ಸೋಮವಾರ, ಫೆಬ್ರವರಿ 24, 2020
19 °C
ದಾವಣಗೆರೆ ಉತ್ತರ ಕ್ಷೇತ್ರ ಶಿಕ್ಷಣಾಧಿಕಾರಿಯ ಕಾರ್ಯವೈಖರಿಗೆ ತಾ.ಪಂ. ಸದಸ್ಯರ ಅಸಮಾಧಾನ

ದಾವಣಗೆರೆ: ಮಾಹಿತಿ ಇಲ್ಲದ ಬಿಇಒಗೆ ತರಾಟೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಸದಸ್ಯರು ಕೇಳುವುದೊಂದು, ಅಧಿಕಾರಿ ಹೇಳುವುದು ಇನ್ನೊಂದು ಆಗಿರುವುದು ಸೋಮವಾರ ನಡೆದ ತಾಲ್ಲೂಕು ಪಂಚಾಯಿತಿ ಸಭೆಯಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಯಿತು. ‘ಮಾಹಿತಿ ಇಲ್ಲದೇ ಇದ್ದರೆ ಮುಂದಿನ ಸಭೆಗೆ ನೀವು ಬರುವುದೇ ಬೇಡ’ ಎಂದು ಅಧ್ಯಕ್ಷರು ಗರಂ ಆಗಿ ಸೂಚಿಸಿದರು.

ಗುಡಾಳ್‌ ಶಾಲೆಯ ಶಿಕ್ಷಕರನ್ನು ವರ್ಗಾವಣೆ ಮಾಡಿರುವ ಬಗ್ಗೆ ಕಳೆದ ಸಭೆಯಲ್ಲಿ ಸ್ಪಷ್ಟ ಮಾಹಿತಿ ನೀಡಿಲ್ಲ. ಈ ಸಭೆಯಲ್ಲಿಯಾದರೂ ನೀಡುತ್ತೀರಾ ಎಂದು ಕೆ.ಜಿ. ಚಂದ್ರಪ್ರ ಪ್ರಶ್ನಿಸಿದರು. ವರ್ಗಾವಣೆ ಮಾಡಿಲ್ಲ. ನಿಯೋಜನೆ ಮಾಡಲಾಗಿದೆ ಎಂದು ಬಿಇಒ ಉತ್ತರಿಸಿದರು. ಕಳೆದ ಬಾರಿ ವರ್ಗಾವಣೆ ಎಂದು ಹೇಳಿದ್ದೀರಿ. ಈ ಬಾರಿ ನಿಯೋಜನೆ ಎನ್ನುತ್ತಿದ್ದೀರಿ ಎಂದು ಮತ್ತೆ ಪ್ರಶ್ನಿಸಿದರು. ಅನುದಾನಿತ ಶಾಲೆಯಿಂದ ಅಲ್ಲಿಗೆ ನಿಯೋಜನೆ ಮಾಡಲಾಗಿದೆ ಎಂದು ಶಿಕ್ಷಣಾಧಿಕಾರಿ ಸ್ಪಷ್ಟಪಡಿಸಿದರು.

ಪರಶುರಾಂಪುರ ಶಾಲೆಯಲ್ಲಿ ಅಲ್ಲಿ ಎಷ್ಟು ಶಿಕ್ಷಕರ ಇದ್ದಾರೆ ಎಂದು ಅಧ್ಯಕ್ಷೆ ಮಮತಾ ಮಲ್ಲೇಶಪ್ಪ ಪ್ರಶ್ನಿಸಿದರು. ನಾಲ್ಕೈದು ಶಿಕ್ಷಕರು ಇದ್ದಾರೆ ಎಂದು ಬಿಇಒ ಉತ್ತರ ನೀಡಿದಾಗ, ಎಷ್ಟಿದ್ದಾರೆ ಎಂಬುದು ಸ್ಪಷ್ಟತೆ ನಿಮಗಿಲ್ಲ. ಆ ಶಾಲೆಗೆ ಭೇಟಿ ನೀಡಿದ್ದೀರಾ ಎಂದು ಮರುಪ್ರಶ್ನೆ ಮಾಡಿದಾಗ ಬಿಇಒ ಸರಿಯಾಗಿ ಉತ್ತರಿಸಲಿಲ್ಲ. ‘ನೀವು ತಪ್ಪು ಮಾಹಿತಿ ನೀಡುತ್ತೀರಿ. ಶಾಲೆಗಳಿಗೆ ಭೇಟಿ ನೀಡುವುದಿಲ್ಲ. ಅಲ್ಲಿ ಐದು ಶಿಕ್ಷಕರಿದ್ದಾರೆ. ಅದರಲ್ಲಿ ಮೂರು ಮಂದಿ ರಜೆ ಹಾಕಿದ್ದಾರೆ. ಹೀಗೆ ಮೂರು ಮೂರು ಮಂದಿ ರಜೆ ಹಾಕಿದ್ರೆ ಪಾಠ ಮಾಡುವವರು ಯಾರು? ಎಂದು ಕೇಳಿದರು.

ಕಾಡಜ್ಜಿಯ ಪ್ರೌಢಶಾಲೆಯಲ್ಲಿ ಶೇ 90ರಷ್ಟು ಬಾಲಕಿಯರೇ ಇದ್ದಾರೆ. ಆದರೆ ಅಲ್ಲಿ ಶೌಚಾಲಯ ಇಲ್ಲ. ಬಾಲಕಿಯರೆಲ್ಲ ಪಕ್ಕದ ತೋಟಕ್ಕೆ ಹೋಗಬೇಕಾದ ಪರಿಸ್ಥಿತಿ ಇದೆ ಎಂದು ಅಧ್ಯಕ್ಷೆ ಮಮತಾ ಮಲ್ಲೇಶಪ್ಪ ಶಾಲೆಯ ಸ್ಥಿತಿಯನ್ನು ವಿವರಿಸಿದರು. ಶೌಚಾಲಯ ಕೆಟ್ಟು ಹೋಗಿದೆ ಎಂದು ಬಿಇಒ ಉತ್ತರ ನೀಡಿದಾಗ, ‘ಮತ್ತೆ ಸುಳ್ಳು ಹೇಳುತ್ತಿದ್ದೀರಿ. ಅಲ್ಲಿ ಶೌಚಾಲಯವೇ ಇಲ್ಲ. ಮೂಲ ಸೌಕರ್ಯ ಇಲ್ಲದೇ ಶಾಲೆ ನಡೆಸಲು ಹೇಗೆ ಅನುಮತಿ ನೀಡಿದ್ರಿ’ ಎಂದು ಅಧ್ಯಕ್ಷರು ಗರಂ ಆದರು. ‘ನಾವೆಲ್ಲ ಶಾಲೆಗೆ ಭೇಟಿ ನೀಡಿ ಅಲ್ಲಿನ ಶೋಚನೀಯ ಪರಿಸ್ಥಿತಿಯನ್ನು ಕಂಡು ಮಾತನಾಡುತ್ತಿದ್ದೇವೆ’ ಎಂದು ಮುರುಗೇಂದ್ರಪ್ಪ, ಮಂಜುಳಾ ಅಣಬೇರು ಶಿವಮೂರ್ತಿ ಧ್ವನಿಗೂಡಿಸಿದರು.

ಮೌಲಸೌಲಭ್ಯ ಕಲ್ಪಿಸದಿದ್ದರೆ ಶಾಲೆಯನ್ನು ಮುಚ್ಚಬೇಕಾಗುತ್ತದೆ ಎಂದು ಆ ಶಾಲೆಯವರಿಗೆ ನೋಟಿಸ್‌ ಕೊಡಿ ಎಂದು ಇಒ ದಾರುಕೇಶ್‌ ಸೂಚನೆ ನೀಡಿದರು. ಕೂಡಲೇ ಮೌಲಸೌಲಭ್ಯ ಕಲ್ಪಿಸಿ. ಇಲ್ಲದೇ ಇದ್ದರೆ ಮುಂದಿನ ಶೈಕ್ಷಣಿಕ ವರ್ಷದಿಂದ ಮುಚ್ಚಲಾಗುವುದು ಎಂದು ತಿಳಿಸಿ. ಈಗಲೇ ಮುಚ್ಚಿದರೆ ಪರೀಕ್ಷೆ ಹತ್ತಿರ ಇರುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ ಎಂದು ಸಂಗಜ್ಜಗೌಡರು ಸಲಹೆ ನೀಡಿದರು.

ಆಲೂರು ಶಾಲೆ 8 ಎಕರೆ ಭೂಮಿ ಹೊಂದಿದೆ ಎಂದು ವರದಿ ನೀಡಿದ್ದೀರಿ. ಆದರೆ ಅಲ್ಲಿ ಎರಡು ಎಕರೆಯಷ್ಟೇ ಜಮೀನಿದೆ. ಅಲ್ಲಿಯ ಖಾಸಗಿಯವರು ತಮ್ಮ ಜಮೀನೆಂದು ಬಂದೋಬಸ್ತು ಮಾಡಿಕೊಂಡಿದ್ದಾರೆ ಎಂದು ಅಲೂರು ನಿಂಗರಾಜು ತಿಳಿಸಿದರು. ಶಾಲೆಯವರು ನೀಡಿದ ಮಾಹಿತಿ ಎಂದು ಬಿಇಒ ಸಮಜಾಯಿಷಿ ನೀಡಿದರು. ನೀವು ಶಾಲೆಗೆ ಭೇಟಿ ನೀಡಿದ್ದೀರಾ ಎಂದು ಪ್ರಶ್ನಿಸಿದಾಗ ಅಧಿಕಾರಿ ಉತ್ತರಿಸಲಿಲ್ಲ. ಹಾಗಾದರೆ ಈ ವರದಿಯಂತೆ ಮೊದಲು 8 ಎಕರೆ ಭೂಮಿಯನ್ನು ಶಾಲೆಯ ಹೆಸರಿಗೆ ಪಹಣಿ ಮಾಡಿ. ಜತೆಗೆ ರಸ್ತೆಗೆ ಅಭಿಮುಖವಾಗಿ ಮಳಿಗೆಗಳನ್ನು ತೆರೆಯಲು ಅವಕಾಶ ಮಾಡಿಕೊಡಿ. ಆಗ ಶಾಲೆಗೆ ಆದಾಯ ಬರುತ್ತದೆ. ಮೂಲ ಸೌಕರ್ಯ ಒದಗಿಸಲು ಅವಕಾಶವಾಗುತ್ತದೆ. ಶಾಲೆಗೆ ಆವರಣಗೋಡೆಯಂತೆ ಈ ಕಟ್ಟಡಗಳನ್ನು ನಿರ್ಮಿಸಬೇಕು ಎಂದು ನಿಂಗರಾಜು ಸಲಹೆ ನೀಡಿದರು.

ಮೊದಲು ಶಾಲಾಭಿವೃದ್ಧಿ ಸಮಿತಿಯವರು ಸಭೆ ಮಾಡಿ ಈ ಬಗ್ಗೆ ನಿರ್ಣಯ ಮಾಡಿ ಕಳುಹಿಸಿಕೊಡಲಿ. ಅದಕ್ಕೆ ತಾಲ್ಲೂಕು ಪಂಚಾಯಿತಿಯಲ್ಲಿ ಅನುಮೋದನೆ ನೀಡಬಹುದು ಎಂದು ಇ.ಒ. ದಾರುಕೇಶ್‌ ತಿಳಿಸಿದರು.

ಬಹಳ ಶಾಲೆಗಳ ಆಸ್ತಿಯ ದಾಖಲೆಯೇ ಇಲ್ಲ. ಮೊದಲು ಅದನ್ನು ಸರಿಪಡಿಸಬೇಕು. ಇಲ್ಲದೇ ಇದ್ದರೆ ಮುಂದೆ ನಿಮಗೆ ತೊಂದರೆಯಾಗಲಿದೆ ಎಂದು ಬಹುತೇಕ ಸದಸ್ಯರು ತಿಳಿಸಿದರು. ಶಾಲೆಯ ಜಮೀನಿನ ದಾಖಲೆ ಶಾಲೆಯ ಹೆಸರಲ್ಲಿ ಇದೆಯೇ? ಇಲ್ಲದಿದ್ದರೆ ಯಾರ ಹೆಸರಲ್ಲಿದೆ. ದಾನಿಗಳಿಂದ ಪಡೆದ ಭೂಮಿ ಇದ್ದರೆ, ಅದಕ್ಕೆ ಸರಿಯಾದ ದಾಖಲೆ ಇದೆಯೇ? ಪಂಚಾಯಿತಿ ಹೆಸರಲ್ಲಿದೆಯೇ? ಎಂದು ಎಲ್ಲ ಶಾಲೆಗಳಿಗೆ ಪತ್ರ ಬರೆದು ಮಾಹಿತಿ ಪಡೆದುಕೊಳ್ಳಬೇಕು. ಈ ಮಾಹಿತಿಯನ್ನು ಕೂಡಲೇ ತಹಶೀಲ್ದಾರ್‌ಗೆ ನೀಡಿ ಶಾಲೆಗಳ ಹೆಸರಲ್ಲಿಯೇ ಶಾಲಾ ಆಸ್ತಿ ಬರುವಂತೆ ಬಂದೋಬಸ್ತು ಮಾಡಿಕೊಳ್ಳಬೇಕು ಎಂದು ಇಒ ಸೂಚಿಸಿದರು.

ದಾವಣಗೆರೆ ದಕ್ಷಿಣ ಕೇತ್ರ ಶಿಕ್ಷಣಾಧಿಕಾರಿ ಫೆ.10ರಿಂದ ನಡೆಸುವ ಗುರುಸ್ಪಂದನ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಲಾಯಿತು. ಪರೀಕ್ಷೆಯ ಸಂದರ್ಭದಲ್ಲಿ ಎಲ್ಲ ಮಕ್ಕಳ ಹೆತ್ತವರಿಗೆ ಕರೆ ಮಾಡಿ ಮಕ್ಕಳನ್ನು ಓದಿಸಲು ಎಚ್ಚರಿಸುವ ಕೆಲಸ ಮಾಡಲು ಸಲಹೆ ನೀಡಲಾಯಿತು.

ತೋಟಗಾರಿಕೆ ಇಲಾಖೆಯಿಂದ ಸರಿಯಾಗಿ ಮಾಹಿತಿ ದೊರೆಯುತ್ತಿಲ್ಲ. ಫಲಾನುಭವಿಗಳ ಆಯ್ಕೆಯೂ ಗೊತ್ತಾಗುತ್ತಿಲ್ಲ ಎಂದು ಎಂ. ಮಂಜಪ್ಪ, ಮೀನಾ ಶ್ರೀನಿವಾಸ್‌, ಹನುಮಂತಪ್ಪ, ಅಧ್ಯಕ್ಷೆ ಮಮತಾ ದೂರಿದರು.

ಮಮತಾ ಮಲ್ಲೇಶಪ್ಪ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಎನ್‌.ಬಿ. ಹನುಮಂತಪ್ಪ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಉಮೇಶ್‌ ಅವರೂ ಇದ್ದರು.

ಪರಿಕರ ವಿತರಣೆ

ತಾಲ್ಲೂಕು ಪಂಚಾಯಿತಿಯ ಸಂಯುಕ್ತ ಅನುದಾನದಲ್ಲಿ ₹10 ಲಕ್ಷ ವೆಚ್ಚದಲ್ಲಿ 7 ಮಂದಿ ಅಂಗವಿಕಲರಿಗೆ ತ್ರಿಚಕ್ರ ಯಂತ್ರಚಾಲಿತ ವಾಹನ ವಿತರಿಸಲಾಯಿತು.

ರಾಜ್ಯ ವಲಯ ಯೋಜನೆಯಾದ ಮೀನುಗಾರಿಕೆ ಸಲಕರಣೆ ಕಿಟ್ಟನ್ನು 13 ಫಲಾನುಭವಿಗಳಿಗೆ ನೀಡಲಾಯಿತು. ಅದರಲ್ಲಿ ನೈಲನ್‌ ಮಾನೋಫಿಲೋಮೆಂಟ್‌ ಬಲೆಗಳು, ಮೀನುಗಾರಿಕಾ ಸಾಮಗ್ರಿಗಳಿದ್ದವು.

ಮೈಕಾಸುರನ ಹಾವಳಿ

ಸಭೆಯುದ್ದಕ್ಕೂ ಧ್ವನಿವರ್ಧಕದ ಸಮಸ್ಯೆ ಕಾಡಿತು. ಸಭೆಯಲ್ಲಿ ತಾಲ್ಲೂಕು ಪಂಚಾಯಿತಿ ಸದಸ್ಯರು, ಅಧಿಕಾರಿಗಳಲ್ಲದೇ ಹೊರಗಿನಿಂದ ಬಂದವರೂ ಸಲಹೆ ಕೊಡುವುದೂ ಕಂಡು ಬಂತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು