ಬುಧವಾರ, ಜೂನ್ 29, 2022
24 °C
ಹರಿಹರದಲ್ಲಿ ಜಿಲ್ಲಾಧಿಕಾರಿ ಸಭೆ

ಬೆಳೆಹಾನಿ ಕುರಿತು ವೈಜ್ಞಾನಿಕ, ವಾಸ್ತವಿಕ ಜಂಟಿ ಸಮೀಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹರಿಹರ: ಅಕಾಲಿಕ ಮಳೆಯಿಂದ ಬೆಳೆಗಳಿಗೆ ಆಗಿರುವ ನಷ್ಟವನ್ನು ವೈಜ್ಞಾನಿಕ, ವಾಸ್ತವಿಕ ಅಂಶಗಳೊಂದಿಗೆ ಸಮೀಕ್ಷೆ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.

ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರ ಸೂಚನೆಯ ಮೇರೆಗೆ ಬುಧವಾರ ಇಲ್ಲಿಯ ತಹಶೀಲ್ದಾರ್ ಕಚೇರಿಯಲ್ಲಿ ಅಧಿಕಾರಿಗಳು ಹಾಗೂ ಸಾರ್ವಜನಿಕರ ಸಭೆಯಲ್ಲಿ ಅವರು ಮಾತನಾಡಿದರು. ‘ಬೆಳೆ ಹಾನಿ ಸಮೀಕ್ಷಾ ಕಾರ್ಯ ವಿವಿಧ ಇಲಾಖೆಗಳ ಅಧಿಕಾರಿಗಳ ಜಂಟಿ ತಂಡದಿಂದ ನಡೆಸಲಾಗುವುದು. ಸಮೀಕ್ಷೆಯಲ್ಲಿ ಗ್ರಾಮಸ್ಥರು ಉಪಸ್ಥಿತರಿರುವಂತೆ ನೋಡಿಕೊಳ್ಳಲಾಗುವುದು’ ಎಂದರು.

ಮನೆ ಹಾನಿ: ‘ಪಕ್ಕಾ ಮನೆ ಪೂರ್ಣ ಹಾನಿಗೀಡಾಗಿದ್ದರೆ ₹ 5 ಲಕ್ಷ, ಕಚ್ಚಾ ಮನೆ ಪೂರ್ಣ ಹಾನಿಯಾಗಿದ್ದರೆ ₹ 3 ಲಕ್ಷ, ಭಾಗಶಃ ಹಾನಿಯಾಗಿದ್ದರೆ ₹ 50 ಸಾವಿರ ಪರಿಹಾರ ನೀಡಲಾಗುವುದು’ ಎಂದು ಮಾಹಿತಿ ನೀಡಿದರು.

ರಾಘವೇಂದ್ರ ಸ್ವಾಮಿ ಮಠದ ಸಮೀಪದ ನಾಡಬಂದ್ ಶಾ ವಲಿ ದರ್ಗಾದ ಮುಂದಿನ ರಸ್ತೆಯ ಸಮಸ್ಯೆಯನ್ನು ಸ್ಥಳೀಯರು ಸೌಹಾರ್ದದಿಂದ ಬಗೆಹರಿಸಿಕೊಳ್ಳಬೇಕಿದೆ ಎಂದರು.

ಬೆಂಕಿನಗರ, ಕಾಳಿದಾಸನಗರಕ್ಕೆ ಡಿ.ಬಿ.ಕೆರೆ ಕಾಲುವೆ ನೀರು ಪ್ರತಿ ಮಳೆಗಾಲದಲ್ಲಿ ಮನೆಗಳಿಗೆ ನುಗ್ಗಿ ಆಗುತ್ತಿರುವ ಹಾನಿಯ ಕುರಿತು ವಿಷಯವನ್ನು ನಗರಸಭಾ ಸದಸ್ಯ ದಾದಾ ಖಲಂದರ್ ಪ್ರಸ್ತಾಪಿಸಿ, ವಿಶೇಷ ಅನುದಾನದಿಂದ ಕಾಲುವೆಗೆ ತಡೆಗೋಡೆ ನಿರ್ಮಿಸಬೇಕಿದೆ ಎಂದು ಆಗ್ರಹಿಸಿದರು.

ಕರ್ನಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯದರ್ಶಿ ಬಲ್ಲೂರು ರವಿಕುಮಾರ್ ಮಾತನಾಡಿ, ‘ಬಗರ್ ಹುಕುಂ ಜಮೀನಿನ ಸಂಬಂಧ ಹಳೆಯ ಹಾಗೂ ಇತ್ತೀಚಿನ ಅರ್ಜಿಗಳನ್ನು ಸಹಾನುಭೂತಿಯಿಂದ ಪರಿಶೀಲಿಸಬೇಕು. ಡಿ.ಬಿ.ಕೆರೆ ಹಿನ್ನೀರಿನಿಂದ ಸದಾ ಜಲಾವೃತವಾಗುವ ರೈತರ ಜಮೀನುಗಳನ್ನು ಭೂಸ್ವಾದೀನ ಪಡಿಸಿಕೊಂಡು ಪರಿಹಾರ ಅಥವಾ ಬೇರೆಡೆ ಜಮೀನು ಮಂಜೂರು ಮಾಡಬೇಕು. ಜಿಲ್ಲೆಯಲ್ಲಿಯ 600 ಸಣ್ಣ, ದೊಡ್ಡ ಕೆರೆಗಳ ಜಾಗ ಒತ್ತುವರಿಯಾಗಿದ್ದು ಒತ್ತುವರಿ ತೆರವುಗೊಳಿಸಬೇಕು’ ಎಂದು ಆಗ್ರಹಿಸಿ ಡಿಸಿಯವರಿಗೆ ಅರ್ಜಿ ನೀಡಿದರು.

ನ್ಯಾಯಾಲಯದಲ್ಲಿ ಪ್ರಕರಣ ಇರುವ ಪೊಲೀಸ್ ಕಾನ್‌ಸ್ಟೆಬಲ್‌ ಒಬ್ಬರ ಪತ್ನಿ ಅರ್ಜಿ ನೀಡಿ, ‘ನ್ಯಾಯಾಲಯದ ಆದೇಶ ಇದ್ದರೂ ನಾಲ್ಕು ವರ್ಷಗಳಿಂದ ನನಗೆ ಜೀವನಾಂಶ ನೀಡಿಲ್ಲ’ ಎಂದಾಗ ಡಿಸಿಯವರು ಈ ಕುರಿತು ಎಸ್‌ಪಿಯವರ ಗಮನ ಸೆಳೆದು ಇತ್ಯರ್ಥ ಪಡಿಸುವುದಾಗಿ ಹೇಳಿದರು.

ದನದ ಕೊಟ್ಟಿಗೆಗೆ ವಿದ್ಯುತ್ ಸಂಪರ್ಕ ಕೊಡಲು ಬೆಸ್ಕಾಂ ಸಿಬ್ಬಂದಿ ಗ್ರಾಮ ಪಂಚಾಯಿತಿಯಿಂದ ನಿರಾಪೇಕ್ಷಣ ಪತ್ರ ತರಲು ಹೇಳುತ್ತಿದ್ದಾರೆ ಎಂದು ರೈತರೊಬ್ಬರು ದೂರಿದಾಗ, ಬೆಸ್ಕಾಂ ಅಧಿಕಾರಿಗೆ ಈ ಕುರಿತು ಸೂಕ್ತ ಸೂಚನೆ ನೀಡಲಾಗುವುದು ಎಂದರು.

ಕಮಲಾಪುರದ ಅತಿವೃಷ್ಟಿಯಿಂದ ಹಾನಿಗೀಡಾದ ಪ್ರದೇಶಗಳಿಗೆ ಈವರೆಗೆ ತಹಸೀಲ್ದಾರರು ಭೇಟಿ ನೀಡಿಲ್ಲ ಎಂದು ಗ್ರಾಮಸ್ಥರು ದೂರಿದಾಗ ಕೂಡಲೆ ಗ್ರಾಮಕ್ಕೆ ಭೇಟಿ ನೀಡಲು ಜಿಲ್ಲಾದಿಕಾರಿ ತಹಶೀಲ್ದಾರರಿಗೆ ಸೂಚಿಸಿದರು.

ಈ ಸಭೆಯಲ್ಲಿ ಒಟ್ಟು 14 ಅರ್ಜಿಗಳು ಬಂದಿದ್ದು, ಐದನ್ನು ಇಲ್ಲೇ ಇತ್ಯರ್ಥಪಡಿಸಲಾಗಿದೆ. ಉಳಿದವುಗಳನ್ನು ಸ್ಥಳ ಭೇಟಿಯ ನಂತರ ಇತ್ಯರ್ಥ ಪಡಿಸಲಾಗುವುದು ಎಂದು ಡಿಸಿ ಮಾಹಿತಿ ನೀಡಿದರು.

ರೈತ ಸಂಘದ ತಾಲ್ಲೂಕು ಕಾರ್ಯದರ್ಶಿ ಹಾಗೂ ವಕೀಲರಾದ ಎಸ್. ಮಂಜುನಾಥ್, ಉಪಾಧ್ಯಕ್ಷ ಹಳ್ಳಿಹಾಳು ಹನುಮಂತಪ್ಪ, ಬಿಎಎಸ್‌ಪಿ ಜಿಲ್ಲಾಧ್ಯಕ್ಷ ಡಿ. ಹನುಮಂತಪ್ಪ, ಸಿಪಿಐ ಎಂಎಲ್‌ನ ಎಸ್. ಬೀರಪ್ಪ, ಉಪ ವಿಭಾಗಾಧಿಕಾರಿ ಎನ್. ದುರ್ಗಾಶ್ರೀ, ತಹಶೀಲ್ದಾರ್ ಡಾ.ಅಶ್ವಥ್ ಎಂ.ಬಿ., ಕೃಷಿ ಸಹಾಯಕ ನಿದೇಶಕ ನಾರನಗೌಡ, ಬಿಇಒ ಬಿ.ಸಿ. ಸಿದ್ದಪ್ಪ, ನಗರಸಭೆ ಪೌರಾಯುಕ್ತ ಬಸವರಾಜ್ ಐ., ಎಇಇ ಎಸ್.ಎಸ್. ಬಿರಾದರ್ ಹಾಗೂ ಇತರರಿದ್ದರು.

ಸರ್ವೆ ಕಚೇರಿ, ಯಮಲೋಕದ ಹೆಬ್ಬಾಗಿಲು

‘ಜಮೀನಿನ ಕೆಲಸಕ್ಕಾಗಿ ರೈತರು ಸರ್ವೆ, ತಹಶೀಲ್ದಾರ್, ಉಪ ವಿಭಾಗಾಧಿಕಾರಿ, ಜಿಲ್ಲಾಧಿಕಾರಿ ಕಚೇರಿಗೆ ಅಲೆಯುವುದೆಂದರೆ ಯಮಲೋಕದ ಬಾಗಿಲು ತಟ್ಟಿದಂತೆ...’ ಹೀಗೆ ರೈತರ ಸಂಕಷ್ಟವನ್ನು ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯದರ್ಶಿ ಬಲ್ಲೂರು ರವಿಕುಮಾರ್ ಆರೋಪಿಸಿದರು. ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿಯವರು ಬುಧವಾರ ಇಲ್ಲಿಯ ತಹಶೀಲ್ದಾರರ ಕಚೇರಿಗೆ ಭೇಟಿ ನೀಡಿ ನಡೆಸಿದ ಸಭೆಯಲ್ಲಿ ಅವರು ಕಂದಾಯ ಇಲಾಖೆಯ ಕುರಿತು ಗಂಭೀರವಾಗಿ ಆರೋಪಿಸಿದರು.

ಅರ್ಜಿ ವಿಲೇವಾರಿಗೆ ಸೂಚನೆ

ಸಭೆ ನಡೆಸುವ ಮುಂಚೆ ತಹಶೀಲ್ದಾರ್ ಕಚೇರಿಯ ಆರ್‌ಆರ್‌ಟಿ ಸೆಕ್ಷನ್‌ಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ವಿವಿಧ ಫೈಲುಗಳನ್ನು ಪರಿಶೀಲಿಸಿದರು. ಅರ್ಜಿಗಳನ್ನು ನಿಗದಿತ ಸಮಯದೊಳಗೆ ವಿಲೇ ಮಾಡಬೇಕು. ರೈತರು ಅಥವಾ ಸಾರ್ವಜನಿಕರನ್ನು ಅನವಶ್ಯಕವಾಗಿ ಅಲೆದಾಡಿಸಬಾರದು ಎಂದು ಸಿಬ್ಬಂದಿಗೆ ತಾಕೀತು ಮಾಡಿದರು. ಮೋಜಿಣಿ ವಿಭಾಗದಲ್ಲಿ ಅರ್ಜಿಯೊಂದರ ವಿಲೇಯನ್ನು ಜೂನ್ ತಿಂಗಳೊಳಗೆ ಮಾಡಲು ಸೂಚಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು