ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಡಿಕೆ ಈಡೇರಿಕೆಗೆ ಕಟ್ಟಡ ಕಾರ್ಮಿಕರ ಆಗ್ರಹ

Last Updated 13 ಜುಲೈ 2021, 6:36 IST
ಅಕ್ಷರ ಗಾತ್ರ

ದಾವಣಗೆರೆ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಕಟ್ಟಡ ಕಾರ್ಮಿಕ ಸಂಘಗಳ ಸಮನ್ವಯ ಸಮಿತಿಯಿಂದ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.

ನಗರದ ದೂಡಾ ಕಚೇರಿಯಲ್ಲಿ ಇರುವ ಜಿಲ್ಲಾ ಕಾರ್ಮಿಕ ಇಲಾಖೆ ಕಚೇರಿ ಎದುರು ಪ್ರತಿಭಟನೆ ನಡೆಸಿದ ಕಟ್ಟಡ ಕಾರ್ಮಿಕರು,ಕೋವಿಡ್ ಪರಿಹಾರ, ಕಿಟ್ ಖರೀದಿಯಲ್ಲಿ ಪಾರದರ್ಶಕತೆ ಇಲ್ಲದಿರುವುದು ಹಾಗೂ ಕಾರ್ಮಿಕರ ಕಲ್ಯಾಣ ಮಂಡಳಿಯ ಸೌಲಭ್ಯಗಳು ಅರ್ಹರನ್ನು ತಲುಪಲು ವಿಳಂಬವಾಗುತ್ತಿರುವುದನ್ನು ಖಂಡಿಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸಮಿತಿಯ ಸಂಚಾಲಕ, ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಜಿ.ಉಮೇಶ್, ‘ಲಾಕ್‍ಡೌನ್‍ನಿಂದ ಕಾರ್ಮಿಕರ ಬದುಕು ಅತಂತ್ರವಾಗಿದೆ. ಕಟ್ಟಡ ಕಾರ್ಮಿಕ ಸಂಘಗಳು ತಿಂಗಳಿಗೆ ₹ 10 ಸಾವಿರ ಪರಿಹಾರ ನೀಡಬೇಕೆಂಬ ಬೇಡಿಕೆ ಮುಂದಿಟ್ಟು ಹೋರಾಟ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ₹ 10 ಸಾವಿರ ಕೋಟಿ ಸೆಸ್ ಹಣ ಸಂಗ್ರಹವಾಗಿದ್ದರೂ ಕಾರ್ಮಿಕರಿಗೆ ಕೇವಲ ₹ 3 ಸಾವಿರ ನೆರವು ಪ್ರಕಟಿಸಿದೆ. ಅದೂ ಕೂಡ ಬಹುಪಾಲು ಕಾರ್ಮಿಕರಿಗೆ ತಲುಪಿಲ್ಲ. ಕಲ್ಯಾಣ ಮಂಡಳಿಗೆ ನೀಡಿದ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಆಗದೇ ಗೊಂದಲವಾಗಿದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ರಾಜ್ಯ ಸಂಯುಕ್ತ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಮಂಜುನಾಥ್ ಕುಕ್ಕವಾಡ, ‘ಕಟ್ಟಡ ಕಾರ್ಮಿಕರಿಗೆ ಉಪಕರಣಗಳ ಕಿಟ್‌ ನೀಡಲಾಗುತ್ತಿದೆ. ಆದರೆ ₹ 3 ಸಾವಿರದ ಕಿಟ್ ಖರೀದಿಸಿ ಅದನ್ನು ₹ 10 ಸಾವಿರಕ್ಕೆ ಖರೀದಿಸಲಾಗಿದೆ ಎಂದು ಅಧಿಕಾರಿಗಳು ಸುಳ್ಳು ಹೇಳುತ್ತಿದ್ದಾರೆ. ಕಾರ್ಮಿಕರ ಹೆಸರಿನಲ್ಲಿ ಇಲಾಖೆ ಭ್ರಷ್ಟಾಚಾರ ನಡೆಸುತ್ತಿದೆ’ ಎಂದು ಆರೋಪಿಸಿದರು.

ಕೋವಿಡ್‌ನಿಂದ ಮೃತಪಟ್ಟ ನೋಂದಾಯಿತ ಕಾರ್ಮಿಕರಿಗೆ ಪರಿಹಾರ ನೀಡಬೇಕು. ಗುಣಮುಖ ಹೊಂದಿದ ಪಲಾನುಭವಿಗಳ ವೈದ್ಯಕೀಯ ವೆಚ್ಚವನ್ನು ಕಲ್ಯಾಣ ಮಂಡಳಿ ಭರಿಸಬೇಕು ಎಂದು ಆಗ್ರಹಿಸಿದರು.

ಮನವಿ ಸ್ವೀಕರಿಸಿದ ಜಿಲ್ಲಾ ಕಾರ್ಮಿಕ ಅಧಿಕಾರಿ ಇಬ್ರಾಹಿಂ ಸಾಬ್, ‘15 ದಿನದೊಳಗೆ ಕಟ್ಟಡ ಕಾರ್ಮಿಕರ ಸಂಘಟನೆಗಳ ಎಲ್ಲಾ ಮುಖಂಡರೊಂದಿಗೆ ಸಭೆ ನಡೆಸಿ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಲಾಗುವುದು’ ಎಂದು ಭರವಸೆ ನೀಡಿದರು.

ಸಂಘದ ಜಿಲ್ಲಾಧ್ಯಕ್ಷ ವಿ. ಲಕ್ಷ್ಮಣ, ಕಾರ್ಯಾಧ್ಯಕ್ಷ ಪಿ.ಕೆ. ಲಿಂಗರಾಜ, ಮುಖಂಡರಾದಸತೀಶ್ ಅರವಿಂದ್, ಶಿವಕುಮಾರ್ ಶೆಟ್ಟರ್, ಭೀಮಾ ರೆಡ್ಡಿ, ದಾದಾಪೀರ್, ಎಸ್.ಮುರುಗೇಶ್, ಫಯಾಜ್ ಅಹಮದ್, ಆದಿಲ್ ಖಾನ್, ಕೆ.ಎಚ್. ಆನಂದ ರಾಜು, ಗುಡ್ಡಪ್ಪ, ಐರಣಿ ಚಂದ್ರು, ಸುರೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT