ಸೋಮವಾರ, ಫೆಬ್ರವರಿ 24, 2020
19 °C
ಪಿ.ಎಂ.ಕಿಸಾನ್ ಫಲಾನುಭವಿಗಳಿಗೆ 24ರೊಳಗೆ ಕೆಸಿಸಿ ಸೌಲಭ್ಯ: ಜಿಲ್ಲಾಧಿಕಾರಿ

ಕಿಸಾನ್ ಕ್ರೆಡಿಟ್ ಕಾರ್ಡ್ ನೀಡಲು ಅಭಿಯಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಪ್ರಧಾನಮಂತ್ರಿ ಕಿಸಾನ್ ಯೋಜನೆಯ ಫಲಾನುಭವಿಗಳಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯ ಸೌಲಭ್ಯವನ್ನು ಫೆ.24ರೊಳಗೆ ತಲುಪಿಸುವ ಸಲುವಾಗಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.

‘ದೇಶದ ಎಲ್ಲಾ ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್‌ನ (ಬೆಳೆಸಾಲ) ಸೌಲಭ್ಯ ತಲುಪಿಸುವ ಉದ್ದೇಶದಿಂದ 2019ರ ಫೆಬ್ರುವರಿಯಲ್ಲಿ ಕೇಂದ್ರ ಸರ್ಕಾರ ಕಿಸಾನ್ ಕ್ರೆಡಿಟ್ ಕಾರ್ಡ್ ಅಭಿಯಾನವನ್ನು ಜಾರಿಗೆ ತಂದಿದೆ. ಆದರೆ ಫಲಾನುಭವಿಗಳೆಲ್ಲರಿಗೂ ಕಿಸಾನ್ ಕ್ರೆಡಿಟ್ ಕಾರ್ಡ್‌ ದೊರೆತಿಲ್ಲದಿರುವುದು ಕೇಂದ್ರ ಸರ್ಕಾರದ ಗಮನಕ್ಕೆ ಬಂದಿದ್ದು, ಎಲ್ಲಾ ರೈತರಿಗೂ ಇದನ್ನು ತಲುಪಿಸುವ ಉದ್ದೇಶದಿಂದ ಈ ಅಭಿಯಾನ ಕೈಗೊಳ್ಳಲಾಗಿದೆ’ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಫೆ.24 ರಂದು ಪಿ.ಎಂ.ಕಿಸಾನ್ ಯೋಜನೆಯ ವರ್ಷಾಚರಣೆ ಇದ್ದು, ಆ ದಿನಾಂಕದೊಳಗೆ ಯೋಜನೆಯ ಫಲಾನುಭವಿಗಳಿಗೆ ಕಾರ್ಡ್ ಒದಗಿಸುವುದು ಸರ್ಕಾರದ ಉದ್ದೇಶ. ದೇಶದಲ್ಲಿ ಈ ಯೋಜನೆಯಡಿ ಒಂದು ಕೋಟಿಗೂ ಹೆಚ್ಚು ರೈತರಿಗೆ ಹೊಸದಾಗಿ ಕಿಸಾನ್ ಕ್ರೆಡಿಟ್ ಕಾರ್ಡ್ ತಲುಪಿಸುವ ಗುರಿ ಹೊಂದಲಾಗಿದೆ. ಆದ್ದರಿಂದ ಎಲ್ಲ ಬ್ಯಾಂಕುಗಳಲ್ಲೂ ರೈತರು ಕಿಸಾನ್ ಕ್ರೆಡಿಟ್ ಕಾರ್ಡ್ ಸೌಲಭ್ಯ ಪಡೆದುಕೊಳ್ಳಬಹುದು’ ಎಂದು ಮಾಹಿತಿ ನೀಡಿದರು.

ದಾವಣಗೆರೆ ಜಿಲ್ಲೆಯಲ್ಲಿ ಪಿ.ಎಂ.ಕಿಸಾನ್ ಯೋಜನೆಯಡಿ ಒಟ್ಟು 1,41,278 ಫಲಾನುಭವಿಗಳಿದ್ದು, ಅವರಲ್ಲಿ ಬಹುತೇಕ ಮಂದಿ ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆದಿಲ್ಲ. ಆದ್ದರಿಂದ ಅವರಿಗೆ ಸೌಲಭ್ಯವನ್ನು ಒದಗಿಸುವ ಅಭಿಯಾನ ಇದಾಗಿದೆ. ಹತ್ತಿರದ ಬ್ಯಾಂಕ್ ಶಾಖೆಗಳಲ್ಲಿ ಜಮೀನಿನ ವಿವರ, ಪಹಣಿ ಹಾಗೂ ಕೆವೈಸಿ ದಾಖಲೆಗಳನ್ನು ಒದಗಿಸಿ ರೈತರು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು. ಈಗಾಗಲೇ ಎಲ್ಲಾ ಬ್ಯಾಂಕ್‍ಗಳಲ್ಲೂ ಈ ಸೌಲಭ್ಯ ಒದಗಿಸುವಂತೆ ನಿರ್ದೇಶನ ನೀಡಲಾಗಿದೆ. ಲೀಡ್ ಬ್ಯಾಂಕ್, ಗ್ರಾಮೀಣ ಬ್ಯಾಂಕ್ ಹಾಗೂ ನಬಾರ್ಡ್ ಬ್ಯಾಂಕ್‍ಗಳ ಮ್ಯಾನೇಜರ್‍ಗಳ ಮಾರ್ಗದರ್ಶನದಲ್ಲಿ ಈ ಕಾರ್ಯ ಯಶಸ್ವಿಯಾಗಿ ನಡೆಯಲಿದೆ’ ಎಂದರು.

ಲೀಡ್ ಬ್ಯಾಂಕ್ ಮ್ಯಾನೇಜರ್ ಸುಶೃತ ಡಿ.ಶಾಸ್ತ್ರಿ ಮಾತನಾಡಿ, ‘ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ನೋಂದಣಿಯಾಗಿರುವವರಲ್ಲಿ ಬಹುತೇಕ ರೈತರು ಕಿಸಾನ್ ಕ್ರೆಡಿಟ್ ಕಾರ್ಡ್ ಸೌಲಭ್ಯ ಪಡೆದಿಲ್ಲ. ಆದ್ದರಿಂದ ನೊಂದಾಯಿತ ರೈತರೆಲ್ಲರೂ ಕ್ರೆಡಿಟ್ ಕಾರ್ಡ್ ಸೌಲಭ್ಯ ಒದಗಿಸುವ ಗುರಿ ಹೊಂದಲಾಗಿದೆ’ ಎಂದು ಹೇಳಿದರು.

ನಬಾರ್ಡ್ ಬ್ಯಾಂಕಿನ ಎಡಿಎಂ ವಿ.ರವೀಂದ್ರ ಮಾತನಾಡಿ, ‘ಜಿಲ್ಲೆಯಲ್ಲಿ ರಾಷ್ಟ್ರೀಕೃತ ಬ್ಯಾಂಕ್, ಗ್ರಾಮೀಣ ಬ್ಯಾಂಕುಗಳು ಹಾಗೂ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕುಗಳಿಂದ 2019ರ ಡಿಸೆಂಬರ್ 31ರವರೆಗೆ ಬೆಳೆ ಸಾಲ ಚಾಲ್ತಿಯಲ್ಲಿರುವ 1,26,012 ರೈತರಿದ್ದು, ಇಲ್ಲಿಯವರೆಗೆ 1,41,278 ರೈತರು ಮಾತ್ರ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಸಹಾಯಧನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಉಳಿದ ರೈತರು ಇದರ ಪ್ರಯೋಜನ ಪಡೆಯಬೇಕು’ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಬ್ಯಾಂಕಿನ ಪ್ರಾದೇಶಿಕ ಪ್ರಬಂಧಕರಾದ ಶಂಕರ್ ಕನವಳ್ಳಿ ಇದ್ದರು.

ಅಂಕಿ ಅಂಶ

1,41,278

ಪಿಎಂ ಕಿಸಾನ್ ಯೋಜನೆಯ ಜಿಲ್ಲೆಯ ಒಟ್ಟು ಫಲಾನುಭವಿಗಳು

1,47,447

ರೈತರಿಗೆ ಜಿಲ್ಲೆಯಲ್ಲಿ ಸೌಲಭ್ಯ

₹1664.64

ಕೋಟಿ ಸಾಲ ಸೌಲಭ್ಯ

1,42,278

ಕಿಸಾನ್ ಸಮ್ಮಾನ್ ಯೋಜನೆಯಡಿ ನೋಂದಾಯಿತ ರೈತರು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು