ಮಂಗಳವಾರ, ಜೂನ್ 28, 2022
20 °C
3ನೇ ಅಲೆ ಎದುರಿಸಲು ಸಿದ್ಧರಾಗಿ: ಉಸ್ತುವಾರಿ ಸಚಿವ ಬೈರತಿ ಬಸವರಾಜ ಸೂಚನೆ

ಜಿಲ್ಲೆಯ 70 ಸಾವಿರ ಮಕ್ಕಳಿಗೆ ಕೊರೊನಾ ಬರುವ ಸಾಧ್ಯತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಜುಲೈಯಿಂದ ಮೂರನೇ ಅಲೆ ಬರಲಿದೆ ಎಂಬ ಅಂದಾಜಿದೆ. ಮೂರನೇ ಅಲೆ ಬಂದರೆ ಜಿಲ್ಲೆಯಲ್ಲಿ 70 ಸಾವಿರ ಮಕ್ಕಳಿಗೆ ಕೊರೊನಾ ಬರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮೂರನೇ ಅಲೆ ಎದುರಿಸಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ ತಿಳಿಸಿದ್ದಾರೆ.

ಕೋವಿಡ್ ಸ್ಥಿತಿ-ಗತಿ ಹಾಗೂ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಈ ಚರ್ಚೆ ನಡೆಯಿತು.

ಜಿಲ್ಲೆಯಲ್ಲಿ ಈಗಾಗಲೇ ಒಟ್ಟು 68 ಮಕ್ಕಳ ತಜ್ಞ ವೈದ್ಯರ ಪಟ್ಟಿ ಸಿದ್ಧಪಡಿಸಲಾಗಿದೆ. ಇತ್ತೀಚೆಗಷ್ಟೇ ಸರ್ಕಾರಿ ಆಸ್ಪತ್ರೆ, ವೈದ್ಯಕೀಯ ಕಾಲೇಜುಗಳ ಮಕ್ಕಳ ತಜ್ಞ ವೈದ್ಯರು, ಅಲ್ಲದೆ ಜಿಲ್ಲೆಯ ಮಕ್ಕಳ ತಜ್ಞ ವೈದ್ಯರ ಸಂಘದ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ಚರ್ಚೆ ನಡೆಸಲಾಗಿದೆ. ತಜ್ಞರ ಜತೆಗೆ ಸಭೆ ನಡೆಸಲಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ವಿವರ ನೀಡಿದರು.

ಜಿಲ್ಲೆಯಲ್ಲಿ 18 ವರ್ಷದೊಳಗಿನವರು 7 ಲಕ್ಷ ಇದ್ದಾರೆ. ಅದರಲ್ಲಿ ಶೇ 10 ಮಂದಿಗೆ ಕೊರೊನಾ ಬರುವ ಸಾಧ್ಯತೆ ಇದೆ. ಅಷ್ಟು ಮಂದಿಯಲ್ಲಿ ಶೇ 2ರಷ್ಟು ಅಂದರೆ ಸುಮಾರು 1,400 ಮಕ್ಕಳಿಗೆ ತೀವ್ರ ತರಹದ ಚಿಕಿತ್ಸೆಯ ಅಗತ್ಯ ಬೀಳಲಿದೆ. ಅದಕ್ಕಾಗಿ ಕನಿಷ್ಠ 250 ವೆಂಟಿಲೇಟರ್‌, ಆಮ್ಲಜನಕ ಬೆಡ್‌ಗಳು ಬೇಕಾಗುತ್ತದೆ. ಈಗ ಚಿಗಟೇರಿ ಆಸ್ಪತ್ರೆ, ಖಾಸಗಿ ಆಸ್ಪತ್ರೆಗಳು ಸೇರಿ 200 ಬೆಡ್‌ಗಳಿವೆ. ಇನ್ನೂ 50 ವೆಂಟಿಲೇಟರ್‌, ಆಮ್ಲಜನಕದ ಬೆಡ್‌ಗಳ ಅವಶ್ಯಕತೆ ಇದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗರಾಜ್‌ ಮಾಹಿತಿ ನೀಡಿದರು.

ಸರ್ಕಾರಿ 10, ಖಾಸಗಿ 58 ಸೇರಿ 68 ಮಂದಿ ಮಕ್ಕಳ ತಜ್ಞರ ಜತೆಗೆ ಸಭೆ ನಡೆಸಲಾಗಿದೆ. ಜಿಲ್ಲಾ ಆಸ್ಪತ್ರೆ, ತಾಯಿ, ಮಕ್ಕಳ ಆಸ್ಪತ್ರೆ, ಎಸ್‍ಎಸ್ ಆಸ್ಪತ್ರೆ, ಬಾಪೂಜಿ ಆಸ್ಪತ್ರೆ ಸೇರಿ ಎಲ್ಲ ತಾಲ್ಲೂಕು ಆಸ್ಪತ್ರೆಗಳಲ್ಲೂ ಮಕ್ಕಳ ಐಸಿಯು ಘಟಕ ಸಿದ್ಧಪಡಿಸಿಕೊಳ್ಳಲು ಉದ್ದೇಶಿಸಲಾಗಿದೆ. ಜಿಲ್ಲೆಯಲ್ಲಿ ನುರಿತ ಶುಶ್ರೂಷಕರ ಅಗತ್ಯ ಇದೆ. ನರ್ಸಿಂಗ್ ವಿದ್ಯಾರ್ಥಿಗಳನ್ನು ತರಬೇತುಗೊಳಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ತೀವ್ರ ಅಪೌಷ್ಟಿಕದಿಂದ 186 ಮಕ್ಕಳು ಹಾಗೂ ಅಪೌಷ್ಟಿಕದಿಂದ ಹೊಂದಿರುವ 2 ಸಾವಿರ ಮಕ್ಕಳಿದ್ದಾರೆ.ಅವರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಕಾರ್ಯ ಕೈಗೊಳ್ಳಲಾಗುವುದು ಎಂದರು.

ಸಂಭವನೀಯ 3ನೇ ಅಲೆ ತಡೆಗಟ್ಟಲು ರಾಜ್ಯ ಮಟ್ಟದಲ್ಲಿ ಟಾಸ್ಕ್‌ಫೋರ್ಸ್ ಸಭೆ ನಡೆದಿದೆ. ₹ 1,500 ಕೋಟಿ ವೆಚ್ಚದ ಯೋಜನೆ ಸಿದ್ಧಪಡಿಸಿ, ಜಿಲ್ಲಾವಾರು ಅಗತ್ಯ ಔಷಧ, ಪರಿಕರ ನೀಡಲು ನಿರ್ಧರಿಸಲಾಗಿದೆ. ಹೀಗಾಗಿ ಜಿಲ್ಲೆಗೆ ಅಗತ್ಯವಿರುವ ಮಕ್ಕಳ ವೆಂಟಿಲೇಟರ್, ಪೂರಕ ಔಷಧಗಳು, ಆಸ್ಪತ್ರೆಗಳಲ್ಲಿ ಮೂಲಭೂತ ಅವಶ್ಯಕತೆಗಳನ್ನು ಹೊಂದಿಸಿಕೊಳ್ಳಲು ಬೇಕಿರುವ ಪಟ್ಟಿಯೊಂದಿಗೆ ಪ್ರಸ್ತಾವನೆ ಸಲ್ಲಿಸಬೇಕು. ಮಕ್ಕಳಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಸೂಚನೆ ನೀಡಿದರು.

ಕೋವಿಡ್ ಸೋಂಕಿನ ಸರಪಳಿ ತುಂಡರಿಸಲು, ಜಿಲ್ಲೆಯಲ್ಲಿ ಕೋವಿಡ್ ಪರೀಕ್ಷೆ ಸಂಖ್ಯೆಯನ್ನು ಹೆಚ್ಚಿಸಬೇಕು. ಸರ್ಕಾರ ನಿತ್ಯ 4,736 ಟೆಸ್ಟ್ ಕೈಗೊಳ್ಳುವಂತೆ ಗುರಿ ನಿಗದಿಪಡಿಸಿದೆ. ಜಿಲ್ಲೆಯಲ್ಲಿ ಇನ್ನೂ 3,500 ಟೆಸ್ಟ್ ಮಾತ್ರ ಮಾಡಲಾಗುತ್ತಿದೆ. ಟೆಸ್ಟಿಂಗ್ ಸರಿಯಾಗಿ ಆಗುತ್ತಿಲ್ಲ ಎಂಬ ದೂರುಗಳಿವೆ. ಪ್ರತಿದಿನ 5 ಸಾವಿರಕ್ಕೂ ಅಧಿಕ ಪರೀಕ್ಷೆ ನಡೆಸಬೇಕು ಎಂದು ತಿಳಿಸಿದರು.

ಸಿಇಒ ಡಾ. ವಿಜಯ ಮಹಾಂತೇಶ್ ದಾನಮ್ಮನವರ್‌, ‘ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ರಚಿಸಲಾಗಿದ್ದ ಕಾರ್ಯಪಡೆಗಳು ಕಾರ್ಯ ನಿರ್ವಹಿಸುತಿದ್ದು, ಸೋಂಕಿತ ಸಂಪರ್ಕಿತರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಗ್ರಾಮ ಪಂಚಾಯಿತಿ ಕಾರ್ಯಪಡೆಗಳು ನಿರ್ವಹಿಸುತ್ತಿವೆ.  ಗ್ರಾಮೀಣ ಪ್ರದೇಶದಲ್ಲಿ ಐಸೋಲೇಷನ್‍ನಲ್ಲಿ ಇದ್ದವರನ್ನು ಕೋವಿಡ್ ಕೇರ್ ಸೆಂಟರ್‌ಗಳಿಗೆ ದಾಖಲಿಸಲಾಗುತ್ತಿದೆ’ ಎಂದು ಸಚಿವರಿಗೆ ಮಾಹಿತಿ ನೀಡಿದರು.

ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕರಾದ ಎಸ್.ಎ. ರವೀಂದ್ರನಾಥ್, ಮಾಡಾಳ್ ವಿರೂಪಾಕ್ಷಪ್ಪ, ಎಸ್‌.ವಿ. ರಾಮಚಂದ್ರ, ಪ್ರೊ. ಲಿಂಗಣ್ಣ, ಮೇಯರ್‌ ಎಸ್.ಟಿ. ವೀರೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಅವರೂ ಇದ್ದರು.

ಮಾಯಕೊಂಡಕ್ಕೆ ಆಕ್ಸಿಜನ್‌ ಪ್ಲಾಂಟ್‌

‘ಆಮ್ಲಜನಕ ಘಟಕ ನೀಡುವಂತೆ ದಾನಿಯೊಬ್ಬರಿಗೆ ತಿಳಿಸಿದ್ದೇನೆ. ಅವರು ಒಪ್ಪಿದ್ದಾರೆ. ಜಿಲ್ಲೆಯಲ್ಲಿ ಈ ಘಟಕ ಸ್ಥಾಪನೆ ಮಾಡಲು ವ್ಯವಸ್ಥೆ ಮಾಡಿ’ ಎಂದು ಸಚಿವ ಬೈರತಿ ಬಸವರಾಜ ತಿಳಿಸಿದರು. ‘ಮಾಯಕೊಂಡದಲ್ಲಿ ಮಾಡಿ’ ಎಂದು ಶಾಸಕ ಪ್ರೊ. ಲಿಂಗಣ್ಣ ಬೇಡಿಕೆ ಸಲ್ಲಿಸಿದರು. ಮಾಯಕೊಂಡದಲ್ಲಿಯೇ ಸ್ಥಳ ಪರಿಶೀಲನೆ ಮಾಡಿ’ ಎಂದು ಸಚಿವರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು