ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದಾವಣಗೆರೆ | ಬಾಳೆಹಣ್ಣಿಗೆ ಬರ; ಗಗನಕ್ಕೇರಿದ ದರ

ಏಲಕ್ಕಿ ಕೆ.ಜಿಗೆ ₹130, ಪಚ್ಚಬಾಳೆ ₹80ರಂತೆ ಮಾರಾಟ
ಎನ್‌.ವಿ. ರಮೇಶ್
Published : 30 ಆಗಸ್ಟ್ 2024, 5:41 IST
Last Updated : 30 ಆಗಸ್ಟ್ 2024, 5:41 IST
ಫಾಲೋ ಮಾಡಿ
Comments

ಬಸವಾಪಟ್ಟಣ: ಕಳೆದ ವರ್ಷ ಎದುರಾದ ಮಳೆ ಕೊರತೆ, ಇಳುವರಿ ಕುಸಿತ ಹಾಗೂ ಸಾಲು ಹಬ್ಬಗಳಿಂದಾಗಿ ಮಾರುಕಟ್ಟೆಯಲ್ಲಿ ಬಾಳೆಹಣ್ಣಿನ ದರ ವಿಪರೀತ ಏರಿಕೆಯಾಗಿದ್ದು, ಗ್ರಾಹಕರ ಕೈಸುಡುವಂತಾಗಿದೆ. 

ಏಲಕ್ಕಿ ಬಾಳೆ ಹಣ್ಣು ಚಿಲ್ಲರೆ ಮಾರುಕಟ್ಟೆಯಲ್ಲಿ ಕೆ.ಜಿಗೆ ₹130ರವರೆಗೆ ಮಾರಾಟವಾಗುತ್ತಿದೆ. ಪಚ್ಚಬಾಳೆ ಕೆ.ಜಿಗೆ ₹80ರವರೆಗೂ ಮಾರಾಟವಾಗುತ್ತಿದೆ. 

ಕಳೆದ ವರ್ಷ ಏಲಕ್ಕಿ ಬಾಳೆಯನ್ನು ಕೆ.ಜಿಗೆ ₹22ರಿಂದ ₹25ರವರೆಗೆ ರೈತರಿಂದ ಖರೀದಿಸಿ, ಅದನ್ನು ವಾಡೆಗಳಿಗೆ ಹಾಕಿ ಹಣ್ಣು ಮಾಡಿ ವ್ಯಾಪಾರಿಗಳಿಗೆ ₹35ರಂತೆ ಮಾರಾಟ ಮಾಡಲಾಗುತ್ತಿತ್ತು. ಹಾಗೆಯೇ ಪಚ್ಚಬಾಳೆಯನ್ನು ₹15ರಿಂದ ₹16ರವರೆಗೆ ಖರೀದಿಸಿ, ಹಣ್ಣುಮಾಡಿ ಕೆ.ಜಿ.ಗೆ ₹25ನಂತೆ ಮಾರಾಟ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಏಲಕ್ಕಿ ಬಾಳೆಯನ್ನು ಕೆ.ಜಿ.ಗೆ ₹80ರಂತೆ ಮತ್ತು ಪಚ್ಚಬಾಳೆಯನ್ನು ಕೆ.ಜಿ.ಗೆ ₹40ರಂತೆ ಕೊಯ್ಲು ಮಾಡಿ ರೈತರಿಂದ ಖರೀದಿಸಲಾಗುತ್ತಿರುವುದರಿಂದ ಮಾರುಕಟ್ಟೆಯದಲ್ಲಿ ದರ ಏರಿಕೆಯಾಗಿದೆ. 

‘ಈ ಭಾಗದಲ್ಲಿ ಹಿಂದಿನ ಬಾರಿ ಮಳೆ ಕೊರತೆಯಿಂದ ನಾಟಿ ಕಾರ್ಯಕ್ಕೆ ಹಿನ್ನಡೆಯಾಗಿದ್ದರಿಂದ ಈ ಬಾರಿ ಫಸಲು ಕಡಿಮೆಯಾಗಿದೆ. ಇದರಿಂದ ಈ ವರ್ಷ ಯಾವ ರೈತರೂ ನಮ್ಮ ಮಂಡಿಗೆ ಬಾಳೆ ಕಾಯಿಗಳನ್ನು ತರುತ್ತಿಲ್ಲ. ಅಲ್ಲಲ್ಲಿ ಕೆಲವು ರೈತರು ಅಪರೂಪಕ್ಕೆ ಬೆಳೆದಿದ್ದಾರೆ. ನಾವೇ ಅಂತಹ ರೈತರ ಜಮೀನಿಗೆ ಹೋಗಿ ಕೊಯ್ಲು ಮಾಡಿ ಖರೀದಿಸಿ ತರುತ್ತಿದ್ದೇವೆ. ಕೊಯ್ಲು, ಸಾಗಾಣಿಕೆ ವೆಚ್ಚ, ವಾಡೆಗೆ ಹಾಕಿ ಹಣ್ಣು ಮಾಡಲು ಬರುವ ಖರ್ಚು ಸೇರಿ ಬಾಳೆಹಣ್ಣಿನ ಬೆಲೆ ಸಹಜವಾಗಿ ಏರಿಕೆ ಕಂಡಿದೆ’ ಎನ್ನುತ್ತಾರೆ ಇಲ್ಲಿನ ಸಗಟು ವ್ಯಾಪಾರಿ ಸೈಯದ್‌ ಅಫನ್‌. 

‘ಶ್ರಾವಣ ಮಾಸ ಆರಂಭವಾದ ಬಳಿಕ ಬಾಳೆಹಣ್ಣಿಗೆ ಹೆಚ್ಚಿನ ಬೇಡಿಕೆ ಉಂಟಾಗಿದೆ. ಮುಂದೆ ಬರಲಿರುವ ಗೌರಿ ಗಣೇಶ, ದಸರಾ ಹಾಗೂ ದೀಪಾವಳಿ ಹಬ್ಬಗಳಿಗೆ ಇನ್ನೂ ಹೆಚ್ಚಿನ ಬೇಡಿಕೆ ಇರುತ್ತದೆ. ಈ ವರ್ಷ ಉತ್ತಮವಾದ ಮಳೆ ಬಿದ್ದಿರುವುದರಿಂದ ಮುಂದಿನ ಹೊಸ ಬೆಳೆ ಬಂದ ಮೇಲೆ ದರ ಕಡಿಮೆಯಾಗಬಹುದು’ ಎನ್ನುತ್ತಾರೆ ಇಲ್ಲಿನ ಬಾಳೆ ಹಣ್ಣಿನ ವ್ಯಾಪಾರಿ ಎಂ.ಹಾಲೇಶ್‌.

ಈ ಭಾಗದ ರೈತರು ಎಳೆಯ ಅಡಿಕೆ ಗಿಡಗಳ ಮಧ್ಯೆ ಅಂತರ ಬೆಳೆಯಾಗಿ ಬಾಳೆಯನ್ನು ಬೆಳೆಯುತ್ತಿದ್ದಾರೆ. ಆದರೆ ಕಳೆದ ವರ್ಷ ಮಳೆಯ ಕೊರತೆಯಿಂದ ಅಡಿಕೆ ಗಿಡಗಳಿಗೇ ನೀರು ಸಾಕಾಗಿರಲಿಲ್ಲ.

ಮಧ್ಯಮ ವರ್ಗದ ಗ್ರಾಹಕರು ಬೆಲೆ ಕೇಳಿ ವಾಪಸ್ ಹೋಗುತ್ತಿದ್ದಾರೆ. ಒಂದು ಡಜನ್‌ ಕೊಳ್ಳುವವರು ಐದಾರು ಹಣ್ಣು ಖರೀದಿಸುತ್ತಿದ್ದಾರೆ. ಇನ್ನೂ ಕೆಲವರು ಕಡಿಮೆ ಬೆಲೆಯ ಪಚ್ಚಬಾಳೆ ಹಣ್ಣಿಗೆ ತೃಪ್ತಿಪಟ್ಟುಕೊಳ್ಳುತ್ತಿದ್ದಾರೆ
ಎಂ.ಹಾಲೇಶ್‌ ಬಾಳೆ ಹಣ್ಣಿನ ವ್ಯಾಪಾರಿ 
ಬಸವಾಪಟ್ಟಣ ರೈತ ಸಂಪರ್ಕ ಕೇಂದ್ರದ ವ್ಯಾಪ್ತಿಯಲ್ಲಿ 40 ಹೆಕ್ಟೇರ್‌ನಲ್ಲಿ ಬಾಳೆ ಬೆಳೆಯಲಾಗುತ್ತಿದೆ. ಈ ವರ್ಷ ಉತ್ತಮವಾದ ಮಳೆಯಿಂದಾಗಿ ಹೆಚ್ಚಿನ ರೈತರು ಮತ್ತೆ ಬಾಳೆ ನಾಟಿಗೆ ಮುಂದಾಗಿದ್ದಾರೆ
ಸೌರಭ್‌,ತೋಟಗಾರಿಕಾ ಅಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT