ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದಾವಣಗೆರೆ | ಮುಂಗಾರು ಹಂಗಾಮು: ಜಿಲ್ಲೆಯಲ್ಲಿ ಶೇ 57ರಷ್ಟು ಬಿತ್ತನೆ

ಜಿಲ್ಲೆಯ 1.40 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ; ಅತಿಹೆಚ್ಚು ಪ್ರದೇಶದಲ್ಲಿ ಮೆಕ್ಕೆಜೋಳ 
Published 6 ಜುಲೈ 2024, 7:33 IST
Last Updated 6 ಜುಲೈ 2024, 7:33 IST
ಅಕ್ಷರ ಗಾತ್ರ

ದಾವಣಗೆರೆ: ಜಿಲ್ಲೆಯಾದ್ಯಂತ ಮುಂಗಾರು ಚುರುಕುಗೊಂಡಿದ್ದು, ಕೃಷಿ ಚಟುವಟಿಕೆ ಗರಿಗೆದರಿದೆ. ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಶೇ 57ರಷ್ಟು ಬಿತ್ತನೆಯಾಗಿದೆ. 

ಜೂನ್‌ ಆರಂಭದಲ್ಲಿ ನಿರೀಕ್ಷೆ ಹುಟ್ಟಿಸಿದ್ದ ವರುಣನಿಂದಾಗಿ ರೈತರು ಬಿತ್ತನೆಯತ್ತ ಚಿತ್ತ ಹರಿಸಿದ್ದರು. ನಂತರ ಮಳೆ ಕೈಕೊಟ್ಟಿದ್ದರಿಂದ ನಿರಾಶೆಗೊಂಡಿದ್ದರು. ಈಗ ಮತ್ತೆ ಮಳೆ ಸುರಿಯುತ್ತಿರುವುದು ರೈತರಲ್ಲಿ ಹರ್ಷ ಮೂಡಿಸಿದೆ.

ಜಿಲ್ಲೆಯ ಪ್ರಮುಖ ಬೆಳೆ ಮೆಕ್ಕೆಜೋಳ ಅತಿಹೆಚ್ಚು ಪ್ರದೇಶದಲ್ಲಿ ಬಿತ್ತನೆಯಾಗಿದೆ. 1.19 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತಲಾಗಿದ್ದು, ಶೇ 94ರಷ್ಟು ಗುರಿ ಸಾಧನೆಯಾಗಿದೆ. ಜಿಲ್ಲೆಯಲ್ಲಿ ಮೆಕ್ಕೆಜೋಳ 1.26 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆಯುವ ಗುರಿ ಇತ್ತು. ನಂತರದ ಸ್ಥಾನದಲ್ಲಿ ಜೋಳ 425 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದ್ದು, ಶೇ 18 ಗುರಿ ಸಾಧನೆಯಾಗಿದೆ. ಕಬ್ಬು ಅತಿ ಕಡಿಮೆ ಪ್ರದೇಶದಲ್ಲಿ ಬಿತ್ತನೆಯಾಗಿದೆ. 1,714 ಹೆಕ್ಟೇರ್‌ ಪ್ರದೇಶದಲ್ಲಿ ಕಬ್ಬು ಬೆಳೆಯುವ ಗುರಿ ಇದ್ದು, ಸದ್ಯ 50 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದ್ದು, ಶೇ 3ರಷ್ಟು ಗುರಿ ಸಾಧನೆಯಾಗಿದೆ.

ಉಳಿದಂತೆ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ರಾಗಿ, ಸಜ್ಜೆ, ತೊಗರಿ, ಹುರುಳಿ, ಉದ್ದು, ಹೆಸರು, ಅಲಸಂದೆ, ಅವರೆ, ಮಡಿಕೆ ಕಾಳು ಬಿತ್ತನೆಯಾಗಿದೆ.

ಎಣ್ಣೆ ಕಾಳುಗಳಲ್ಲಿ ಶೇಂಗಾ, ಎಳ್ಳು, ಸೂರ್ಯಕಾಂತಿ, ಗುರೆಳ್ಳು, ಸಾಸಿವೆ, ಸೋಯಾಬೀನ್‌, ಕುಸುಬೆ ಹಾಗೂ ವಾಣಿಜ್ಯ ಬೆಳೆಗಳಾದ ಹತ್ತಿ, ಕಬ್ಬು ಅಲ್ಪ ಪ್ರಮಾಣದಲ್ಲಿ ಬಿತ್ತನೆಯಾಗಿದೆ.

‘9 ಎಕರೆಯಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡಿದ್ದೇನೆ. ಬಿತ್ತನೆ ಮಾಡಿದ ಸುಮಾರು 28 ದಿನಗಳ ಕಾಲ ಮಳೆಯೇ ಇರಲಿಲ್ಲ. ಇದರಿಂದ ಆತಂಕವಾಗಿತ್ತು. ಈಗ ಮತ್ತೆ ಮಳೆ ಬರುತ್ತಿರುವುದು ಆಶಾವಾದ ಮೂಡಿಸಿದೆ. ಮೆಕ್ಕೆಜೋಳ ಚೇತರಿಸಿಕೊಳ್ಳಲಿದೆ’ ಎಂದು ‘ಪ್ರಜಾವಾಣಿ’ಯೊಂದಿಗೆ ಸಂತಸ ಹಂಚಿಕೊಂಡರು ಸಂತೇಬೆನ್ನೂರಿನ ರೈತ ಸುರೇಶ್‌ ದೊಡ್ಡಬಾವಿ.

‘ಈ ಭಾಗದಲ್ಲಿ ಹಲವರು ಮೆಕ್ಕೆಜೋಳ ಬಿತ್ತಿದ್ದಾರೆ. ಕೆಲ ದಿನಗಳಿಂದ ಮಳೆ ಬಾರದ ಕಾರಣ ಮೊಳಕೆ ಬರಲೇ ಇಲ್ಲ. ಕೆಲವೆಡೆ ಸಸಿಗಳು ಚೆನ್ನಾಗಿ ಚಿಗುರೊಡೆದು ಮೇಲಕ್ಕೆ ಬಂದಿವೆ. ಎರಡು ದಿನಗಳಿಂದ ಮಳೆಯಾದ ಕಾರಣ ಗಿಡಗಳು ಚೇತರಿಸಿಕೊಂಡಿವೆ. ಇನ್ನು ಒಂದು ಅಥವಾ ಒಂದೂವರೆ ತಿಂಗಳು ಆಗಾಗ ತೇವಾಂಶ ನೀಡುವಂತಹ ಮಳೆ ಬಂದರೆ ಮೆಕ್ಕೆಜೋಳ ಕೈಹಿಡಿಯಲಿದೆ’ ಎಂದು ಅವರು ಮಾತು ಸೇರಿಸಿದರು.

‘ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಒಟ್ಟು 2.46 ಲಕ್ಷ ಹೆಕ್ಟೇರ್‌ ಪ್ರದೇಶಲ್ಲಿ ಬಿತ್ತನೆ ಗುರಿ ಇತ್ತು. 1.40 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದ್ದು, ಶೇ 57ರಷ್ಟು ಗುರಿ ಸಾಧಿಸಲಾಗಿದೆ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸ್‌ ಚಿಂತಾಲ್‌ ಮಾಹಿತಿ ನೀಡಿದರು.

 ಶ್ರೀನಿವಾಸ್ ಚಿಂತಾಲ್
 ಶ್ರೀನಿವಾಸ್ ಚಿಂತಾಲ್

- ‘ಯೂರಿಯಾ ಗೊಬ್ಬರ: ಬಳಕೆ ಮಿತವಾಗಿರಲಿ’ ಮಣ್ಣಿನಲ್ಲಿರುವ ತೇವಾಂಶ ಹೋಗಲಾಡಿಸಲು ಬಳಸಲಾಗುವ ಯೂರಿಯಾ ಗೊಬ್ಬರವನ್ನು ಜಿಲ್ಲೆಯ ರೈತರು ಬಳಕೆ ಮಾಡುವಾಗ ಸೂಕ್ತ ಎಚ್ಚರಿಕೆ ವಹಿಸುವುದು ಉತ್ತಮ. ಮಳೆಯ ಅನಿಶ್ಚತತೆಯಿದ್ದಾಗ ಪ್ರತಿ ಎಕರೆಗೆ ಖುಷ್ಕಿ ಮುಸುಕಿನ ಜೋಳಕ್ಕೆ 25 ಕೆ.ಜಿ. ಯೂರಿಯಾ ಮಾತ್ರ ಬಳಸಬೇಕು. ಹೆಚ್ಚಿನ ಪ್ರಮಾಣದಲ್ಲಿ ಬಳಸಿದರೆ ಮುಂದಿನ ದಿನಗಳಲ್ಲಿ ಮಳೆಯ ಕೊರತೆಯುಂಟಾದಲ್ಲಿ ಬೆಳೆಗೆ ತೀವ್ರ ಹಾನಿಯಾಗಲಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸ್‌ ಚಿಂತಾಲ್‌ ಎಚ್ಚರಿಸಿದ್ದಾರೆ. ಬಾಕಿ ಉಳಿದ ಸಾರಜನಕದ ಅವಶ್ಯಕತೆ ಇದ್ದಲ್ಲಿ ನೀರಿನಲ್ಲಿ ಕರಗುವ ಪೋಷಕಾಂಶಗಳನ್ನು ಸಿಂಪಡಿಸಬಹುದು. ಕೃಷಿ ಇಲಾಖೆಯ ಸಲಹೆಯನ್ನು ರೈತರು ತಪ್ಪದೇ ಪಾಲಿಸಬೇಕು. ಮಾಹಿತಿಗಾಗಿ ಸಮೀಪದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರನ್ನು ಸಂಪರ್ಕಿಸಬಹುದು ಎಂದು ಅವರು ಕೋರಿದ್ದಾರೆ.

- ಅಂಕಿ ಅಂಶ ಬೆಳೆ;ಬಿತ್ತನೆಯ ಗುರಿ; ಸಾಧನೆ (ಹೆಕ್ಟೇರ್‌ಗಳಲ್ಲಿ) ಏಕದಳ ಧಾನ್ಯಗಳು ಮೆಕ್ಕೆಜೋಳ;126796;119220 ಭತ್ತ;65847;0 ಜೋಳ;2400;425 ರಾಗಿ;7295;1097 ಸಜ್ಜೆ;530;25 ದ್ವಿದಳ ಧಾನ್ಯಗಳು ತೊಗರಿ;12570;11497 ಹುರುಳಿ;510;39 ಉದ್ದು;159;20 ಹೆಸರು;300;89 ಅಲಸಂದೆ;1223;505 ಅವರೆ;1127;313 ಮಡಕೆ ಕಾಳು;25;27 ಎಣ್ಣೆಕಾಳುಗಳು ಶೇಂಗಾ;13770;5112 ಎಳ್ಳು;435;55 ಸೂರ್ಯಕಾಂತಿ;2190;900 ಔಡಲ;355;22 ಗುರೆಳ್ಳು;260;52 ಸಾಸಿವೆ;245;48 ಸೋಯಾಬೀನ್‌;91;280 ವಾಣಿಜ್ಯ ಬೆಳೆಗಳು ಹತ್ತಿ;7187;2407 ಕಬ್ಬು;1714;50 ತಾಲ್ಲೂಕು; ಗುರಿ; ಸಾಧನೆ; (ಹೆಕ್ಟೇರ್‌ಗಳಲ್ಲಿ) ದಾವಣಗೆರೆ;60426;33462 ಹರಿಹರ;32688;8712 ಜಗಳೂರು;57418;45495 ಹೊನ್ನಾಳಿ;28785;15304 ಚನ್ನಗಿರಿ;46089;23077 ನ್ಯಾಮತಿ;20920;14828

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT