ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆಯೊಂದಿಗೆ ಚಿದಾನಂದಮೂರ್ತಿ ನೆಂಟಸ್ತಿಕೆ

Last Updated 12 ಜನವರಿ 2020, 11:49 IST
ಅಕ್ಷರ ಗಾತ್ರ

ದಾವಣಗೆರೆ: ಕನ್ನಡನಾಡು ಕಂಡ ಅಪರೂಪದ ನಾಡು–ನುಡಿ ಪ್ರೇಮಿ, ದಿಟ ಹೋರಾಟಗಾರರು ಡಾ. ಎಂ. ಚಿದಾನಂದಮೂರ್ತಿಗಳು. ಅವರು ಸಂಶೋಧಿಸಿದ ಶಾಸನಗಳು ಸಹ ಅವರನ್ನು ಇಂದು ನೆನೆಯುತ್ತವೆ.

ಗೋಕಾಕ ಚಳವಳಿ ಸೇರಿ ನೆಲ–ಜಲ ಹೋರಾಟದ ಮುಂಚೂಣಿಯ ನಾಯಕರಾಗಿದ್ದರು. ಹತ್ತಾರು ಸಂಶೋಧನಾ ಗ್ರಂಥ, ಇತಿಹಾಸ ಕೃತಿಗಳ ರಚನೆ ಮಾಡಿದ ತಜ್ಞ ಲೇಖಕರು. ಹೀಗಿದ್ದರೂ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಅವರನ್ನು ಮಾಡದಿರುವುದು ವಿಷಾದನೀಯ ಸಂಗತಿ. ಆದರೂ ಅವರು ಈ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ. ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅವರನ್ನು ಜಿಲ್ಲಾ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಮಾಡಿ ತನ್ನ ಗೌರವನ್ನು ಸೂಚಿಸಿದ್ದು ಸ್ತುತ್ಯಾರ್ಹ.

ಸಂಶೋಧಕ ಡಾ. ಎಂ. ಚಿದಾನಂದಮೂರ್ತಿ ಅವರಿಗೂ ದಾವಣಗೆರೆ ನಗರಕ್ಕೂ ಅವಿನಾಭಾವ ಸಂಬಂಧ ಇದೆ. ಅವರ ಬಂಧು–ಬಳಗ ಕೂಡ ದಾವಣಗೆರೆಯಲ್ಲೇ ಇದೆ. ಅವರ ತಂಗಿ ನಾಗರತ್ನಮ್ಮ ಅವರನ್ನು ದಾವಣಗೆರೆಗೆ ಮದುವೆ ಮಾಡಿ ಕೊಡಲಾಗಿತ್ತು. ಅವರ ಶ್ರೀಮತಿ ವಿಶಾಲ ಅವರದೂ ದಾವಣಗೆರೆ ನಗರ. ಚನ್ನಗಿರಿ ತಾಲ್ಲೂಕು ಹಿರೇಕೋಗಲೂರು ಅವರ ಹುಟ್ಟೂರು. ಹೀಗಾಗಿ ನೆಂಟಸ್ತಿಕೆ ಎಲ್ಲಾ ದಾವಣಗೆರೆ ಸುತ್ತಮುತ್ತ ಇದೆ.

ಚಿದಾನಂದಮೂರ್ತಿ ಅವರು ವೈದ್ಯರಾಗಬೇಕಾಗಿತ್ತು. ಅವರಿಗೆ ವೈದ್ಯಕೀಯ ಸೀಟು ಸರ್ಕಾರಿ ಕೋಟಾದಡಿ ಸಿಕ್ಕಿತ್ತು. ಆದರೆ, ಕನ್ನಡ ಸಾಹಿತ್ಯ, ಅದರಲ್ಲೂ ಶಾಸನ ಸಂಶೋಧನೆಯ ಬಗ್ಗೆ ವಿಶೇಷ ಆಸಕ್ತಿ ಇದ್ದುದರಿಂದ ವೈದ್ಯಕೀಯ ಸೀಟನ್ನು ತಿರಸ್ಕರಿಸಿದ್ದರಂತೆ! ‘ಅವರು ಬಿಟ್ಟುಕೊಟ್ಟ ಸೀಟೇ ನನಗೆ ದಕ್ಕಿತು. ಹೀಗಾಗಿ ನಾನು ಡಾಕ್ಟರ್‌ ಆದೆ’ ಎಂದು ಹಿರಿಯ ವೈದ್ಯರಾದ ಡಾ. ಗುರುಪಾದಪ್ಪ ಪದೇ ಪದೇ ನೆನಪಿಸಿಕೊಳ್ಳುತ್ತಾರೆ.

ಚಿದಾನಂದಮೂರ್ತಿ ಅವರು ದಾವಣಗೆರೆಗೆ ಯಾವಾಗ ಬಂದರೂ ಲಾಡ್ಜ್‌ಗಳಲ್ಲಿ ತಂಗುತ್ತಿರಲಿಲ್ಲ. ತಂಗಿ ನಾಗರತ್ನಮ್ಮ ಅವರ ಮನೆಯಲ್ಲಿ ಉಳಿದುಕೊಳ್ಳುತ್ತಿದ್ದರು. ಅದರಲ್ಲೂ ತಮ್ಮ ಮಹತ್ವದ ಬರವಣಿಗೆಗಳಿದ್ದರೆ ದಾವಣಗೆರೆಗೆ ಬಂದು ತಂಗಿಯ ಮಗಳಾದ ಶಾಂತ ಬಸವರಾಜ್‌ ಅವರ ಮನೆಯಲ್ಲೇ ಹದಿನೈದು–ಇಪ್ಪತ್ತು ದಿನ ತಂಗುತ್ತಿದ್ದರು. ಇಂಥ ಸಂದರ್ಭದಲ್ಲಿ ನಾವುಗಳು ಪ್ರೊ. ಬಿ.ವಿ. ವೀರಭದ್ರಪ್ಪ, ಬಿ.ಜಿ.ಎನ್‌., ಡಾ. ಎಂ.ಜಿ. ಈಶ್ವರಪ್ಪ, ಅವರನ್ನು ಭೇಟಿ ಮಾಡುತ್ತಿದ್ದೆವು. ಅವರ ಅದಮ್ಯ ಕನ್ನಡತನ, ಐತಿಹಾಸಿಕ ಘಟನೆಗಳ ವಿವರಣೆಗಳು ನಮಗೆ ಚೇತೋಹಾರಿಯಾಗುತ್ತಿದ್ದವು.

ಚಿದನಂದಮೂರ್ತಿ ಅವರು ಎಂಬತ್ತರ ದಶಕದಲ್ಲಿ ಬೆಂಗಳೂರಿನಿಂದ ಹಂಪಿವರೆಗೆ ಶಾಸನಗಳ ಅನ್ವೇಷಣೆಯಲ್ಲಿ ಪಾದಯಾತ್ರೆ ಮಾಡಿದಾಗ ಪ್ರೊ. ಬಿ.ವಿ.ವೀ, ಡಾ.ಎಂ.ಜಿ. ಈಶ್ವರಪ್ಪ, ನಾನು, ಇನ್ನೂ ಅನೇಕರು ಹರಪನಹಳ್ಳಿವರೆಗೆ ಹೆಜ್ಜೆಹಾಕಿದ್ದುಂಟು. ಮುಂದೆ ಹಂಪಿಯಲ್ಲಿ ತಮ್ಮ ಕೊನೆಯುಸಿರು ಎಂಬಂತೆ ತುಂಗಭದ್ರೆಯಲ್ಲಿ ಹಾರಿದ್ದು... ಬದುಕಿ ಉಳಿದಿದ್ದ ಈಗ ಇತಿಹಾಸ!

ಚಿದಾನಂದಮೂರ್ತಿಯರು ಗ್ರಾಮಗಳ ಮೂಲ ಹೆಸರು ಬದಲಾಯಿಸಿದರೆ ಸಿಡಿದು ಬೀಳುತ್ತಿದ್ದರು. ಹಿಂದೆ ಚನ್ನಗಿರಿ ತಾಲ್ಲೂಕು ‘ಸೂಳೆಕೆರೆ’ಗೆ ‘ಶಾಂತಿ ಸಾಗರ’ ಎಂದು ಹೆಸರು ಬದಲಾಯಿಸಿದಾಗ; ಚನ್ನಗಿರಿ–ನಲ್ಲೂರು ಕನ್ನಡಪರ ಸಂಘಟನೆಗಳೊಂದಿಗೆ ಚಿದಾನಂದಮೂರ್ತಿ ಅವರು ಪ್ರತಿಭಟನೆಗೆ ಇಳಿದಿದ್ದರು. ಪರಿಣಾಮ ಜೆ.ಎಚ್‌. ಪಾಟೀಲರು ಶಾಂತಿಸಾಗರ ಹೆಸರು ರದ್ದುಪಡಿಸಿ, ‘ಸೂಳೆಕೆರೆ’ ಹೆಸರನ್ನು ನಾಮಕರಣಗೊಳಿಸಿ ಗೆಜೆಟ್‌ ಹೊರಡಿಸಿದ್ದು ನಮ್ಮ ಕಣ್ಣಮುಂದೇ ಇದೆ.

ಚಿದಾನಂದಮೂರ್ತಿ ಅವರು ನಮ್ಮ ಜಿಲ್ಲೆಯವರು ಎಂಬುದು ಹೆಮ್ಮೆಯ ಸಂಗತಿ. ಅವರ ಪಾರ್ಥೀವ ಶರೀರವನ್ನು ಕೋಗಲೂರಿನಲ್ಲೇ ಐಕ್ಯಗೊಳಿಸಿದ್ದರೆ ನಮಗೆ ಸಂತಸವಾಗುತ್ತಿತ್ತು. ಅವರ ಹೋರಾಟಗಳು, ಸಂಶೋಧನೆಗಳು ಸದಾ ನಮಗೆ ಚಿರಸ್ಮರಣೀಯ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT