ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಕ್ರೀದ್ ಸರಳ ಆಚರಣೆ: ಕೊರೊನಾ ನಿವಾರಣೆಗೆ ಪ್ರಾರ್ಥನೆ

Last Updated 1 ಆಗಸ್ಟ್ 2020, 14:14 IST
ಅಕ್ಷರ ಗಾತ್ರ

ದಾವಣಗೆರೆ: ಬಕ್ರೀದ್ ಹಬ್ಬದ ಅಂಗವಾಗಿ ಜಿಲ್ಲೆಯ 224ಕ್ಕೂ ಹೆಚ್ಚು ಮಸೀದಿಗಳಲ್ಲಿ ಅಂತರ ಕಾಯ್ದುಕೊಂಡು ಸಾವಿರಾರು ಮುಸ್ಲಿಮರು ಪ್ರಾರ್ಥನೆ ಸಲ್ಲಿಸಿದರು.

ವಿಶ್ವದೆಲ್ಲೆಡೆ ಕೊರೊನಾ ತೊಲಗಲಿ. ಶಾಂತಿ, ನೆಮ್ಮದಿ, ಸೌಹಾರ್ದ ನೆಲೆಸಲಿ. ಬಡವರ ಕಷ್ಟ ನಿವಾರಣೆ ಮಾಡಲಿ ಎಂದು ಪ್ರಾರ್ಥಿಸಲಾಯಿತು.

ಪ್ರತಿ ವರ್ಷ ಈದ್ಗಾ ಮೈದಾನಗಳಲ್ಲಿ ನಡೆಯುತ್ತಿದ್ದ ಪ್ರಾರ್ಥನೆಯಲ್ಲಿ ಸಾವಿರಾರು ಮುಸ್ಲಿಮರು ಪ್ರಾರ್ಥನೆ ಸಲ್ಲಿಸುತ್ತಿದ್ದರು. ಆದರೆ ಕೊರೊನಾ ಹಿನ್ನೆಲೆಯಲ್ಲಿ ಸಾಮೂಹಿಕ ಪ್ರಾರ್ಥನೆಯನ್ನು ನಿರ್ಬಂಧಿಸಿದ್ದರಿಂದ ಮಸೀದಿಗಳಲ್ಲೇ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ಪ್ರಾರ್ಥನೆ ಸಲ್ಲಿಸಲಾಯಿತು.ಹೆಚ್ಚಿನ ಸಂಖ್ಯೆಯಲ್ಲಿ ಬರುವ ಕಡೆ ಮೂರು, ಎರಡು ಬ್ಯಾಚ್‌ಗಳನ್ನು ಮಾಡಿ ಪ್ರಾರ್ಥನೆಗೆ ಅವಕಾಶ ಕಲ್ಪಿಸಲಾಗಿತ್ತು.

ಮಿಲ್ಲತ್ ಕಾಲೊನಿ, ಮೆಹಬೂಬ್ ನಗರ, ಶಿವನಗರ, ಅಹಮದ್ ನಗರ ಸೇರಿ ನಗರದ 52 ಮಸೀದಿಗಳಲ್ಲಿಬೆಳಿಗ್ಗೆ 5.30ರಿಂದಲೇ ಬಂದ ಮುಸ್ಲಿಮರು, ನಮಾಜ್‌ಗಾಗಿ ಸರದಿ ಸಾಲಿನಲ್ಲಿ ನಿಲ್ಲಬೇಕಾಯಿತು. ಬಹುಪಾಲು ಮಸೀದಿಗಳಲ್ಲಿ ಬಣ್ಣದಿಂದ ಗುರುತು ಮಾಡಿ, ಅಂತರ ಕಾಪಾಡಿಕೊಳ್ಳಲಾಯಿತು. ಒಂದು ಬಾರಿಗೆ30ರಿಂದ 35 ಮಂದಿ ಕೆಲವು ಮಸೀದಿಗಳಲ್ಲಿ 50 ಮಂದಿಗೆ ಅವಕಾಶ ಕಲ್ಪಿಸಲಾಗಿತ್ತು.

ಮಾಸ್ಕ್ ಧರಿಸದೇ ಇದ್ದವರಿಗೆ ಮಸೀದಿಗೆ ಪ್ರವೇಶ ನಿರಾಕರಿಸಲಾಯಿತು. 60 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳು ಹಾಗೂ 10 ವರ್ಷಗಳಿಗಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಮಸೀದಿಗೆ ಪ್ರವೇಶವನ್ನು ನಿರ್ಬಂಧಿಸಿದ್ದರಿಂದ ಮನೆಯಲ್ಲಿಯೇ ಪ್ರಾರ್ಥನೆ ಸಲ್ಲಿಸಿದರು.

ಹೊಸ ಉಡುಗೆ ತೊಟ್ಟು ಮಕ್ಕಳು, ಹಿರಿಯರು, ಪರಸ್ಪರ ಆಲಿಂಗಿಸಿ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಿದ್ದ ಮುಸ್ಲಿಮರಿಗೆ ಕೊರೊನಾ ತಡೆಯೊಡ್ಡಿತು.

‘ಮನೆಯಿಂದಲೇ ಶುಚಿಯಾಗಿ, ಜಮಖಾನವನ್ನು ತಂದು ಪ್ರಾರ್ಥನೆ ಸಲ್ಲಿಸಿದರು. ಒಂದು ಬ್ಯಾಚ್ ಮುಗಿದ ನಂತರ ಸ್ಯಾನಿಟೈಸ್ ಮಾಡಿ ಮತ್ತೊಂದು ಬ್ಯಾಚ್‌ಗೆ ಅಣಿಗೊಳಿಸಲಾಯಿತು. ಕೆಲವು ಮಸೀದಿಗಳಲ್ಲಿ ಪ್ಲಾಸ್ಟಿಕ್ ಹೊದಿಕೆಗಳನ್ನು ಹಾಕಿ ನಮಾಜ್ ಮುಗಿದ ನಂತರ ಅದನ್ನು ತೆರವುಗೊಳಿಸಲಾಯಿತು.ಮಸೀದಿಯಲ್ಲಿರುವ ಯಾವುದೇ ವಸ್ತುಗಳನ್ನು ಬಳಸದಂತೆ ಎಚ್ಚರಿಕೆ ನೀಡಲಾಗಿತ್ತು’ ಎಂದು ಸಮುದಾಯದ ಮುಖಂಡ ಅಮಾನುಲ್ಲಾಖಾನ್ ತಿಳಿಸಿದರು.

‘ಈ ಹಬ್ಬ ತ್ಯಾಗದ ಪ್ರತೀಕವಾದ ಕಾರಣ ಕುರಿ ಬಲಿದಾನ ಮಾಡುವುದು ಕಂಡು ಬಂದಿತು. ಒಂದು ಕುರಿಯನ್ನು ಮೂರು ಭಾಗಗಳಾಗಿ ಮಾಡಿ ಒಂದು ಭಾಗ ಮಾಲೀಕನಿಗೆ, ಮತ್ತೊಂದು ಭಾಗ ಸಂಬಂಧಿಕರಿಗೂ ಇನ್ನೊಂದು ಭಾಗವನ್ನು ಬಡವರಿಗೆ ದಾನ ಮಾಡುವ ಪ್ರತೀತಿ ಇದ್ದು, ಶೇ 90ರಷ್ಟು ಮಂದಿ ತಮ್ಮ ಶಕ್ತಿಗೆ ಅನುಸಾರವಾಗಿ ಕುರಿ ಮಾಂಸ ದಾನ ಮಾಡಿದರು’ ಎನ್ನುತ್ತಾರೆಮೆಹಬೂಬ್ ನಗರದ ಮುಖಂಡರಾದ ಹೈದರ್ ಮುಈನಿ ದಾರುಲ್ ಉಲೂಂ ಅಲ್ ಫಾಯಿಝ್ ಮರ್ಕಝುತೈಬಾ.

ಬಕ್ರೀದ್ ಹಬ್ಬಕ್ಕೆ ಸಿಹಿ ಖಾದ್ಯಗಳಾದ ಪಾಯಸ, ಹಲ್ವಾ ಜೊತೆಗೆ ಖಾರದ ತಿನಿಸುಗಳಾದ ಮಟನ್‌ ಬಿರಿಯಾನಿ, ಚಿಕನ್‌ ಬಿರಿಯಾನಿಗಳನ್ನು ಸವಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT