ಬುಧವಾರ, ಜುಲೈ 28, 2021
20 °C
ತಜ್ಞರ ವರದಿ ಆಧರಿಸಿ ಮುನ್ನೆಚ್ಚರಿಕೆ

ಕೋವಿಡ್‌ 3ನೇ ಅಲೆ ಭೀತಿ: ಮಕ್ಕಳ ಮೇಲಿನ ಪರಿಣಾಮ ಎದುರಿಸಲು ಸಿದ್ಧತೆ

ಅನಿತಾ ಎಚ್‌. Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಕೊರೊನಾ ಸೋಂಕಿನ ಮೂರನೇ ಅಲೆಯು ಆಗಸ್ಟ್‌–ಸೆಪ್ಟೆಂಬರ್‌ ತಿಂಗಳುಗಳಲ್ಲಿ ವ್ಯಾಪಕವಾಗಿ ಹರಡಲಿದ್ದು ಮಕ್ಕಳ ಮೇಲೆ ಹೆಚ್ಚಿನ ಪರಿಣಾಮ ಬೀರಲಿದೆ ಎಂದು ತಜ್ಞರು ಎಚ್ಚರಿಸಿರುವ ಹಿನ್ನೆಲೆಯಲ್ಲಿ ಮಕ್ಕಳ ರಕ್ಷಣೆಗಾಗಿ ಜಿಲ್ಲಾಡಳಿ ಭರದ ಸಿದ್ಧತೆ ನಡೆಸಿದೆ.

ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಡಿಯ ಅಂಗನವಾಡಿ ಕೇಂದ್ರಗಳು ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಅಡಿಯ ಸರ್ಕಾರಿ, ಅನುದಾನಿತ, ಅನುದಾನರಹಿತ 1ರಿಂದ 10ನೇ ತರಗತಿವರೆಗಿನ ಮಕ್ಕಳ ಆರೋಗ್ಯ ಸ್ಥಿತಿಗತಿ ಕುರಿತು ಮಾಹಿತಿ ಸಂಗ್ರಹಿಸಲು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಶಿಕ್ಷಕರನ್ನು ನಿಯೋಜಿಸಿದೆ.

ಅಂಗನವಾಡಿ ಕಾರ್ಯಕರ್ತೆಯರು ಮತ್ತು ಶಿಕ್ಷಕರು ಮಕ್ಕಳ ಮನೆಮನೆಗೆ ಭೇಟಿ ನೀಡಿ ರಿಜಿಸ್ಟರ್‌ನಲ್ಲಿ ಪಾಲಕರ ಸಹಿ ಪಡೆದು, ಪೋಷಕರ ಜತೆಗಿನ ಫೋಟೊವನ್ನು ಸಂಬಂಧಿಸಿದ ಇಲಾಖೆಯ ಗ್ರೂಪ್‌ನಲ್ಲಿ ಅಪ್‌ಲೋಡ್‌ ಮಾಡುವಂತೆ ಸೂಚಿಸಲಾಗಿದೆ.

‘ಆರು ವರ್ಷದ ಒಳಗಿನ ಮಕ್ಕಳಲ್ಲಿ ತೀವ್ರ ಅಪೌಷ್ಟಿಕತೆಯ ಮತ್ತು ಸಾಧಾರಣ ಅಪೌಷ್ಟಿಕತೆಯ (ವಯಸ್ಸಿಗೆ ತಕ್ಕಂತೆ ತೂಕ, ಬೆಳವಣಿಗೆ ಇಲ್ಲದಿರುವ) ಮಕ್ಕಳನ್ನು ಗುರುತಿಸಲಾಗಿದೆ. 1ರಿಂದ 10ನೇ ತರಗತಿವರೆಗಿನ ಮಕ್ಕಳಲ್ಲಿ ತೀವ್ರತರದ ಆರೋಗ್ಯ ಸಮಸ್ಯೆ ಹೊಂದಿರುವ ಮಕ್ಕಳ ಪಟ್ಟಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ತಯಾರಿಸಿದೆ. ಇಂತಹ ಮಕ್ಕಳ ಮನೆಗಳಿಗೆ ಭೇಟಿ ನೀಡಿ ಪೌಷ್ಟಿಕ ಆಹಾರ ವಿತರಣೆ, ಮಕ್ಕಳ ಆರೋಗ್ಯ ತಪಾಸಣೆ, ಮಕ್ಕಳ ತಾಯಂದಿರಿಗೆ ಆದ್ಯತೆ ಮೇರೆಗೆ ಕೊರೊನಾ ಲಸಿಕೆ ಹಾಕಿಸಲು ಮತ್ತು ಮಕ್ಕಳ ಆರೈಕೆ ಮಾಡುವ ಬಗ್ಗೆ ಮಾಹಿತಿ ನೀಡಲು ಕ್ರಮ ಕೈಗೊಳ್ಳಲಾಗಿದೆ’ ಎಂದು ಮಾಹಿತಿ ನೀಡುತ್ತಾರೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ವಿಜಯ ಮಹಾಂತೇಶ್‌ ದಾನಮ್ಮನವರ್‌.

‘ಸಿಬ್ಬಂದಿಯ ಮನೆ ಭೇಟಿ ವೇಳೆ ಮಕ್ಕಳಲ್ಲಿ ತೀವ್ರತರದ ರೋಗಲಕ್ಷಣಗಳು ಕಂಡುಬಂದರೆ ಸಮೀಪದ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿ ತಪಾಸಣೆ ಮಾಡಿಸುವಂತೆ ಹೇಳಲಾಗಿದೆ. ಅಗತ್ಯಬಿದ್ದರೆ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೂ ಕರೆತರುವಂತೆ ಆದೇಶಿಸಲಾಗಿದೆ. ಎಲ್ಲಾ ವಯೋಮಾನದ ಮಕ್ಕಳಲ್ಲಿ ರೋಗನಿರೋಧಕ ಶಕ್ತಿಯನ್ನು ವೃದ್ಧಿಸಲು ಆಯುಷ್‌ ಇಲಾಖೆಯು ಹಿರಿಯ ವೈದ್ಯಾಧಿಕಾರಿಗಳು ಹಾಗೂ ತಜ್ಞರೊಂದಿಗೆ ಸಮಾಲೋಚಿಸಿ ಎರಡು ಬಗೆಯ ಔಷಧವನ್ನು ಶಿಫಾರಸು ಮಾಡಿದೆ. ಒಂದು ಮಗುವಿಗೆ ಮೂರು ತಿಂಗಳ ಅವಧಿಗೆ ನೀಡಬೇಕಿರುವ ಔಷಧಕ್ಕೆ ₹ 175 ವೆಚ್ಚವಾಗಲಿದ್ದು, ಹಣಕಾಸಿನ ಲಭ್ಯತೆ ಆಧರಿಸಿ ಯಾವ ಯಾವ ಮಕ್ಕಳಿಗೆ ನೀಡಬೇಕು ಎಂಬುದನ್ನು ನಿರ್ಧರಿಸಲಾಗುವುದು’ ಎಂದು ಅವರು ಮಾಹಿತಿ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು