ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಳೆಯ ವೈವಿಧ್ಯಮಯ ಉತ್ಪನ್ನ: ಭರ್ಜರಿ ಮಾರಾಟ

ವೈವಿಧ್ಯಮಯ ಪ್ರಯೋಗಕ್ಕೆ ಕಾರಣವಾದ ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರ
Last Updated 16 ಸೆಪ್ಟೆಂಬರ್ 2022, 3:54 IST
ಅಕ್ಷರ ಗಾತ್ರ

ದಾವಣಗೆರೆ: ಬಾಳೆ ಕಾಯಿ ಮತ್ತು ಹಣ್ಣುಗಳಿಂದ ವೈವಿಧ್ಯಮಯ ಉತ್ಪನ್ನಗಳನ್ನು ಸಿದ್ಧಪಡಿಸಿ ಮಾರಾಟ ಮಾಡುತ್ತಿರುವ ಜಿಲ್ಲೆಯ ರೈತರು ಉತ್ತಮ ಆದಾಯ ಕಂಡುಕೊಂಡಿದ್ದಾರೆ.

ಇಲ್ಲಿನ ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರವು ಬಾಳೆಯಲ್ಲಿ ವೈವಿಧ್ಯಮಯ ಪ್ರಯೋಗಕ್ಕೆ ಮುಂದಾಗುವ ಮೂಲಕ ರೈತರನ್ನು ಉತ್ತೇಜಿಸುತ್ತಿದೆ.

ಬಾಳೆಹಣ್ಣಿನಿಂದ ಶಾವಿಗೆ, ಕಾಯಿಯಿಂದ ಚಿಪ್ಸ್, ಸೂಪ್ ಪೌಡರ್ ರೆಡಿ ಮಿಕ್ಸ್, ಹಪ್ಪಳ, ಮಾಲ್ಟ್ ಪೌಡರ್ ತಯಾರಿಸಿ ರೈತರು ಹಾಗೂ ರೈತ ಮಹಿಳೆಯರು ಮಾರಾಟ ಮಾಡುತ್ತಿದ್ದು, ದೂರದ ಬೆಂಗಳೂರಿನವರೆಗೂ ಉತ್ಪನ್ನಗಳನ್ನು ಕಳುಹಿಸಲಾಗುತ್ತಿದೆ. ಕರಾವಳಿ ಭಾಗದಲ್ಲಿ ಪ್ರಸಿದ್ಧವಾಗಿರುವ ಬಾಳೆಕಾಯಿ ಉತ್ಪನ್ನಗಳನ್ನು ಜಿಲ್ಲೆಯಲ್ಲೂ ಅಭಿವೃದ್ಧಿಗೊಳಿಸಲಾಗುತ್ತಿದೆ.

ಮಲೇಬೆನ್ನೂರು ಹೋಬಳಿಯ ನಿಟ್ಟೂರಿನ ಸರೋಜಾ ಪಾಟೀಲ್ ಅವರು ಇವೆಲ್ಲ ಉತ್ಪನ್ನಗಳನ್ನೂ ದಾವಣಗೆರೆಯಲ್ಲಿ ಮಾತ್ರವಲ್ಲದೇ ದೂರದ ಬೆಂಗಳೂರಿನಲ್ಲೂ ಮಾರಾಟ ಮಾಡುತ್ತಿದ್ದಾರೆ. ಇವರೊಂದಿಗೆ ಇತರ ರೈತರೂ ಪ್ರತಿ ಶನಿವಾರ ತರಳಬಾಳು ಕೃಷಿ ವಿಜ್ಞಾನ ಕೇಂದ್ರದಲ್ಲಿ ನಡೆಯುವ ಸಂತೆಯಲ್ಲಿ ಮಾರಾಟ
ಮಾಡುತ್ತಿದ್ದಾರೆ.

‘ಬಾಳೆಕಾಯಿ ಹುಡಿ (ಬಾಕಾಹು) ವಿವಿಧ ಖಾದ್ಯ ರೂಪದಲ್ಲಿ ಅಡುಗೆ ಮನೆ ಪ್ರವೇಶಿಸುತ್ತಿದ್ದು, ಕಿರು ಉದ್ಯಮದ ಸ್ವರೂಪ ಪಡೆಯುತ್ತಿದೆ. ಹುಡಿಯನ್ನು ಚಪಾತಿ, ಥಾಲಿಪಟ್ಟು, ರೊಟ್ಟಿ, ವಡೆ, ದೋಸೆ, ಪಡ್ಡು, ಇಡ್ಲಿಗಳ ಜೊತೆ ಮಿಶ್ರಣ ಮಾಡಿ ಸೇವಿಸಿದರೆ ಅಧಿಕ ಪೌಷ್ಟಿಕಾಂಶಗಳು ಲಭ್ಯವಾಗುತ್ತವೆ’ ಎನ್ನುತ್ತಾರೆ ಸರೋಜಾ ಪಾಟೀಲ್.

ಕೃಷಿ ವಿಜ್ಞಾನ ಕೇಂದ್ರಕ್ಕೆ ಪ್ರಶಸ್ತಿ: ಬಾಳೆಯಲ್ಲಿ ವೈವಿಧ್ಯಮಯ ಪ್ರಯೋಗಕ್ಕೆ ಐಸಿಎಆರ್- ತರಳಬಾಳು ಕೃಷಿ ವಿಜ್ಞಾನ ಕೇಂದ್ರ ಮುಂದಡಿ ಇಟ್ಟಿದೆ. 2010ರಿಂದಲೂ ಬಾಳೆ ಬೆಳೆ ಪ್ರಯೋಜನವನ್ನು ಪ್ರಾತ್ಯಕ್ಷಿಕೆ,
ಕ್ಷೇತ್ರ ಪ್ರಯೋಗ, ರೈತ ಕ್ಷೇತ್ರ ಪಾಠಶಾಲೆ ಹಾಗೂ ಪೂರಕ ವಿಸ್ತರಣಾ ಮಾಹಿತಿ ಮೂಲಕ ರೈತರಿಗೆ ತಿಳಿಸುತ್ತ ಉತ್ತೇಜನ ನೀಡುತ್ತಿದೆ. ಕೇಂದ್ರದ ಪ್ರಯತ್ನದ ಫಲಫಲ ಎಂಬಂತೆ ತರಬೇತಿ ಪಡೆದಿರುವ ರೈತರು ಬೆಳೆಯುವ ಶೇ 29ರಷ್ಟು ಅಧಿಕ ಇಳುವರಿ ಪಡೆಯುವಂತಾಗಿದೆ.

ಅಂಗಾಂಶ ಕೃಷಿ ಪದ್ಧತಿಯಲ್ಲಿ ಬೆಳೆದ ಗುಣಮಟ್ಟದ ಬಾಳೆ ಸಸಿಗಳನ್ನು ರೈತರಿಗೆ ಒದಗಿಸಲಾಗುತ್ತಿದೆ. ಸುರಕ್ಷಿತ ಮಾಗಿಸುವಿಕೆ ತಂತ್ರಜ್ಞಾನವನ್ನು ಪರಿಚಯಿಸಲಾಗುತ್ತಿದೆ. ಈ ಸಾಧನೆ ಗುರುತಿಸಿದ ರಾಷ್ಟ್ರೀಯ ಬಾಳೆ ಸಂಶೋಧನಾ ಕೇಂದ್ರವು ತಮಿಳುನಾಡಿನ ತಿರುಚಿರಪಳ್ಳಿಯಲ್ಲಿ ಈಚೆಗೆ ನಡೆದ ಕಾರ್ಯಕ್ರಮದಲ್ಲಿ ತರಳಬಾಳು ಕೃಷಿ ವಿಜ್ಞಾನ ಕೇಂದ್ರಕ್ಕೆ ‘ಕೆವಿಕೆ– 2022’ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಿದೆ.

‘ವಾರ್ಷಿಕವಾಗಿ ಸರಾಸರಿ 500 ರೈತರಿಗೆ ಬಾಳೆ ಬೆಳೆಗೆ ಸಂಬಂಧಿಸಿದ ತಾಂತ್ರಿಕ ಸಲಹೆ, ಸೂಚನೆ ನೀಡುತ್ತಿದ್ದು, ಬನಾನಾ ಸ್ಪೆಷಲ್ ಲಘು ಪೋಷಕಾಂಶಗಳ ಮಿಶ್ರಣವನ್ನು ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಅಂದಾಜು 2,500 ಹೆಕ್ಟೇರ್ ಪ್ರದೇಶದಲ್ಲಿ ಬಾಳೆ ಬೆಳೆ ಇದ್ದು, ಎಕರೆಗೆ 22ರಿಂದ 26 ಟನ್‌ವರೆಗೂ ಇಳುವರಿ ಲಭ್ಯವಾಗುತ್ತಿದೆ’ ಎಂದು ಕೇಂದ್ರದ ಮುಖ್ಯಸ್ಥ ಡಾ.ಟಿ.ಎನ್. ದೇವರಾಜ್ ‘ಪ್ರಜಾವಾಣಿ’ಗೆ ತಿಳಿಸಿದರು.

...

ಮಾರುಕಟ್ಟೆಯಲ್ಲಿ ಬಾಳೆಗೆ ದರ ಸಿಗದಿದ್ದರೆ ಪೌಡರ್ ತಯಾರಿಸಿ ಖಾದ್ಯಗಳನ್ನು ತಯಾರಿಸಬಹುದು. ಬಾಳೆ ಹಣ್ಣು ಹಾಗೂ ತರಕಾರಿಗಳ ಸಂಸ್ಕರಣೆಗೆ ತೋಟಗಾರಿಕೆ ಇಲಾಖೆಯಿಂದ ₹ 10 ಲಕ್ಷದವರೆಗೂ ಸಬ್ಸಿಡಿ ನೀಡಲಾಗುತ್ತದೆ.

-ಡಾ.ರಾಘವೇಂದ್ರ ಪ್ರಸಾದ್, ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ

............

ಬಾಳೆಯಿಂದ ಇತರೆ ಉತ್ಪನ್ನಗಳನ್ನು ತಯಾರಿಸಬೇಕೆಂಬ ಆಸಕ್ತಿ ಇತ್ತು. ಕೃಷಿ ವಿಜ್ಞಾನ ಕೇಂದ್ರದವರು ಸಲಹೆ ನೀಡಿದರು. ಬಾಳೆಕಾಯಿಯ ಸೂಪ್, ಹಪ್ಪಳ, ಶ್ಯಾವಿಗೆ ಚೆನ್ನಾಗಿ ಖರ್ಚಾಗುತ್ತಿದೆ.

-ಸರೋಜಾ ಪಾಟೀಲ್, ಮಹಿಳಾ ಉದ್ಯಮಿ

...

ಬಾಳೆಯಿಂದ ವಿವಿಧ ಉತ್ಪನ್ನ ತಯಾರಿಸುವ ಬಗ್ಗೆ ಮಹಿಳೆಯರಿಗೆ ತರಬೇತಿ ನೀಡಲಾಗುತ್ತಿದೆ. ರೈತರು ಬಾಳೆಯನ್ನು ಸಿಕ್ಕ ಬೆಲೆಗೆ ಮಾರಾಟ ಮಾಡುವ ಪ್ರಮೇಯ ಬರುವುದಿಲ್ಲ

-ಡಾ. ದೇವರಾಜ , ಐಸಿಎಆರ್,ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT