ಗುರುವಾರ , ಜನವರಿ 28, 2021
27 °C
ವಿದ್ಯಾರ್ಥಿಗಳ ಆತಿಥ್ಯಕ್ಕೆ ಸಜ್ಜಾಗಿವೆ ಜಿಲ್ಲೆಯ ವಿವಿಧ ಹಾಸ್ಟೆಲ್‌ಗಳು, ವಸತಿ ಶಾಲೆಗಳು

ಕೊರೊನಾ ವರದಿ ವಿಳಂಬ: ತರಗತಿ ವಂಚಿತ ಹಾಸ್ಟೆಲ್‌ ಮಕ್ಕಳು

ಅನಿತಾ ಎಚ್. Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಕೊರೊನಾ ಕಾರಣ ಸುದೀರ್ಘ ರಜೆಯ ಬಳಿಕ ಶಾಲಾ–ಕಾಲೇಜುಗಳು ಆರಂಭವಾಗಿವೆ. ಮಕ್ಕಳೂ ಉತ್ಸಾಹದಿಂದಲೇ ತರಗತಿಗಳಿಗೆ ಹಾಜರಾಗುತ್ತಿದ್ದಾರೆ. ಆದರೆ, ಹಾಸ್ಟೆಲ್‌ಗಳಲ್ಲಿರುವ ವಿದ್ಯಾರ್ಥಿಗಳು ಸಕಾಲದಲ್ಲಿ ಹಾಜರಾಗಲು ಸಾಧ್ಯವಾಗದೇ ತರಗತಿಗಳಿಂದ ವಂಚಿತರಾಗುತ್ತಿದ್ದಾರೆ.

ಕೊರೊನಾ ಮಾರ್ಗಸೂಚಿ ಅನುಸಾರ ಹಾಸ್ಟೆಲ್‌ಗಳಲ್ಲಿ ಉಳಿಯುವ ವಿದ್ಯಾರ್ಥಿಗಳು ಕೋವಿಡ್‌–19 ಆರ್‌ಟಿಪಿಸಿಆರ್‌ ನೆಗೆಟಿವ್‌ ಪ್ರಮಾಣಪತ್ರ, ಪೋಷಕರ ಒಪ್ಪಿಗೆ ಪತ್ರ, ಮುಚ್ಚಳಿಕೆ ಪತ್ರ ತರುವುದು ಕಡ್ಡಾಯ. ಕೊರೊನಾ ನಡುವೆಯೂ ಕೆಲ ಪೋಷಕರು ಮಕ್ಕಳನ್ನು ಕಳುಹಿಸಲು ಧೈರ್ಯ ತೋರಿ ಕೊರೊನಾ ತಪಾಸಣೆ ಮಾಡಿಸುತ್ತಿದ್ದಾರೆ. ಆದರೆ, ವಾರ ಕಳೆದರೂ ವರದಿ ಬಾರದ ಕಾರಣ ಮಕ್ಕಳು ಹಾಸ್ಟೆಲ್‌ಗಳಿಗೆ ಬರಲು ಆಗುತ್ತಿಲ್ಲ. ವಾರ್ಡನ್‌ಗಳು, ವರದಿ ತಂದವರಿಗಷ್ಟೇ ಪ್ರವೇಶ ನೀಡುತ್ತಿರುವುದರಿಂದ ಸೀಮಿತ ಸಂಖ್ಯೆಯ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯು ವಿದ್ಯಾರ್ಥಿಗಳು ಇದ್ದು, ಬಹುತೇಕ ಹಾಸ್ಟೆಲ್‌ಗಳು ಭಣಗುಡುತ್ತಿವೆ. ಪದವಿ ವಿದ್ಯಾರ್ಥಿಗಳಿಗೆ ನವೆಂಬರ್‌ 17ರಿಂದಲೇ ಕಾಲೇಜು ಆರಂಭವಾಗಿದ್ದರೂ ಅರ್ಧದಷ್ಟು ವಿದ್ಯಾರ್ಥಿಗಳು ಮಾತ್ರ ಬಂದಿದ್ದಾರೆ.

ವಿದ್ಯಾರ್ಥಿಗಳು ಹಾಸ್ಟೆಲ್‌ ಪ್ರವೇಶಕ್ಕೆ 72 ಗಂಟೆಗಳ ಒಳಗಿನ ಕೊರೊನಾ ತಪಾಸಣಾ ವರದಿ ಸಲ್ಲಿಸಬೇಕು ಎಂದು ಸರ್ಕಾರದ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಆದರೆ, ಗಂಟಲು ದ್ರವವನ್ನು ಪರೀಕ್ಷೆಗೆ ಕೊಟ್ಟು ವಾರ ಕಳೆದರೂ ವರದಿ ಸಿಗುವುದು ತಡವಾಗುತ್ತಿದೆ.

ಜಿಲ್ಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಅಡಿಯಲ್ಲಿ ಮೆಟ್ರಿಕ್‌ ಪೂರ್ವ ಹಾಸ್ಟೆಲ್‌ಗೆ ಒಬ್ಬ ವಿದ್ಯಾರ್ಥಿಯೂ ಪ್ರವೇಶ ಪಡೆದಿಲ್ಲ. ಮೆಟ್ರಿಕ್‌ ನಂತರದ 16 ಹಾಸ್ಟೆಲ್‌ಗಳನ್ನು ತೆರೆಯಲಾಗಿದ್ದು, 573 ವಿದ್ಯಾರ್ಥಿಗಳು ಬಂದಿದ್ದಾರೆ.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಎಸ್ಸೆಸ್ಸೆಲ್ಸಿಯ ಒಟ್ಟು 336ರಲ್ಲಿ ಕೇವಲ 27 ಮಂದಿ ಹಾಗೂ ವಸತಿಶಾಲೆಗಳಲ್ಲಿ 139 ಮಂದಿ, ಪಿಯುನ ಒಟ್ಟು 564ರಲ್ಲಿ 93 ಮಂದಿ, ಅಂತಿಮ ಪದವಿಯ 896ರಲ್ಲಿ 714 ಮಂದಿ ಪ್ರವೇಶ ಪಡೆದಿದ್ದಾರೆ.

ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿ ದಾವಣಗೆರೆ ನಗರದಲ್ಲಿ ಮೆಟ್ರಿಕ್‌ ಪೂರ್ವ ಮೂರು ಹಾಸ್ಟೆಲ್‌ಗಳಿದ್ದು, 200 ವಿದ್ಯಾರ್ಥಿಗಳಲ್ಲಿ ಒಬ್ಬ ವಿದ್ಯಾರ್ಥಿಯೂ ಹಾಜರಾಗಿಲ್ಲ. ಚನ್ನಗಿರಿಯಲ್ಲಿ 75ಕ್ಕೆ 7, ಜಗಳೂರಿನಲ್ಲಿ 125ಕ್ಕೆ 13 ವಿದ್ಯಾರ್ಥಿಗಳಷ್ಟೇ ಇದ್ದಾರೆ. ಮೂರೂ ತಾಲ್ಲೂಕುಗಳೂ ಸೇರಿ ಮೆಟ್ರಿಕ್‌ ನಂತರದ 600 ವಿದ್ಯಾರ್ಥಿಗಳಲ್ಲಿ 151 ಮಾತ್ರ ಇದ್ದಾರೆ. ಉದ್ದಘಟ್ಟ, ವಡೇರಹಳ್ಳಿಯಲ್ಲಿರುವ ವಸತಿಶಾಲೆಯ 87 ಮಕ್ಕಳಲ್ಲಿ 16 ವಿದ್ಯಾರ್ಥಿಗಳು ಮಾತ್ರ ಬಂದಿದ್ದಾರೆ. ಆಶ್ರಮ ಶಾಲೆಗಳಲ್ಲಿ ಒಬ್ಬ ವಿದ್ಯಾರ್ಥಿಯೂ ಇಲ್ಲ.

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಡಿ 5 ವಸತಿಶಾಲೆಗಳಿವೆ. ಈ ಪೈಕಿ ಮೂರರಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿದ್ದಾರೆ. ದಾವಣಗೆರೆ ನಗರದ ವಸತಿಶಾಲೆಯ 44ರಲ್ಲಿ 17 ಮಂದಿ ಮಾತ್ರ ಬಂದಿದ್ದು, ಚನ್ನಗಿರಿ ತಾಲ್ಲೂಕಿನ ಕೆರೆಬಿಳಚಿ, ಹರಿಹರ ತಾಲ್ಲೂಕಿನ ಕೊಂಡಜ್ಜಿ ಶಾಲೆಗೆ ಯಾವುದೇ ವಿದ್ಯಾರ್ಥಿ ಬಂದಿಲ್ಲ. ಮೆಟ್ರಿಕ್‌ ನಂತರದ ಹಾಸ್ಟೆಲ್‌ಗಳ ಒಟ್ಟು 475ರಲ್ಲಿ 154 ವಿದ್ಯಾರ್ಥಿಗಳು ಮಾತ್ರ ಹಾಜರಾಗಿದ್ದಾರೆ.

‘ನನ್ನ ಮಗಳು ನಗರದ ಕುಂದವಾಡ ರಸ್ತೆಯಲ್ಲಿರುವ ಹಿಂದುಳಿದ ವರ್ಗಗಳ ಇಲಾಖೆಯ ಸರ್ಕಾರಿ ಮೆಟ್ರಿಕ್‌ ಪೂರ್ವ ಹಾಸ್ಟೆಲ್‌ನಲ್ಲಿ ಇದ್ದುಕೊಂಡು ಬಕ್ಕೇಶ್ವರ ಪ್ರೌಢಶಾಲೆಯಲ್ಲಿ ಓದುತ್ತಿದ್ದಾಳೆ. ಕೊರೊನಾ ತಪಾಸಣೆ ಮಾಡಿಸಿ ಐದು ದಿನಗಳಾದರೂ ವರದಿ ಬಂದಿಲ್ಲ. ವರದಿ ಇಲ್ಲದೆ ಹಾಸ್ಟೆಲ್‌ಗೆ ಪ್ರವೇಶ ನೀಡುತ್ತಿಲ್ಲ. ಶಾಲೆಗಳು ಬಂದ್‌ ಆಗಿದ್ದ ಕಾರಣ ಶಿಕ್ಷಣದಿಂದ ವಂಚಿತವಾಗುವಂತಾಗಿತ್ತು. ಈಗ ಶಾಲೆಗಳು ಆರಂಭವಾಗಿದ್ದರೂ ಹಾಸ್ಟೆಲ್‌ ಸೌಲಭ್ಯ ಸಿಗದ ಕಾರಣ ತರಗತಿಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಹೊಳಲ್ಕೆರೆ ತಾಲ್ಲೂಕಿನ ಪೋಷಕರಾದ ನಟರಾಜ್‌.

‘ನಗರದಲ್ಲಿರುವ ಅಲ್ಪಸಂಖ್ಯಾತರ ಇಲಾಖೆಯ ವಸತಿಶಾಲೆಯಲ್ಲಿ ಮಗಳು ಎಸ್ಸೆಸ್ಸೆಲ್ಸಿ ಓದುತ್ತಿದ್ದಾಳೆ. ಪೋಷಕರ ಸಭೆ ಕರೆದು ಏನೇನು ದಾಖಲೆಗಳನ್ನು ತರಬೇಕು ಎಂದು ತಿಳಿಸಿದ್ದರು. ಅಂತೆಯೇ ಮಗಳಿಗೆ ತಪಾಸಣೆ ಮಾಡಿಸಿದೆ. ವಾರ ಕಳೆದರೂ ವರದಿ ಬಂದಿಲ್ಲ. ಈ ಕಾರಣ ಶಾಲೆಗೆ ಬಿಡಲು ಆಗುತ್ತಿಲ್ಲ. ಹಾಸ್ಟೆಲ್‌, ವಸತಿಶಾಲೆಗಳ ಮಕ್ಕಳಿಗೆ ಹದಿನೈದು ದಿನ ಮುಂಚಿತವಾಗಿಯೇ ಪರೀಕ್ಷೆ ನಡೆಸಿದ್ದರೆ ಇತರೆ ಮಕ್ಕಳಂತೆ ಹಾಸ್ಟೆಲ್‌ ಮಕ್ಕಳೂ ತರಗತಿಗಳಿಗೆ ಹಾಜರಾಗಲು ಸಾಧ್ಯವಾಗುತ್ತಿತ್ತು’ ಎನ್ನುತ್ತಾರೆ ಬ್ಯಾಡಗಿ ತಾಲ್ಲೂಕಿನ ಪೋಷಕರಾದ ಮೊಹಮ್ಮದ್‌ ಜಾಫರ್‌.

ಶೀಘ್ರದಲ್ಲಿ ಎಲ್ಲರ ವರದಿ

ಶಾಲಾ–ಕಾಲೇಜು ಆರಂಭದಿಂದಾಗಿ ಶಿಕ್ಷಕರು, ಹಾಸ್ಟೆಲ್‌ ಸಿಬ್ಬಂದಿ, ವಿದ್ಯಾರ್ಥಿಗಳಿಗೆ ಕೊರೊನಾ ತಪಾಸಣೆ ನಡೆಸುವಂತೆ 26ರಂದು ಆದೇಶ ಹೊರಡಿಸಲಾಯಿತು. 3ನೇ ತಾರೀಕಿನವರೆಗೂ ಪ್ರತಿದಿನ 4,500ರಿಂದ 5000ದ ವರೆಗೂ ಸ್ಯಾಂಪಲ್‌ ಸಂಗ್ರಹಿಸಲಾಗಿದೆ. ಜಿಲ್ಲಾ ಆಸ್ಪತ್ರೆಯ ಪ್ರಯೋಗಾಲಯದ ಪರೀಕ್ಷಾ ಸಾಮರ್ಥ್ಯ ದಿನಕ್ಕೆ 1000 ಮಾತ್ರ. ಆದಕಾರಣ ವರದಿ ಬರುವುದು ತಡವಾಗುತ್ತಿದೆ. ಖಾಸಗಿ ಪ್ರಯೋಗಾಲಯಕ್ಕೆ ಕಳುಹಿಸಿದರೆ ಒಂದು ಸ್ಯಾಂಪಲ್‌ಗೆ ₹ 500 ನೀಡಬೇಕು. ಆದಷ್ಟು ಸರ್ಕಾರದ ಪ್ರಯೋಗಾಲಯಗಳಲ್ಲಿಯೇ ತಪಾಸಣೆ ಮಾಡುತ್ತಿದ್ದೇವೆ. ಬೆಂಗಳೂರು, ಕೊಡಗು, ಹಾವೇರಿ, ಯಾದಗಿರಿಗೆ ಸ್ಯಾಂಪಲ್‌ಗಳನ್ನು ಕಳುಹಿಸಿಕೊಡಲಾಗಿದೆ. ಶೀಘ್ರ ಎಲ್ಲರಿಗೂ ವರದಿ ತಲುಪಲಿದೆ.

–ಡಾ.ಜಿ.ಡಿ. ರಾಘವನ್, ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ

ದ್ವಿತೀಯ ವರ್ಷದವರಿಗೂ ಹಾಸ್ಟೆಲ್‌ ಪ್ರವೇಶಕ್ಕೆ ಕೋರಿಕೆ

ಪ್ರಸ್ತುತ ಅಂತಿಮ ವರ್ಷದ ಪದವಿ, ವೃತ್ತಿಪರ ಕೋರ್ಸ್‌ಗಳ ವಿದ್ಯಾರ್ಥಿಗಳಿಗೆ ಮಾತ್ರ ಹಾಸ್ಟೆಲ್‌ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ. ಕೆಲ ಕಾಲೇಜುಗಳು ದ್ವಿತೀಯ ವರ್ಷದವರಿಗೂ ತರಗತಿಗಳನ್ನು ಆರಂಭಿಸಿದ್ದು, ವಿದ್ಯಾರ್ಥಿಗಳು ಹಾಸ್ಟೆಲ್‌ ಪ್ರವೇಶ ಕೋರಿ ನಿತ್ಯವೂ ಇಲಾಖೆಗಳಿಗೆ ಅಲೆದಾಡುತ್ತಿದ್ದಾರೆ.

‘ಬೆಳಿಗ್ಗೆ 8ರಿಂದ 4ರ ವರೆಗೆ ತರಗತಿಗಳು ನಡೆಯುತ್ತವೆ. ಫೆಬ್ರುವರಿ 8ಕ್ಕೆ ಪರೀಕ್ಷೆ ಇದೆ. ದೂರದ ಊರುಗಳಿಂದ ಓಡಾಡಿಕೊಂಡು ಓದಲು ಕಷ್ಟವಾಗುತ್ತದೆ. ನಮಗೂ ಹಾಸ್ಟೆಲ್‌ ಪ್ರವೇಶಕ್ಕೆ ಅನುಮತಿ ನೀಡಿದರೆ ಅನುಕೂಲವಾಗುತ್ತದೆ’ ಎಂದು ಮನವಿ ಮಾಡುತ್ತಾರೆ ವಿದ್ಯಾರ್ಥಿನಿಯರಾದ ಪಲ್ಲವಿ, ಹಸೀನಾ, ಮೆಹತಾಜ್‌.

***

ಕಡ್ಡಾಯವಾಗಿ ಮಾಸ್ಕ್‌ ಧರಿಸುವಂತೆ, ಅಂತರ ಕಾಯ್ದಕೊಳ್ಳುವಂತೆ ವಿದ್ಯಾರ್ಥಿಗಳಿಗೆ ತಿಳಿಸಲಾಗಿದೆ. ಕಾಟ್‌ಗಳ ನಡುವೆ ಒಂದು ಅಡಿ ಅಂತರ ಇರಿಸಲಾಗಿದೆ. ಅಡುಗೆ ಸಿಬ್ಬಂದಿ ಹೆಡ್‌ ಕವರ್‌, ಏಪ್ರನ್‌ ಧರಿಸಿಯೇ ಊಟ ಬಡಿಸುತ್ತಾರೆ.
– ಅಸ್ಮಾ ಪರ್ವೀನ್‌, ಪ್ರಾಂಶುಪಾಲರು, ಅಲ್ಪಸಂಖ್ಯಾತರ ಬಾಲಕಿಯರ ವಸತಿಶಾಲೆ, ನಿಜಲಿಂಗಪ್ಪ ಬಡಾವಣೆ, ದಾವಣಗೆರೆ

ಸರ್ಕಾರದ ಮಾರ್ಗಸೂಚಿ ಅನುಸಾರ ಹಾಸ್ಟೆಲ್‌ಗಳನ್ನು ಸ್ವಚ್ಛಗೊಳಿಸಲಾಗಿದೆ. ಕೊರೊನಾ ನೆಗೆಟಿವ್‌ ವರದಿ ಇದ್ದರೆ ಮಾತ್ರ ಪ್ರವೇಶ ನೀಡಲಾಗುತ್ತಿದೆ. ಒಬ್ಬರಿಂದ ಹತ್ತು ಮಕ್ಕಳಿಗೆ ತೊಂದರೆಯಾಗಬಾರದು ಎನ್ನುವ ಕಾರಣ ಕಟ್ಟುನಿಟ್ಟಾಗಿ ನಿಯಮ ಜಾರಿಗೊಳಿಸಲಾಗುತ್ತಿದೆ.
–ಕೌಸರ್‌ ರೇಷ್ಮಾ ಜಿ., ಉಪನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ

ಕೋವಿಡ್‌ ಕೇರ್‌ ಸೆಂಟರ್‌ ಆಗಿ ಪರಿವರ್ತಿಸಿದ್ದನ್ನೂ ಸೇರಿ ಎಲ್ಲ ಹಾಸ್ಟೆಲ್‌ಗಳನ್ನು ಸ್ಯಾನಿಟೈಸ್‌ ಮಾಡಿಸಲಾಗಿದೆ. ವಾರ್ಡನ್‌, ಅಡುಗೆ ಮತ್ತು ಕಾವಲು ಸಿಬ್ಬಂದಿಗೂ ಕೊರೊನಾ ತಪಾಸಣೆ ಮಾಡಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದು, ಪೋಷಕರು ಭಯಪಡುವ ಅಗತ್ಯವಿಲ್ಲ.
–ಎಸ್‌.ಆರ್‌. ಗಂಗಪ್ಪ, ಜಿಲ್ಲಾ ಅಧಿಕಾರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ

***

ನಿಧಾನವಾಗಿ ಬರುತ್ತಿದ್ದಾರೆ

ಎಚ್.ವಿ. ನಟರಾಜ್

ಚನ್ನಗಿರಿ: ಸಮಾಜ ಕಲ್ಯಾಣ ಇಲಾಖೆಯ 3 ಕಾಲೇಜು ಹಾಸ್ಟೆಲ್‌ಗಳನ್ನು ತಿಂಗಳ ಹಿಂದೆಯೇ ಪ್ರಾರಂಭಿಸಲಾಗಿದೆ. ಈಗ 10ನೇ ತರಗತಿ ಪ್ರಾರಂಭವಾಗಿದ್ದು, 12 ಹಾಸ್ಟೆಲ್‌ಗಳನ್ನು ತೆರೆಯಲಾಗಿದೆ. ಅದೇ ರೀತಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ 5 ಕಾಲೇಜು ಹಾಗೂ 9 ಮೆಟ್ರಿಕ್‌ ಪೂರ್ವ ಹಾಸ್ಟೆಲ್‌ಗಳನ್ನು ತರೆಯಲಾಗಿದೆ. ನಿಧಾನವಾಗಿ ವಿದ್ಯಾರ್ಥಿಗಳು ಬರುತ್ತಿದ್ದಾರೆ.

ವಿದ್ಯಾರ್ಥಿಗಳು ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ಮಾಡಿಸಿಕೊಂಡು ಬಂದರೆ ಮಾತ್ರ ಪ್ರವೇಶ ನೀಡಲಾಗುತ್ತಿದೆ. ಹಾಗೆಯೇ ಸ್ಯಾನಿಟೈಸರ್ ವ್ಯವಸ್ಥೆ ಕೂಡ ಮಾಡಲಾಗಿದೆ. ವಿದ್ಯಾರ್ಥಿಗಳಿಗೆ ಮಾಸ್ಕ್‌ಗಳನ್ನು ಕೂಡ ವಿತರಣೆ ಮಾಡಲಾಗುತ್ತಿದೆ. ಒಂದು ಕೊಠಡಿಯಲ್ಲಿ 3ರಿಂದ 4 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸತೀಶ್ ತಿಳಿಸಿದರು.

70ರಿಂದ 80 ವಿದ್ಯಾರ್ಥಿಗಳು ಹಾಜರ್

ವಿಶ್ವನಾಥ ಡಿ.

ಹರಪನಹಳ್ಳಿ: ಸ್ಯಾನಿಟೈಸ್‌ ಮಾಡಿ ಸಜ್ಜುಗೊಳಿಸಿರುವ ಹಾಸ್ಟೆಲ್‍ಗಳಿಗೆ ಎಸ್ಸೆಸ್ಸೆಲ್ಸಿ ಹಾಗೂ ಪಿಯು ವಿದ್ಯಾರ್ಥಿಗಳು ಶಿಕ್ಷಣ ಇಲಾಖೆ ವಿಧಿಸಿರುವ ನಿಯಮಗಳನ್ನು ಪಾಲಿಸಿ, ಹಾಸ್ಟೆಲ್‍ಗೆ ಬರಲು ವಿಳಂಬವಾಗುತ್ತಿದೆ.

ಸಮಾಜ ಕಲ್ಯಾಣ ಇಲಾಖೆಯ 177 ವಿದ್ಯಾರ್ಥಿಗಳಲ್ಲಿ 70ರಿಂದ 80 ವಿದ್ಯಾರ್ಥಿಗಳು ಮಾತ್ರ ಹಾಜರಾಗಿದ್ದಾರೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ 47 ವಿದ್ಯಾರ್ಥಿಗಳು ಕೋವಿಡ್‍ ಪರೀಕ್ಷೆಗೆ ಒಳಪಟ್ಟಿದ್ದು, ವರದಿ ಬಂದ ಬಳಿಕ ಪ್ರವೇಶಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

ತಾಲ್ಲೂಕಿನಿಂದ ಪ್ರತಿ ನಿತ್ಯ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುನ 800 ವಿದ್ಯಾರ್ಥಿಗಳ ಸ್ಯಾಂಪಲ್‌ ಕಳುಹಿಸಲಾಗುತ್ತಿದೆ. ಜಿಲ್ಲಾ ಆಸ್ಪತ್ರೆಯ ಪ್ರಯೋಗಾಲಯದ ಸಾಮರ್ಥ್ಯ ಕಡಿಮೆ ಇರುವ ಕಾರಣ ವರದಿ ಬರುವುದು ವಿಳಂಬವಾಗುತ್ತಿದೆ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ವೆಂಕಟೇಶ್ ತಿಳಿಸಿದ್ದಾರೆ.

ಪದವಿ ತರಗತಿಯ 17 ವಿದ್ಯಾರ್ಥಿಗಳಷ್ಟೇ ಇದ್ದಾರೆ

ಡಿ. ಶ್ರೀನಿವಾಸ್‌

ಜಗಳೂರು: ತಾಲ್ಲೂಕಿನಲ್ಲಿ ಹಾಸ್ಟೆಲ್‌ಗಳಿಗೆ ಮಕ್ಕಳ ಪ್ರವೇಶ ಪ್ರವೇಶ ಮಂದಗತಿಯಲ್ಲಿದೆ. ಸಮಾಜ ಕಲ್ಯಾಣ ಇಲಾಖೆಯ ವಿವಿಧ ಹಾಸ್ಟೆಲ್‌ಗಳಲ್ಲಿ ದ್ವಿತೀಯ ಪಿಯು ಹಾಗೂ ಅಂತಿಮ ಪದವಿಯ 17 ವಿದ್ಯಾರ್ಥಿಗಳಿದ್ದಾರೆ. ಬಹುತೇಕರು ಇನ್ನೂ ಕೊರೊನಾ ಭಯದಿಂದ ಮುಕ್ತವಾಗಿಲ್ಲ.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಾಲೇಜು ಹಾಗೂ ಮೆಟ್ರಿಕ್ ಪೂರ್ವ ವಿಭಾಗದ 12 ಹಾಸ್ಟೆಲ್‌ಗಳಿವೆ. ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಇನ್ನೂ ಪ್ರವೇಶ ಪಡೆದಿಲ್ಲ. ಪದವಿ ತರಗತಿಯ 17 ವಿದ್ಯಾರ್ಥಿಗಳು ಮಾತ್ರ ಇದ್ದಾರೆ.

‘ಎಲ್ಲಾ ಹಾಸ್ಟೆಲ್‌ಗಳಲ್ಲಿ ಕುಡಿಯುವ ನೀರು, ಸೇರಿ ಮೂಲ ಸೌಕರ್ಯಗಳನ್ನು ಒದಗಿಸಲಾಗಿದೆ. ಆದರೂ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಬರುತ್ತಿಲ್ಲ’ ಎಂದು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ. ಮಹೇಶ್ವರಪ್ಪ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು