ಶನಿವಾರ, ಅಕ್ಟೋಬರ್ 24, 2020
23 °C
ಬಸವ ಬೆಳಗು ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ವಿಶ್ವಾರಾಧ್ಯ ಸತ್ಯಂಪೇಟೆ ವಿಷಾದ

ವಿಶ್ವಾದ್ಯಂತ ಪಸರಿಸಿದರೂ ಕನ್ನಡಿಗರೊಳಗೆ ಇಳಿಯದ ಬಸವಣ್ಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಬಸವಣ್ಣನ ತತ್ವಗಳಿಗೆ ವಿಶ್ವದಾದ್ಯಂತ ಮಾನ್ಯತೆ ದೊರೆಯುತ್ತಿದೆ. ಇಂಡೋನೇಷ್ಯಾ, ಇಂಗ್ಲೆಂಡ್‌, ಅಮೆರಿಕ, ದುಬೈ ಮುಂತಾದ ಕಡೆಗಳಲ್ಲೆಲ್ಲ ಬಸವಣ್ಣನ ಪ್ರತಿಮೆಯನ್ನು ಸ್ಥಾಪಿಸುತ್ತಿದ್ದಾರೆ. ಆದರೆ ಕನ್ನಡಿಗರು ಮಾತ್ರ ಇನ್ನೂ ತಮ್ಮ ಮನದೊಳಗೆ ಬಸವಣ್ಣನನ್ನು ಇಳಿಸಿಕೊಂಡಿಲ್ಲ ಎಂದು ಜಾಗತಿಕ ಲಿಂಗಾಯತ ಮಹಾಸಭಾ ರಾಜ್ಯ ಕಾರ್ಯದರ್ಶಿ ವಿಶ್ವಾರಾಧ್ಯ ಸತ್ಯಂಪೇಟೆ ಬೇಸರ ವ್ಯಕ್ತಪಡಿಸಿದರು.

ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕ ಮಂಗಳವಾರ ಕುವೆಂಪು ಕನ್ನಡ ಭವನದಲ್ಲಿ ಹಮ್ಮಿಕೊಂಡ ಬಸವ ಬೆಳಗು ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.

ಬಸವ ಜಯಂತಿ ಬಂದರೆ ಎತ್ತುಗಳನ್ನು ಪೂಜಿಸುತ್ತೀರಿ. ನಾಲ್ಕು ಕಾಲು, ಎರಡು ಕೊಂಬು, ಒಂದು ಬಾಲ ಇರುವ ಎತ್ತು ಬಸವಣ್ಣ ಅಲ್ಲ. ನೆಲಕ್ಕೆ ಬಿದ್ದವರನ್ನು ಮೇಲಕ್ಕೆತ್ತಿದ ವ್ಯಕ್ತಿ ಬಸವಣ್ಣ ಎಂಬುದು ಇನ್ನೂ ನಮಗೆ ಅರ್ಥವಾಗಿಲ್ಲ ಎಂದು ವಿಷಾದಿಸಿದರು.

ಹೊರಗಿನಿಂದ ಬಸವಣ್ಣ ಅನುಯಾಯಿಗಳು ಎಂದು ಹೇಳುವವರು ಬಹಳ ಮಂದಿ ಇದ್ದೇವೆ. ಆದರೆ ಒಳಗೆ ಇಳಿಸಿಕೊಂಡಿಲ್ಲ. ಬಸವಣ್ಣ ಅಂತರಂಗದೊಳಗೆ ಇಳಿದರೆ ಅಲ್ಲಿ ಮೋಸ, ಅಪ್ರಾಮಾಣಿಕತೆ ಇರುವುದೇ ಇಲ್ಲ ಎಂದರು.

‘ನಮ್ಮ ದೇವರನ್ನು ಪೂಜಿಸಲು ಪೂಜಾರಿಗಳು ಅಂದರೆ ಮಧ್ಯವರ್ತಿಗಳು ಯಾಕೆ ಬೇಕು ಎಂದು ಎಲ್ಲರೂ ಪ್ರಶ್ನಿಸಿಕೊಳ್ಳಬೇಕು. ನಮ್ಮ ಹೆಂಡತಿ ಜತೆಗೆ ನಾವೇ ಸಂಸಾರ ಮಾಡಬೇಕು. ನಮ್ಮ ಹೊಟ್ಟೆಗೆ ನಾವೇ ಉಣ್ಣಬೇಕು. ಹಾಗೆಯೇ ನಮ್ಮ ದೇವರನ್ನು ನಾವೇ ಪೂಜಿಸಬೇಕು ಎಂದು ಶರಣರು ಇದಕ್ಕಾಗಿಯೇ ಹೇಳಿರುವುದು’ ಎಂದು ವಿಶ್ಲೇಷಿಸಿದರು.

ಲಿಂಗಾಯತರಿಗೆ ತಮ್ಮ ಇತಿಹಾಸದ ಅರಿವಿಲ್ಲ. ಇತಿಹಾಸ ಗೊತ್ತಿಲ್ಲದವ ಇತಿಹಾಸ ಸೃಷ್ಟಿಸಲಾರ. ಮಡಿ, ಮೈಲಿಗೆ, ಮೇಲು, ಕೀಳು ಎಂಬುದನ್ನೆಲ್ಲ ಬಿಟ್ಟು ಎಲ್ಲರನ್ನು ಒಟ್ಟಿಗೆ ಒಯ್ಯುವುದುಏ ಶರಣ ಪರಂಪರೆ. ಮಹಿಳೆ ಮುಟ್ಟಿದರೆ ದೇವರು ಮೈಲಿಗೆಯಾಗುವುದಾದರೆ ದೇವರಿಗಿಂತ ಮಹಿಳೆ ಪವರ್‌ಫುಲ್‌ ಎಂದಾಯಿತಲ್ಲವೇ? ಲಿಂಗಾಯತರು ಮೇಲ್ಜಾತಿ ಎಂದು ಬಹಳ ಬಂದಿ ತಿಳಿದುಕೊಂಡಿದ್ದಾರೆ. ಹಿಂದಿನ ನಿಮ್ನ ಜಾತಿಯವರೇ ಇಂದಿನ ಲಿಂಗಾಯತರು ಎಂದು ತಿಳಿಸಿದರು.

‘ಅಕ್ಕಮಹಾದೇವಿ ಮೂಲಕ ಮೊದಲ ಪ್ರತಿಭಟನೆ ಹುಟ್ಟಿದ್ದೇ 12ನೇ ಶತಮಾನದಲ್ಲಿ. ಅಲ್ಲಿಯವರೆಗೆ ರಾಜ ಹೇಳಿದ ಹಾಗೆ ಪ್ರಜೆಗಳು ನಡೆದುಕೊಳ್ಳಬೇಕಿತ್ತು. ನಾವೆಲ್ಲ ಕರ್ಮಠಕ್ಕೆ ಒಗ್ಗಿಕೊಂಡು ಬಿಟ್ಟಿದ್ದೇವೆ. ಹಾಗಾಗಿ ಶರಣ ತತ್ವದ ಹೋವಿನ ಪರಿಮಳ ನಮಗೆ ತಾಗುತ್ತಿಲ್ಲ’ ಎಂದರು.

ಸನ್ಮಾನ ಸ್ವೀಕರಿಸಿದ ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಎಸ್‌. ಬಸವಂತಪ್ಪ ಮಾತನಾಡಿ, ‘ಶರಣರ ಅನುಭವ ಮಂಟಪದ ಚಿಂತನೆಗಳು ಸಂವಿಧಾನದಲ್ಲಿ ಇವೆ. ಸಮಾಜ ಯಾರನ್ನು ದೂರ ಇಟ್ಟಿತ್ತೋ ಅಂಥವರನ್ನೇ ಹತ್ತಿರ ಕರೆದವರು ಬಸವಣ್ಣ. ಇನ್ನೊಬ್ಬರ ದುಃಖ, ನೋವು, ಕಷ್ಟಗಳಿಗೆ ಸ್ಪಂದಿಸದವರು ಶರಣರಾಗಲು ಸಾಧ್ಯವಿಲ್ಲ. ಮೋಸ, ವಂಚನೆ ಮಾಡುವವರು ಶರಣರಾಗಲ್ಲ. ಕಾಯಕವನ್ನೇ ನಂಬಿದವರು ಶರಣರು’ ಎಂದು ಹೇಳಿದರು.

ಎಪಿಎಂಸಿ ಅಧ್ಯಕ್ಷ ಎಸ್‌.ಕೆ. ಚಂದ್ರಣ್ಣ ಅವರನ್ನು ಸನ್ಮಾನಿಸಲಾಯಿತು. ಸಿದ್ದರಾಮಪ್ಪ, ವೀಣಾ ಮಂಜುನಾಥ್‌, ಮರುಳ ಸಿದ್ದಯ್ಯ, ಶಶಿಧರ ಅವರೂ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು