ಬುಧವಾರ, ಜುಲೈ 6, 2022
22 °C

ಪಠ್ಯ ರಾಜಕೀಯ ಪ್ರಣಾಳಿಕೆ ಅಲ್ಲ: ಚಿಂತಕ ಬಂಜಗೆರೆ ಜಯಪ್ರಕಾಶ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ‘ಪಠ್ಯ ಎನ್ನುವುದು ರಾಜಕೀಯ ಕಾರ್ಯಕರ್ತರಿಗೆ ನೀಡುವ ಪ್ರಣಾಳಿಕೆ ಅಲ್ಲ. ಬದಲಾಗಿ ಪಠ್ಯದಲ್ಲಿರುವ ವಿಷಯಗಳು, ಆದರ್ಶಗಳು ಎಲ್ಲರನ್ನು ಒಳಗೊಳ್ಳುವಂತಿರಬೇಕು’ ಎಂದು ಚಿಂತಕ ಬಂಜಗೆರೆ ಜಯಪ್ರಕಾಶ್ ಅಭಿಪ್ರಾಯಪಟ್ಟರು.

ಇಲ್ಲಿನ ಹೋಟೆಲ್ ತಾಜ್ ಪ್ಯಾಲೇಸ್‌ನಲ್ಲಿ ಶುಕ್ರವಾರ ನಡೆದ 8ನೇ ಮೇ ಸಾಹಿತ್ಯ ಮೇಳದಲ್ಲಿ ‘ಅಭಿವ್ಯಕ್ತಿ’ ವಿಷಯ ಕುರಿತು ಅವರು ಮಾತನಾಡಿದರು.

‘ಪಠ್ಯಪುಸ್ತಕ ಪರಿಷ್ಕರಣ ಸಮಿತಿಯಲ್ಲಿ ಒಂದೇ ಜಾತಿಯವರು ಇರುವುದು  ಸಂವೇದನೆಯನ್ನು ಮೊಟಕುಗೊಳಿಸಿದಂತೆ. ಎಲ್ಲಾ ಮಕ್ಕಳನ್ನು ತಲುಪಲು ಹಲವು ದೃಷ್ಟಿಕೋನಗಳಿಂದ ಪಠ್ಯವನ್ನು ಆಯ್ಕೆ ಮಾಡಬೇಕು. ಎಳೆಯ ಮನಸ್ಸುಗಳಿಗೆ ಕೊಡುತ್ತಿರುವ ಶಿಕ್ಷಣದ ಮೌಲ್ಯ ಸಾರ್ವತ್ರಿಕವಾಗಿರಬೇಕು. ಆದರ್ಶಗಳು, ಉಪದೇಶಗಳು ಎಲ್ಲರನ್ನೂ ಒಳಗೊಳ್ಳುವಂತಿರಬೇಕು, ಪ್ರೀತಿಸುವಂತಿರಬೇಕು. ಅದನ್ನು ಹೊರತುಪಡಿಸಿ ಮಕ್ಕಳನ್ನು ಬೆಳೆಸಲು ಹೋದರೆ ಮನುಷ್ಯ ಸಹಜಾಭಿವ್ಯಕ್ತಿಯ ಅಂತರಂಗವನ್ನು ಕೊಲ್ಲಲು ಹೊರಟಂತೆಯೇ’ ಎಂದು ಟೀಕಿಸಿದರು.

‘ಶಿಕ್ಷಣ ಸಚಿವರು ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಗೆ ರೋಹಿತ್‌ ಚಕ್ರತೀರ್ಥ ಅವವರನ್ನು ನೇಮಿಸಿರುವ ಬಗ್ಗೆ ಶಿಕ್ಷಣ ಸಚಿವರು ಸಿಇಟಿ ಫ್ರೊಫೆಸರ್ ಎಂದು ಹೇಳುವ ಸಮರ್ಥಿಸಿಕೊಳ್ಳುತ್ತಿರುವುದು ವಿಷಾದದ ಸಂಗತಿ’ ಎಂದರು.

‘ಸಾಹಿತಿ ದೊಡ್ಡರಂಗೇಗೌಡ ಅವರು ಮೋದಿ ಅವರನ್ನು ಹೊಗಳಿ ಬರೆದಿದ್ದಾರೆ. ಅದು ಸ್ತುತಿ ಪದ್ಯಗಳನ್ನು ಬರೆದಂತೆ. ಸಾಹಿತಿಗಳ ಪ್ರಜ್ಞೆ ಸದಾ ಎಚ್ಚೆತ್ತಿರಬೇಕು’ ಎಂದು ಸಮರ್ಥಿಸಿದರು. 

‘ಇಂದಿನ ದಿನಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹೇಳುವುದು ಅಮಾನ್ಯವಾಗಿವೆ. ಯಾರಾದರೂ ಸಾಮಾಜಿಕ ಮಾಧ್ಯಮಗಳಲ್ಲಿ ತಮಗೆ ಅನಿಸಿದ್ದನ್ನು ಬರೆದರೆ ಅದನ್ನು ಟ್ರೋಲ್ ಮಾಡುವ ಪರಿಪಾಠ ಆರಂಭವಾಗಿವೆ. ಪ್ರಭುತ್ವದ ಹೊಸ ದಾಳಿ ಶುರುವಾಗಿದೆ. ಇದಕ್ಕಾಗಿ ಕೂಲಿಕೊಟ್ಟು ಪಂಗಡಗಳನ್ನು ಸೃಷ್ಟಿಸಲಾಗಿದೆ. ಬರೆದಿರುವ ವಿಷಯಗಳಿಗೆ ವ್ಯಂಗ್ಯ ಮಾಡಬೇಕಾ ಅಥವಾ ಅದನ್ನು ಹೊಗಳಿ ಬರೆಯಬೇಕಾ ಎನ್ನುವುದು ಪೇಮೆಂಟ್ ಮೇಲೆ ತೀರ್ಮಾನವಾಗುತ್ತಿದೆ’ ಎಂದರು. 

‘ನಾವು ಹೇಳುವ ವಿಷಯಗಳು ಸರ್ಕಾರದವರಿಗೆ ಅಮಾನ್ಯವಾಗಿವೆ. ಪ್ರಶ್ನಿಸಿದವರನ್ನು ಹಿರಿಯರೆನ್ನದೆ ದೇಶದ್ರೋಹದ ಹೆಸರಲಿಲ್ಲ ಬಂಧಿಸಿ, ದಮನಿಸಲಾಗುತ್ತಿದೆ. ಸಾಹಿತಿಗಳು ಪಂಚವಟಿಯ ಗಿಳಿಗಳ ತರಹ ಇರಬೇಕಾದ ಸ್ಥಿತಿ ನಿರ್ಮಾಣವಾಗಿದೆ’ ಎಂದು ವಿಷಾದ ವ್ಯಕ್ತಪಡಿಸಿದರು.

‘ಸಾಹಿತಿ ಯಾವಾಗಲೂ ಸತ್ಯವನ್ನು ಹೇಳಬೇಕು. ಪ್ರಭುತ್ವಕ್ಕೆ ಹೆದರಿ ಸತ್ಯಗಳನ್ನು ತಿರುಚಿ ಹೇಳಿದರೆ ಸಾಹಿತಿ, ಸಾಹಿತ್ಯ ಎರಡೂ ಆತ್ಮಹತ್ಯೆ ಮಾಡಿಕೊಂಡಾಗುತ್ತದೆ’ ಎಂದು ಸಲಹೆ ನೀಡಿದರು. ಹೆಗ್ಗೆರೆ ರಂಗಪ್ಪ, ಶೇಖಣ್ಣ ಕವಳಿಕಾಯಿ, ಆವರಗೆರೆ ಉಮೇಶ್, ಸಿಕಂದರ್ ಅಲಿ ವೇದಿಕೆಯಲ್ಲಿ ಇದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು