ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ | ಬೆಳೆ ಹಾನಿ: ಇನ್ನೂ ಸಿಗದ ಪರಿಹಾರ

ಲಕ್ಕಿ ಡಿಪ್‌ನಂತಾದ ನೆರೆ ಪರಿಹಾರ: ರೈತರ ಆರೋಪ
Last Updated 12 ಸೆಪ್ಟೆಂಬರ್ 2022, 6:00 IST
ಅಕ್ಷರ ಗಾತ್ರ

ದಾವಣಗೆರೆ: ಜೂನ್‌ ತಿಂಗಳಿನಿಂದ ಸುರಿಯುತ್ತಿರುವ ನಿರಂತರ ಮಳೆಗೆ ಭತ್ತದ ಸಸಿಗಳು ಕೊಚ್ಚಿ ಹೋಗಿದೆ. ಅಡಿಕೆ, ತೆಂಗಿನ ತೋಟಗಳಿಗೆ ನೀರು ನುಗ್ಗಿದೆ. ತರಕಾರಿ ಬೆಳೆಗಳು ನಾಶವಾಗಿವೆ. ಮನೆಗಳು ಕುಸಿದಿವೆ. ಮೆಕ್ಕೆಜೋಳ ತೆನೆಗಟ್ಟದೇ ರೈತರು ಸಂಕಷ್ಟದಲ್ಲಿದ್ದಾರೆ. ಶೇಂಗಾಕೀಳಬೇಕೆಂದರೆ ಜಮೀನಿಗೆ ಕಾಲಿಡಲೂ ಆಗದೇ ಭೂಮಿಯಲ್ಲಿಯೇ ಮೊಳಕೆಯೊಡೆಯುತ್ತಿದೆ.

ಜಿಲ್ಲೆಯಲ್ಲಿ ಭಾರಿ ಮಳೆಯಿಂದಾಗಿ ಕೆರೆಕಟ್ಟೆಗಳು ತುಂಬಿರುವುದು ಜನತೆಗೆ ಒಂದೆಡೆ ಸಂತಸ ತಂದಿದ್ದರೆ, ಮತ್ತೊಂದೆಡೆ ಬೆಳೆ ನಾಶ ರೈತರನ್ನು ಸಂಕಷ್ಟಕ್ಕೆ ದೂಡಿದೆ. ರೈತರು ಸಾವಿರಾರು ರೂಪಾಯಿ ಖರ್ಚು ಮಾಡಿ ಬಿತ್ತನೆ ಮಾಡಿದ ಬೆಳೆಗಳು ನೀರುಪಾಲಾಗಿವೆ. ಇದರಿಂದಾಗಿ ರೈತರ ಬದುಕು ಮೂರಾಬಟ್ಟೆಯಾಗಿದೆ. ಬೆಳೆ ನಾಶವಾದ ರೈತರೆಲ್ಲರಿಗೂ ಪರಿಹಾರ ಬಂದಿಲ್ಲ ಎಂಬ ಆರೋಪವೂ ಕೇಳಿಬರುತ್ತಿವೆ.

ಜಿಲ್ಲೆಯಲ್ಲಿ ಜುಲೈ ತಿಂಗಳಲ್ಲಿ ವಾಡಿಕೆಗಿಂತ ಶೇ 82ರಷ್ಟು ಹೆಚ್ಚು ಮಳೆಯಾಗಿದ್ದರೆ, ಆಗಸ್ಟ್ ತಿಂಗಳಲ್ಲಿ ಶೇ 93 ಹಾಗೂ ಸೆಪ್ಟೆಂಬರ್ ಮೊದಲ ವಾರದ ವೇಳೆಗೆ ವಾಡಿಕೆಗಿಂತ ನಾಲ್ಕು ಪಟ್ಟು ಹೆಚ್ಚು ಮಳೆಯಾಗಿದೆ. ಮೂರು ತಿಂಗಳಲ್ಲಿ ಸರಾಸರಿ ಶೇ 73ರಷ್ಟು ಅಧಿಕ ಮಳೆ ಸುರಿದಿದ್ದು, 14,564 ಹೆಕ್ಟೇರ್‌ನಷ್ಟು ಕೃಷಿ ಹಾಗೂ ತೋಟಗಾರಿಕೆ ಬೆಳೆಗಳು ನಾಶವಾಗಿವೆ.

ಜಗಳೂರು ತಾಲ್ಲೂಕಿನಲ್ಲಿ ಈರುಳ್ಳಿ, ಹರಿಹರ, ಹೊನ್ನಾಳಿ, ಚನ್ನಗಿರಿ, ನ್ಯಾಮತಿ ತಾಲ್ಲೂಕುಗಳಲ್ಲಿ ಮೆಕ್ಕೆಜೋಳ ಬೆಳೆ ಹಾನಿ
ಯಾಗಿದೆ. ಜಿಲ್ಲೆಯಲ್ಲಿ ಒಟ್ಟು 1,983 ಮನೆಗಳಿಗೆ ಹಾನಿಯಾಗಿದ್ದು, 1,218 ಮನೆಗಳಿಗೆ ಈಗಾಗಲೇ ಪರಿಹಾರ ವಿತರಣೆ ಮಾಡಲಾಗಿದೆ.

ಲಕ್ಕಿ ಡಿಪ್‌ನಂತಾದ ಪರಿಹಾರ: ‘ಜಿಲ್ಲೆಯಲ್ಲಿ ಮಳೆಯಿಂದ ಹಾನಿ ಅನುಭವಿಸಿದ ರೈತರಿಗೆ ನೆರೆ ಪರಿಹಾರ ಸಿಕ್ಕಿಲ್ಲ.
ಇದು ಲಕ್ಕಿ ಡಿಪ್‌ನಂತೆ ಆಗಿದೆ’ ಎನ್ನುತ್ತಾರೆ ರೈತ ಮುಖಂಡ ತೇಜಸ್ವಿ ಪಟೇಲ್.

‘ಮಳೆಯಿಂದಾಗಿ ಮನೆ ಬಿದ್ದು ಹೋದರೆ ಪರಿಹಾರ ನೀಡಲು ಗ್ರೇಡ್ ಕೊಡುತ್ತಾರೆ. ಆದರೆ, ಕೆಲವು ಸಲ ಮನೆ ಸಮೀಕ್ಷೆಗೆ ಹೋದಾಗ ಬೇರೆಯದೇ ಪರಿಸ್ಥಿತಿ ಇರುತ್ತದೆ. ಬೆಳೆ ಪರಿಹಾರ ನೀಡುವಲ್ಲಿಯೂ ಲೋಪಗಳಿವೆ. ಪಹಣಿ ಒಬ್ಬರ ಹೆಸರಿನಲ್ಲಿ ಇದ್ದರೆ ಉಳುಮೆ ಮಾಡುವವರು ಇನ್ನೊಬ್ಬರಾಗಿರುತ್ತಾರೆ. ಈ ಲೋಪದಿಂದಲೂ ಹಲವರಿಗೆ ಪರಿಹಾರ ಬಂದಿಲ್ಲ. ಬೇರೆಯವರ ಜಮೀನಿನಲ್ಲಿ ನಿಂತು ಫೋಟೊ ತೆಗೆಸಿಕೊಂಡವರಿಗೆ ಪರಿಹಾರ ಸಿಕ್ಕಿದೆ. ಆದರೆ ನಿಜವಾಗಿಯೂ ತೊಂದರೆಗೆ ಒಳಗಾದ ರೈತರಿಗೆ ಪರಿಹಾರ ಸಿಕ್ಕಿಲ್ಲ’ ಎಂದು ಅವರು ದೂರಿದ್ದಾರೆ.

‘ನಷ್ಟ ಅನುಭವಿಸಿದ ಎಲ್ಲ ರೈತರಿಗೂ ಪರಿಹಾರ ಸಿಗಬೇಕಾದರೆ ಪ್ರಾಮಾಣಿಕ ಸಮೀಕ್ಷೆ ಆಗಬೇಕು. ಪರಿಹಾರ ನೀಡುವ ವಿಷಯಗಳಲ್ಲಿ ಮಾನದಂಡಕ್ಕಿಂತ ಪರಿಸ್ಥಿತಿ ಪ್ರಮುಖ ಪಾತ್ರ ವಹಿಸಬೇಕು. ಗ್ರಾಮ ಲೆಕ್ಕಿಗರು, ಕಂದಾಯ ನಿರೀಕ್ಷಕರು, ತಹಶೀಲ್ದಾರ್‌ ಉಸ್ತುವಾರಿಯಲ್ಲಿ ನಡೆಯುವ ಸಮೀಕ್ಷೆ ಸಮರ್ಪಕವಾಗಬೇಕು. ಕೆಲವರಿಗೆ ಪರಿಹಾರ ಬಂದರೂ ಬ್ಯಾಂಕ್ ಖಾತೆಗೆ ಸಂಬಂಧಿಸಿದ ತಾಂತ್ರಿಕ ಸಮಸ್ಯೆಗಳು ಇದ್ದು, ಪರಿಹಾರ ಸಿಕ್ಕಿಲ್ಲ’ ಎಂದರು.

‘ಪರಿಹಾರ ಪಡೆದುಕೊಳ್ಳಲು ರೈತರಿಗೆ ಎದುರಾಗುವ ತಾಂತ್ರಿಕ ಸಮಸ್ಯೆಯನ್ನು ಪರಿಗಣಿಸಿ ನಿಯಮವನ್ನು ರೂಪಿಸಬೇಕು. ಪಹಣಿ, ಆಧಾರ್‌, ಬ್ಯಾಂಕ್‌ ಖಾತೆಗಳಲ್ಲಿ ಒಂದು ದಾಖಲೆ ಇಲ್ಲದಿದ್ದರೂ ಪರಿಹಾರ ಸಿಗುವುದಿಲ್ಲ. ಕೆಲವು ರೈತರು ಖಾತೆಯನ್ನೇ ತಮ್ಮ ಹೆಸರಿಗೆ ಮಾಡಿಕೊಂಡಿರುವುದಿಲ್ಲ. ನಿಯಮವನ್ನು ಸರಳೀಕರಣಗೊಳಿಸಿ ಪರಿಹಾರ ನೀಡಬೇಕು’ ಎಂದು ತೇಜಸ್ವಿ ಪಟೇಲ್ ಆಗ್ರಹಿಸಿದರು.

ಚನ್ನಗಿರಿ ತಾಲ್ಲೂಕಿನ ಕಾರಿಗನೂರಿನ ಗ್ರಾಮದ ರೈತ ರುದ್ರೇಶಪ್ಪ ಅವರ ಜಮೀನಿಗೆ ಹಳ್ಳದ ನೀರು ನುಗ್ಗಿದ್ದು, ಬೆಳೆಯೇ ಕಾಣುತ್ತಿಲ್ಲ.

ಕಳೆದ ಬಾರಿಯೂ ಮಳೆಯಿಂದಾಗಿ ಅಡಿಕೆ ಹಾಗೂ ಭತ್ತದ ನಾಶವಾಗಿತ್ತು. ಪರಿಹಾರ ಬಂದಿರಲಿಲ್ಲ. ಈ ಬಾರಿಯಾದರೂ ಪರಿಹಾರ ನೀಡಬೇಕು ಎಂದು ಕೆಂಗಾಪುರದ ರೈತ ಪರಮೇಶ್ವರಪ್ಪ ಹೇಳಿದರು.

ಚನ್ನಗಿರಿ: 2,910 ಹೆಕ್ಟೇರ್ ಬೆಳೆ ಹಾನಿ
-ಎಚ್.ವಿ. ನಟರಾಜ್
ಚನ್ನಗಿರಿ:
ತಾಲ್ಲೂಕಿನಲ್ಲಿ ಆಗಸ್ಟ್ ತಿಂಗಳಲ್ಲಿ 699 ಮನೆಗಳು ಬಿದ್ದಿವೆ. ಇದರಲ್ಲಿ ಈಗಾಗಲೇ 550 ಮನೆಗಳ ಸಂತ್ರಸ್ತರಿಗೆ ಮೊದಲ ಕಂತು ₹ 95,000 ಪರಿಹಾರ ಮೊತ್ತವನ್ನು ಕಂದಾಯ ಇಲಾಖೆಯಿಂದ ವಿತರಿಸಲಾಗಿದೆ. ದಾಖಲೆಗಳನ್ನು ಒದಗಿಸದ 49 ಸಂತ್ರಸ್ತರಿಗೆ ಪರಿಹಾರ ನೀಡುವುದು ಬಾಕಿ ಉಳಿದಿದೆ. ಒಟ್ಟು ₹ 3 ಕೋಟಿ ಪರಿಹಾರವನ್ನು ಮೊದಲ ಕಂತಿನಲ್ಲಿ ಜಮೆ ಮಾಡಲಾಗಿದೆ.

‘ತಾಲ್ಲೂಕಿನಲ್ಲಿ 2,808 ಹೆಕ್ಟೇರ್ ಮೆಕ್ಕೆಜೋಳ, 68 ಹೆಕ್ಟೇರ್ ಭತ್ತ, 24 ಹೆಕ್ಟೇರ್ ಅಡಿಕೆ ಹಾಗೂ 10 ಹೆಕ್ಟೇರ್ ರಾಗಿ ಸೇರಿ ಒಟ್ಟು 2,910 ಹೆಕ್ಟೇರ್ ಬೆಳೆ ಹಾನಿಯಾಗಿದ್ದು, ₹ 3.62 ಕೋಟಿ ಪರಿಹಾರವನ್ನು ಕೃಷಿ ಇಲಾಖೆಯಿಂದ ಶೀಘ್ರ ವಿತರಣೆ ಮಾಡಲಾಗುವುದು’ ಎಂದು ತಹಶೀಲ್ದಾರ್ ಡಾ.ಪಟ್ಟರಾಜಗೌಡ ತಿಳಿಸಿದರು.

‘ನಮ್ಮ ಮನೆ ಪೂರ್ಣ ಹಾನಿಯಾಗಿ ಕೇವಲ 15 ದಿನಗಳಾಗಿದ್ದು, ಈಗಾಗಲೇ ನನ್ನ ಬ್ಯಾಂಕ್ ಖಾತೆಗೆ ಮೊದಲ ಕಂತಿನ ₹ 95,000 ಪರಿಹಾರ ಮೊತ್ತ ಜಮೆ ಆಗಿದೆ’ ಎಂದು ಕಾಶಿಪುರ ಗ್ರಾಮದ ಚಂದ್ರನಾಯ್ಕ ಹೇಳಿದರು.

‘ಫೋನ್ ಮಾಡಿದರೂ ಬಾರದ ಅಧಿಕಾರಿಗಳು’
-ಎನ್‌.ಕೆ.ಆಂಜನೇಯ
ಹೊನ್ನಾಳಿ:
ಹೊನ್ನಾಳಿ ಮತ್ತು ನ್ಯಾಮತಿ ತಾಲ್ಲೂಕುಗಳಲ್ಲಿ ಕಳೆದ ವಾರದವರೆಗೂ 932 ಮನೆಗಳು ಬಿದ್ದಿದ್ದು, ಅವುಗಳ ಪೈಕಿ ಶೇ70ರಷ್ಟು ಪರಿಹಾರ ನೀಡಲಾಗಿದೆ. ವಾರದಿಂದೀಚೆಗೆ 300ಕ್ಕೂ ಹೆಚ್ಚು ಮನೆಗಳು ಬಿದ್ದಿದ್ದು, ಅವುಗಳ ವರದಿ ಸಿದ್ದಪಡಿಸುತ್ತಿರುವ ಮಾಹಿತಿ ಇದೆ.

‘ಹೊನ್ನಾಳಿ ತಾಲ್ಲೂಕಿನ ಎಚ್. ಕಡದಕಟ್ಟೆಯ ಹ್ಯಾಂಡ್ ಪೋಸ್ಟ್ ಬಳಿ ಇರುವ ಎ.ಕೆ. ಬಸವರಾಜಪ್ಪ ಅವರ ಮನೆ ಬಿದ್ದಿದ್ದು, ಮನೆ ಹಾನಿ ಕುರಿತು ಪರಿಶೀಲಿಸುವಂತೆ ಸಂಬಂಧಪಟ್ಟ ಗ್ರಾಮ ಲೆಕ್ಕಾಧಿಕಾರಿಗಳು ಹಾಗೂ ಪಿಡಿಒಗಳಿಗೆ ಫೋನ್ ಮಾಡಿ ಕರೆದರೂ ಇದೂವರೆಗೂ ಯಾರು ಪರಿಶೀಲನೆ ಮಾಡಲು ಬಂದಿಲ್ಲ’ ಎಂದು ಸೊರಟೂರು ಹನುಮಂತಪ್ಪ ಆರೋಪಿಸುತ್ತಾರೆ.

ಸವಳಂಗ ಸಮೀಪದ ಮಾಚಿಗೊಂಡನಹಳ್ಳಿಯ ವಿನೋದಮ್ಮ ಅವರ ಮನೆಯೂ ಬಿದ್ದಿದ್ದು, ಮನೆ ಪರಿಶೀಲನೆಗೂ ಅಲ್ಲಿನ ಸ್ಥಳೀಯ ಅಧಿಕಾರಿಗಳು ಯಾರೂ ಭೇಟಿ ನೀಡಿಲ್ಲ. ಕಡುಬಡವರ ಮನೆಗಳಿಗೆ ಪರಿಹಾರ ವಿಳಂಬವಾಗುತ್ತಿದ್ದು, ಅನುಕೂಲಸ್ಥರಿಗೆ ಮಾತ್ರ ಪರಿಹಾರ ಸಿಗುತ್ತಿದೆ’ ಎಂದು ಹನುಮಂತಪ್ಪ ಆರೋಪಿಸುತ್ತಾರೆ.

*

ಜಿಲ್ಲೆಯಲ್ಲಿ 16,000 ಹೆಕ್ಟೇರ್‌ನಲ್ಲಿ ಕೃಷಿ ಬೆಳೆ ಹಾನಿಯಾಗಿದ್ದು, ಕಂದಾಯ ಇಲಾಖೆಯೊಂದಿಗೆ ಸಮೀಕ್ಷೆ ನಡೆಸಲಾಗಿದೆ. ಇನ್ನೆರಡು ದಿನಗಳಲ್ಲಿ ನಷ್ಟ ಹೊಂದಿದ ಎಲ್ಲಾ ರೈತರಿಗೂ ಪರಿಹಾರ ಸಿಗಬಹುದು.
-ಶ್ರೀನಿವಾಸ್ ಚಿಂತಾಲ್, ಜಂಟಿ ಕೃಷಿ ನಿರ್ದೇಶಕ

*

‘₹ 1.25 ಲಕ್ಷ ಖರ್ಚು ಮಾಡಿ ಭತ್ತದ ನಾಟಿ ಮಾಡಿದ್ದೆ. ಕಟಾವಿಗೆ ಬಂದ ವೇಳೆ ನಾಶವಾಗಿದೆ. ನಮ್ಮ ಗ್ರಾಮದಲ್ಲಿ ಎಕರೆ ಬೆಳೆ ನಾಶವಾಗಿದ್ದರೂ ಸರಿಯಾಗಿ ಸಮೀಕ್ಷೆ ನಡೆದಿಲ್ಲ.
-ಯೋಗೇಶ್, ತ್ಯಾವಣಿಗೆ

*

ಕಳೆದ ಬಾರಿಯೂ ಮಳೆಯಿಂದಾಗಿ ಅಡಿಕೆ ಹಾಗೂ ಭತ್ತದ ಬೆಳೆ ನಾಶವಾಗಿತ್ತು. ಪರಿಹಾರ ಬಂದಿರಲಿಲ್ಲ. ಈ ಬಾರಿಯಾದರೂ ಸಮೀಕ್ಷೆ ನಡೆಸಿ ಪರಿಹಾರ ನೀಡಬೇಕು.
-ಪರಮೇಶ್ವರಪ್ಪ, ಕೆಂಗಾಪುರ ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT