ಮಲೇಬೆನ್ನೂರು: ಪಟ್ಟಣದಲ್ಲಿ ಸರ್ಕಾರಿ, ಖಾಸಗಿ ಅನುದಾನಿತ, ಅನುದಾನ ರಹಿತ ಶಾಲೆ ಶಿಕ್ಷಕರು, ಸಿಬ್ಬಂದಿ, ವಿದ್ಯಾರ್ಥಿಗಳು, ಆಶಾ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ವಿವಿಧ ಇಲಾಖೆಗಳ ನೌಕರರು ‘ಪ್ರಜಾಪ್ರಭುತ್ವ ದಿನ‘ದ ಅಂಗವಾಗಿ ಮಾನವ ಸರಪಳಿ ರಚಿಸಿದರು.
ಕೊಮಾರನಹಳ್ಳಿ ಕಣಿವೆಮನೆ ಪ್ರದೇಶದ ತಾಲ್ಲೂಕು ಗಡಿಯಿಂದ ಸಾಲಾಗಿ ನಿಂತು ಗಮನ ಸೆಳೆದರು.
ಛದ್ಮವೇ಼ಷಧಾರಿ ಮಕ್ಕಳು, ಬ್ಯಾಂಡ್ ವಾದನ, ಡೊಳ್ಳು, ನಾಸಿಕ್ ಡೋಲು, ತಮಟೆ ಮೇಳ, ವೀರ ಭದ್ರ ದೇವರ ಕುಣಿತ, ಮಂಟೆ ಸ್ವಾಮಿ ಪದ, ಬೀಸು ಕಂಸಾಳೆ ನೃತ್ಯ ಮಾಡಿದರು.
ಪುರಸಭಾ ಕಚೇರಿ ಬಳಿ ಉಪತಹಶೀಲ್ದಾರ್ ಆರ್.ರವಿ ಪ್ರತಿಜ್ಞಾವಿಧಿ ಬೋಧಿಸಿದರು. ಪುರಸಭೆ ಸದಸ್ಯರು, ಸಿಬ್ಬಂದಿ ಇದ್ದರು.
ರಾಜ್ಯ ಹೆದ್ದಾರಿ 25ರಲ್ಲಿ ನೆರೆದಿದ್ದವರಿಗೆ ದೂಳಿನ ಮಜ್ಜನವಾಯ್ತು. ಪಟ್ಟಣದ ಕರ್ನಾಟಕ ನೀರಾವರಿ ನಿಗಮದ ಕಚೇರಿಯಿಂದ ಗಡಿಯವರೆಗೂ ವಿದ್ಯಾರ್ಥಿ, ಶಿಕ್ಷಕರು ಬೆಳಿಗ್ಗೆ 7 ರಿಂದ 10 ಗಂಟೆ ತನಕ ಬಿಸಿಲಿನಲ್ಲಿ ನಿಂತು ಹಿಡಿಶಾಪ ಹಾಕಿದರು.
ಕೆಲವೆಡೆ ಸಾರ್ವಜನಿಕರು, ಹೋಟೆಲ್, ಸ್ವಸಹಾಯ ಸಂಘದವರು ಕುಡಿಯುವ ನೀರು, ಬಿಸ್ಕತ್ ವಿತರಿಸಿದರು. ಕೊಮಾರನಹಳ್ಳಿ ಬಳಿ ವಿದ್ಯಾರ್ಥಿನಿಯೊಬ್ಬಳು ಮೂರ್ಛೆ ಹೋದ ಘಟನೆಯೂ ನಡೆಯಿತು. ಶಿಕ್ಷಕರು ಪ್ರಥಮ ಚಿಕಿತ್ಸೆ ನೀಡಿದರು.
‘ದೂರದ ಶಾಲೆಗಳಿಂದ ವಾಹನಗಳ ಮೂಲಕ ಮಕ್ಕಳನ್ನು ಬೆಳ್ಳಂಬೆಳಿಗ್ಗೆ ಕರೆ ತಂದಿರುವುದು ತಪ್ಪು. ಅವರಿಗೆ ಸೂಕ್ತ ಊಟೋಪಚಾರದ ವ್ಯವಸ್ಥೆ, ಕನಿಷ್ಠ ಕುಡಿಯುವ ನೀರು ಸರಬರಾಜು ಮಾಡಿಲ್ಲ. 3 ಗಂಟೆ ಮಕ್ಕಳು ಕಲುಷಿತ ವಾತಾವರಣದಲ್ಲಿ ನಿಲ್ಲಬೇಕಾಯಿತು’ ಎಂದು ಬಿಜೆಪಿ ಮುಖಂಡ ಹನಗವಾಡಿ ವೀರೇಶ್ ಅಸಮಾಧಾನ ವ್ಯಕ್ತಪಡಿಸಿದರು.