ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ ‘ಮದರ್ ಥೆರೇಸಾ’ ನಾಗಮ್ಮ

ಮಹಿಳೆಯರ ಸ್ವಾವಲಂಬನೆಗೆ ವನಿತಾ ಸಮಾಜ ಸ್ಥಾಪನೆ
Published 17 ಮಾರ್ಚ್ 2024, 7:21 IST
Last Updated 17 ಮಾರ್ಚ್ 2024, 7:21 IST
ಅಕ್ಷರ ಗಾತ್ರ

ದಾವಣಗೆರೆ: ಹಲವು ಸಂಸ್ಥೆಗಳ‌ನ್ನು ಆರಂಭಿಸಿ ಮಹಿಳೆಯರ ಸ್ವಾವಲಂಬನೆಗೆ ದಾರಿ ಮಾಡಿಕೊಟ್ಟ ನಾಗಮ್ಮ ಕೇಶವಮೂರ್ತಿ ಅವರು ನಿಜವಾಗಿಯೂ ದಾವಣಗೆರೆಯ ಜನರ ‘ಮದರ್ ಥೆರೇಸಾ’ ಆಗಿದ್ದರು.

ಅತ್ತೆ ರಾಧಮ್ಮನ ಪ್ರೇರಣೆಯಿಂದ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡ ಇವರು ದಾವಣಗೆರೆಯಲ್ಲಿ 1955ರಲ್ಲಿ ವನಿತಾ ಸಮಾಜ ಆರಂಭಿಸಿ ಅದರ 52 ಅಂಗ ಸಂಸ್ಥೆಗಳನ್ನು ಸ್ಥಾಪಿಸಿದ್ದರು. ಗರ್ಭದಲ್ಲಿರುವ ಮಗುವಿನಿಂದ ಹಿಡಿದು ಸಾಯುವ ಹಂತದವರೆಗೆ ಮಹಿಳೆಗೆ ಎಲ್ಲ ರೀತಿಯ ನೆರವು, ಸೌಲಭ್ಯ, ಸ್ವಾವಲಂಬನೆಗೆ ದಾರಿ ಮಾಡಿಕೊಟ್ಟ ಅವರಿಗೆ ವನಿತಾ ಸಮಾಜ ಅವರಿಗೆ ನಿಜವಾದ ಆತ್ಮವಾಗಿತ್ತು.

ರಾಜಕೀಯ, ಶಿಕ್ಷಣ, ಸಮಾಜ ಸೇವೆ, ಮಹಿಳಾ ಜಾಗೃತಿ, ಸಂಗೀತ, ಸಾಹಿತ್ಯ, ಹಾಸ್ಯ, ಆಧ್ಯಾತ್ಮ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದ ನಾಗಮ್ಮನವರು ಜನ ಮೆಚ್ಚಿದ ನಾಯಕಿಯಾಗಿದ್ದರು.

ರಾಜಕೀಯ ಪ್ರವೇಶದ ನಂತರ ರಾಷ್ಟ್ರಮಟ್ಟದಲ್ಲಿ ಇಂದಿರಾ ಗಾಂಧಿ, ರಾಜೀವ್ ಗಾಂಧಿ, ದೇವರಾಜ ಅರಸು, ಎಸ್.ನಿಜಲಿಂಗಪ್ಪ, ಮಾರ್ಗರೇಟ್ ಆಳ್ವ, ಆಸ್ಕರ್ ಫೆರ್ನಾಂಡಿಸ್ ಮುಂತಾದವರ ಆತ್ಮೀಯ ಒಡನಾಡಿಯಾಗಿದ್ದರು.
ಪುಟ್ಟಪರ್ತಿ ಸಾಯಿಬಾಬಾ ಅವರ ಅಪ್ರತಿಮ ಭಕ್ತರಾಗಿದ್ದ ನಾಗಮ್ಮನವರು ಅವರ ಆಶೀರ್ವಾದ ಪಡೆದೇ ಎಲ್ಲ ಕಾರ್ಯಕ್ಕೂ ಮುಂದಾಗುತ್ತಿದ್ದರು.

ಪ್ರೇಮಾಲಯ, ವೃದ್ಧಾಶ್ರಮ:
ಅನಾಥ ಮಕ್ಕಳಿಗಾಗಿ ಪ್ರೇಮಾಲಯ, ವಯೋವೃದ್ಧರಿಗೆ ವೃದ್ಧಾಶ್ರಮ, ಕಿವುಡ ಮೂಕ ಮಕ್ಕಳಿಗೆ ವಾಕ್ ಶ್ರವಣ ಕೇಂದ್ರ, ವೃತ್ತಿನಿರತ ಮಹಿಳೆಯರಿಗೆ ಶಿಲ್ಪಾಲಯ ಹೀಗೆ ಅನೇಕ ವಸತಿ ನಿಲಯಗಳನ್ನು ಸ್ಥಾಪಿಸಿದ ಹೆಗ್ಗಳಿಕೆ ಅವರದಾಗಿತ್ತು.
ದಾವಣಗೆರೆಯ ವಿವಿಧ ವರ್ಗದ ಎಲ್ಲ ಮಹಿಳೆಯರನ್ನು ಒಟ್ಟುಗೂಡಿಸಿ ಅವರಿಂದ ಸೇವಾ ಕಾರ್ಯಕ್ರಮಗಳನ್ನು ಮಾಡಿಸುತ್ತಿದ್ದ ನಾಗಮ್ಮನವರು, ಮದರ್ ಥೆರೆಸಾ, ಕಿರಣ್ ಬೇಡಿ ಅವರನ್ನು ಭೇಟಿ ಮಾಡಿ ವನಿತಾ ಸಮಾಜಕ್ಕೂ ಆಹ್ವಾನಿಸಿದ್ದರು.


ನಾಗಮ್ಮನವರ ಸಾಧನೆಯ ಮೈಲುಗಲ್ಲುಗಳು

* 1955- ವನಿತಾ ಸಮಾಜ ಆರಂಭಿಸಿದ್ದು
* 1968-ರಾಜಕೀಯ ಪ್ರವೇಶ, ದಾವಣಗೆರೆ ನಗರಸಭೆ ಸದಸ್ಯೆಯಾಗಿ ಆಯ್ಕೆ
* 1972- ದಾವಣಗೆರೆ ವಿಧಾನಸಭಾ ಕ್ಷೇತ್ರದಿಂದ ಶಾಸಕಿಯಾಗಿ ಆಯ್ಕೆ
* 1981- ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವೆಯಾಗಿ ಪ್ರಮಾಣ ವಚನ
* 1988- ಡೆಪ್ಯೂಟಿ ಸ್ಪೀಕರ್, ನಂತರ ಭಾರೀ ಕೈಗಾರಿಕಾ ಸಚಿವೆ, ನಂತರ ಶಿಕ್ಷಣ ಸಚಿವೆ
* ಕರ್ನಾಟಕ ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ

ಪ್ರಶಸ್ತಿ ಪುರಸ್ಕಾರಗಳು
* 1994- ಯಂಗ್ ಇಂಡಿಯಾ ಅವಾರ್ಡ್
* 2001-ಯಶೋಧರಾ ದಾಸಪ್ಪ ಪ್ರಶಸ್ತಿ
* 2003- ಕರ್ನಾಟಕ ರ‍್ಕಾರದ ಕಿತ್ತೂರು ಚೆನ್ನಮ್ಮ ಪ್ರಶಸ್ತಿ
* 2010- ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ
* 2010- ಸಾಯಿಬಾಬಾ ಅವರಿಂದ ‘ಈಶ್ವರಮ್ಮ ಪುರಸ್ಕಾರ’
* 2012- ಬಿಜಾಪುರ ಮಹಿಳಾ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್

ನಾಗಮ್ಮ ಕೇಶವಮೂರ್ತಿ
ನಾಗಮ್ಮ ಕೇಶವಮೂರ್ತಿ
ಜೆ.ಎಚ್.ಪಟೇಲ್ ಅವರೊಂದಿಗೆ ನಾಗಮ್ಮ ಕೇಶವಮೂರ್ತಿ
ಜೆ.ಎಚ್.ಪಟೇಲ್ ಅವರೊಂದಿಗೆ ನಾಗಮ್ಮ ಕೇಶವಮೂರ್ತಿ

ನೇರ ನೇಮಕಾತಿ ಜಾರಿಗೊಳಿಸಿದ ನಾಗಮ್ಮ

‘ಶಿಕ್ಷಕರ ನೇಮಕಾತಿಯಲ್ಲಿನ ಅಕ್ರಮಕ್ಕೆ ಕಡಿವಾಣ ಹಾಕಲು ನೇರ ನೇಮಕಾತಿ ಪದ್ಧತಿ ಜಾರಿಗೊಳಿಸುವ ಮೂಲಕ ಅರ್ಹರಿಗೆ ಉದ್ಯೋಗ ಸಿಗುವ  ವ್ಯವಸ್ಥೆ ತಂದರು. ಈ ಮೂಲಕ ಮಕ್ಕಳಿಗೆ ಗುಣಮಟ್ಟದ ಬೊಧನೆ ಸಿಗುವ ಜೊತೆಗೆ ಶೈಕ್ಷಣಿಕ ಕ್ಷೇತ್ರದ ಬಲವರ್ಧನೆಗೆ ಶ್ರಮಿಸಿದ್ದರು’ ಎಂದು ಮಾಜಿ ಸಚಿವ ಎಚ್.ಆಂಜನೇಯ ಸ್ಮರಿಸಿದ್ದಾರೆ. ‘ನನ್ನಂತಹ ಯುವಕರು ರಾಜಕೀಯದತ್ತ ಆಕರ್ಷಣೆ ಬೆಳೆಸಿಕೊಂಡು ಉನ್ನತ ರಾಜಕೀಯ ಸ್ಥಾನಮಾನ ಪಡೆಯಲು ನಾಗಮ್ಮ ಕೇಶಮೂರ್ತಿ ಅವರೇ ಮುಖ್ಯ ಕಾರಣಕರ್ತರು. ನಮ್ಮನ್ನು ಸ್ವಂತ ಮಕ್ಕಳಂತೆ ಕಾಣುತ್ತಿದ್ದ ನಮ್ಮ ರಾಜಕೀಯ ಬೆಳವಣಿಗೆಗೆ ಶ್ರಮಿಸುತ್ತಿದ್ದ ಅವರು ನಮ್ಮ ಪಾಲಿಗೆ ರಾಜಕೀಯ ಗುರು ಅಷ್ಟೇ ಅಲ್ಲದೇ ಅಮ್ಮ ಆಗಿದ್ದರು’ ಸ್ಮರಿಸಿದರು.  ಸಂತಾಪ: ನಾಗಮ್ಮ ಕೇಶವಮೂರ್ತಿಯವರ ನಿಧನಕ್ಕೆ ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಸಚಿವ ಎಸ್‌‌.ಎಸ್. ಮಲ್ಲಿಕಾರ್ಜುನ್ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್ ‌.ಬಿ. ಮಂಜಪ್ಪ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ ಕೆಪಿಸಿಸಿ ವಕ್ತಾರ ಡಿ.ಬಸವರಾಜ್ ಸಂತಾಪ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT