ದಾವಣಗೆರೆ: ಸಂತೆ ಜಕಾತಿ ಟೆಂಡರ್‌ಗೆ ದಿನ ನಿಗದಿ ಮಾಡಿ, ಬಿಡ್‌ದಾರರು ಬಿಡ್ ಮಾಡಿದ್ದರೂ ಟೆಂಡರ್ ನಡೆಸದೇ ಆಯುಕ್ತರು ಪಾಲಿಕೆ ಬೊಕ್ಕಸಕ್ಕೆ ಲಕ್ಷಾಂತರ ರೂಪಾಯಿ ನಷ್ಟ ಉಂಟು ಮಾಡಿದ್ದಾರೆ. ಪಾಲಿಕೆ ಆಯುಕ್ತರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ಆಗ್ರಹಿಸಿತು.
ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಬುಧವಾರ ನಡೆದ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಬಿರುಸಿನ ಚರ್ಚೆ ನಡೆಯಿತು.
ಈ ಬಾರಿ ಆನ್‌ಲೈನ್ ಮೂಲಕ ಟೆಂಡರ್ ಕರೆಯಲಾಗಿತ್ತು. ಯಾವಾಗಲೂ ಟೆಂಡರ್‌ನ ಇಎಂಡಿ ಮೊತ್ತ ಶೇ 1ರಷ್ಟು ಇರುತ್ತದೆ. ಅಂದರೆ ₹ 1 ಕೋಟಿ ಬಿಡ್ ಆಗಬಹುದಾದ ಟೆಂಡರ್‌ಗೆ ₹ 1 ಲಕ್ಷ ಇಎಂಡಿ ಇರುತ್ತದೆ. ಆದರೆ ₹ 50 ಲಕ್ಷದಿಂದ ₹ 60 ಲಕ್ಷವರೆಗೆ ಆಗಬಹುದಾದ ಸಂತೆ ಜಕಾತಿ ಟೆಂಡರ್‌ಗೆ ₹ 10 ಲಕ್ಷ ಇಎಂಡಿ ಇರಿಸಲಾಗಿದೆ. ಇದರಿಂದ ಸಾಮಾನ್ಯರು ಯಾರೂ ಟೆಂಡರ್‌ನಲ್ಲಿ ಭಾಗವಹಿಸದಂತಾಗಿದೆ. ಮೂವರು ಮಾತ್ರ ₹ 10 ಲಕ್ಷ ಇಎಂಡಿ ಕಟ್ಟಿದರು. ಆದರೂ ನಿಗದಿತ ದಿನದಂದು ಟೆಂಡರ್ ಪ್ರಕ್ರಿಯೆ ನಡೆಸಿಲ್ಲ. ಇದರಿಂದ ಪ್ರತಿ ತಿಂಗಳು ₹ 7–8 ಲಕ್ಷ ನಷ್ಟವಾಗುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಎ. ನಾಗರಾಜ್ ಆರೋಪಿಸಿದರು.
‘ಕೊರೊನಾ ಸಮಯದಲ್ಲಿ ಜಕಾತಿ ವಸೂಲಾತಿಗೆ ರಿಯಾಯಿತಿ ನೀಡಲಾಗಿತ್ತು. ಹಿಂದೆ ಬುಟ್ಟಿಯಲ್ಲಿ ತರಕಾರಿ ಮಾರುವರರ ಜೇಬಿಗೆ ಕೈ ಹಾಕಿ ಜಕಾತಿ ಕಿತ್ತುಕೊಳ್ಳುತ್ತಿರುವುದೆಲ್ಲ ಗಮನಕ್ಕೆ ಬಂದಿತ್ತು. ಅದನ್ನೆಲ್ಲ ನಿಯಂತ್ರಿಸಲು ಠೇವಣಿಯನ್ನು ₹ 10 ಲಕ್ಷಕ್ಕೆ ಏರಿಸಿದ್ದೇವೆ. ಹಿಂದೆ ಟೆಂಡರ್ ಪಡೆದವರು ₹ 22 ಲಕ್ಷ ಕಟ್ಟಲು ಬಾಕಿ ಇದೆ. ಅಂಥವರು ಮತ್ತೆ ಟೆಂಡರ್ ಹಾಕುವ ಬದಲು ಆರ್ಥಿಕ ಸಾಮರ್ಥ್ಯ ಇದ್ದವರು ಹಾಕಲಿ ಎಂದು ಈ ಕ್ರಮ ಕೈಗೊಂಡಿದ್ದೇವೆ. ಅದು ಟೆಂಡರ್ ಮುಗಿದಮೇಲೆ ಅವರಿಗೆ ಮರುಪಾವತಿಯಾಗುತ್ತದೆ’ ಎಂದು ಆಯುಕ್ತ ವಿಶ್ವನಾಥ ಮುದಜ್ಜಿ ಸಮರ್ಥಿಸಿಕೊಂಡರು.
₹ 10 ಲಕ್ಷ ಠೇವಣಿ ನಿಗದಿ ಪಡಿಸಲು ಕಾನೂನಿನಲ್ಲಿ ಅವಕಾಶ ಇದೆಯೇ? ಇದು ಸರಿಯಾದ ಕ್ರಮವಲ್ಲ. ಅಲ್ಲದೇ ಕೊನೇ ಕ್ಷಣದಲ್ಲಿ ಟೆಂಡರ್ ರದ್ದು ಮಾಡಿರುವುದನ್ನು ನೋಡಿದರೆ ಇದರಲ್ಲಿ ಏನೋ ಅವ್ಯವಹಾರ ಇದೆ ಎಂದು ನಾಗರಾಜ್, ಲತೀಫ್, ಚಮನ್‌ಸಾಬ್, ಉದಯಕುಮಾರ್ ಸೇರಿ ಹಲವು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.
‘ತಲೆಯಲ್ಲಿ ಬುಟ್ಟಿ ಹೊತ್ತುಕೊಂಡು ಬಂದು ವ್ಯಾಪಾರ ಮಾಡುವ ಬಡವರಿಂದ ಜಕಾತಿ ವಸೂಲಿ ಮಾಡುವ ಬದಲು ಉಚಿತವಾಗಿ ವ್ಯಾಪಾರ ಮಾಡಲು ಬಿಡಿ’ ಎಂದು ಉದಯಕುಮಾರ್, ನಾಗರಾಜ್ ಒತ್ತಾಯಿಸಿದರು.
‘ಬೇರೆ ನಗರಗಳಲ್ಲಿ ಈ ರೀತಿ ಮಾಡಿದ್ದಾರಾ ಎಂದು ಅಧ್ಯಯನ ಮಾಡಿ ನಿರ್ಧಾರ ಕೈಗೊಳ್ಳಿ’ ಎಂದು ವಿಧಾನಪರಿಷತ್ ಸದಸ್ಯ ರವಿಕುಮಾರ್ ಸಲಹೆ ನೀಡಿದರು. ಅದರಂತೆ ತೀರ್ಮಾನ ಕೈಗೊಳ್ಳುವುದಾಗಿ ಮೇಯರ್ ಎಸ್.ಟಿ. ವೀರೇಶ್ ಹೇಳಿದರು.
ಸದಸ್ಯರ ಗಮನಕ್ಕಿಲ್ಲದೇ ಡೋರ್ ನಂಬರ್: ‘ವಾರ್ಡ್‌ಗಳಲ್ಲಿ ಡೋರ್ ನಂಬರ್ ನೀಡುತ್ತಿರುವುದು ಸದಸ್ಯರ ಗಮನಕ್ಕೆ ಬರುತ್ತಿಲ್ಲ. ನನ್ನ ವಾರ್ಡಿನಲ್ಲಿ ಬರುವ ಲೇಔಟ್‍ಗೆ ಲಿಂಕ್ ರಸ್ತೆ ಇಲ್ಲದೇ ಅನುಮತಿ ನೀಡಲಾಗಿದೆ. ಹೈಟೆನ್ಶನ್ ವಯರ್ ಇದ್ದರೂ ನೀಡಲಾಗಿದೆ’ ಎಂದು ಉಮಾ ಪ್ರಕಾಶ್ ಆರೋಪಿಸಿದರು.
‘ಹಿಂದೆ ಹೈಟೆನ್ಶನ್ ವಯರ್ ಇದ್ದಿದ್ದು ಹೌದು. ಆದರೆ ಅದಕ್ಕೆ ರೈತರಿಗೆ ಹಣ ನೀಡಿರಲಿಲ್ಲ. ಶೋಭಾ ಕರಂದ್ಲಾಜೆ ವಿದ್ಯುತ್ ಸಚಿವರಾಗಿದ್ದ ಕಾಲದಲ್ಲಿ ಅವುಗಳನ್ನು ತೆರವುಗಳಿಸಲಾಗಿತ್ತು. ಹಾಗಾಗಿ ಆಕ್ಷೇಪ ಸರಿಯಲ್ಲ’ ಎಂದು ಬಿ.ಜಿ. ಅಜಯ್ ಕುಮಾರ್ ಸಮರ್ಥನೆ ನೀಡಿದರು.
‘ನಾನೇ ಸ್ವತಃ ಸ್ಥಳಕ್ಕೆ ಭೇಟಿ ನೀಡಿ ಡೋರ್‌ನಂಬರ್ ನೀಡುತ್ತಿದ್ದೇನೆ. ಸರಿ ಇಲ್ಲದ ಕಡೆಗಳಲ್ಲಿ ನೀಡುತ್ತಿಲ್ಲ’ ಎಂದು ಮೇಯರ್ ಎಸ್.ಟಿ. ವೀರೇಶ್ ಹೇಳಿದರು.
ಖಾಸಗಿ ಸಂಸ್ಥೆಗಳ ಹಬ್ಬಕ್ಕೆ ಅನುದಾನ ಬೇಡ: ವಿಜಯ ದಶಮಿಗೆ ₹ 3 ಲಕ್ಷ ನೀಡಲು ನಿರ್ಧರಿಸಿರುವುದನ್ನು ಮತ್ತೊಮ್ಮೆ ಪರಿಶೀಲನೆ ಮಾಡಬೇಕು. ಪಾಲಿಕೆ, ಜಿಲ್ಲಾಡಳಿತ ಮುಂತಾದ ಸರ್ಕಾರಿ ಸಂಸ್ಥೆಗಳೇ ಹಬ್ಬ ಆಚರಿಸುವಾಗ ಅನುದಾನ ನೀಡಬಹುದು. ಖಾಸಗಿ ಸಂಸ್ಥೆಗಳು ಮಾಡುವಾಗ ನೀಡಲು ಅವಕಾಶ ಇರುವುದಿಲ್ಲ ಎಂದು ಎ. ನಾಗರಾಜ್ ತಿಳಿಸಿದರು.
‘2012ರಲ್ಲಿ ಆಗಿನ ಆಡಳಿತದವರು ನೀಡಿದ ದಾಖಲೆಗಳಿವೆ ಎಂದು ಬಿ.ಜಿ. ಅಜಯ್ ಕುಮಾರ್ ತಿಳಿಸಿದರು. ಆಗ ಆಡಿಟ್‌ನಲ್ಲಿ ಆಕ್ಷೇಪವಾಗಿತ್ತು. ಹಾಗಾಗಿ ಆಡಿಟ್‌ನಲ್ಲಿ ತೊಂದರೆಯಾಗದಂತೆ ನೋಡಿಕೊಳ್ಳಿ’ ಎಂದು ಹೇಳಿದರು.
‘ಸ್ಥಾಯಿ ಸಮಿತಿ ಅಧ್ಯಕ್ಷರಿಗೆ ವಾಹನ ನೀಡುವ ಬಗ್ಗೆ ಹಿಂದೆ ಸಭೆಯಲ್ಲಿ ಚರ್ಚೆಯಾಗಿಲ್ಲ. ಆದರೂ ಸ್ಥಿರೀಕರಣಕ್ಕೆ ನೀಡಿದ್ದೀರಿ. ಹಾಗೆ ಮಾಡಬಾರದು. ವಾಹನ ನೀಡುವುದಕ್ಕೆ ನಮ್ಮ ವಿರೋಧವಲ್ಲ. ಆದರೆ ಅದಕ್ಕೂ ಅವಕಾಶ ಇದೆಯೇ ಇಲ್ವೆ ಎಂದು ನೋಡಿ. ಯಾಕೆಂದರೆ ಮೈಸೂರಿನಲ್ಲಿ ಇದೇ ರೀತಿ ವಾಹನ ನೀಡಿದ್ದನ್ನು ಸರ್ಕಾರ ಒಪ್ಪಿಲ್ಲ’ ಎಂದು ನಾಗರಾಜ್ ಮಾಹಿತಿ ನೀಡಿದರು.
‘ಹಿಂದಿನ ಸಭೆಯ ತೀರ್ಮಾನ ಸ್ಥಿರೀಕರಿಸಲು ನೀಡಿರುವ ನಡಾವಳಿಯಲ್ಲಿ ಪ್ರಶ್ನೆ ಒಂದು ತೀರ್ಮಾನ ಇನ್ನೊಂದಿದೆ’ ಎಂದು ಕೆ. ಚಮನ್‌ಸಾಬ್ ಆಕ್ಷೇಪ ವ್ಯಕ್ತಪಡಿಸಿದರು.
ಶವಸಂಸ್ಕಾರಕ್ಕೆ ಶುಲ್ಕವಿಲ್ಲ
ಪಾಲಿಕೆ ವ್ಯಾಪ್ತಿಯ ರುದ್ರಭೂಮಿಗಳಲ್ಲಿ ಇನ್ನು ಮುಂದೆ ಶವ ಸಂಸ್ಕಾರಕ್ಕೆ ಯಾವುದೇ ಶುಲ್ಕ ಇರುವುದಿಲ್ಲ. ಈ ಕಾರ್ಯವನ್ನು ಪಾಲಿಕೆಯೆ ಉಚಿತವಾಗಿ ನಡೆಸಲಿದೆ ಎಂದು ಮೇಯರ್ ಎಸ್.ಟಿ. ವೀರೇಶ್ ತಿಳಿಸಿದರು.
ಶವಸಂಸ್ಕಾರದ ಸಂದರ್ಭದಲ್ಲಿ ಸಾರ್ವಜನಿಕರು ಅನುಭವಿಸುತ್ತಿದ್ದ ಸಮಸ್ಯೆಗಳನ್ನು ಗಮನದಲ್ಲಿ ಇಟ್ಟುಕೊಂಡು ಪಾಲಿಕೆಯಿಂದಲೇ ಅದರ ವೆಚ್ಚ ಭರಿಸಲು ನಿರ್ಧರಿಸಲಾಗಿದೆ. ಈ ಕಾರ್ಯವನ್ನು ಏಜೆನ್ಸಿಗೆ ವಹಿಸಲಾಗುವುದು ಎಂದು ವಿವರಿಸಿದರು.
ಪಕ್ಷಗಳ ಕೆಸರೆರಚಾಟ: ಗೊಂದಲದ ಗೂಡಾದ ಸಭೆ
ಸಭೆಯಲ್ಲಿ ಪಕ್ಷಗಳ ಮೇಲಾಟದ ಚರ್ಚೆಗಳೇ ಹೆಚ್ಚಾಗಿ ಸಭೆ ಗೊಂದಲದ ಗೂಡಾಯಿತು.
ಬಿಜೆಪಿ ಇರುವುದೇ ಒಳ್ಳೆಯದನ್ನು ಮಾಡಲು ಎಂದು ಸದಸ್ಯೆ ಎಚ್.ಸಿ. ಜಯಮ್ಮ ಹೇಳಿದಾಗ, ‘ಪೆಟ್ರೋಲ್, ಡೀಸೆಲ್, ಗ್ಯಾಸ್ ಹೀಗೆ ಎಲ್ಲದರ ದರ ಏರಿಸಿ ಒಳ್ಳೆಯದು ಮಾಡಿದ್ದೀರಿ’ ಎಂದು ಕಾಂಗ್ರೆಸ್‌ನವರು ಕಿಚಾಯಿಸಿದರು. ‘ನಿಮ್ಮ ಆಡಳಿತ ಇರುವಾಗ ಓಣಿಗೊಬ್ಬ ಕೋಟ್ಯಧಿಪತಿ, ಮನೆಗೊಬ್ಬ ಲಕ್ಷಾಧಿಪತಿ ಇದ್ದರು. ಈಗ ಎಲ್ಲ ಬೀದಿಗೆ ಬಿದ್ದಿದ್ದಾರೆ’ ಎಂದು ಬಿಜೆಪಿಯವರು ಪ್ರತ್ಯುತ್ತರಿಸಿದರು.
‘ಉಜ್ವಲ ಯೋಜನೆಯಲ್ಲಿ ಬಡವರಿಗೆ ಸಿಲಿಂಡರ್, ಒಲೆ ನೀಡಿದ್ದೇವೆ. ಜನರ ಒಳಿತಿಗಾಗಿ ನೂರಾರು ಯೋಜನೆಗಳನ್ನು ಮಾಡಿದ್ದೇವೆ’ ಎಂದು ಪ್ರಸನ್ನ ಕುಮಾರ್ ಹೇಳಿದರೆ, ‘ಉಜ್ವಲ ಯೋಜನೆಯ ಸಿಲಿಂಡರ್ ಕೂಡ ತುಂಬಿಸಲೂ ಆಗುತ್ತಿಲ್ಲ’ ಎಂದು ಕಾಂಗ್ರೆಸ್ ಸದಸ್ಯರು ಹೇಳಿದರು.
ಲಸಿಕೆ ಉಚಿತವಾಗಿ ಮೋದಿ ನೀಡಿದ್ದಾರೆ ಎಂದು ಬಿಜೆಪಿಯವರು ತಿಳಿಸಿದರೆ, ‘ದಾವಣಗೆರೆಯಲ್ಲಿ ಸ್ವಂತ ಖರ್ಚಿನಲ್ಲಿ ಶಾಮನೂರು ಶಿವಶಂಕರಪ್ಪ ಲಸಿಕೆ ಕೊಡಿಸಿದ್ದಾರೆ’ ಎಂದು ಕಾಂಗ್ರೆಸಿಗರು ಹೇಳಿದರು.
ಹೀಗೆ ಸಭೆಯಲ್ಲಿ ಅಜೆಂಡ ಬಿಟ್ಟು ಚರ್ಚೆಯೇ ಜೋರಾಗಿ ನಡೆಯಿತು.
‘ಸ್ಮಾರ್ಟ್ ಸಿಟಿ ಯೋಜನೆ ತಂದವರಾರು?’
ದಾವಣಗೆರೆಗೆ ಸ್ಮಾರ್ಟ್ ಸಿಟಿ ಯೋಜನೆ ತಂದವರು ಯಾರು ಎಂಬುದರ ಬಗ್ಗೆಯೂ ಬಿಸಿ ಬಿಸಿ ಚರ್ಚೆಗಳಾದವು.
‘ನರೇಂದ್ರ ಮೋದಿ ಈ ಯೋಜನೆಯನ್ನು ರೂಪಿಸಿದ್ದು, ಸಂಸದ ಜಿ.ಎಂ. ಸಿದ್ದೇಶ್ವರ ಈ ಯೋಜನೆ ತಂದರು’ ಎಂಬುದು ಬಿಜೆಪಿ ಸದಸ್ಯರು ವಾದ ಮಾಡಿದರೆ, ‘ಕೇಂದ್ರ ಸರ್ಕಾರ ಹೊರಡಿಸಿದ್ದ ಮಾರ್ಗಸೂಚಿಗಳಿಗೆ ಸರಿಯಾಗಿ ಗುರಿ ತಲುಪಿದ್ದರಿಂದ ನಮಗೆ ಈ ಯೋಜನೆ ಸಿಗುವಂತಾಯಿತು. ಶಾಮನೂರು ಶಿವಶಂಕರಪ್ಪ, ಎಸ್.ಎಸ್. ಮಲ್ಲಿಕಾರ್ಜುನ ಅವರ ಪ್ರಯತ್ನದಿಂದ, ಸಾವಿರಾರು ಕೋಟಿ ಅನುದಾನದ ಬಳಕೆಯಿಂದ ಬಂದಿದೆ’ ಎಂದು ಕಾಂಗ್ರೆಸ್ ಸದಸ್ಯರು ವಾದಿಸಿದರು.
ಸ್ಮಾರ್ಟ್ ಸಿಟಿ ಯೋಜನೆ ತರಲು ಕಾರಣರಾದ ಚಾಲಕ ಶಕ್ತಿ ಯಾರು ಸಿದ್ದೇಶ್ವರ್ ಅವರಾ, ಶಾಮನೂರು ಅವರಾ ಎಂಬುದು ಕೊನೆಗೂ ನಿರ್ಧಾರವಾಗಲಿಲ್ಲ.
‘ತಾರತಮ್ಯ ಮಾಡಿಲ್ಲ’
ನಗರೋತ್ಥಾನ ಯೋಜನೆಯಲ್ಲಿ ₹ 125 ಕೋಟಿ ಅನುದಾನ ಬಂದಿದೆ. ಬಿಜೆಪಿ ಸದಸ್ಯರ ವಾರ್ಡ್‌ಗಳಿಗೆ ₹ 3–4 ಕೋಟಿ ನೀಡಲಾಗಿದೆ. ಕಾಂಗ್ರೆಸ್ ಸದಸ್ಯರ ವಾರ್ಡ್‌ಗಳಿಗೆ ₹ 30–40 ಲಕ್ಷ ನೀಡಲಾಗಿದೆ. ಈ ರೀತಿ ತಾರತಮ್ಯ ಮಾಡಲಾಗಿದೆ ಎಂದು ಕಾಂಗ್ರೆಸ್ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.
ಯಾವುದೇ ತಾರತಮ್ಯ ಮಾಡಿಲ್ಲ ಎಂದು ಮೇಯರ್ ಸಮರ್ಥಿಸಿಕೊಂಡರು.
ಸ್ಮಾ‘ರ್ಟ್ ಸಿಟಿ ಯೋಜನೆಯಡಿ ₹ 450 ಕೋಟಿ ಅನುದಾನ ಬಂದಾಗ ₹ 250 ಕೋಟಿ ದಾವಣಗೆರೆ ದಕ್ಷಿಣಕ್ಕೇ ಹಾಕಿಕೊಂಡಿದ್ದೀರಿ ಅವಾಗ ತಾರತಮ್ಯ ಆಗಿರುವುದು ಗೊತ್ತಾಗಿಲ್ವ’ ಎಂದು ಶಾಸಕ ಎಸ್.ಎ. ರವೀಂದ್ರನಾಥ್ ಪ್ರಶ್ನಿಸಿದರು.
ಪ್ರತಿಭಟನೆ
ಮನೆಗಳನ್ನು ಬಿಟ್ಟು ಖಾಲಿ ನಿವೇಶನಗಳಿಗೆ, ವಾಣಿಜ್ಯ, ಕೈಗಾರಿಕೆ ಪ್ರದೇಶಗಳಿಗೆ ಹೊಸ ತೆರಿಗೆ ನೀತಿ ಮಾರಕವಾಗಿದೆ. ಎರಡು ಪಟ್ಟು ಹೆಚ್ಚಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ಸದಸ್ಯರು ಪ್ಲೆಕಾರ್ಡ್ ಹಿಡಿದು ಮೇಯರ್ ಮುಂದೆ ಬಂದು ಪ್ರತಿಭಟನೆ ನಡೆಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.