ಗುರುವಾರ , ಫೆಬ್ರವರಿ 20, 2020
26 °C

ಪೌರತ್ವ ಕಾಯ್ದೆಯಿಂದ ಆದಿವಾಸಿಗಳಿಗೆ ತೊಂದರೆ: ಎಚ್‌.ಕೆ. ರಾಮಚಂದ್ರಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ದೇಶದಲ್ಲಿ ಲಕ್ಷಾಂತರ ಆದಿವಾಸಿಗಳು ಇದ್ದಾರೆ. ಅವರು ಎಲ್ಲಿಂದ ದಾಖಲೆ ತರಬೇಕು. ದೇಶದ ಶೇ 75ರಷ್ಟು ಜನರಿಗೆ ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಏಟು ಬೀಳಲಿದೆ ಎಂದು ಕಾರ್ಮಿಕ ಮುಖಂಡ ಎಚ್‌.ಕೆ. ರಾಮಚಂದ್ರಪ್ಪ ತಿಳಿಸಿದರು.

ನೆರಳು ಬೀಡಿ ಕಾರ್ಮಿಕ ಯೂನಿಯನ್ ಭಾನುವಾರ ಎಸ್.ಎಸ್. ಮಲ್ಲಿಕಾರ್ಜುನ ನಗರದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರಾಜಕೀಯ ಪ್ರತಿಷ್ಠೆ ಬಿಟ್ಟು ಪ್ರತಿಯೊಬ್ಬರು ಪೌರತ್ವ ತಿದ್ದುಪಡಿ ಕಾಯಿದೆ ವಿರುದ್ದ ಹೋರಾಟ ನಡೆಸಬೇಕಿದೆ. ಕೋಮುವಾದಿ ಬಿಜೆಪಿ ಸರ್ಕಾರವು ಪವಿತ್ರ ಸಂವಿಧಾನವನ್ನು ಕಿತ್ತುಹಾಕುವುದಾಗಿ ಹೇಳುತ್ತಿದೆ. ಇಂತಹ ಮನುವಾದಿ ಮತ್ತು ಗೋಡ್ಸೆ ಕುಡಿಗಳ ವಿರುದ್ಧ ಬಸವಣ್ಣ, ಅಂಬೇಡ್ಕರ್‌ ಕುಡಿಗಳು ಒಂದಾಗಿ ಉತ್ತರ ನೀಡಬೇಕು. ಈ ಮೂಲಕ ನಾವೆಲ್ಲರೂ ಭಾರತೀಯರು ಒಂದೇ ಎಂದು ಸಾರಬೇಕು ಎಂದು ಹೇಳಿದರು.

ಬೆಲೆ ಏರಿಕೆಯ ಗಮನ ಬೇರೆದಡೆ ಸೆಳೆಯಲು ಕೇಂದ್ರ ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತಂದಿದೆ. ಇದು ಕೇವಲ ಒಂದು ಜಾತಿಗೆ ಸೀಮಿತವಾಗಿಲ್ಲ. ಎಲ್ಲ ಜಾತಿ ಜನಾಂಗದವರು ಇದರೊಳಗೆ ಬರಲಿದ್ದಾರೆ ಎಂದರು.

ರೈತ ಸಂಘದ ಅರುಣ್ ಕುಮಾರ್ ಕುರುಡಿ, ‘ಈಗಾಗಲೇ ಜನರು ತಮ್ಮ ಪೌರತ್ವ ಸಾಬೀತಪಡಿಸಲು ಬೇಕಾದ ಆಧಾರ ಕಾರ್ಡ್, ಗುರುತಿನ ಚೀಟಿ ಸೇರಿ ಹಲವು ದಾಖಲೆಗಳು ಇವೆ. ಆದರೆ ಸರ್ಕಾರವು ಜನರಿಗೆ ಮತ್ತೆ ತೊಂದರೆ ಕೊಡಲು ಈ ಕಾಯ್ದೆ ಜಾರಿಗೆ ತಂದಿದೆ. ದೇಶದ ಕೈಗಾರಿಕೆಗಳು ಮುಚ್ಚುತ್ತಿವೆ. ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ. ಇಂತಹ ವಿಷಯಗಳ ಬಗ್ಗೆ ಗಮನಹರಿಸಿದೆ ಎನ್‌ಆರ್‌ಸಿ, ಎನ್‌ಆರ್‌ಪಿ ಮೂಲಕ ಜನರನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದೆ’ ಎಂದು ಕಿಡಿಕಾರಿದರು.

ಜೆಡಿಎಸ್ ಮುಖಂಡ ಟಿ.ಅಸ್ಗರ್, ‘ಧರ್ಮ ಆಧಾರಿತ ಮೂಲಕ ಪೌರತ್ವ ಕಾಯಿದೆ ದೇಶಕ್ಕೆ ಹಾಗೂ ಅಲ್ಪಸಂಖ್ಯಾತ ಸಮುದಾಯಕ್ಕೆ ಮಾರಕವಾಗಿದೆ. ದೇಶಕ್ಕೆ ಸ್ವಾತಂತ್ರ ತಂದು ಕೊಡಲು ಲಕ್ಷಾಂತರ ಮುಸ್ಲಿಮರು ಪ್ರಾಣ ತ್ಯಾಗ ಮಾಡಿದ್ದಾರೆ. ಅದನ್ನು ಮರೆತು ಕೇಂದ್ರ ಸರ್ಕಾರ ಮಾರಕ ಕಾನೂನು ತರುತ್ತಿದೆ’ ಎಂದು ದೂರಿದರು.

ನೆರಳು ಬೀಡಿ ಕಾರ್ಮಿಕ ಯೂನಿಯನ್ ಜಬೀನಾಖಾನಂ, ಕರಿಬಸಪ್ಪ, ಶಿರಿನಾ, ಎಸ್‌ಯುಸಿಐನ ಮಂಜುನಾಥ ಕೈದಾಳೆ, ಭೀಮ್ ಆರ್ಮಿಯ ಅಬ್ದುಲ್ ಘನಿ, ವಕೀಲೆ ಉಷಾ ಕೈಲಾಸದ್ ಅವರೂ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು