ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ: ಜಿಲ್ಲೆಯಲ್ಲಿ ಗುಣಮುಖ ಪ್ರಮಾಣ ಶೇ 96

ಚಳಿಗಾಲದಲ್ಲಿ ಹೆಚ್ಚಾಗಬಹುದಾದರೂ ಒಮ್ಮೆಲೆ ಅಧಿಕಗೊಳ್ಳುವ ಸಂಭವ ಕಡಿಮೆ
Last Updated 2 ನವೆಂಬರ್ 2020, 16:09 IST
ಅಕ್ಷರ ಗಾತ್ರ

ದಾವಣಗೆರೆ: ಕೊರೊನಾ ಸೋಂಕಿನಿಂದ ಗುಣಮುಖರಾಗುವವರ ಪ್ರಮಾಣ ಅಕ್ಟೋಬರ್‌ ಅಂತ್ಯಕ್ಕೆ ಜಿಲ್ಲೆಯಲ್ಲಿ ಶೇ 96ಕ್ಕೇರಿದೆ. ಇದು ರಾಜ್ಯದ ಸರಾಸರಿಗಿಂತ ಶೇ 4ರಷ್ಟು ಹೆಚ್ಚಾಗಿದೆ.

ಅ. 1ಕ್ಕೆ ಜಿಲ್ಲೆಯಲ್ಲಿ 2,547 ಸಕ್ರಿಯ ಪ್ರಕರಣಗಳಿದ್ದವು. ಅ. 31ಕ್ಕೆ ಸಕ್ರಿಯ ಪ್ರಕರಣಗಳ ಸಂಖ್ಯೆ 758ಕ್ಕೆ ಇಳಿದಿತ್ತು. ಈಗ ಇನ್ನೂ ಕಡಿಮೆಯಾಗಿ 600ರ ಆಸುಪಾಸಿಗೆ ಬಂದಿದೆ.

ಬೆಂಗಳೂರು ಗ್ರಾಮಾಂತರ (ಶೇ 79), ಬೆಂಗಳೂರು ನಗರ (ಶೇ 89) ಕೊನೆಯ ಎರಡು ಸ್ಥಾನಗಳಲ್ಲಿವೆ. ಬಾಗಲಕೋಟೆ (ಶೇ 98), ಬೆಳಗಾವಿ, ಗದಗ, ರಾಯಚೂರು, ಯಾದಗಿರಿ, ಬೀದರ್‌ (ಶೇ 97) ಮೊದಲ ಎರಡು ಸ್ಥಾನಗಳಲ್ಲಿವೆ.

ಮರಣ ಪ್ರಮಾಣದಲ್ಲಿ ಚಿತ್ರದುರ್ಗ ಜಿಲ್ಲೆ ಮಾತ್ರ (ಶೇ 0.4) ಶೇ 1ರ ಕೆಳಗಿದೆ. ದಾವಣಗೆರೆ ಶೇ 1ರಲ್ಲಿದೆ.

‘ಸೋಂಕಿತರ ಪ್ರಮಾಣ ಇಳಿಯುತ್ತಿರುವುದು, ಗುಣಮುಖರಾಗುತ್ತಿರುವವರ ಸಂಖ್ಯೆ ಹೆಚ್ಚಳವಾಗಿರುವುದು ಸಂತಸದ ಸಂಗತಿ. ಹಾಗಂತ ನಾವು ಮೈಮರೆಯುವಂತಿಲ್ಲ. ಚಳಿಗಾಲ ಆರಂಭಗೊಳ್ಳುತ್ತಿದೆ. ಬೇರೆ ಕಡೆ ಹೋಲಿಸಿದರೆ ದಾವಣಗೆರೆಯಲ್ಲಿ ಚಳಿಯ ಪ್ರಮಾಣ ಸ್ವಲ್ಪ ಕಡಿಮೆ ಇರಬಹುದು. ಆದರೂ ನಾವು ಎಲ್ಲ ಎಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ಎದುರಿಸಲು ತಯಾರಿಗಳನ್ನು ಮಾಡಿಕೊಂಡಿದ್ದೇವೆ’ ಎನ್ನುತ್ತಾರೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ.

‘ಜನರು ಸೋಂಕಿನ ಬಗ್ಗೆ ಇನ್ನೂ ಮನಃಪೂರ್ವಕವಾಗಿ ಜಾಗೃತರಾದಂತೆ ಕಾಣುತ್ತಿಲ್ಲ. ಮಾಸ್ಕ್‌ ಹಾಕಿಕೊಳ್ಳಲಾರದೇ ಹೊರಗೆ ಬಂದರೆ ಗಂಡಾಂತರಕ್ಕೆ ಒಡ್ಡಿ ಅಡ್ಡಾಡುತ್ತಿದ್ದೀರಿ ಎಂಬುದು ಅರ್ಥವಾಗುತ್ತಿಲ್ಲ. ಅಪರಿಚಿತ ವ್ಯಕ್ತಿ, ವಸ್ತುಗಳನ್ನು ಮುಟ್ಟಬಾರದು. ಮುಟ್ಟಿದರೆ ಕೂಡಲೇ ಸ್ಯಾನಿಟೈಸರ್‌ ಹಾಕಿಕೊಳ್ಳಬೇಕು. ಮಾಸ್ಕ್‌ ಧರಿಸದೇ, ಅಂತರ ಕಾಪಾಡಿಕೊಳ್ಳದೇ ಇರುವುದು ಅಪಾಯ ಎಂಬುದನ್ನು ತಿಳಿದುಕೊಳ್ಳಬೇಕು’ ಎಂಬುದು ಅವರ ಸಲಹೆ.

‘ಗುಣಮುಖರಾಗುವವರ ಸಂಖ್ಯೆ ಏರುತ್ತಿದೆ. ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದೆ. ಹಾಗಾಗಿ ಸಕ್ರಿಯ ಪ್ರಕರಣಗಳ ಸಂಖ್ಯೆ ಇನ್ನೂ ಇಳಿಮುಖವಾಗಲಿದೆ. ಚಳಿಗಾಲದಲ್ಲಿ ಸ್ವಲ್ಪ ಏರಿಕೆಯಾಗಬಹುದು ಎಂಬ ಊಹೆ ಮಾಡಲಾಗಿದೆ. ಆದರೆ ಒಮ್ಮೆಲೆ ಅಧಿಕಗೊಳ್ಳುವ ಸಾಧ್ಯತೆ ಕಡಿಮೆ’ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಜಿ.ಡಿ. ರಾಘವನ್‌ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ್ದಾರೆ.

‘ಎಷ್ಟು ಪ್ರಕರಣಗಳು ಬರಬಹುದು ಎಂಬ ಪೂರ್ವ ತಯಾರಿ ನಡೆಸಲಾಗಿತ್ತು. ಅದರಂತೆ ಒಂದು ಹಂತದಲ್ಲಿ ಆಗಸ್ಟ್‌, ಸೆಪ್ಟೆಂಬರ್‌ನಲ್ಲಿ ಸುಮಾರು 6,000 ಸಕ್ರಿಯ ಪ್ರಕರಣಗಳು ಕಾಣಿಸಿಕೊಳ್ಳಲಿದೆ ಎಂದು ಅಂದಾಜು ಮಾಡಲಾಗಿತ್ತು. ಅದಕ್ಕೆ ಬೇಕಾದಷ್ಟು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಬಹಳ ಎಚ್ಚರಿಕೆಯಿಂದ ಸಮಾರೋಪಾದಿಯಾಗಿ ಕೆಲಸ ಮಾಡಿದ್ದರಿಂದ ಅಷ್ಟು ಸಕ್ರಿಯ ಪ್ರಕರಣಗಳು ಕಾಣಿಸಿಕೊಳ್ಳಲಿಲ್ಲ. ಒಂದು ಹಂತದಲ್ಲಿ 4000 ದಾಟಿದ್ದೇ ಅತಿ ಹೆಚ್ಚು ಆಗಿತ್ತು. ಈಗಂತೂ ಎಲ್ಲ ಕಡೆ ಇಳಿಕೆಯಾಗಿದೆ’ ಎನ್ನುತ್ತಾರೆ ಅವರು.

ಈಗಲೂ ಒಮ್ಮೆಲೇ 5,990 ಸಕ್ರಿಯ ಪ್ರಕರಣಗಳನ್ನು ಎದುರಿಸಲು ಜಿಲ್ಲಾಡಳಿತ, ಆರೋಗ್ಯ ಇಲಾಖೆ ಸನ್ನದ್ಧವಾಗಿಯೇ ಇದೆ ಎನ್ನುತ್ತಾರೆ ಅವರು.

ಮುಂದೆ ಚಳಿಗಾಲ ಬರಲಿದೆ. ಶೀತ ವಾತಾವರಣದಲ್ಲಿ ಕೊರೊನಾ ವೈರಸ್‌ ಹರಡುವ ಸಾಧ್ಯತೆ ಹೆಚ್ಚಿದೆ ಎಂದು ದೇಶ, ವಿದೇಶದ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಮಹಾಂತೇಶ ಬೀಳಗಿ, ಜಿಲ್ಲಾಧಿಕಾರಿ

ಚಳಿಗಾಲದಲ್ಲಿ ಕೊರೊನಾ ಸೋಂಕಿನ ಎರಡನೇ ಅಲೆ ಬರಬಹುದು ಎಂಬ ನಿರೀಕ್ಷೆ ಇದೆ. ಜನರು ಇನ್ನಷ್ಟು ಎಚ್ಚರಿಕೆಯಿಂದ ಇದ್ದರೆ ಎದುರಿಸುವುದು ಸುಲಭ.
ಡಾ.ಜಿ.ಡಿ. ರಾಘವನ್‌, ಜಿಲ್ಲಾ ಸರ್ವೇಕ್ಷಣಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT