ಮಲೇಬೆನ್ನೂರು: ‘ಅಪೌಷ್ಟಿಕತೆ, ರಕ್ತ ಹೀನತೆ ಸಮಸ್ಯೆಯಿಂದ ಪಾರಾಗಲು ಧಾನ್ಯ, ತರಕಾರಿ, ನಾರಿನ ಅಂಶವಿರುವ ತರಕಾರಿ ಸೇವಿಸಿ’ ಎಂದು ಡಾ.ಪ್ರಶಾಂತ್ ಸಲಹೆ ನೀಡಿದರು.
ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಂಗಳವಾರ ನಡೆದ ‘ಪೋಷಣ್ ಮಾಸ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಗರ್ಭಿಣಿಯರು ವೈದ್ಯರಿಂದ ನಿಯಮಿತ ತಪಾಸಣೆ ಮಾಡಿಸಿಕೊಂಡರೆ ಮುಂದಿನ ದಿನಗಳಲ್ಲಿ ಎದುರಾಗುವ ಸಮಸ್ಯೆಗಳನ್ನು ದೂರ ಇಡಲು ಸಾಧ್ಯ. ತಾಯಿ– ಮಗು ರಕ್ಷಣೆಗೆ ನಿಯಮಿತ ಆಹಾರ ಪದ್ಧತಿ ಅನುಸರಿಸಿ. ಜಂಕ್‌ಫುಡ್, ಫಾಸ್ಟ್ ಫುಡ್, ಎಣ್ಣೆ ತಿಂಡಿಯಿಂದ ದೂರವಿರಿ’ ಎಂದು ತಿಳಿಸಿದರು.
ತಾಲ್ಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಉಮ್ಮಣ್ಣ ಮಾತನಾಡಿ, ಗರ್ಭಿಣಿಯರು ಸಮತೋಲ ಆಹಾರ ಸೇವಿಸಿ. ನಿಯಮಿತ ವ್ಯಾಯಾಮ, ಆಹಾರ ಪದ್ಧತಿ ಅನುಸರಿಸಿ’ ಎಂದು ಸಲಹೆ ನೀಡಿದರು.
ಪುರಸಭೆ ಉಪಾಧ್ಯಕ್ಷೆ ನಪ್ಸಿಯಾ ಬಾನು ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಶಿಶು ಯೋಜನಾಧಿಕಾರಿ ರಷೀದಾಬಾನು, ಪುರಸಭಾ ಸದಸ್ಯ ನಯಾಜ್, ಗೌಡ್ರ ಮಂಜಣ್ಣ, ಬಿ.ಸುರೇಶ್ ಮಾತನಾಡಿದರು.
ನಿಸಾರ್ ಅಹ್ಮದ್, ಗೀತಮ್ಮ, ವಿಮಲಾ, ಶೀಲಾ, ವಿಜಯಲಕ್ಷ್ಮೀ, ಸುಲೋಚನಮ್ಮ, ಪುರಸಭಾ ಸದಸ್ಯರು, ನಾಗರಿಕರು ಹಾಗೂ ಗರ್ಭಿಣಿಯರು ಇದ್ದರು.