ಬುಧವಾರ, ಜೂನ್ 29, 2022
24 °C
ಮೇ ಸಾಹಿತ್ಯ ಮೇಳದ ಸಮಾರೋಪದಲ್ಲಿ ಮೂಡ್ನಾಕೂಡು ಅಭಿಮತ

ಮುಸ್ಲಿಮರನ್ನು ಅಸ್ಪೃಶ್ಯರನ್ನಾಗಿ ಮಾಡಲು ಬ್ರಾಹ್ಮಣ್ಯ ಹೊರಟಿದೆ: ಚಿನ್ನಸ್ವಾಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಮುಸ್ಲಿಮರನ್ನು ಹಿಂದೂಗಳನ್ನಾಗಿ ಮಾಡಬೇಕು. ಹಿಂದೂ ಧರ್ಮಕ್ಕೆ ಮತಾಂತರ ಸಾಧ್ಯವಿಲ್ಲ. ಯಾವುದಾದರೂ ಜಾತಿಗೆ ಸೇರಿಸಲು ಮಾತ್ರ ಸಾಧ್ಯ. ಹಾಗಾಗಿ ಅವರನ್ನು ಅಸ್ಪೃಶ್ಯರನ್ನಾಗಿ ಮಾಡಲು ಬ್ರಾಹ್ಮಣ್ಯ ಹೊರಟಿದೆ ಎಂದು ಕವಿ ಮೂಡ್ನಾಕೂಡು ಚಿನ್ನಸ್ವಾಮಿ ವಿಷಾದಿಸಿದರು.

ಮೇ ಸಾಹಿತ್ಯ ಮೇಳದಲ್ಲಿ ವಿಭಾ ಸಾಹಿತ್ಯ ಪ್ರಶಸ್ತಿ, ಬಂಡ್ರಿ ನರಸಪ್ಪ ಸಮಾಜಮುಖಿ ಶ್ರಮಜೀವಿ ಪ್ರಶಸ್ತಿ, ನವಲಕಲ್‌ ಬ್ರಹನ್ಮಠ ಶಾಂತವೀರಮ್ಮ ಮಹಾತಾಯಿ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

ಹಿಜಾಬ್‌ನಿಂದ ಶುರುವಾಯಿತು. ಹಲಾಲ್‌, ಆಜಾನ್‌ ವಿವಾದವಾಯಿತು. ಬಳಿಕ ದೇವಸ್ಥಾನಗಳಲ್ಲಿ ಮುಸ್ಲಿಮರು ವ್ಯಾಪಾರ ಮಾಡಬಾರದು. ಅವರ ಆಟೊ, ಟ್ಯಾಕ್ಸಿಗಳಲ್ಲಿ ಹೋಗಬಾರದು ಎಂದೆಲ್ಲ ಶುರು ಮಾಡಿದರು. ಹಿಂದುಗಳು, ಹಿಂದೂ ರಾಷ್ಟ್ರ ಅನ್ನಿಸಿಕೊಳ್ಳಲು ಇದೆಲ್ಲ ಮಾಡಬೇಕಿತ್ತಾ ಎಂದು ಪ್ರಶ್ನಿಸಿದರು.

ಪ್ರಜಾಪ್ರಭುತ್ವ ಅವಹೇಳನಕ್ಕೆ ಒಳಗಾಗಿದೆ. ಬಾಯಿ ಮಾತಿನಪ್ರಜಾಪ್ರಭುತ್ವ ಮಾತ್ರ ಕಾಣುತ್ತಿದ್ದೇವೆ. ನಡೆಯುತ್ತಿರುವುದು ಬೇರೆ.
ಸಾಮಾಜಿಕ ಮೌಲ್ಯ, ಮಾನವೀಯ ಮೌಲ್ಯ ಯಾಕೆ ಕಳೆದುಕೊಳ್ಳುತ್ತದೆ. ಜನರಲ್ಲಿ, ವ್ಯವಸ್ಥೆಯಲ್ಲಿ ಏನಿದೆಯೋ ಅದೇ ಪ್ರಭುತ್ವದಲ್ಲಿ ವ್ಯಕ್ತವಾಗಿದೆ. ಜನರು ಇಷ್ಟು ಅಮಾನವೀಯರಾಗಲು ಮಾಧ್ಯಮ ಅದರಲ್ಲೂ ದೃಶ್ಯಮಾಧ್ಯಮ ಕಾರಣ. ಯಾರನ್ನಾದರೂ ಎತ್ತಿಕಟ್ಟುವ ಕೆಲಸ ಈ ಮಾಧ್ಯಮ ಮಾಡುತ್ತಿದೆ. ಇದು ಮಾಧ್ಯಮ ಜಿಹಾದ್‌  ಎಂದು ಆಪಾದಿಸಿದರು.

ಬ್ರಾಹ್ಮಣರ ಸಂಖ್ಯೆ ಶೇ 3 ಇದೆ. ಅದರಲ್ಲಿ ಮೂರನೇ ಒಂದು ಭಾಗದಷ್ಟು ಮಂದಿ ಜನಪರವಾಗಿ ಇದ್ದಾರೆ. ಮತ್ತೆ
ಒಂದು ಭಾಗದಷ್ಟು ಜನರು ಜನಪರ, ಜನವಿರೋಧಿ ಬಗ್ಗೆ ತಲೆ ಕೆಡಿಸಿಕೊಳ್ಳದೇ ಇದ್ದಾರೆ. ಉಳಿದ ಒಂದು ಭಾಗ ಮಾತ್ರ ಬ್ರಾಹ್ಮಣ್ಯವನ್ನು ಜಾರಿ ಮಾಡಲು ಪ್ರಯತ್ನಿಸುತ್ತಿದ್ದಾರೆ. ಸಂಘಪರಿವಾರದಲ್ಲಿ ಅವರೇ ಇದ್ದಾರೆ. ಇವರೇ ಸಮಾಜಕ್ಕೆ ಅಪಾಯಕಾರಿ ಎಂದು ವಿಶ್ಲೇಷಿಸಿದರು.

ಬಡವರಿಗೆ ಹಿಂಸೆ ಕೊಡುವುದರಲ್ಲೇ ಪ್ರಭುತ್ವ ಖುಷಿ ಪಡುತ್ತಿದೆ. ಕೆಲವೇ ಜನರ ಸುಖಕ್ಕಾಗಿ ಈ ಸರ್ಕಾರ ಕೆಲಸ ಮಾಡುತ್ತಿದೆ.

ಅನುಕೂಲ ಜಾತಿಗಳು ಅಂದರೆ ಶೂದ್ರರಲ್ಲಿ ಮೇಲ್ಜಾತಿಗಳು ಬ್ರಾಹ್ಮಣ್ಯವನ್ನು ಅನುಸರಿಸುತ್ತವೆ. ಹಿಂದೂ ಪದ್ಧತಿಯಲ್ಲಿ ಜಾತಿಗಳಿವೆ. ಆದರೆ ಮುಸ್ಲಿಮರು, ಕ್ರೈಸ್ತರು ಕೂಡ ಜಾತಿ ಅನುಸರಿಸುತ್ತಾರೆ ಎಂದರೆ ಈ ದೇಶ ಎಲ್ಲಿಗೆ ಹೋಗುತ್ತಿದೆ ಎಂದು ಪ್ರಶ್ನಿಸಿದರು.

ದಲಿತರು ಮತ್ತೆ ಮತ್ತೆ ದೇವಸ್ಥಾನಕ್ಕೆ ಹೋಗುತ್ತಾರೆ ಹೊರದಬ್ಬಿಸಿಕೊಳ್ಲುತ್ತಾರೆ. ಹಿಂದೂಗಳು ಎಂದು ಕರೆಸಿಕೊಳ್ಳಲು ಹಾತೊರೆಯುವ ಶೂದ್ರರು, ಅತಿಶೂದ್ರರು ಭಾರತದ ಇತಿಹಾಸವನ್ನು ತಿಳಿಯಬೇಕು. ಸ್ವಾತಂತ್ರ್ಯ ಬರುವ ಹಿಂದಿನ 250 ವರ್ಷ ಬ್ರಿಟಿಷರು ಆಳಿದ್ದರು. ಅದಕ್ಕಿಂತ ಹಿಂದೆ 800 ವರ್ಷ ಮುಸ್ಲಿಮರು ಆಳಿದ್ದರು. ಈ ದೇಶದಲ್ಲಿ ಒಂದು ಸಾವಿರ ವರ್ಷಗಳ ಕಾಲ ಬೌದ್ಧರಿದ್ದರು. ಈ ಒಂದು ಸಾವಿರ ವರ್ಷಗಳ ಇತಿಹಾಸವನ್ನು ಸಂಪೂರ್ಣವಾಗಿ ಅಳಿಸಿಹಾಕಿದ್ದರು. ಬ್ರಿಟಿಷರು ಬಂದ ಮೇಲೆ ಸಂಶೋಧನೆ ಮಾಡಿದಾಗ ಇದು ಬೆಳಕಿಗೆ ಬಂತು ಎಂದು ಮಾಹಿತಿ ನೀಡಿದರು.

ಅಂಬೇಡ್ಕರ್‌ ಅವರ ಜಾತಿ ವಿನಾಶ ಕೃತಿಯನ್ನು ಮಕ್ಕಳಿಗೆ ಪಠ್ಯ ಮಾಡಬೇಕು ಎಂದು ಆಗ್ರಹಿಸಿದರು.

ವಿ.ಎ. ಲಕ್ಷ್ಮಣ್ ಬೆಂಗಳೂರು, ದೀಪ್ತಿ ಭದ್ರಾವತಿ, ರೇಣುಕಾ ರಮಾನಂದ ಅಂಕೋಲ ಅವರಿಗೆ 2020, 2021 ಮತ್ತು 2022ರ ‘ವಿಭಾ ಸಾಹಿತ್ಯ ಪ್ರಶಸ್ತಿ’ಯನ್ನು ಪ್ರದಾನ ಮಾಡಲಾಯಿತು. ಜೆ.ಎಸ್‌. ಜಯದೇವ ಚಾಮರಾಜನಗರ, ಎಸ್‌. ಶಾಂತಮ್ಮ ಕೋಲಾರ, ಸಿ.
ಚನ್ನಬಸವಣ್ಣ ಅವರಿಗೆ ‘ಬಂಡ್ರಿ ನರಸಪ್ಪ ಸಮಾಜಮುಖಿ ಶ್ರಮಜೀವಿ’ ಪ್ರಶಸ್ತಿ ನೀಡಲಾಯಿತು. ಸಾಹಿತಿ ಬಿ.ಟಿ. ಜಾಹ್ನವಿ ಅವರಿಗೆ ‘ನವಲಕಲ್‌ ಬ್ರಹನ್ಮಠ ಶಾಂತವೀರಮ್ಮ ಮಹಾತಾಯಿ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

‘ದೇವಸ್ಥಾನ ಅಗೆದರೆ ಬೌದ್ಧರ ಆಲಯ ಸಿಗಲಿವೆ’
ದೇವಸ್ಥಾನ ಆಗಿತ್ತು ಎಂದು ಮಸೀದಿಗಳನ್ನು ಅಗೆಯಲಾಗುತ್ತಿದೆ. ಮಸೀದಿ ಬಿಟ್ಟು ದೇವಸ್ಥಾನಗಳನ್ನು ಅಗೆದರೆ ಬೌದ್ಧರ ಆಲಯಗಳು ಸಿಗಲಿವೆ ಎಂದು ಮೂಡ್ನಾಕೂಡು ಚಿನ್ನಸ್ವಾಮಿ ಹೇಳಿದರು.

ಶಬರಿಮಲೆಯ ಅಯ್ಯಪ್ಪಸ್ವಾಮಿ ದೇವಸ್ಥಾನದಿಂದ ಹಿಡಿದು ವಾರಣಾಸಿವರೆಗೆ, ತಿರುಪತಿಯಿಂದ ಹಿಡಿದು ಹೆಚ್ಚು ಜನ ಸೇರುವ ಎಲ್ಲ ದೇವಸ್ಥಾನಗಳು ಬೌದ್ಧರದ್ದಾಗಿದ್ದವು. ಅಲ್ಲಿ ಇರುವುದು ಬುದ್ಧನ ಮೂರ್ತಿಗಳು ಎಂದು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು