ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚನ್ನಗಿರಿ: ಮುಂಗಾರು ಹಂಗಾಮಿನ ಬಿತ್ತನೆ ಕಾರ್ಯಕ್ಕೆ ಸಿದ್ಧತೆ

ಚನ್ನಗಿರಿ: ತಾಲ್ಲೂಕಿನ ಹಲವಡೆ ಉತ್ತಮ ಮಳೆ; ಗರಿಗೆದರಿದ ಕೃಷಿ ಚಟುವಟಿಕೆ
Published 18 ಮೇ 2024, 13:12 IST
Last Updated 18 ಮೇ 2024, 13:12 IST
ಅಕ್ಷರ ಗಾತ್ರ

ಚನ್ನಗಿರಿ: ತಾಲ್ಲೂಕಿನಾದ್ಯಂತ ಒಂದು ವಾರದಿಂದ ಮುಂಗಾರು ಪೂರ್ವ ಮಳೆ ನೆಲವನ್ನು ಹದ ಮಾಡಿದ್ದು, ಮುಂಗಾರು ಹಂಗಾಮಿನ ಬಿತ್ತನೆ ಕಾರ್ಯಕ್ಕೆ ಎಲ್ಲೆಡೆ ಭೂಮಿ ಉಳುಮೆ ಮಾಡುವ ಕಾರ್ಯ ಭರದಿಂದ ಸಾಗಿದೆ.

ಶುಕ್ರವಾರ ರಾತ್ರಿ ತಾಲ್ಲೂಕಿನ ದೇವರಹಳ್ಳಿಯಲ್ಲಿ 10.4 ಮಿ.ಮೀ., ಚನ್ನಗಿರಿ 0.2ಮಿ.ಮೀ., ಕತ್ತಲಗೆರೆ 20ಮಿ.ಮೀ., ತ್ಯಾವಣಿಗಿ 21.6ಮಿ.ಮೀ., ಬಸವಾಪಟ್ಟಣ 0.6ಮಿ.ಮೀ., ಜೋಳದಹಾಳ್ 40ಮಿ.ಮೀ., ಸಂತೇಬೆನ್ನೂರು 4.2ಮಿ.ಮೀ., ಉಬ್ರಾಣಿ 3.2ಮಿ.ಮೀ. ಹಾಗೂ ಕೆರೆಬಿಳಚಿ ಗ್ರಾಮದಲ್ಲಿ 10.2 ಮಿ.ಮೀ. ಮಳೆ ಬಿದ್ದಿದೆ.

ಉತ್ತಮ ಮಳೆಯಿಂದಾಗಿ, ರೈತರು ಉತ್ಸಾಹದಿಂದ ಮುಂಗಾರು ಹಂಗಾಮಿನ ಬಿತ್ತನೆ ಕಾರ್ಯಕ್ಕೆ ಸಿದ್ಧತೆ ಆರಂಭಿಸಿದ್ದಾರೆ. ಈಗಾಗಲೇ ಕೆಲವು ರೈತರು ರಸಗೊಬ್ಬರ, ಬೀಜ ಖರೀದಿ ಮಾಡಿ ಮನೆಗಳಲ್ಲಿ ಸಂಗ್ರಹಿಸಿಟ್ಟುಕೊಂಡಿದ್ದಾರೆ. ಇನ್ನು ಕೆಲವು ರೈತರು ಕೃಷಿ ಇಲಾಖೆಯಿಂದ ಮಾರಾಟ ಮಾಡುವ ರಿಯಾಯಿತಿ ದರದ ಬೀಜಗಳಿಗಾಗಿ ಕಾಯುತ್ತಿದ್ದಾರೆ.

ತಾಲ್ಲೂಕಿನ ಗುಳ್ಳೆಹಳ್ಳಿ, ಗರಗ, ದೇವರಹಳ್ಳಿ, ಹೊನ್ನನಾಯಕನಹಳ್ಳಿ, ನಾರಶೆಟ್ಟಿಹಳ್ಳಿ, ಚನ್ನಗಿರಿ, ಮುದ್ದೇನಹಳ್ಳಿ, ಬುಸ್ಸೇನಹಳ್ಳಿ, ಆಕಳಕಟ್ಟೆ, ನುಗ್ಗಿಹಳ್ಳಿ, ಕಾಕನೂರು, ದೊಡ್ಡೇರಿಕಟ್ಟೆ, ಜೋಳದಹಾಳ್, ಹರೋನಹಳ್ಳಿ, ಗೋಪನಾಳ್, ಹಿರೇಉಡ, ಅರಳಿಕಟ್ಟೆ, ನೀತಿಗೆರೆ, ಸಂತೇಬೆನ್ನೂರು, ನಾಗೇನಹಳ್ಳಿ, ದೊಡ್ಡಬ್ಬಿಗೆರೆ ಮುಂತಾದ ಗ್ರಾಮಗಳಲ್ಲಿ ಭೂಮಿ ಉಳುಮೆ ಮಾಡುವ ಕಾರ್ಯ ಚುರುಕಿನಿಂದ ಸಾಗಿದೆ.

ಮುಂಗಾರು ಹಂಗಾಮಿನಲ್ಲಿ ತಾಲ್ಲೂಕಿನಲ್ಲಿ ಪ್ರಮುಖವಾಗಿ ಮೆಕ್ಕೆಜೋಳ, ಹತ್ತಿ, ಪಾಪ್ ಕಾರ್ನ್, ಈರುಳ್ಳಿ, ತೊಗರಿ, ಅಲಸಂದೆ, ಸೋಯಾಬೀನ್, ರಾಗಿ ಮುಂತಾದ ಬೆಳೆಗಳನ್ನು ಬೆಳೆಯಲಾಗುತ್ತದೆ. ಜೂನ್ ತಿಂಗಳ ಮೊದಲ ವಾರದಲ್ಲಿ ಮುಂಗಾರು ಮಳೆ ಪ್ರಾರಂಭವಾಗುತ್ತದೆ ಎಂದು ಹವಾಮಾನ ಇಲಾಖೆ ತಿಳಿಸಿದ್ದು, ರೈತರು ಕೃಷಿ ಕಾಯಕಕ್ಕೆ ಮುಂದಾಗಿದ್ದಾರೆ. 

‘ಕಳೆದ ಒಂದು ವಾರದಿಂದ ಉತ್ತಮ ಮಳೆಯಾಗಿರುವುದರಿಂದ, ಮೆಕ್ಕೆಜೋಳ ಬಿತ್ತನೆ ಮಾಡಲು ಭೂಮಿ ಉಳುಮೆ ಕಾರ್ಯ ಆರಂಭಿಸಿದ್ದೇವೆ. ಎಲ್ಲೆಡೆ ಭೂಮಿ ಉಳುಮೆ ಕಾರ್ಯ ಆರಂಭವಾಗಿರುವುದರಿಂದ ಟ್ರ್ಯಾಕ್ಟರ್‌ಗಳಿಗೆ ಬೇಡಿಕೆ ಬಂದಿದೆ. ಈ ಬಾರಿ ಉತ್ತಮವಾಗಿ ಮುಂಗಾರು ಮಳೆಯಾಗುವ ನಿರೀಕ್ಷೆಯಲ್ಲಿ ಬಿತ್ತನೆ ಕಾರ್ಯಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ’ ಎನ್ನುತ್ತಾರೆ ತಾಲ್ಲೂಕಿನ ಜೋಳದಹಾಳ್ ಗ್ರಾಮದ ರೈತರಾದ ವೆಂಕಟೇಶ್.

ಬಿತ್ತನೆಗೆ ಅಗತ್ಯವಾದ ರಸಗೊಬ್ಬರವನ್ನು ಸಹಕಾರ ಸಂಘ, ತುಮ್ಕೋಸ್ ಹಾಗೂ ಖಾಸಗಿ ರಸಗೊಬ್ಬರ ಮಾರಾಟ ಮಳಿಗೆಗಳಲ್ಲಿ ಸಂಗ್ರಹ ಮಾಡಲಾಗಿದೆ. ಅದೇ ರೀತಿ ಕೃಷಿ ಇಲಾಖೆಯಿಂದ ರಿಯಾಯಿತಿ ದರದಲ್ಲಿ ರೈತರಿಗೆ ವಿತರಣೆ ಮಾಡುವ ಬೀಜಗಳನ್ನು ಮೇ ತಿಂಗಳ ಕೊನೆಯ ವಾರದಲ್ಲಿ ವಿತರಣೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ’ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಎಸ್. ಅರುಣ್ ಕುಮಾರ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT