ಸೋಮವಾರ, ಜುಲೈ 26, 2021
26 °C
ಕೆಟ್ಟು ನಿಂತ ಮೋಟರ್‌ಗಳು: ದುರಸ್ತಿ ಮಾಡುವಲ್ಲಿ ನಿರ್ಲಕ್ಷ್ಯ

ನೀರು ನಿರ್ವಹಣೆಯಲ್ಲಿ ಪಾಲಿಕೆ ವಿಫಲ: ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ನಗರಪಾಲಿಕೆ ಆಡಳಿತದ ವೈಫಲ್ಯದಿಂದಾಗಿ ನಗರಕ್ಕೆ 15 ದಿನಗಳಿಂದ ನೀರು ಸರಬರಾಜಿನಲ್ಲಿ ವ್ಯತ್ಯಯವಾಗಿದೆ ಎಂದು ಪಾಲಿಕೆ ವಿರೋಧ ಪಕ್ಷದ ಎ. ನಾಗರಾಜು ಆರೋಪಿಸಿದರು.

‘ನಗರಕ್ಕೆ ಕುಡಿಯುವ ನೀರಿನ ಮೂಲಗಳಾದ ರಾಜನಹಳ್ಳಿ, ಕುಂದುವಾಡ ಕೆರೆ ಹಾಗೂ ಟಿವಿ ಸ್ಟೇಷನ್ ಕೆರೆಗಳ ನಿರ್ವಹಣೆ ಮಾಡುವಲ್ಲಿ ಆಡಳಿತವರ್ಗ ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದರ ಪರಿಣಾಮ ಜನರು ಪರಿತಪಿಸುವಂತಾಗಿದೆ’ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

‘ರಾಜನಹಳ್ಳಿ ಪಂಪಹೌಸ್‌ನಲ್ಲಿ 1000 ಎಚ್‌ಪಿ ಸಾಮರ್ಥ್ಯದ ಎರಡು ಮೋಟರ್‌ಗಳ ಪೈಕಿ ಎರಡೂ ಕೆಟ್ಟು ನಿಂತಿವೆ. 500 ಎಚ್‌.ಪಿ. ಸಾಮರ್ಥ್ಯದ 3 ಮೋಟರ್‌ಗಳ ಪೈಕಿ ಒಂದು ಹೊರತುಪಡಿಸಿದರೆ ಉಳಿದ ಎರಡು ಮೋಟರ್‌ಗಳು ದುರಸ್ತಿಗೆ ಬಂದಿವೆ. ದೊಡ್ಡಬಾತಿಯ ಪಂಪಹೌಸ್‌ನಲ್ಲಿರುವ 550 ಎಚ್‌.ಪಿ ಸಾಮರ್ಥ್ಯದ ಐದು ಮೋಟರ್‌ಗಳೂ ಕೆಟ್ಟು ನಿಂತಿವೆ’ ಎಂದು ಆರೋಪಿಸಿದರು.

‘ದೊಡ್ಡಬಾತಿಯ ಪಂಪಹೌಸ್‌ನಲ್ಲಿ ಎರಡು ಮೋಟರ್‌ಗಳು ನಾಲ್ಕು ತಿಂಗಳಿನಿಂದ ರಿಪೇರಿಗೆ ಬಂದಿದ್ದವು. ಆದರೆ ಅವುಗಳನ್ನು ದುರಸ್ತಿ ಮಾಡದೇ ಪಾಲಿಕೆ ನಿರ್ಲಕ್ಷ್ಯವಹಿಸಿ ಜನರ ಜೀವನದ ಜೊತೆ ಚೆಲ್ಲಾಟ ಆಡುತ್ತಿದೆ. ಕುಂದವಾಡದಲ್ಲಿ ಸ್ಟಾರ್ಟರ್‌ ಕೆಟ್ಟಿದ್ದು, ದುರಸ್ತಿಗೆ ಮೂರ್ನಾಲ್ಕು ದಿನಗಳು ಬೇಕು ಎಂದು ಪಾಲಿಕೆ ಅಧಿಕಾರಿಗಳು ಸಬೂಬು ಹೇಳುತ್ತಿದ್ದಾರೆ. ನಾವೂ ಖುದ್ದಾಗಿ ರಾಜಹಳ್ಳಿ ಪಂಪ್‌ಹೌಸ್‌ಗೆ ಭೇಟಿ ನೀಡಿ ಅಲ್ಲಿನ ಅವ್ಯವಸ್ಥೆ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದ್ದೇವೆ’ ಎಂದು ಹೇಳಿದರು.

‘ದಾವಣಗೆರೆ ಹೆಸರಿಗೆ ಮಾತ್ರ ಸ್ಮಾರ್ಟ್‌ ಸಿಟಿ ಎನ್ನುವಂತಾಗಿದೆ. ಆಡಳಿತದಲ್ಲಿ ಮಾತ್ರ ಬೇಜವಾಬ್ದಾರಿತನ ಕಂಡುಬರುತ್ತಿದೆ. ನಾಗರಿಕರಿಗೆ ಅತಿ ಮುಖ್ಯವಾಗಿ ಬೇಕಾಗಿರುವ ನೀರಿನ ಸೌಕರ್ಯದ ಬಗ್ಗೆ ಸರಿಯಾಗಿ ಕ್ರಮ ತೆಗೆದುಕೊಂಡಿಲ್ಲ. ಇದರ ಪರಿಣಾಮವಾಗಿ ಹಳೆಯ ಭಾಗದ 25 ಹಾಗೂ ಹೊಸ ದಾವಣಗೆರೆಯ 5 ವಾರ್ಡ್‌ಗಳಿಗೆ ನೀರು ಸರಬರಾಜು ಆಗುತ್ತಿಲ್ಲ. ಕೂಡಲೇ ಆಡಳಿತ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ಪಾಲಿಕೆ ಸದಸ್ಯ ದೇವರಮನೆ ಶಿವಕುಮಾರ್ ಮಾತನಾಡಿ, ‘ರಾಜನಹಳ್ಳಿ ಪಂಪ್‌ಹೌಸ್‌ನಲ್ಲಿ 1000 ಎಚ್‌ಪಿ ಸಾಮರ್ಥ್ಯದ ಒಂದು ಮೋಟರ್ ಕೆಟ್ಟು 8 ತಿಂಗಳಾದರೂ ದುರಸ್ತಿಪಡಿಸುವ ಕೆಲಸ ಮಾಡಿಲ್ಲ. ಕುಂದವಾಡ ಕೆರೆಯಲ್ಲಿ ಸ್ಟ್ರಾಟರ್ ಕೆಟ್ಟಿದೆ. ಅದಕ್ಕೆ ಆರ್ಡರ್‌ ಕೊಟ್ಟು 4 ದಿನಗಳಾದರೂ ಬಂದಿಲ್ಲ. ಕಳಪೆ ಗುಣಮಟ್ಟದ ಸಾಮಗ್ರಿಗಳಿಂದ ಅವು ಬೇಗ ದುರಸ್ತಿಗೆ ಬರುತ್ತವೆ. ಗುಣಮಟ್ಟದ ಸಾಮಗ್ರಿ ತರಿಸಬೇಕು. ಪಾಲಿಕೆ ಆಡಳಿತ ಟ್ಯಾಂಕರ್‌ ಮೂಲಕ ಕುಡಿಯುವ ನೀರು ಸರಬರಾಜು ಮಾಡಬೇಕು’ ಎಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಗಡಿಗುಡಾಳ್‌ ಮಂಜುನಾಥ್‌, ಕೆ.ಚಮನ್‌ ಸಾಬ್‌, ಪಾಮೆನಹಳ್ಳಿ ನಾಗರಾಜ್, ಮುಖಂಡರಾದ ಉಮೇಶ್, ಸಾಮಾಜಿಕ ಜಾಲತಾಣದ ಕೆ.ಎಲ್. ಹರೀಶ್ ಬಸಾಪುರ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು