾನದಲ್ಲೇ ಕಬಡ್ಡಿ–ಕೊಕ್ಕೊ ಆಡುವವರು. ಮತ್ತೊಂದೆಡೆ ಟ್ರ್ಯಾಕ್‌ನಲ್ಲೇ ವಾಕಿಂಗ್‌ ಮಾಡುವವರ ಗುಂಪು. ಅತ್ತಿಂದಿತ್ತ ಓಡಾಡುತ್ತಿರುವ ಬೀದಿ ನಾಯಿಗಳು... ಇಂತಹ ಅಡೆತಡೆಗಳ ನಡುವೆಯೇ ಕಿತ್ತು ಹೋಗಿರುವ ಮಣ್ಣಿನ ಟ್ರ್ಯಾಕ್‌ನಲ್ಲಿ ಓಡಲು ಪ್ರಯಾಸ ಪಡುತ್ತಿರುವ ಅಥ್ಲೀಟ್‌ಗಳು... ಇದು ಜಿಲ್ಲಾ ಕ್ರೀಡಾಂಗಣದಲ್ಲಿ ಕಂಡುಬರುವ ಚಿತ್ರಣ.

ಕ್ರೀಡಾಂಗಣವು ನಗರದ ಮಧ್ಯದಲ್ಲಿ ಇರುವುದರಿಂದ ಇಲ್ಲಿ ಯಾವಾಗಲೂ ಜನಸಂದಣಿ ಹೆಚ್ಚಿರುತ್ತದೆ. ಆರೋಗ್ಯಕ್ಕಾಗಿ ವಾಕಿಂಗ್‌–ಜಾಗಿಂಗ್‌ ಮಾಡಲು ಬರುವವರ ಸಂಖ್ಯೆಯೂ ಹೆಚ್ಚಿರುತ್ತಾರೆ. ಜೊತೆಗೆ ಇಲ್ಲಿ ಕ್ರಿಕೆಟ್‌, ಕಬಡ್ಡಿ, ಕೊಕ್ಕೊ, ಅಥ್ಲೆಟಿಕ್ಸ್‌ನ ವೃತ್ತಿಪರ ಕ್ರೀಡಾಪಟುಗಳೂ ಇಲ್ಲಿಯೇ ಅಭ್ಯಾಸ ಮಾಡುತ್ತಿರುತ್ತಾರೆ. ಶಾಲಾ–ಕಾಲೇಜಿನ ವಿದ್ಯಾರ್ಥಿಗಳೂ ಇಲ್ಲಿಗೆ ಬಂದು ತಾಲೀಮು ಮಾಡುತ್ತಾರೆ. ಜಾಗ ಇಕ್ಕಟ್ಟಾಗುವುದರಿಂದ ವೃತ್ತಿಪರವಾಗಿ ಅಭ್ಯಾಸ ಮಾಡಲು ಹಲವು ಅಡೆತಡೆಗಳಿವೆ ಎಂದು ಕ್ರೀಡಾಪಟುಗಳು ದೂರುತ್ತಾರೆ.

ಸಿಗದ ಸಿಂಥೆಟಿಕ್‌ ಟ್ರ್ಯಾಕ್‌ ಭಾಗ್ಯ: ಅಥ್ಲೀಟ್‌ಗಳಿಗೆ ಅಭ್ಯಾಸ ಮಾಡಲು ಅನುಕೂಲ ಕಲ್ಪಿಸಬೇಕು ಎಂದು ಸುಮಾರು ಹತ್ತು ವರ್ಷಗಳ ಹಿಂದೆ ಜಿಲ್ಲಾ ಕ್ರೀಡಾಂಗಣದಲ್ಲಿ ಸಿಂಥೆಟಿಕ್ಸ್‌ ಟ್ರ್ಯಾಕ್‌ ನಿರ್ಮಿಸಲು ಅನುದಾನ ಮಂಜೂರಾಗಿತ್ತು. ಆದರೆ, ಕ್ರಿಕೆಟ್‌ ಆಡುವವರು ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಅದು ನನೆಗುದಿಗೆ ಬಿದ್ದು ಹಣ ವಾಪಸ್‌ ಹೋಗಿದೆ. ಇದರಿಂದಾಗಿ ಜಿಲ್ಲೆಯ ಕ್ರೀಡಾಪಟುಗಳಿಗೆ ಇನ್ನೂ ಸಿಂಥೆಟಿಕ್ ಟ್ರ್ಯಾಕ್‌ನಲ್ಲಿ ಅಭ್ಯಾಸ ಮಾಡುವ ಭಾಗ್ಯ ಒಲಿದು ಬಂದಿಲ್ಲ.

‘ಮಣ್ಣಿನ ಟ್ರ್ಯಾಕ್‌ ಇರುವುದರಿಂದ ಜೋರಾಗಿ ಮಳೆ ಬಂದಾಗ ಒಂದೆರಡು ದಿನ ಓಡಲು ಸಾಧ್ಯವಾಗುವುದಿಲ್ಲ. ರನ್ನಿಂಗ್‌ ಶೂ ಹಾಕಿಕೊಂಡ ಮಣ್ಣಿನ ಟ್ರ್ಯಾಕ್‌ನಲ್ಲಿ ಅಭ್ಯಾಸ ಮಾಡಿದಾಗ ಹೆಚ್ಚಿನ ಶ್ರಮ ಹಾಕಬೇಕಾಗುತ್ತದೆ. ಕಾಲು ನೋವು ಬರುತ್ತದೆ. ಮಣ್ಣಿನ ಟ್ರ್ಯಾಕ್‌ನಲ್ಲಿ ಅಭ್ಯಾಸ ಮಾಡುತ್ತಿರುವ ನಾವು ಸಿಂಥೆಟಿಕ್‌ ಟ್ರ್ಯಾಕ್‌ನಲ್ಲಿ ನಡೆಯುವ ರಾಜ್ಯ ಹಾಗೂ ರಾಷ್ಟ್ರಮಟ್ಟದ ಕ್ರೀಡಾಕೂಟಗಳಲ್ಲಿ ಪಾಲ್ಗೊಂಡಾಗ ಸ್ಪರ್ಧೆ ಒಡ್ಡುವುದು ಕಷ್ಟವಾಗುತ್ತಿದೆ. ಜಿಲ್ಲಾ ಕ್ರೀಡಾಂಗಣದಲ್ಲೂ ಸಿಂಥೆಟಿಕ್‌ ಟ್ರ್ಯಾಕ್‌ ನಿರ್ಮಿಸಿದರೆ ಜಿಲ್ಲೆಯ ಅಥ್ಲೀಟ್‌ಗಳಿಗೆ ಸಾಧನೆ ಮಾಡಲು ಅನುಕೂಲವಾಗಲಿದೆ’ ಎಂದು ಮೆಳ್ಳೇಕಟ್ಟೆಯ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರೂ ಆಗಿರುವ ಹಿರಿಯ ಅಥ್ಲೀಟ್‌ ಎಸ್‌.ಕೆ. ಪುಟ್ಟನಗೌಡ ಅಭಿಪ್ರಾಯಪಡುತ್ತಾರೆ. ಸರ್ಕಾರಿ ಕ್ರೀಡಾಕೂಟಗಳಲ್ಲಿ 400 ಮೀಟರ್‌ ಓಟದಲ್ಲಿ ಪದಕಗಳನ್ನು ಗೆದ್ದುಕೊಂಡಿರುವ ಪುಟ್ಟನಗೌಡ ಅವರು ಹಲವು ವರ್ಷಗಳಿಂದ ಈ ಮೈದಾನದಲ್ಲೇ ಅಭ್ಯಾಸ ಮಾಡುತ್ತಿದ್ದಾರೆ.

ಮೂಲಸೌಲಭ್ಯ ಕೊರತೆ:
ಕ್ರೀಡಾಂಗಣಕ್ಕೆ ಬರುವ ಕ್ರೀಡಾಪಟುಗಳಿಗೆ ಕುಡಿಯಲು ನೀರಿನ ಸೌಲಭ್ಯ ಇಲ್ಲ. ಶೌಚಾಲಯಗಳು ಇವೆಯಾದರೂ ಸಮರ್ಪಕವಾಗಿ ನಿರ್ವಹಣೆ ಮಾಡದೇ ಇರುವುದರಿಂದ ಹಲವು ಬಾರಿ ಬಂದ್‌ ಇರುತ್ತವೆ. ಕ್ರೀಡಾಪಟುಗಳು ಹೊರಗಡೆ ಹಣ ನೀಡಿ ಸಾರ್ವಜನಿಕ ಶೌಚಾಲಯಕ್ಕೆ ತೆರಳಬೇಕಾಗುತ್ತಿದೆ. ಮೈದಾನದಲ್ಲಿ ಬೀದಿ ನಾಯಿಗಳ ಕಾಟವೂ ಹೆಚ್ಚಾಗುತ್ತಿದೆ. ಮೈದಾನದಲ್ಲಿ ಕಾವಲು ಸಿಬ್ಬಂದಿ ಇಲ್ಲದೇ ಇರುವುದರಿಂದ ಶಾಲಾ–ಕಾಲೇಜಿನ ‘ಜೋಡಿ ಹಕ್ಕಿ’ಗಳು ಗ್ಯಾಲರಿಗಳಲ್ಲಿ ಕುಳಿತು ಅಸಭ್ಯವಾಗಿ ವರ್ತಿಸುತ್ತಿರುತ್ತಾರೆ. ಕ್ರೀಡಾ ಅಭ್ಯಾಸ ಮಾಡಲು ಬರುವ ಮಕ್ಕಳು ಇದರಿಂದ ಮುಜುಗರ ಪಡುವಂತಾಗಿದೆ. ಹೊನಲು–ಬೆಳಗಿನಲ್ಲಿ ಕ್ರೀಡಾಕೂಟ ಆಯೋಜಿಸಲು ಸಮರ್ಪಕವಾಗಿ ಫ್ಲಡ್‌ ಲೈಟ್‌ ವ್ಯವಸ್ಥೆ ಇಲ್ಲ. ಯಾವುದೇ ಮುನ್ಸೂಚನೆ ನೀಡದೇ ಪೊಲೀಸ್‌ ನೇಮಕಾತಿ ದೈಹಿಕ ಪರೀಕ್ಷೆಯನ್ನು ಮೈದಾನದಲ್ಲಿ ನಡೆಸುವುದರಿಂದ ಅಭ್ಯಾಸ ಮಾಡಲು ಬರುವ ಪುಟ್ಟ ಮಕ್ಕಳನ್ನು ಮರಳಿ ಕಳುಹಿಸಿಕೊಡಲು ತೊಂದರೆಯಾಗುತ್ತಿದೆ ಎಂದು ಕ್ರೀಡಾಪಟುಗಳು ಹಾಗೂ ತರಬೇತುದಾರರು ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುತ್ತಾರೆ.

ಕ್ರೀಡಾಂಗಣದ ಗ್ಯಾಲರಿ ಬಳಿ ಹುಲ್ಲು–ಕಳೆ ಗಿಡಗಳು ಬೆಳೆಯುತ್ತಿವೆ. ಕೆಲವೆಡೆ ಮಳೆನೀರು ಚರಂಡಿಯ ಚಪ್ಪಡಿ ಕಲ್ಲುಗಳು ಕಿತ್ತುಹೋಗಿದ್ದು, ಬಾಯ್ತೆರೆದುಕೊಂಡಿರುವುದು ಮೈದಾನದ ನಿರ್ವಹಣೆಯ ಕೊರತೆಗೆ ಸಾಕ್ಷಿಯಾಗಿದೆ.

ಶುಲ್ಕ ಹೆಚ್ಚಳಕ್ಕೆ ಆಕ್ಷೇಪ

ಜಿಲ್ಲಾ ಕ್ರೀಡಾಂಗಣದಲ್ಲಿ ಕ್ರೀಡಾಕೂಟ ಆಯೋಜಿಸಲು ಪಡೆಯುವ ಶುಲ್ಕವನ್ನು ದಿನಕ್ಕೆ ₹ 750ರಿಂದ ₹ 7,500ಕ್ಕೆ ಹೆಚ್ಚಿಸಲು ಮುಂದಾಗಿರುವ ಸರ್ಕಾರದ ಕ್ರಮಕ್ಕೆ ಕ್ರೀಡಾಪಟುಗಳು ಹಾಗೂ ತರಬೇತುದಾರರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

‘ಪ್ರಧಾನಿ ನರೇಂದ್ರ ಮೋದಿ ಅವರು ಖೇಲೋ ಇಂಡಿಯಾ ಹೆಸರಿನಲ್ಲಿ ಕ್ರೀಡೆಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ಆದರೆ, ರಾಜ್ಯ ಸರ್ಕಾರ ಕ್ರೀಡಾಂಗಣಗಳ ಬಾಡಿಗೆ ದರವನ್ನು ಹೆಚ್ಚಿಸಲು ಮುಂದಾಗುವ ಮೂಲಕ ಕ್ರೀಡಾಪಟುಗಳನ್ನು ಹಾಗೂ ಕ್ರೀಡಾ ಆಯೋಜಕರಿಗೆ ತಡೆಯೊಡ್ಡುತ್ತಿದೆ’ ಎಂದು ಜೆಜೆಎಂ ವೈದ್ಯಕೀಯ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಗೋಪಾಲಕೃಷ್ಣ ಕೆ.ಎನ್‌. ಬೇಸರ ವ್ಯಕ್ತಪಡಿಸಿದರು.

‘ಹಲವು ಶಾಲಾ–ಕಾಲೇಜುಗಳಲ್ಲಿ ಸರಿಯಾದ ಮೈದಾನಗಳೇ ಇಲ್ಲ. ಅವರೆಲ್ಲ ಜಿಲ್ಲಾ ಕ್ರೀಡಾಂಗಣಕ್ಕೆ ಬಂದು ಕ್ರೀಡಾಕೂಟ ಆಯೋಜಿಸುತ್ತಿದ್ದರು. ಶುಲ್ಕ ಹೆಚ್ಚಿಸುವುದರಿಂದ ಅದನ್ನು ಭರಿಸಲಾಗದೇ ಯಾವುದೋ ಸಣ್ಣ–ಪುಟ್ಟ ಮೈದಾನದಲ್ಲಿ ಆಯೋಜಿಸುತ್ತಾರೆ. ಇದರಿಂದ ಕ್ರೀಡಾಪಟುಗಳು ಗಾಯಗೊಳ್ಳುತ್ತಾರೆ’ ಎಂದು ಅವರು ಆತಂಕ ವ್ಯಕ್ತಪಡಿಸಿದರು.

‘ಜಿಲ್ಲಾ ಕ್ರೀಡಾಂಗಣವನ್ನು ಹಲವು ವರ್ಷಗಳಿಂದ ಅಭಿವೃದ್ಧಿಗೊಳಿಸಿಲ್ಲ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯೂ ಮೈದಾನದ ಅಭಿವೃದ್ಧಿಗೆ ಆಸಕ್ತಿ ತೋರಿಸುತ್ತಿಲ್ಲ. ಕ್ರೀಡಾಪಟುಗಳಿಗೆ ಹಾಗೂ ಕ್ರೀಡಾಕೂಟ ಆಯೋಜಿಸುವವರಿಗೆ ಪ್ರೋತ್ಸಾಹವನ್ನೂ ನೀಡುತ್ತಿಲ್ಲ. ಇದೀಗ ಮೈದಾನದ ಬಾಡಿಗೆಯನ್ನು ಹೆಚ್ಚಿಸಲು ಮುಂದಾಗಿರುವುದು ಖಂಡನೀಯ’ ಎಂದು ಜಿಲ್ಲಾ ಕ್ರೀಡಾಪಟುಗಳ ಸಂಘದ ಅಧ್ಯಕ್ಷ ದಿನೇಶ್‌ ಕೆ. ಶೆಟ್ಟಿ ಪ್ರತಿಕ್ರಿಯಿಸಿದರು.

ಸಿಂಥೆಟಿಕ್‌ ಟ್ರ್ಯಾಕ್‌ಗೆ ಪ್ರಸ್ತಾವ

‘ನಗರದಲ್ಲಿ ₹ 7 ಕೋಟಿ ವೆಚ್ಚದಲ್ಲಿ ಸಿಂಥೆಟಿಕ್‌ ಟ್ರ್ಯಾಕ್‌ ನಿರ್ಮಿಸುವ ಬಗ್ಗೆ ಕೇಂದ್ರ ಸರ್ಕಾರಕ್ಕೆ ಕಳೆದ ವರ್ಷ ಪ್ರಸ್ತಾವ ಕಳುಹಿಸಿಕೊಡಲಾಗಿದೆ. ಸರ್ಕಾರದಿಂದ ಇನ್ನೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ’ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಸುಚೇತಾ ಪ್ರತಿಕ್ರಿಯಿಸಿದರು.

‘ಕ್ರೀಡಾಪಟುಗಳಿಗೆ ಕುಡಿಯುವ ನೀರು ಪೂರೈಸಲು ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಲಾಗುತ್ತಿದೆ. ಸ್ಮಾರ್ಟ್‌ ಸಿಟಿ ಯೋಜನೆಯಡಿ ₹ 70 ಲಕ್ಷ ವೆಚ್ಚದಲ್ಲಿ ಕಬಡ್ಡಿ ಸಲುವಾಗಿ ಒಳಾಂಗಣ ಕ್ರೀಡಾಂಗಣ ನಿರ್ಮಿಸಲಾಗುತ್ತಿದೆ. ಇದರಲ್ಲಿಯೇ ಹಾಫ್‌ ಕೋರ್ಟ್‌ ಮಾಡಿಕೊಂಡು ಕೊಕ್ಕೊ ಅಭ್ಯಾಸವನ್ನೂ ಮಾಡಬಹುದು. ಮೈದಾನದಲ್ಲಿ ಫ್ಲಡ್‌ ಲೈಟ್‌ ಅಳವಡಿಸಲೂ ಯೋಜನೆ ರೂಪಿಸಲಾಗುತ್ತಿದೆ’ ಎಂದು ತಿಳಿಸಿದರು.

‘ಮೈದಾನದ ಶುಲ್ಕ ಹೆಚ್ಚಿಸುತ್ತಿರುವುದಕ್ಕೆ ಕ್ರೀಡಾಪಟುಗಳು ಆಕ್ಷೇಪ ವ್ಯಕ್ತಪಡಿಸಿ ಸಲ್ಲಿಸಿರುವ ಮನವಿಯನ್ನು ಸರ್ಕಾರಕ್ಕೆ ಕಳುಹಿಸಿಕೊಡಲಾಗಿದೆ. ಶುಲ್ಕ ಹೆಚ್ಚಳದ ಆದೇಶವನ್ನು ಜಾರಿಗೊಳಿಸುವ ಬಗ್ಗೆ ಇನ್ನೂ ಅಂತಿಮ ತೀರ್ಮಾನ ಕೈಗೊಂಡಿಲ್ಲ’ ಎಂದು ಹೇಳಿದರು.

ಮಳೆ ಬಂದಾಗ ಮಣ್ಣಿನ ಟ್ರ್ಯಾಕ್‌ನಲ್ಲಿ ಮಕ್ಕಳಿಗೆ ಅಭ್ಯಾಸ ಮಾಡಿಸಲು ಆಗುವುದಿಲ್ಲ. ವಾಕರ್‌ಗಳು ಅಡ್ಡ ಬಂದಾಗ ಆಯ ತಪ್ಪಿ ಬಿದ್ದು ಗಾಯಗೊಳ್ಳುತ್ತಾರೆ. ಸಿಂಥೆಟಿಕ್‌ ಟ್ರ್ಯಾಕ್‌ ಮಾಡಿದರೆ ಸಾಧನೆ ಮಾಡಲು ಅಥ್ಲೀಟ್‌ಗಳಿಗೆ ಅನುಕೂಲವಾಗಲಿದೆ.

– ಧನಂಜಯ ಆರ್‌., ದೈಹಿಕ ಶಿಕ್ಷಣ ನಿರ್ದೇಶಕ, ಎಂ.ಎಸ್‌.ಪಿ. ಪದವಿ ಕಾಲೇಜು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT