ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದಾವಣಗೆರೆ | ‘ಪ್ರಶ್ನಿಸಿದವರ ವಿರುದ್ಧ ಪೊಲೀಸ್ ಠಾಣೆಗೆ ದೂರು’

ಸಾದರ ಲಿಂಗಾಯತ ಸಮುದಾಯದ ಮುಖಂಡ ಅಣಬೇರು ರಾಜಣ್ಣ ಅಸಮಾಧಾನ
Published 4 ಆಗಸ್ಟ್ 2024, 16:10 IST
Last Updated 4 ಆಗಸ್ಟ್ 2024, 16:10 IST
ಅಕ್ಷರ ಗಾತ್ರ

ದಾವಣಗೆರೆ: ‘ಸಾದರ ಲಿಂಗಾಯತ ಸಮುದಾಯ ಶೋಚನೀಯ ಸ್ಥಿತಿಗೆ ಹೋಗಿದ್ದು, ಇದಕ್ಕೆ ಯಾರು ಕಾರಣ ಎಂಬುದನ್ನು ಹೇಳುವ ಅವಶ್ಯಕತೆಯಿಲ್ಲ, ಎಲ್ಲರಿಗೂ ಗೊತ್ತಿದೆ’ ಎಂದು ಉದ್ಯಮಿ, ಸಮುದಾಯದ ಮುಖಂಡ ಅಣಬೇರು ರಾಜಣ್ಣ ಹೇಳಿದರು.

ನಗರದಲ್ಲಿ ಭಾನುವಾರ ನಡೆದ ‘ತರಳಬಾಳು ಪೀಠ: ಅಂದು –ಇಂದು– ಮುಂದು’ ಶ್ರೀಮಠದ ಸದ್ಭಕ್ತರ ಸಭೆಯಲ್ಲಿ ಅವರು ಮಾತನಾಡಿದರು.

‘ತರಳಬಾಳು ಮಠ ಶಿಸ್ತು ಕಲಿಸಿದಂತಹ ಮಠ. ಅದು ಹಾಳಾಗಲು ಬಿಡಬಾರದು. ಮಠದಲ್ಲಿ ಕೆಲವು ರೌಡಿಗಳಿದ್ದಾರೆ, ಅವರನ್ನು ಪ್ರಶ್ನಿಸಿದವರ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡುತ್ತಾರೆ. ಗುರುಗಳಾದವರು ಇದನ್ನು ಮಾಡುತ್ತಾರಾ’ ಎಂದು ಸಭೆಯಲ್ಲಿದ್ದವರನ್ನು ಪ್ರಶ್ನಿಸಿದರು.

‘ಮಠದ ವಿದ್ಯಾಸಂಸ್ಥೆಗಳು ಮುಚ್ಚುತ್ತಿವೆ, ಕಲ್ಯಾಣ ಮಂಟಪಗಳು ಹಾಳಾಗುತ್ತಿವೆ. ಮಠಕ್ಕೆ ಹೋದವರಿಗೆ ಊಟವನ್ನೂ ಹಾಕಲ್ಲ’ ಎಂದು ದೂರಿದರು.

ಮಾಜಿ ಸಚಿವ ಬಿ.ಸಿ.ಪಾಟೀಲ್ ಮಾತನಾಡಿ, ‘ಸಭೆಗೆ ಹೋಗಬೇಡಿ ಎಂದು ಹಲವು ಮುಖಂಡರಿಗೆ ಕರೆ ಮಾಡಿ ಹೇಳಿದ್ದಾರೆ. ಇಲ್ಲಿ ಸೇರಿರುವವರು ಮಠದ ವಿರೋಧಿಗಳಲ್ಲ. ಎಲ್ಲರೂ ಭಕ್ತರೇ, ನಮ್ಮ ಹಿರಿಯರು ಕಟ್ಟಿದ ವಿದ್ಯಾಸಂಸ್ಥೆಗಳು ಹಾಳಾಗುತ್ತಿರುವುದನ್ನು ನೋಡಿ ಸುಮ್ಮನಿರಬೇಕಾ’ ಎಂದು ಪ್ರಶ್ನಿಸಿದರು.

ಸ್ವಾಮೀಜಿ ಪೀಠ ತ್ಯಜಿಸುವುದೇ ಸೂಕ್ತ ಎಂದು ಸಭೆಯಲ್ಲಿ ಸಮುದಾಯದ ಮುಖಂಡರಾದ ವಿಧಾನ ಪರಿಷತ್ ಸದಸ್ಯ ರುದ್ರೇಗೌಡ, ಚಟ್ನಳ್ಳಿ ಮಹೇಶ್, ಆನಗೋಡು ನಂಜುಂಡಪ್ಪ ಅವರೂ ಆಗ್ರಹಿಸಿದರು.

ಎಚ್.ಎಂ. ಓಂಕಾರಪ್ಪ, ಮಹೇಶ್ ಚಟ್ನಹಳ್ಳಿ, ಜೆ.ಆರ್. ಷಣ್ಮುಖಪ್ಪ, ನಿವೃತ್ತ ಕುಲಪತಿ ಕೆ.ಬಿ. ಸಿದ್ದಪ್ಪ, ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಡಿ.ಸಿ. ರಾಜಪ್ಪ, ಷಣ್ಮುಖಪ್ಪ, ಶ್ರೀನಿವಾಸ ಮೆಳ್ಳೇಕಟ್ಟೆ, ಸಂತೋಷ್ ಮೆಳ್ಳೇಕಟ್ಟೆ, ನಾಗರಾಜ ಬಣಕಾರ ಕುರುಡಿ, ವಿಶ್ವನಾಥ ಮಂಡಲೂರು, ಚೇತನ್ ಎಲೇಬೇತೂರು, ಬಸವಲಿಂಗಪ್ಪ ಕಲಪನಹಳ್ಳಿ, ನಾಗರಾಜ ಪಾಲಗಟ್ಟೆ, ಹಿರೇಮೇಗಳಗೇರಿ ಟಿ.ಎಂ. ಶಿವಮೂರ್ತಯ್ಯ ಇನ್ನಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT