ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದಾವಣಗೆರೆ: ಜಾತಿ, ಧರ್ಮದ ಹಂಗಿಲ್ಲದೇ ವಿದ್ಯಾರ್ಥಿಗಳಿಗೆ ನೆರವು

ದಾವಣಗೆರೆ– ಚಿತ್ರದುರ್ಗ ಜಿಲ್ಲಾ ಬ್ಯಾಂಕ್‌ ನಿವೃತ್ತರ ಒಕ್ಕೂಟದ ಕಾರ್ಯ
Published 7 ಜುಲೈ 2024, 7:27 IST
Last Updated 7 ಜುಲೈ 2024, 7:27 IST
ಅಕ್ಷರ ಗಾತ್ರ

ದಾವಣಗೆರೆ: ಜಾತಿ, ಧರ್ಮದ ಹಂಗಿಲ್ಲದೇ ಬಡತನ ಹಾಗೂ ಪ್ರತಿಭೆಯೊಂದನ್ನೇ ಮಾನದಂಡವಾಗಿಟ್ಟುಕೊಂಡು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ, ಪ್ರೋತ್ಸಾಹಿಸುವ ಸಮಾಜಮುಖಿ ಕಾರ್ಯವನ್ನು ಇಲ್ಲಿನ ‘ದಾವಣಗೆರೆ– ಚಿತ್ರದುರ್ಗ ಜಿಲ್ಲಾ ಬ್ಯಾಂಕ್‌ ನಿವೃತ್ತರ ಒಕ್ಕೂಟ’ ಮಾಡುತ್ತಿದೆ.

ತಮ್ಮ ತಮ್ಮ ಜಾತಿ, ಧರ್ಮಗಳ ವಿದ್ಯಾರ್ಥಿಗಳನ್ನಷ್ಟೇ ಸನ್ಮಾನಿಸುವ, ಅಭಿನಂದಿಸುವ ಸಂಘ– ಸಂಘಟನೆಗಳು, ಒಕ್ಕೂಟಗಳ ಮಧ್ಯೆ ದಾವಣಗೆರೆ– ಚಿತ್ರದುರ್ಗ ಜಿಲ್ಲಾ ಬ್ಯಾಂಕ್‌ ನಿವೃತ್ತರ ಒಕ್ಕೂಟವು ಮಾದರಿ ಕಾರ್ಯದ ಮೂಲಕ ವಿಭಿನ್ನವಾಗಿ ಗುರುತಿಸಿಕೊಂಡಿದೆ.

ಒಕ್ಕೂಟದ ಪದಾಧಿಕಾರಿಗಳು ಪ್ರತಿ ವರ್ಷವೂ ಜಿಲ್ಲೆಯ ಸರ್ಕಾರಿ, ಅನುದಾನಿತ ಶಾಲೆಗಳಿಗೆ ತೆರಳಿ ಆರ್ಥಿಕವಾಗಿ ಸಂಕಷ್ಟದಲ್ಲಿರುವ, ಪ್ರತಿಭಾವಂತ ಬಡ ವಿದ್ಯಾರ್ಥಿಗಳನ್ನು ಗುರುತಿಸಿ, ಅವರಿಗೆ ತಲಾ ₹ 5,000 ನಗದು ಹಾಗೂ ನೂತನ ಉಡುಪು, ಪ್ರಶಸ್ತಿ ನೀಡಿ ವಿದ್ಯಾಭ್ಯಾಸಕ್ಕೆ ನೆರವಾಗುತ್ತಿದ್ದಾರೆ.

ದಾವಣಗೆರೆ - ಚಿತ್ರದುರ್ಗ ಜಿಲ್ಲಾ ಬ್ಯಾಂಕ್ ನಿವೃತ್ತರ ಒಕ್ಕೂಟವು ‘ಅಖಿಲ ಭಾರತ ಬ್ಯಾಂಕ್ ನಿವೃತ್ತರ ಒಕ್ಕೂಟ’ದ ಅಂಗಸಂಸ್ಥೆಯಾಗಿದ್ದು, ಕರ್ನಾಟಕ ರಾಜ್ಯ ಬ್ಯಾಂಕ್ ನಿವೃತ್ತರ ಒಕ್ಕೂಟದ ಆಶ್ರಯದಲ್ಲಿ ಕಾರ್ಯನಿರ್ವಹಿಸುತ್ತಿದೆ.

ಒಕ್ಕೂಟವು ಮೇ 30, 2017ರಂದು ರಚನೆಗೊಂಡಿದೆ. ನಗರದ ಕುವೆಂಪು ಕನ್ನಡ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯ ಒಕ್ಕೂಟದ ಪದಾಧಿಕಾರಿಗಳು ಹಾಗೂ ವಿವಿಧ ಬ್ಯಾಂಕ್‌ಗಳ ನೂರಾರು ನಿವೃತ್ತ ಅಧಿಕಾರಿಗಳು, ಸಿಬ್ಬಂದಿ ಭಾಗವಹಿಸಿದ್ದರು.

ಒಕ್ಕೂಟದ ಮೊದಲ ಅಧ್ಯಕ್ಷರಾಗಿ ವಿ.ನಂಜುಂಡೇಶ್ವರ ಆಯ್ಕೆಯಾಗಿದ್ದರು. ಕೆ.ಎಚ್.ಹುಲ್ಲತ್ತಿ, ಕೆ.ನಾಗರಾಜ್, ಪ್ರೇಮಲತಾ ಬಸವರಾಜ್ ಉಪಾಧ್ಯಕ್ಷರಾಗಿ, ಜಿ.ರಂಗಸ್ವಾಮಿ ಪ್ರಧಾನ ಕಾರ್ಯದರ್ಶಿಯಾಗಿ, ಜಿ.ಬಿ.ಶಿವಕುಮಾರ್ ಖಜಾಂಚಿಯಾಗಿ ಆಯ್ಕೆಯಾಗಿದ್ದರು.

ಆರೋಗ್ಯ, ಶಿಕ್ಷಣ, ಪರಿಸರ ನೈರ್ಮಲ್ಯ ವಿಷಯಗಳಿಗೆ ಒತ್ತು ನೀಡಿ ಸಾಧಕರನ್ನು ಸನ್ಮಾನಿಸುವ ಬಗ್ಗೆ ಒಕ್ಕೂಟದ ಮೊದಲ ಸಭೆಯಲ್ಲೇ ನಿರ್ಧರಿಸಲಾಗಿತ್ತು. ಅದರಂತೆ ಒಕ್ಕೂಟದಿಂದ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಈ ಕಾರ್ಯಕ್ರಮಗಳಿಗಾಗಿ ಒಕ್ಕೂಟದ ಸದಸ್ಯರೇ ದೇಣಿಗೆ ನೀಡಿದ್ದಾರೆ.

2018ರ ಆಗಸ್ಟ್‌ 26ರಂದು ವಿದ್ಯಾನಗರದಲ್ಲಿರುವ ಮಾಗನೂರು ಬಸಪ್ಪ ಕಾಲೇಜಿನ ಸಭಾಂಗಣದಲ್ಲಿ ಮೊದಲ ಬಾರಿ ನಡೆದ ಕಾರ್ಯಕ್ರಮದಲ್ಲಿ ಎಸ್‌ಎಸ್ಎಲ್‌ಸಿ ಮತ್ತು ಪಿಯುಸಿಯಲ್ಲಿ ಶೇ 75ಕ್ಕಿಂತ ಹೆಚ್ಚು ಅಂಕ ಪಡೆದ 12 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ತಲಾ ₹ 5,000 ನಗದು ಮತ್ತು ನೂತನ ಉಡುಪುಗಳನ್ನು ವಿತರಿಸಲಾಯಿತು. ಇದೇ ವೇಳೆ ಕರ್ನಾಟಕ ರಾಜ್ಯ ಬ್ಯಾಂಕ್ ನಿವೃತ್ತರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೆ.ವಿಶ್ವನಾಥ ನಾಯ್ಕ, ಅಖಿಲ ಭಾರತ ಕಾರ್ಪೋರೇಷನ್ ಬ್ಯಾಂಕ್ ನಿವೃತ್ತರ ಸಂಘದ ಅಧ್ಯಕ್ಷ ರಾಮಪ್ರಿಯಾ ಹಾಗೂ ಅಖಿಲ ಭಾರತ ಸಿಂಡಿಕೇಟ್ ಬ್ಯಾಂಕ್ ನಿವೃತ್ತರ ಒಕ್ಕೂಟದ ಪದಾಧಿಕಾರಿಗಳೂ ಬಡವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡಿ ಪ್ರೋತ್ಸಾಹಿಸಿದ್ದರು.

2019ರಲ್ಲೂ ಎಸ್‌ಎಸ್ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಸಾಧನೆ ತೋರಿದ, ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ 32 ವಿದ್ಯಾರ್ಥಿಗಳನ್ನು ಸನ್ಮಾನಿಸಿ, ನಗದು ಪುರಸ್ಕಾರ, ಉಡುಪುಗಳನ್ನು ನೀಡಲಾಯಿತು. ಒಬ್ಬ ವಿದ್ಯಾರ್ಥಿಗೆ ₹ 10,000 ನೆರವು ನೀಡಲಾಯಿತು. 2020ರಲ್ಲಿ ಕೋವಿಡ್‌ ಕಾರಣದಿಂದ 100 ವಿದ್ಯಾರ್ಥಿಗಳನ್ನು ಪುರಸ್ಕರಿಸುವ ಬೃಹತ್‌ ಕಾರ್ಯಕ್ರಮ ನಡೆಯಲಿಲ್ಲ.

2021, 2022 ಹಾಗೂ 2023ರಲ್ಲಿ ತಲಾ 25 ವಿದ್ಯಾರ್ಥಿಗಳನ್ನು ಗುರುತಿಸಿ ಸನ್ಮಾನಿಸಲಾಗಿದೆ. ಈ ವರ್ಷ ಒಕ್ಕೂಟದಿಂದ 37 ಬಡ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುತ್ತಿದೆ.

ನಿವೃತ್ತ ಬ್ಯಾಂಕ್‌ ಸಿಬ್ಬಂದಿಗೆ ಸನ್ಮಾನ, ಗಿಡ ನೆಡುವ ಕಾರ್ಯಕ್ರಮ, ಅನಾರೋಗ್ಯಕ್ಕೀಡಾದ ಬ್ಯಾಂಕ್‌ ಸಿಬ್ಬಂದಿಗೆ ಆರ್ಥಿಕವಾಗಿ ನೆರವು ನೀಡುವಂತಹ ಕಾರ್ಯಕ್ರಮಗಳನ್ನೂ ಒಕ್ಕೂಟವು ನಿರಂತವಾಗಿ ನಡೆಸಿಕೊಂಡು ಬರುತ್ತಿದೆ.

ಇದುವರೆಗೂ 30ಕ್ಕೂ ಹೆಚ್ಚು ಉದ್ಯಾನಗಳ ಸ್ವಚ್ಛತೆ, ಆರೋಗ್ಯ ತಪಾಸಣೆ ಶಿಬಿರ, ಹೊಸ ಬಡಾವಣೆಗಳಲ್ಲಿ ಗಿಡ ನೆಡುವ ಕಾರ್ಯವನ್ನೂ ಒಕ್ಕೂಟದ ಸದಸ್ಯರು ಮಾಡಿದ್ದಾರೆ.

ಬ್ಯಾಂಕ್‌ ಸೇವೆಯಿಂದ ನಿವೃತ್ತರಾದ ಬಳಿಕ ಸಮಾಜಕ್ಕೆ ಏನಾದರೂ ಕೊಡುಗೆ ನೀಡುವ ಉದ್ದೇಶದಿಂದ ಒಕ್ಕೂಟದಿಂದ ಹಲವು ಸಮಾಜಮುಖಿ ಕಾರ್ಯಗಳನ್ನು ಮಾಡಲಾಗುತ್ತಿದೆ. ಒಕ್ಕೂಟವು ಜಾತಿ ವರ್ಗರಹಿತವಾಗಿ ಕೆಲಸ ಮಾಡುತ್ತಿದೆ
ಶಾಂತಗಂಗಾಧರ ಎಸ್‌.ಟಿ. ಅಧ್ಯಕ್ಷ ದಾವಣಗೆರೆ – ಚಿತ್ರದುರ್ಗ ಜಿಲ್ಲಾ ಬ್ಯಾಂಕ್ ನಿವೃತ್ತರ ಒಕ್ಕೂಟ
ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಇಂದು
ದಾವಣಗೆರೆ – ಚಿತ್ರದುರ್ಗ ಜಿಲ್ಲಾ ಬ್ಯಾಂಕ್ ನಿವೃತ್ತರ ಒಕ್ಕೂಟ ಹಾಗೂ ಸ್ಟೇಟ್ ಬ್ಯಾಂಕ್ ಆಫ್‌ ಮೈಸೂರು ಪೆನ್ಷನರ್ ಕಮ್ಯೂನ್‌ ಸಂಘಟನೆ ವತಿಯಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಭಾನುವಾರ ನಡೆಯಲಿದೆ. ನಗರದ ತರಳಬಾಳು ಬಡಾವಣೆಯಲ್ಲಿರುವ ಮಾಗನೂರು ಬಸಪ್ಪ ಕಾಲೇಜು ಸಭಾಂಗಣದಲ್ಲಿ ಬೆಳಿಗ್ಗೆ 10.30ಕ್ಕೆ ಕಾರ್ಯಕ್ರಮ ನಡೆಯಲಿದೆ. ಒಕ್ಕೂಟದ ಅಧ್ಯಕ್ಷ ಶಾಂತಗಂಗಾಧರ ಎಸ್‌.ಟಿ. ಅಧ್ಯಕ್ಷತೆ ವಹಿಸಲಿದ್ದು ಕಾಲೇಜಿನ ನಿರ್ದೇಶಕ ಜಿ.ಎನ್.ಎಚ್‌.ಕುಮಾರ್ ಉದ್ಘಾಟಿಸಲಿದ್ದಾರೆ. ಎಸ್‌ಬಿಐ ಪೆನ್ಷನರ್ ಕಮ್ಯೂನ್‌ನ ಕಾರ್ಯದರ್ಶಿ ಅಜಿತ್‌ಕುಮಾರ್‌ ನ್ಯಾಮತಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಒಕ್ಕೂಟದ ಗೌರವಾಧ್ಯಕ್ಷ ಜಿ.ರಂಗಸ್ವಾಮಿ ವಿಶೇಷ ಆಹ್ವಾನಿತರಾಗಿ ಪಾಲ್ಗೊಳ್ಳಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT